ADVERTISEMENT

ಮಲೇಬೆನ್ನೂರು | ದೂಳುಮಯ ಹೆದ್ದಾರಿ: ಸಾರ್ವಜನಿಕರಿಗೆ ಕಿರಿಕಿರಿ

ಎಂ.ನಟರಾಜನ್
Published 28 ಅಕ್ಟೋಬರ್ 2024, 5:31 IST
Last Updated 28 ಅಕ್ಟೋಬರ್ 2024, 5:31 IST
ಮಲೇಬೆನ್ನೂರು ಪಟ್ಟಣದ ಹೃದಯಭಾಗದಲ್ಲಿ ಹಾದುಹೋಗಿರುವ ರಾಜ್ಯ ಹೆದ್ದಾರಿ-25ರಲ್ಲಿ ಭಾರಿ ಗಾತ್ರದ ಹೊಂಡ ಗುಂಡಿಗಳು ನಿರ್ಮಾಣವಾಗಿದ್ದು, ವಾಹನಗಳ ಸಂಚಾರದ ವೇಳೆ ದೂಳುಮಯವಾಗಿರುವುದು
ಮಲೇಬೆನ್ನೂರು ಪಟ್ಟಣದ ಹೃದಯಭಾಗದಲ್ಲಿ ಹಾದುಹೋಗಿರುವ ರಾಜ್ಯ ಹೆದ್ದಾರಿ-25ರಲ್ಲಿ ಭಾರಿ ಗಾತ್ರದ ಹೊಂಡ ಗುಂಡಿಗಳು ನಿರ್ಮಾಣವಾಗಿದ್ದು, ವಾಹನಗಳ ಸಂಚಾರದ ವೇಳೆ ದೂಳುಮಯವಾಗಿರುವುದು   

ಮಲೇಬೆನ್ನೂರು: ಪ್ರಸಕ್ತ ಮಳೆಗಾಲ ಆರಂಭವಾದ ನಂತರ ರಾಜ್ಯ ಹೆದ್ದಾರಿ-25ರಲ್ಲಿ ಭಾರಿ ಗಾತ್ರದ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಚಾಲಕರಿಗೆ ಚಾಲನಾ ಪರೀಕ್ಷಾ ಸ್ಥಳವಾಗಿ ಮಾರ್ಪಟ್ಟಿದೆ.

ಹೊಸಪೇಟೆ- ಮಂಗಳೂರು ರಸ್ತೆ ಮಲೆನಾಡು ಬಯಲು ಸೀಮೆ ಸಂಪರ್ಕಸೇತು. ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಲಾರಿ, ಬಸ್ಸು, ಟ್ರ್ಯಾಕ್ಟರ್‌, ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ಹೈದರಾಬಾದ್‌, ಬಳ್ಳಾರಿ, ಬೆಳಗಾವಿ, ಮುಂಬೈ, ಗೋವಾ, ಮೈಸೂರು, ಮಂಗಳೂರು ಕಡೆಗೆ ಲಾರಿ ಸೇರಿ ರಾಜ್ಯ ಸಾರಿಗೆ ಸಂಸ್ಥೆಯ 450ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತವೆ.

ಮಳೆಗಾಲದಲ್ಲಿ ನಿರ್ಮಾಣವಾದ ಗುಂಡಿಗಳಿಂದಾಗಿ ರಸ್ತೆ ಕೆಸರುಮಯವಾಗಿತ್ತು. ಲೋಕೋಪಯೋಗಿ ಇಲಾಖೆಯಿಂದ ಗುಂಡಿಗೆ ಜಲ್ಲಿ ಕಲ್ಲುಪುಡಿ ತುಂಬಲಾಗಿತ್ತು. ಕಳೆದ ವಾರ ಸುರಿದ ಮಳೆಗೆ ಜಲ್ಲಿಕಲ್ಲು ಪುಡಿ ಕೊಚ್ಚಿ ಹೋಗಿ ರಸ್ತೆ ತುಂಬೆಲ್ಲ ಹರಡಿದೆ. ವಾಹನಗಳು ಸಾಗಿದಾಗ ಸಿಡಿಯುವುದರಿಂದ ಅಕ್ಕಪಕ್ಕದಲ್ಲಿ ಓಡಾಡುವವರು, ದ್ವಿಚಕ್ರ ವಾಹನ ಸವಾರರು ಪೆಟ್ಟು ತಿಂದು ಗಾಯಗೊಂಡಿದ್ದಾರೆ.

ADVERTISEMENT

ಮಳೆ ನಿಂತ ಮೇಲೆ ರಸ್ತೆ ಅಕ್ಕಪಕ್ಕದ ಅಂಗಡಿಗಳು, ಆಸ್ಪತ್ರೆ, ಹೋಟೆಲ್‌, ಮೆಡಿಕಲ್‌ ಶಾಪ್‌, ಬ್ಯಾಂಕ್‌ ಕಚೇರಿಗಳು ದೂಳುಮಯವಾಗಿದೆ. ಒಂದು ವಾಹನ ಹೋದರೆ ದೂಳು ಹರಡುವುದು ಸಾಮಾನ್ಯವಾಗಿದೆ. ದೂಳು ಹರಡುವುದರಿಂದ ದಮ್ಮು ಕೆಮ್ಮಿನ ಪ್ರಕರಣಗಳು ಹೆಚ್ಚಾಗಿವೆ. ಆಸ್ಪತ್ರೆಯಲ್ಲಿ ಕುಳಿತು ಕೆಲಸ ಮಾಡುವುದು ಕಷ್ಟವಾಗಿದೆ. ಮಾಸ್ಕ್‌ ಬಳಸುವುದು ಅನಿವಾರ್ಯವಾಗಿದೆ ಎಂದು ಡಾ.ಎಚ್‌.ಜೆ.ಚಂದ್ರಕಾಂತ್‌ ತಿಳಿಸಿದರು.

ರಸ್ತೆ ಬದಿಯಲ್ಲಿರುವ ಗ್ಯಾರೇಜ್‌ನ ದ್ವಿಚಕ್ರ ವಾಹನಗಳ ಭಾಗಗಳಲ್ಲಿ ಮಣ್ಣು ಸೇರುವುದರಿಂದ ಕೆಲಸ ಮಾಡುವುದು ಕಷ್ಟವಾಗಿದೆ. ಕಟ್ಟಿಂಗ್‌ ಶಾಪ್‌ನವರು ಕೆಲಸ ಮಾಡುವುದೇ ದುಸ್ತರವಾಗಿದೆ ಎಂದರು.

ಪ್ರತಿನಿತ್ಯ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ವೇಳೆಯಲ್ಲಿ ರಸ್ತೆಗೆ ನೀರನ್ನು ಸಿಂಪಡಿಸಬೇಕು ಎಂದು ರಸ್ತೆ ಬದಿ ಅಂಗಡಿಯವರು ದೂರಿದರು.

ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ತುರ್ತಾಗಿ ಸಮಸ್ಯೆ ಪರಿಹರಿಸಲು ಮುಂದಾಗಬೇಕು ಎಂದು ಸ್ಥಳೀಯ ವ್ಯಾಪಾರಿಗಳು ಹಾಗೂ ವಾಹನ ಚಾಲಕರು ಒತ್ತಾಯಿಸಿದರು.

‘ಕೇಂದ್ರ ಸರ್ಕಾರ ರಾಜ್ಯ ಹೆದ್ದಾರಿ-25ಅನ್ನು ಮೇಲ್ದರ್ಜೆಗೆ ಏರಿಸಬೇಕು. ಹಾಲಿ ರಸ್ತೆಗೆ ಕಾಂಕ್ರೀಟ್‌ ಹಾಕಿ ಹೊಸದಾಗಿ ನಿರ್ಮಿಸಬೇಕು. ಪಟ್ಟಣದ ಹೊರಗೆ ಬೈ ಪಾಸ್‌ ನಿರ್ಮಿಸಿದರೆ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ’ ಎಂದು ಹೊಸಳ್ಳಿ ಕರಿಬಸಪ್ಪ ತಿಳಿಸಿದರು.

ರಸ್ತೆ ನಿರ್ಮಾಣಕ್ಕೆ ಅನುದಾನ ಇಲ್ಲ. ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಹೆದ್ದಾರಿ-25 ಸಮಸ್ಯೆ ಕುರಿತು ಚರ್ಚಿಸಲಾಗುವುದು.
ಬಿ.ಪಿ. ಹರೀಶ್‌ ಹರಿಹರ ಕ್ಷೇತ್ರದ ಶಾಸಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.