ADVERTISEMENT

ದೇವರಬೆಳಕೆರೆ: ವೈಭವದ ಮೈಲಾರಲಿಂಗೇಶ್ವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2024, 5:43 IST
Last Updated 1 ಮಾರ್ಚ್ 2024, 5:43 IST
ಮಲೇಬೆನ್ನೂರು ಸಮೀಪದ ದೇವರಬೆಳಕೆರೆ ಮೈಲಾರಲಿಂಗೇಶ್ವರ ಸ್ವಾಮಿ ರಥೋತ್ಸವ ಗುರುವಾರ ಗೋಧೂಳಿ ಲಗ್ನದಲ್ಲಿ ನೆರವೇರಿತು
ಮಲೇಬೆನ್ನೂರು ಸಮೀಪದ ದೇವರಬೆಳಕೆರೆ ಮೈಲಾರಲಿಂಗೇಶ್ವರ ಸ್ವಾಮಿ ರಥೋತ್ಸವ ಗುರುವಾರ ಗೋಧೂಳಿ ಲಗ್ನದಲ್ಲಿ ನೆರವೇರಿತು   

ಮಲೇಬೆನ್ನೂರು: ಸಮೀಪದ ದೇವರಬೆಳಕೆರೆ ಮೈಲಾರಲಿಂಗೇಶ್ವರ ಸ್ವಾಮಿ ರಥೋತ್ಸವ ಗುರುವಾರ ಗೋಧೂಳಿ ಲಗ್ನದಲ್ಲಿ ವೈಭವಯುತವಾಗಿ ನೆರವೇರಿತು. 

ಉತ್ಸವಮೂರ್ತಿ ಗ್ರಾಮ ಪ್ರದಕ್ಷಿಣೆ ನಂತರ ರಥಶಾಂತಿ, ಬಲಿಪೂಜೆ ನಡೆದವು. ದೇವಾಲಯ ಸಮಿತಿಯವರು ದೇವರಪಟ, ಹಾರ, ಧ್ವಜ, ತೆಂಗಿನಕಾಯಿ ಹಾಗೂ ನಿಂಬೆಹಣ್ಣು ಹರಾಜು ಹಾಕಿದರು. ಭಕ್ತರು ರಥದ ಗಾಲಿಗೆ ತೆಂಗಿನಕಾಯಿ ಒಡೆದರು. ಉತ್ತುತ್ತಿ, ಬಾಳೆಹಣ್ಣನ್ನು ಕಳಶಕ್ಕೆ ಎಸೆದು ಭಕ್ತಿ ಸಮರ್ಪಿಸಿದರು.

‘ಏಳು ಕೋಟಿ , ಏಳು ಕೋಟಿ, ಕೋಟಿಗೋ ಚಾಂಗಮಲೋ . . .’ ಎಂಬ ಉದ್ಘೋಷದ ನಡುವೆ ಜನತೆ ರಥ ಎಳೆದರು.

ADVERTISEMENT

ಕೊಂಬು ಕಹಳೆ, ಮಂಗಳವಾದ್ಯ, ಡೊಳ್ಳು, ತಮಟೆ, ಜಾಂಚ್‌ ಮೇಳ, ಢಮರುಗ ಬಾರಿಸುವ ಗೊರವರು, ದೀವಟಿಗೆ ಹಿಡಿದ ಭಕ್ತರು ಉತ್ಸವಕ್ಕೆ ಮೆರಗು ತಂದಿದ್ದರು.

ರಥವನ್ನು ಹೂವಿನಿಂದ ಹಾಗೂ ದೇವಾಲಯವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಕಡ್ಲೆಗೊಂದಿ, ಗುಳದಹಳ್ಳಿ ಹಾಗೂ ಹಳೆ ಊರಿನ ದುರ್ಗಾದೇವಿ ಹಾಗೂ ಬಸವೇಶ್ವರ ದೇವರ ಉತ್ಸವಮೂರ್ತಿ ಪಲ್ಲಕ್ಕಿ ಪಾಲ್ಗೊಂಡಿದ್ದವು. ಸುತ್ತಮುತ್ತಲ ಗ್ರಾಮಗಳ ಜನರೂ ಭಾಗವಹಿಸಿದ್ದರು.

ಮೈಲಾರ ಜಾತ್ರೆ ನಂತರ ಇಲ್ಲಿ ‘ರಥೋತ್ಸವ’ ನಡೆಸುವುದು ಸಂಪ್ರದಾಯ ಎಂದು ಗ್ರಾಮಸ್ಥರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.