ADVERTISEMENT

ಮಲೇಬೆನ್ನೂರು: ಬಸ್‌ ನಿಲುಗಡೆಗೆ ಮಹಿಳೆಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2024, 16:14 IST
Last Updated 2 ಫೆಬ್ರುವರಿ 2024, 16:14 IST
ಮಲೇಬೆನ್ನೂರಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಪುರಸಭೆ ಮಾಜಿ ಸದಸ್ಯ ಭಾನುವಳ್ಳಿ ಸುರೇಶ್‌ ಮಾತನಾಡಿದರು
ಮಲೇಬೆನ್ನೂರಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಪುರಸಭೆ ಮಾಜಿ ಸದಸ್ಯ ಭಾನುವಳ್ಳಿ ಸುರೇಶ್‌ ಮಾತನಾಡಿದರು   

ಮಲೇಬೆನ್ನೂರು: ಪಟ್ಟಣದ ಮೂಲಕ ಶಿವಮೊಗ್ಗ, ದಾವಣಗೆರೆ ಹಾಗೂ ಹರಿಹರಕ್ಕೆ ಸಂಚರಿಸುತ್ತಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ತಡೆರಹಿತ ಬಸ್‌ಗಳನ್ನು ಪಟ್ಟಣದಲ್ಲಿ ನಿಲುಗಡೆ ಮಾಡುವಂತೆ ಮಹಿಳೆಯರು ಆಗ್ರಹಿಸಿದರು.

ಕಂದಾಯ ಇಲಾಖೆಯ ಆಶ್ರಯದಲ್ಲಿ ‘ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶʼದಲ್ಲಿ ಈ ಆಗ್ರಹ ಕೇಳಿಬಂತು. 

‘ಸರ್ಕಾರದ ‘ಶಕ್ತಿ’ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದೆ. ಆದರೆ ಬಸ್‌ಗಳ ಸಂಖ್ಯೆ ಕಡಿಮೆ ಇದೆ. ಕೆಲವೊಮ್ಮೆ ಮಹಿಳೆಯರನ್ನು ಕಂಡೊಡನೇ ಬಸ್‌ ಚಾಲಕರು ನಿಲುಗಡೆ ಮಾಡದೇ ಮುಂದೆ ಸಾಗುತ್ತಾರೆ. ಹೆಚ್ಚಿನ ಸಂಖ್ಯೆಯ ಬಸ್ಸುಗಳನ್ನು ಓಡಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಆಧಾರ್‌ ಕಾರ್ಡ್‌ ಲೋಪದೋಷ ಸರಿಪಡಿಸಬೇಕು, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮೀ ಹಾಗೂ ಯುವನಿಧಿ ಯೋಜನೆಯ ನೆರವು ಸಿಗದ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

ಸಿಡಿಪಿಒ ರಷೀದಾ ಭಾನು ಅವರು ಗೃಹಲಕ್ಷ್ಮಿ ಯೋಜನೆ, ಬೆಸ್ಕಾಂ ಶಾಖಾಧಿಕಾರಿ ಚೇತನ್ ಅವರು ಗೃಹಜ್ಯೋತಿ ಯೋಜನೆ, ಆಹಾರ ಶಿರೆಸ್ತೇದಾರ್ ಮಂಜುನಾಥ್ ಎಚ್.‌ ಅವರು ಅನ್ನಭಾಗ್ಯ ಯೋಜನೆ, ಸಂಚಾರಿ ನಿಯಂತ್ರಕ ನಿರಂಜನ ಮೂರ್ತಿ ಅವರು ಶಕ್ತಿ ಯೋಜನೆಗಳ ಮಾಹಿತಿ ನೀಡಿದರು.

ತಾ.ಪಂ. ಇಒ ರಮೇಶ್ ಸುಲ್ಫಿ, ಉಪತಹಶೀಲ್ದಾರ್ ಆರ್.ರವಿ, ಪುರಸಭೆ ಮುಖ್ಯಧಿಕಾರಿ ಸುರೇಶ್, ಪರಿಸರ ಎಂಜಿನಿಯರ್ ಉಮೇಶ್, ಸಮುದಾಯ ಸಂಘಟನಾಧಿಕಾರಿ ದಿನಕರ್, ವಿ.ಎ. ಅಣ್ಣಪ್ಪ ಸದಸ್ಯರು, ಅಶಾ ಕಾರ್ಯಕರ್ತೆಯರು,  ಫಲಾನುಭವಿಗಳು ಪಾಲ್ಗೊಂಡಿದ್ದರು.

‘ಗ್ಯಾರಂಟಿ’ ಯೋಜನೆಗಳನ್ನು ಹೊಗಳಿದ ಬಿಜೆಪಿ ಮುಖಂಡ

ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಅನುಕೂಲವಾಗಿದೆ ಎಂದು ಬಿಜೆಪಿ ಪುರಸಭೆ ಮಾಜಿ ಸದಸ್ಯ ಬಾನುವಳ್ಳಿ ಸುರೇಶ್ ಶ್ಲಾಘಿಸಿದರು. ‘ನಮ್ಮ ಕುಟುಂಬ ಐದು ಸದಸ್ಯರು ವಿವಿಧ ಯೋಜನೆಗಳ ಫಲಾನುಭವಿಗಳಾಗಿದ್ದೇವೆ. ಇದರಿಂದ ಅನುಕೂಲವಾಗಿದೆ’ ಎಂದು ಗುಣಗಾನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.