ಹೊನ್ನಾಳಿ: ತಾಲ್ಲೂಕಿನ ಅರಕೆರೆ ಎ.ಕೆ.ಕಾಲೊನಿಯ ಎ.ಕೆ.ಗುತ್ಯಪ್ಪ (65) ಎಂಬುವವರು ಮುಸಿಯಾ ದಾಳಿಯಿಂದ ಮೃತಪಟ್ಟಿದ್ದಾರೆ.
ಗುತ್ಯಪ್ಪ ಅವರು ಭಾನುವಾರ ರಾತ್ರಿ 1 ಗಂಟೆ ವೇಳೆಗೆ ಮೂತ್ರ ವಿಸರ್ಜನೆಗೆಂದು ಮನೆಯಿಂದ ಹೊರಗಡೆಗೆ ಬಂದಾಗ ಮನೆಯ ಮೇಲೆ ಕುಳಿತಿದ್ದ ಮುಸಿಯಾ ಏಕಾಏಕಿ ಅವರ ಮೇಲೆ ದಾಳಿ ನಡೆಸಿದೆ. ಮೊಣಕೈ ಮತ್ತು ಮಣಿಕಟ್ಟು ಭಾಗದಲ್ಲಿನ ನರಗಳು ಹೊರ ಬರುವಂತೆ ಕಚ್ಚಿದ್ದರಿಂದ ತೀವ್ರ ರಕ್ತಸ್ರಾವವಾಗಿದೆ. ತಕ್ಷಣವೇ ಅವರನ್ನು ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯಲು ಸಿದ್ಧತೆ ನಡೆಸುತ್ತಿರುವಾಗಲೇ ಗುತ್ಯಪ್ಪ ಅವರು ಮೃತಪಟ್ಟಿದ್ದಾರೆ.
ವಿಷಯ ತಿಳಿದು ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಎಚ್.ಬಿ. ಮಂಜಪ್ಪ ಸೇರಿದಂತೆ ಹಲವು ಮುಖಂಡರು ಗುತ್ಯಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಮತ್ತೊಬ್ಬ ವ್ಯಕ್ತಿ ಮೇಲೂ ದಾಳಿ
ಅರಕೆರೆ ಎಕೆ ಕಾಲೊನಿ ಗ್ರಾಮದ ಪ್ರಭಾಕರ್ ಎಂಬುವರ ಮೇಲೂ ಸೋಮವಾರ ಬೆಳಿಗ್ಗೆ 6 ಗಂಟೆಗೆ ಮುಸಿಯಾ ದಾಳಿ ಮಾಡಿದೆ. ಪ್ರಭಾಕರ್ ಅವರು ಮನೆಯೊಳಗೆ ಮಲಗಿದ್ದಾಗ ಮುಸಿಯಾ ಒಳಗೆ ನುಗ್ಗಿ ತಲೆ ಮತ್ತು ಕೈಗೆ ಕಚ್ಚಿ ಗಾಯಗೊಳಿಸಿದೆ. ಅವರನ್ನು ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್ ತಿಳಿಸಿದರು.
ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಮುಸಿಯಾ ಸೆರೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.