ಸಂತೇಬೆನ್ನೂರು: ಆಧುನಿಕ ಕೃಷಿ ಪದ್ಧತಿಯಲ್ಲಿ ವಿಭಿನ್ನ ಆಲೋಚನೆ ಮಾಡಿರುವ ಸಮೀಪದ ಕೆಂಪನಹಳ್ಳಿ ಗ್ರಾಮದ ಮಂಜುಳಾ ಸಾವಯವ ಕೃಷಿಯಲ್ಲಿ ಅಪರೂಪದ ದೇಸಿ ತಳಿಯ ಭತ್ತವನ್ನು ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.
ನಾಲ್ಕು ವರ್ಷಗಳಿಂದ ಭತ್ತದ ದೇಶಿ ತಳಿಗಳಾದ ನವರ, ಕುಲ್ಲೆಕಾರ್ ಹಾಗೂ ಚಿತ್ತಿಮುತ್ಯಾಲು ಬೆಳೆದು ಬೀಗಿದ್ದಾರೆ. ಈ ಬಾರಿಯೂ ಇವೇ ತಳಿಗಳನ್ನು ನಾಟಿ ಮಾಡಿ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದಾರೆ. ರಾಸಾಯನಿಕ ಗೊಬ್ಬರ, ಔಷಧಿ ಬಳಕೆ, ಕಳೆ ನಾಶಕ ಮುಕ್ತ ಭತ್ತ ಬೆಳೆಯುವ ಕೌಶಲದಲ್ಲಿ ಪರಿಣತಿ ಪಡೆದಿದ್ದಾರೆ. ಆರೋಗ್ಯ ವೃದ್ಧಿಗೆ ಮಹತ್ವದ ಪೋಷಕಾಂಶಗಳ ಕಣಜವೇ ಈ ಭತ್ತದ ತಳಿಗಳಲ್ಲಿ ಅಡಗಿದೆ.
ನವರ ಭತ್ತ ಹೊರಭಾಗದಲ್ಲಿ ಕಪ್ಪು ಆದರೆ ಕೆಂಪು ಅಕ್ಕಿ. ಮುಕ್ಕಾಲು ಎಕರೆಯಲ್ಲಿ ಬೆಳೆದಿದ್ದೆ. 10 ಕ್ವಿಂಟಲ್ ಇಳುವರಿ ಬಂದಿತ್ತು. ಕುಲ್ಲೆಕಾರ್ ಭತ್ತವನ್ನು 1.25 ಎಕರೆಯಲ್ಲಿ 15 ಕ್ವಿಂಟಲ್ ಇಳುವರಿ ಬಂದಿತ್ತು. ನವಾರ ಪ್ರತಿ ಕ್ವಿಂಟಲ್‌ಗೆ ₹12 ರಿಂದ ₹15 ಸಾವಿರಕ್ಕೆ ಮಾರಾಟ ಮಾಡಿದ್ದೇನೆ. ಕುಲ್ಲೆಕಾರ್ ತಳಿ ಭತ್ತಕ್ಕೆ ₹ 8 ಸಾವಿರದಿಂದ ₹10 ಸಾವಿರ ಬೆಲೆ ಸಿಕ್ಕಿದೆ. ಪ್ರತಿ ಎಕರೆಗೆ ₹20 ಸಾವಿರ ಖರ್ಚು ತಗುಲಿದೆ.
‘ದೇಸಿ ಬೆಳೆಗೆ ಗದ್ದೆಗಳಲ್ಲಿ ನೀರು ನಿಲ್ಲಲು ಬಿಡುವುದಿಲ್ಲ. 10 ದಿನಗಳಿಗೊಮ್ಮೆ ನೀರು ಬಿಡಲಾಗುವುದು. ಇದರಿಂದ ಮಣ್ಣಿನ ಸಾರ ಉಳಿಸಿಕೊಳ್ಳಲು ಸಾಧ್ಯ’ ಎನ್ನುತ್ತಾರೆ ಮಂಜುಳಾ.
‘ದೇಸಿ ತಳಿ ಭತ್ತ ನಾಟಿ ಮಾಡಿದ 7 ದಿನಗಳಿಗೆ ಜೀವಾಮೃತ ಸಿಂಪಡಿಸಬೇಕು. ನಂತರ 15 ದಿನಕ್ಕೊಮ್ಮೆ ಜೀವಾಮೃತ ನೀರಿನಲ್ಲಿ ಹರಿಸಬೇಕು. 45 ದಿನಗಳ ನಂತರ 1 ಎಕರೆಗೆ 2 ಲೀಟರ್ ಹುಳಿ ಮಜ್ಜಿಗೆಯನ್ನು 200 ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು. 65 ದಿನಗಳ ನಂತರ 6 ಲೀಟರ್ ದಶಪರಣಿ ಕಷಾಯವನ್ನು 100 ಲೀಟರ್ ನೀರಿಗೆ ಮಿಶ್ರಣ ಮಾಡಿ 1 ಎಕರೆಗೆ ಸಿಂಪಡಿಸಬೇಕು. ಬೆಳೆಗಳ ನಡುವೆ ಹಸಿರೆಲೆ ಗೊಬ್ಬರಕ್ಕಾಗಿ ಡಯಂಚ ಬೆಳೆಯುತ್ತೇವೆ. 45 ದಿನಗಳಲ್ಲಿ ಟ್ರ್ಯಾಕ್ಟರ್ ಮೂಲಕ ಮಣ್ಣಿನಲ್ಲಿ ಸೇರುವಂತೆ ಉಳುಮೆ ಮಾಡಲಾಗುವುದು. ಸಾವಯವ ಗೊಬ್ಬರ ಬಳಕೆ ಮಾಡುತ್ತೇವೆ. ಹಾಗಾಗಿ 1 ಎಕರೆಗೆ 20 ಕ್ವಿಂಟಲ್ ಇಳುವರಿ ತೆಗೆಯಬಹುದು’ ಎನ್ನುತ್ತಾರೆ ಅವರು
‘ಈ ಭತ್ತದ ತಳಿಗಳಲ್ಲಿ ಪ್ರೊಟೀನ್ ಹಾಗೂ ನಾರಿನ ಅಂಶ ಹೆಚ್ಚಾಗಿದ್ದು, ಮಧುಮೇಹ ನಿಯಂತ್ರಣ, ಜೀರ್ಣಕ್ರಿಯೆ ಸುಲಭವಾಗುತ್ತದೆ. ಆ್ಯಂಟಿ ಆಕ್ಸಿಡೆಂಟ್, ವಿಟಮಿನ್ ಸಿ ಹೇರಳವಾಗಿದೆ. ರೋಗ ನಿರೋಧಕ ಶಕ್ತಿ ವೃದ್ಧಿ. ಗರ್ಭಿಣಿಯರಲ್ಲಿ ಹಾಲಿನ ಅಂಶ ಹೆಚ್ಚಳ, ದೇಹದ ಒಳಗಿನ ಗಾಯಗಳ ನಿವಾರಣೆ, ಬೊಜ್ಜು ಕರಗುವಿಕೆ, ಚರ್ಮ ರೋಗಗಳಿಗೆ ದಿವ್ಯೌಷಧಿ ಗುಣ, ಇನ್ನೂ ಅನೇಕ ಆರೋಗ್ಯ ವರ್ಧಕಗಳನ್ನು ಹೊಂದಿವೆ’ ಎನ್ನುತ್ತಾರೆ ಕೃಷಿಗೆ ಸಹಕರಿಸುತ್ತಿರುವ ಮಂಜುಳಾ ಅವರ ಸಹೋದರ ಮಧುಕೃಷ್ಣ.
‘ರಾಜ್ಯ ಹಲವೆಡೆಯಿಂದ ನೇರ ಮಾರುಕಟ್ಟೆ ದೊರೆಯುತ್ತಿದೆ. ಹೊರರಾಜ್ಯಗಳಿಗೂ ಕಳುಹಿಸಲಾಗುತ್ತಿದೆ. ದೇಸಿ ತಳಿ ಬೀಜಗಳನ್ನು ರಾಯಚೂರು, ಆಂಧ್ರಪ್ರದೇಶದಿಂದ ಸಂಗ್ರಹಿಸುತ್ತೇವೆ. ಮುಂದೆ ರಾಜಮುಡಿ ತಳಿ ಬೆಳೆಯಲು ಚಿಂತನೆ ನಡೆದಿದೆ’ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.