ADVERTISEMENT

ದಾವಣಗೆರೆ: ಕಸ ಎಸೆಯುವವರ ಮೇಲೆ ‘ಮಾರ್ಷಲ್‌’ ನಿಗಾ

ವಿನೂತನ ಪ್ರಯೋಗಕ್ಕೆ ಮುಂದಾದ ಮಹಾನಗರ ಪಾಲಿಕೆ, ಮೇಯರ್ ಕೆ.ಚಮನ್‌ ಸಾಬ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 14:17 IST
Last Updated 24 ಅಕ್ಟೋಬರ್ 2024, 14:17 IST
ಕೆ.ಚಮನ್ ಸಾಬ್
ಕೆ.ಚಮನ್ ಸಾಬ್   

ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲೆಂದರಲ್ಲಿ ಕಸ ಎಸೆಯುವವರ ಮೇಲೆ ನಿಗಾ ಇಡಲು ಹಾಗೂ ನಗರದ ಸ್ವಚ್ಛತೆಯನ್ನು ಕಾಪಾಡುವ ಉದ್ದೇಶದಿಂದ ಮಾರ್ಷಲ್‌ಗಳನ್ನು ನೇಮಕ ಮಾಡಿಕೊಳ್ಳುವ ಆಲೋಚನೆ ಇದೆ. ಶೀಘ್ರವೇ ಇದು ಕಾರ್ಯರೂಪಕ್ಕೆ ಬರಲಿದೆ ಎಂದು ಮೇಯರ್‌ ಕೆ.ಚಮನ್‌ ಸಾ‌ಬ್‌ ತಿಳಿಸಿದರು.

‘20 ಮಾಜಿ ಸೈನಿಕರನ್ನು ಮಾರ್ಷಲ್‌ಗಳಾಗಿ ನೇಮಕ ಮಾಡಿಕೊಳ್ಳಲಾಗುವುದು. ಪಾಲಿಕೆಯ ವಾಹನದಲ್ಲಿ ನಗರದಲ್ಲಿ ಗಸ್ತು ನಡೆಸುವ ಅವರು, ಎಲ್ಲೆಂದರಲ್ಲಿ ಕಸ ಎಸೆಯುವವರ ಮೇಲೆ ನಿಗಾ ಇಡಲಿದ್ದಾರೆ. ದಂಡ ಹಾಕುವ ಅಧಿಕಾರವನ್ನು ಅವರಿಗೂ ನೀಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಈ ಅಧಿಕಾರ ಈವರೆಗೆ ಆರೋಗ್ಯಾಧಿಕಾರಿಗಳಿಗೆ ಮಾತ್ರ ಇದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಕಸ ನಿರ್ವಹಣೆಗೆ ಮಹಾನಗರ ಪಾಲಿಕೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಪೌರಕಾರ್ಮಿಕರು ನಿತ್ಯ ಮನೆ–ಮನೆಗೆ ತೆರಳಿ ಕಸ ಸಂಗ್ರಹಿಸುತ್ತಿದ್ದಾರೆ. ಹಸಿ ಕಸ ಮತ್ತು ಒಣ ಕಸ ಪ್ರತ್ಯೇಕವಾಗಿ ವಿಲೇವಾರಿ ಮಾಡಲಾಗುತ್ತಿದೆ. ಕೆಲವರು ಪಾಲಿಕೆ ವಾಹನಗಳಿಗೆ ಕಸ ನೀಡದೇ ಎಲ್ಲೆಂದರಲ್ಲಿ ಬಿಸಾಡುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ನಗರದ ಸೌಂದರ್ಯ, ಜನರ ಆರೋಗ್ಯ ಹಾಳಾಗುತ್ತಿದೆ’ ಎಂದು ಹೇಳಿದರು.

ADVERTISEMENT

‘ಖಾಲಿ ನಿವೇಶನ, ಚರಂಡಿ ಸೇರಿ ಎಲ್ಲೆಂದರಲ್ಲಿ ಕಸ ಎಸೆಯಲಾಗುತ್ತಿದೆ. ರಾತ್ರಿ ಹಾಗೂ ನಸುಕಿನಲ್ಲಿ ಇದು ಹೆಚ್ಚಾಗಿ ನಡೆಯುತ್ತಿದೆ. ಇದನ್ನು ತಡೆದರೆ ನಗರ ಇನ್ನಷ್ಟು ಸುಂದರವಾಗಿ ಕಾಣಲು ಸಾಧ್ಯವಿದೆ. ಮಾರ್ಷಲ್‌ ನೇಮಕಾತಿ ಬಗ್ಗೆ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲೂ ಚರ್ಚಿಸಲಾಗಿದೆ. ಕಾರ್ಮಿಕ ಕಾಯ್ದೆಯ ಪ್ರಕಾರ ಅವರಿಗೆ ವೇತನ, ಭವಿಷ್ಯ ನಿಧಿ ಹಾಗೂ ಇತರ ಸೌಲಭ್ಯ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

ಉಪಮೇಯರ್‌ ಸೋಗಿ ಶಾಂತಕುಮಾರ್‌ ಇದ್ದರು.

ಕಸ ಎಸೆದು ಮೊದಲ ಬಾರಿ ಸಿಕ್ಕಿಬಿದ್ದವರಿಗೆ ₹ 500 ದಂಡ ವಿಧಿಸಲಾಗುತ್ತದೆ. ಇದು ಪುನರಾವರ್ತನೆಯಾದರೆ ದಂಡದ ಮೊತ್ತ ₹ 1000 ಮತ್ತು ₹ 2000ದವರೆಗೆ ಏರಿಕೆಯಾಗುತ್ತದೆ.
ಕೆ.ಚಮನ್‌ ಸಾಬ್‌ ಮೇಯರ್‌

ಕನ್ನಡ ಸ್ವಚ್ಛತಾ ಮಾಸ

ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್‌ ಮಾಸವನ್ನು ಸ್ವಚ್ಛತಾ ಮಾಸ ಎಂಬುದಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಮೇಯರ್‌ ಕೆ.ಚಮನ್‌ ಸಾಬ್‌ ತಿಳಿಸಿದರು. ‘ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸಾವಿರಾರು ಲೋಡು ಕಟ್ಟಡ ತ್ಯಾಜ್ಯ ಬಿದ್ದಿದೆ. ಇದನ್ನು ಪೌರಕಾರ್ಮಿಕರು ವಿಲೇವಾರಿ ಮಾಡುವುದಿಲ್ಲ. ಜನರು ಎಲ್ಲೆಂದರಲ್ಲಿ ಈ ತ್ಯಾಜ್ಯವನ್ನು ಬಿಸಾಡಿದ್ದಾರೆ. ಇದನ್ನು ತೆರವುಗೊಳಿಸುವ ಉದ್ದೇಶದಿಂದ ಟೆಂಡರ್‌ ಕರೆಯಲಾಗಿದೆ. 8 ಟ್ರ್ಯಾಕ್ಟರ್‌ 50 ಸಿಬ್ಬಂದಿ ಎರಡು ಜೆಸಿಬಿ ಹಾಗೂ ಇತರ ವಾಹನ ಬಳಸಿಕೊಳ್ಳಲಾಗುತ್ತಿದೆ’ ಎಂದು ಮಾಹಿತಿ ನೀಡಿದರು. ‘ರಸ್ತೆ ಬದಿಯಲ್ಲಿ ಬಿದ್ದಿರುವ ಕಲ್ಲು ಮಣ್ಣು ಇಟ್ಟಿಗೆ ಹೆಂಚಿನಂತ ಕಟ್ಟಡ ತ್ಯಾಜ್ಯವನ್ನು ತೆರವುಗೊಳಿಸಲಾಗುತ್ತದೆ. ವಾರ್ಡ್‌ವಾರು ಈ ಕೆಲಸ ನಡೆಯಲಿದೆ. ಸ್ವಚ್ಛತೆಗೆ ಮಹಾನಗರ ಪಾಲಿಕೆ ಪ್ರಥಮ ಆದ್ಯತೆ ನೀಡಿದೆ’ ಎಂದು ಹೇಳಿದರು.

‘₹ 40 ಕೋಟಿ ಆಸ್ತಿ ರಕ್ಷಣೆ’

‘ಉದ್ಯಾನ ಸಿಎ ನಿವೇಶನ ಸೇರಿ ಮಹಾನಗರ ಪಾಲಿಕೆಯ ಆಸ್ತಿಯನ್ನು ಕಬಳಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು ₹ 40 ಕೋಟಿ ಆಸ್ತಿಯನ್ನು ರಕ್ಷಣೆ ಮಾಡಲಾಗಿದೆ’ ಎಂದು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದರು. ‘ಮಹಾನಗರ ಪಾಲಿಕೆಯ ಆಸ್ತಿಯನ್ನು ಕಬಳಿಸಿದವರನ್ನು ಪತ್ತೆ ಮಾಡಲಾಗುತ್ತಿದೆ. ನೈಜ ದಾಖಲೆಗಳನ್ನು ತಿದ್ದಿ ವಂಚನೆ ಮಾಡಿದವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಬಹುದೊಡ್ಡ ಮೊತ್ತದ ಆಸ್ತಿಯನ್ನು ರಕ್ಷಣೆ ಮಾಡಿದ್ದಾರೆ’ ಎಂದರು. ‘ಮಹಾನಗರ ಪಾಲಿಕೆಯ ದಾಖಲೆ ಪುಸ್ತಕಗಳನ್ನು ತಿದ್ದಲು ಸಾಧ್ಯವಾಗದ ರೀತಿಯಲ್ಲಿ ಲ್ಯಾಮಿನೇಷನ್‌ ಮಾಡಲಾಗಿದೆ. ಇನ್ನು ಮುಂದೆ ಅಕ್ರಮ ನಡೆಯದಂತೆ ಎಚ್ಚರ ವಹಿಸಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.