ಮಾಯಕೊಂಡ (ದಾವಣಗೆರೆ): ಗ್ರಾಮದಲ್ಲಿ ಕಳ್ಳತನ ತಡೆಯಲು ನೆರವಾಗಬೇಕಿದ್ದ ಸಿಸಿಟಿವಿ ಕ್ಯಾಮೆರಾಗಳನ್ನೇ ದುಷ್ಕರ್ಮಿಗಳು ಕಳ್ಳತನ ಮಾಡಿ ಕೈಚಳಕ ತೋರಿರುವ ಘಟನೆ ಮಾಯಕೊಂಡ ಗ್ರಾಮದಲ್ಲಿ ಈಚೆಗೆ ನಡೆದಿದೆ.
ಗ್ರಾಮದಲ್ಲಿ ಅಡಿಕೆ ಹಾಗೂ ಕುರಿಗಳು ಕಳ್ಳತನವಾಗುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅವುಗಳನ್ನು ಪತ್ತೆ ಹಚ್ಚುವ ಉದ್ದೇಶದಿಂದ ನಾಲ್ಕು ತಿಂಗಳ ಹಿಂದೆ ಗ್ರಾಮದ ಎಂಟು ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಗ್ರಾಮದ ಕನ್ನಡ ಯುವಶಕ್ತಿ ಕೇಂದ್ರ ಹಾಗೂ ರೈತ ಸಂಘದ ಪದಾಧಿಕಾರಿಗಳ ಒತ್ತಡದ ಮೇರೆಗೆ ಗ್ರಾಮ ಪಂಚಾಯಿತಿ ವತಿಯಿಂದ ಕ್ಯಾಮೆರಾ ಅಳವಡಿಸಲಾಗಿತ್ತು. ಈ ಪೈಕಿ ಉಪ್ಪಾರ ಹಟ್ಟಿ ರೈಲ್ವೆ ಅಂಡರ್ ಪಾಸ್ ಬಳಿ ಅಳವಡಿಸಿದ್ದ ಕ್ಯಾಮೆರಾವನ್ನು ನಾಲ್ಕೈದು ದಿನಗಳ ಹಿಂದೆ ಕಳ್ಳರು ಕದ್ದೊಯ್ದಿದ್ದಾರೆ.
‘ಕಳ್ಳತನ ತಡೆಗೆ ಕಣ್ಗಾವಲಾಗಿ ಅಳವಡಿಸಿದ್ದ ಕ್ಯಾಮೆರಾವನ್ನೇ ಕಳ್ಳತನ ಮಾಡಿರುವುದು ಸೋಜಿಗ ತಂದಿದೆ. ಶೀಘ್ರವೇ ಕಳ್ಳರನ್ನು ಪತ್ತೆ ಮಾಡಿ, ಅವರಿಗೆ ಶಿಕ್ಷೆ ಕೊಡಿಸಬೇಕು ಎಂದು ಗ್ರಾಮಸ್ಥರಾದ ಎಂ.ಜಿ. ಗುರುನಾಥ್, ರಾಮಜೋಗಿ ಪ್ರತಾಪ್ ಆಗ್ರಹಿಸಿದ್ದಾರೆ.
‘ನಾಲ್ಕೈದು ದಿನಗಳ ಹಿಂದೆ ಕಳ್ಳತನ ನಡೆದಿದೆ. ಮೂರು ದಿನದ ಹಿಂದೆ ಮಾಹಿತಿ ತಿಳಿದಿದ್ದು, ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ’ ಎಂದು ಮಾಯಕೊಂಡ ಪಿಡಿಒ ಶ್ರೀನಿವಾಸ್ ಎನ್. ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.