ಮಾಯಕೊಂಡ: ಮುಖ್ಯಬೆಳೆಯ ಜೊತೆ ಅಂತರ ಬೆಳೆಯಾಗಿ ಇತರ ಬೆಳೆಗಳನ್ನೂ ಬೆಳೆದಾಗ ಅಧಿಕ ಇಳುವರಿ ದೊರೆತು, ರೈತರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬಹುದು. ಭೂಮಿಯ ಗುಣಮಟ್ಟವೂ ಸುಧಾರಿಸುತ್ತದೆ ಎಂದು ಪೂರ್ವಿಕರು ಸಾರಿ ಹೇಳಿದ್ದಾರೆ. ಕೃಷಿ ತಜ್ಞರೂ ಇದನ್ನೇ ಪ್ರತಿಪಾದಿಸುತ್ತಿದ್ದು, ಈ ಬಾರಿ ಹೆಚ್ಚು ಒತ್ತು ನೀಡಿದ ಪರಿಣಾಮ, ಜಿಲ್ಲೆಯಲ್ಲಿ ತೊಗರಿ ಬಿತ್ತನೆ ಪ್ರದೇಶ ವಿಸ್ತರಣೆಯಾಗಿದ್ದು, ನಿರೀಕ್ಷೆಗೂ ಮೀರಿ ಗುರಿ ಸಾಧನೆಯಾಗಿದೆ.
ಅಂತರ ಬೆಳೆ ಪದ್ಧತಿಯಿಂದ ದೂರ ಸರಿಯುತ್ತಿರುವ ರೈತರು ಈ ಬಾರಿ ಕೃಷಿ ಇಲಾಖೆ ಅಧಿಕಾರಿಗಳ ನಿರಂತರ ಮನವೊಲಿಕೆಯಿಂದ ಪಾರಂಪರಿಕ ಪದ್ಧತಿಗೆ ಮರಳಿದ್ದು, ಜಿಲ್ಲೆಯಾದ್ಯಂತ ತೊಗರಿ ಬೆಳೆಯುವತ್ತ ಆಸಕ್ತಿ ತೋರಿದ್ದಾರೆ. ಗುರಿ ಮೀರಿದ ಬಿತ್ತನೆಯಾಗಿದ್ದು, ರೈತರಿಗೆ ಉತ್ತಮ ಫಸಲು ದೊರೆಯುವ ಸೂಚನೆಗಳು ಗೋಚರಿಸುತ್ತಿವೆ. ರೈತರು ಹೆಚ್ಚು ಲಾಭದ ನಿರೀಕ್ಷೆಯಿದೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 12,570 ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆ ಗುರಿ ಹೊಂದಲಾಗಿತ್ತು. ಇಲಾಖೆಯ ಸತತ ಪ್ರಯತ್ನದಿಂದ ಬಿತ್ತನೆ ಪ್ರದೇಶ 13,773 ಹೆಕ್ಟೇರ್‌ಗೆ ಹಿಗ್ಗಿದೆ. ದಾವಣಗೆರೆ ತಾಲ್ಲೂಕು ಒಂದರಲ್ಲಿಯೇ 3,230 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ. 160 ಕ್ವಿಂಟಲ್ ಬಿತ್ತನೆ ಬೀಜ ಮಾರಾಟವಾಗಿದೆ.
ಅಂತರ ಬೆಳೆಯಿಂದ ಅನುಕೂಲ:
ಅಡಿಕೆ, ಮೆಕ್ಕೆಜೋಳ ಹಾಗೂ ಇತರೆ ಮುಖ್ಯ ಬೆಳೆಗಳ ಜೊತೆಯಲ್ಲಿ ಅಂತರ ಬೆಳೆಯಾಗಿ ತೊಗರಿಯನ್ನು ತಾಂತ್ರಿಕತೆ ಬಳಸಿ ನಾಟಿ ಮಾಡಲಾಗಿದೆ. ಅಂತರ ಬೆಳೆಯ ಅನುಕೂಲವೆಂದರೆ, ಒಂದು ಬೆಳೆ ಕೈ ಕೊಟ್ಟರೆ ಇನ್ನೊಂದು ಬೆಳೆ ರೈತನ ಕೈ ಹಿಡಿಯುತ್ತದೆ. ಆಗ ರೈತರಿಗೆ ಆಗಬಹುದಾದ ಆರ್ಥಿಕ ನಷ್ಟ ತಗ್ಗುತ್ತದೆ ಎಂಬುದು ತಜ್ಞರ ಅಭಿಪ್ರಾಯ.
ಆದರೂ ಈ ಬಾರಿ ಹೆಚ್ಚು ರೈತರು ಏಕ ಬೆಳೆ ಪದ್ಧತಿಯತ್ತ ಆಸಕ್ತಿ ತೋರಿದ್ದಾರೆ. ಮಾಯಕೊಂಡದ ರೈತ ಸಾಹುಕಾರ್ ಮುರಿಗೇಶಪ್ಪ 25 ಎಕರೆಯಲ್ಲಿ ಏಕ ಬೆಳೆ ಪದ್ದತಿಯಲ್ಲಿ ತೊಗರಿ ಬೆಳೆ ಬೆಳೆದಿದ್ದು, ಗಿಡಗಳು ಈಗಾಗಲೇ ಕಾಯಿ ಕಟ್ಟುವ ಹಂತಕ್ಕೆ ಬೆಳೆದಿವೆ.
‘ಪ್ರತಿ ವರ್ಷ ಮೆಕ್ಕೆಜೋಳ ಬಿತ್ತನೆ ಮಾಡುತ್ತಿದ್ದೆವು. ಕಳೆ ನಿರ್ವಹಣೆ ಕಷ್ಟದಾಯಕವಾಗಿತ್ತು. ಆದರೆ ಈ ಬಾರಿ ತೊಗರಿ ಬಿತ್ತನೆ ಮಾಡಿದ್ದು, ಕಳೆ ಕಡಿಮೆಯಾಗಿದೆ. ಉತ್ತಮ ಇಳುವರಿ ನಿರೀಕ್ಷೆಯಿದೆ’ ಎನ್ನುತ್ತಾರೆ ಮುರಿಗೇಶಪ್ಪ. ಅಂತರ ಬೆಳೆಯಾಗಿ ತೊಗರಿ ಬೆಳೆದರೆ ರೈತರ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ. ಪ್ಯಾಕೆಟ್ ಸಸಿ ನಾಟಿ ಪದ್ಧತಿಯಿಂದ ಕೀಟ ರೋಗ ಬಾಧೆ ಕಡಿಮೆಯಾಗಿ ಶೇ 20ರಷ್ಟು ಹೆಚ್ಚು ಇಳುವರಿ ನಿರೀಕ್ಷಿಸಬಹುದು ಎಂ.ಡಿ. ಶ್ರೀಧರಮೂರ್ತಿ ದಾವಣಗೆರೆ ಸಹಾಯಕ ಕೃಷಿ ನಿರ್ದೇಶಕ
ಅಂತರ ಬೆಳೆಯಾಗಿ ತೊಗರಿ ಬೆಳೆದರೆ ರೈತರ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ. ಪ್ಯಾಕೆಟ್ ಸಸಿ ನಾಟಿ ಪದ್ಧತಿಯಿಂದ ಕೀಟ ರೋಗ ಬಾಧೆ ಕಡಿಮೆಯಾಗಿ ಶೇ 20ರಷ್ಟು ಹೆಚ್ಚು ಇಳುವರಿ ನಿರೀಕ್ಷಿಸಬಹುದು–ಎಂ.ಡಿ. ಶ್ರೀಧರಮೂರ್ತಿ ದಾವಣಗೆರೆ ಸಹಾಯಕ ಕೃಷಿ ನಿರ್ದೇಶಕ
ಜಿಲ್ಲೆಯಲ್ಲಿ ತೊಗರಿ ಬಿತ್ತನೆ ಹೆಚ್ಚಿಸುವ ನಮ್ಮ ತಂಡದ ಶ್ರಮದಿಂದಾಗಿ ರೈತರಲ್ಲಿ ಆಸಕ್ತಿ ಮೂಡಿದೆ. ಬಿತ್ತನೆ ಪ್ರದೇಶ 13000 ಹೆಕ್ಟೇರ್‌ಗೆ ವ್ಯಾಪಿಸಿದೆ. ರೈತರ ಜಮೀನಿನ ಫಲವತ್ತತೆ ಜತೆಗೆ ಉತ್ತಮ ಆದಾಯವೂ ದೊರೆಯಲಿದೆ–ವಿ. ಶ್ರೀನಿವಾಸ ಚಿಂತಾಲ್ ಜಂಟಿ ಕೃಷಿ ನಿರ್ದೇಶಕ
ಪ್ಯಾಕೆಟ್ ಮಾಡಿ ನಾಟಿ ಹೊಸ ಪ್ರಯತ್ನ: ಕೃಷಿ ಇಲಾಖೆ ಹೊಸ ಪ್ರಯೋಗ ನಡೆಸಿದ್ದು ಪ್ಯಾಕೆಟ್ ಸಸಿ ನಾಟಿ ಪದ್ಧತಿಯನ್ನು ಪ್ರೋತ್ಸಾಹಿಸಿದೆ. ರೈತರಿಗೆ ಇಲಾಖೆಯಿಂದ ಪಾಲಿಥಿನ್ ಚೀಲಗಳನ್ನು ಉಚಿತವಾಗಿ ನೀಡಿ ಬೀಜಗಳನ್ನ ನೇರವಾಗಿ ಭೂಮಿಗೆ ಹಾಕದೆ ಪ್ಯಾಕೆಟ್‌ಗಳಲ್ಲಿ ಹಾಕಿ ಹದಿನೈದು ದಿನಗಳವರೆಗೆ ಅಲ್ಲಿ ಆರೈಕೆ ಮಾಡಿದ ಬಳಿಕ ಭೂಮಿಗೆ ನಾಟಿ ಮಾಡಲು ಸಲಹೆ ನೀಡಲಾಗಿತ್ತು. ಇದರಿಂದ ಬಿತ್ತನೆ ಬೀಜದ ಪ್ರಮಾಣ ಕಡಿಮೆಯಾಗಿದ್ದು ಮಾತ್ರವಲ್ಲದೇ ಸಮಾನ ಅಂತರದಲ್ಲಿ ಸಸಿ ನಾಟಿ ಆಗುವುದರಿಂದ ರೋಗ ಬಾಧೆ ಕಡಿಮೆಯಾಗಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.