ADVERTISEMENT

ಅರಣ್ಯಕ್ಕೆ ಹಸಿರ ಹೊದಿಕೆ ಹೊಚ್ಚಿದ ಮುಂಗಾರು

ಎಂ.ನಟರಾಜನ್
Published 16 ಜೂನ್ 2024, 8:07 IST
Last Updated 16 ಜೂನ್ 2024, 8:07 IST
ಮಲೇಬೆನ್ನೂರು ಮನ್ನಾ ಜಂಗಲ್ ಮುಂಗಾರು ಮಳೆ ಸುರಿದ ಕಾರಣ ಮರಗಿಡ ಚಿಗುರಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ
ಮಲೇಬೆನ್ನೂರು ಮನ್ನಾ ಜಂಗಲ್ ಮುಂಗಾರು ಮಳೆ ಸುರಿದ ಕಾರಣ ಮರಗಿಡ ಚಿಗುರಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ   

ಮಲೇಬೆನ್ನೂರು: ಮುಂಗಾರಿನ ಸಿಂಚನದಿಂದ ಹೋಬಳಿ ವ್ಯಾಪ್ತಿಯ ಏಕಮಾತ್ರ ರಕ್ಷಿತ ಅರಣ್ಯ ಮಲೇಬೆನ್ನೂರು ಮನ್ನಾ ಜಂಗಲ್ ಹಸಿರಿನಿಂದ ಕಂಗೊಳಿಸುತ್ತಿದೆ.

ಸುಮಾರು 2,964 ಹೆಕ್ಟೇರ್ ಅರಣ್ಯ ಪ್ರದೇಶ ಚಿನ್ಮೂಲಾದ್ರಿ ಪರ್ವತ ಶ್ರೇಣಿಗೆ ಹೊಂದಿಕೊಂಡಿದ್ದು, ಹೊನ್ನಾಳಿ, ಚನ್ನಗಿರಿ ತಾಲ್ಲೂಕಿಗೆ ತಾಗಿಕೊಂಡಿದೆ.

ಬಿಸಿಲ ಬೇಗೆಗೆ ತತ್ತರಿಸಿದ್ದ ಮನ್ನಾ ಜಂಗಲ್‌ನಲ್ಲಿ ಗಿಡ, ಮರಗಳು ಒಣಗಿ ಬರದ ತೀವ್ರತೆಗೆ ಕನ್ನಡಿ ಹಿಡಿದಿದ್ದವು. ಈಗ ಮಳೆಯಾಗುತ್ತಿರುವುದರಿಂದ ಹಸಿರು ಮತ್ತೆ ನಳನಳಿಸುತ್ತಿದೆ.

ADVERTISEMENT

ದಟ್ಟ ಅರಣ್ಯವು ಹಲವು ಪ್ರಭೇದದ ಮರ, ಪ್ರಾಣಿ– ಪಕ್ಷಿಗಳ ತಾಣ. ಔಷಧೀಯ ಮರ, ಗಿಡ, ಹಣ್ಣು ಬೆಳೆಯುವ ಪ್ರದೇಶವಾಗಿದೆ. ಪಶ್ಚಿಮ ಘಟ್ಟದಲ್ಲಿ ಕುರುಚಲು ಕಾಡು ಎಂದು ಕಸ್ತೂರಿ ರಂಗನ್ ವರದಿಯಲ್ಲಿ ಗುರುತಿಸಿಕೊಂಡಿದೆ.

ಸಾಮೆ, ದಿಂಡಗ, ಉದೇದು, ಅಕೇಶಿಯಾ, ನೀಲಗಿರಿ, ತೇಗ, ಹುಣಸೆ, ಹೊಂಗೆ, ಬೇವು, ಮುತ್ತುಗ, ತರೇದು, ಬೀಟೆ, ಬಿಕ್ಕೆ, ಬೆಳ್ಳಣ್ಣು, ನೇರಲ ವೃಕ್ಷಗಳು ಹಕ್ಕಿ ಪಕ್ಷಿಗಳ ಹಸಿವು ತಣಿಸುತ್ತಿವೆ. ಕರಡಿ, ನವಿಲು, ಮಂಗ, ಮುಸಿಯಾ, ಚಿರತೆ, ಜಿಂಕೆ, ಕೃಷ್ಣಮೃಗ, ಮೊಲ, ನರಿ, ಚಿಟ್ಟೆ ಹಲವಾರು ಜೀವಿಗಳಿಗೆ ಆಶ್ರಯ ನೀಡಿದೆ.

ಬೀಡಿ ಎಲೆ, ಅಂಟು ಸೂಸುವ ಮರ ಅರಣ್ಯದ ಔಷಧೀಯ ಗುಣಗಳ ಉಪ ಉತ್ಪನ್ನಕ್ಕೆ ಪ್ರಸಿದ್ಧಿ. ರಾಜ್ಯ ಹೆದ್ದಾರಿ 25ರ ಮೂಲಕ ಕಣಿವೆಮನೆಯಲ್ಲಿ ಸಂಚರಿಸುವಾಗ ಮಲೆನಾಡಿನ ಸುಮಧುರ ಸುವಾಸನೆ ಬೀರಿ ಮನಸ್ಸಿಗೆ ಮುದ ನೀಡುತ್ತದೆ.

ಕೋಮಾರನಹಳ್ಳಿ ಕೆರೆ, ಭದ್ರಾ ನಾಲೆ, ಕೃಷಿ ಹೊಂಡಗಳು, ಕಾಡಿನ ಮಧ್ಯದ ಮುದ್ದಪ್ಪನ ಕೆರೆ ಪ್ರಾಣಿ– ಪಕ್ಷಿಗಳಿಗೆ ನೀರಿನ ತಾಣ. ಸರಿಯಾಗಿ ಮಳೆ ಬರದ ಕಾರಣ 3 ತಿಂಗಳಿಂದ ಅರಣ್ಯ ಒಣಗಿಹೋಗಿತ್ತು. ಅರಣ್ಯದ ಒಳಗಿನ ಪ್ರಾಣಿ ಸಂಕುಲ ಸಂಕಷ್ಕಕ್ಕೆ ಸಿಲುಕಿದ್ದವು. ಅರಣ್ಯ ಇಲಾಖೆ ಹಾಗೂ ಖಾಸಗಿ ಸಂಘಟನೆಗಳು ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದವು.

ಕಳೆದ ವರ್ಷ ಸರಿಯಾಗಿ ಮಳೆ ಬಾರದ ಕಾರಣ ನೀರಿನ ಕೊರತೆಯಿಂದ ಕಾಡು ಸೊರಗಿತ್ತು. ಜಲಮೂಲಗಳು ಬತ್ತಿ ಬರಡಾಗಿದ್ದವು. ಇದೀಗ ಹಸಿರು ಮತ್ತೆ ಕಂಡುಬರುತ್ತಿದೆ.

ಅರಣ್ಯ ಇಲಾಖೆ ನಾಮಫಲಕ

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿ ಅರಣ್ಯ ಇಲಾಖೆಯು ಅರಣ್ಯ ಪ್ರದೇಶದ ಪೂರ್ವ ಭಾಗದ ರಾಮನಕಟ್ಟೆ ಪಶ್ಚಿಮ ಭಾಗದ ಅರಕೆರೆ ಕಾಲೊನಿ ಕೋಣನ ತಲೆ ಮೂಗಿನಗೊಂದಿ ಭಾಗಕ್ಕೆ ತಂತಿಬೇಲಿ ಹಾಕಿ ಜನಜಾನುವಾರು ಹೋಗದಂತೆ ರಕ್ಷಣೆ ನೀಡಬೇಕು. ಕಾಡುಪ್ರಾಣಿಗಳಿಗಾಗಿ ರಾಮನಕಟ್ಟೆ ಮುದ್ದಪ್ಪನ ಕೆರೆ ಜೀರ್ಣೋದ್ಧಾರ ಮಾಡಬೇಕು. ಪ್ರಾಣಿಗಳಿಗೆ ಬೇಟೆಗಾರರಿಂದ ರಕ್ಷಣೆ ನೀಡುವಂತಾಗಬೇಕು. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವತ್ತ ಪ್ರವಾಸಿ ಬಂಗಲೆ ಕ್ಯಾಂಟೀನ್ ಉದ್ಯಾನ ಚಿಟ್ಟೆ ಪಾರ್ಕ್ ಕಿರುಮೃಗಾಲಯ ನಿರ್ಮಿಸಬೇಕು ಎಂದು ಪರಿಸರ ಪ್ರೇಮಿ ಜ್ಯೋತಿ ನಾಗಭೂಷಣ ಒತ್ತಾಯಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.