ADVERTISEMENT

ಗುಜರಿ ಅಂಗಡಿಯಲ್ಲಿ ವೈದ್ಯಕೀಯ ತ್ಯಾಜ್ಯ !

ಸಿರಂಜ್‌, ಔಷಧಿ ಬಾಟಲಿ ಪತ್ತೆ ಮರುಬಳಕೆ ಜಾಲದ ವಿರುದ್ಧ ಕ್ರಮಕ್ಕೆ ನಾಗರಿಕರ ಆಗ್ರಹ

ಪ್ರಜಾವಾಣಿ ವಿಶೇಷ
Published 22 ಜೂನ್ 2018, 15:51 IST
Last Updated 22 ಜೂನ್ 2018, 15:51 IST
ದಾವಣಗೆರೆಯ ಗುಜರಿ ಅಂಗಡಿಯೊಂದರಲ್ಲಿ ಪತ್ತೆಯಾಗಿರುವ ವೈದ್ಯಕೀಯ ತ್ಯಾಜ್ಯ
ದಾವಣಗೆರೆಯ ಗುಜರಿ ಅಂಗಡಿಯೊಂದರಲ್ಲಿ ಪತ್ತೆಯಾಗಿರುವ ವೈದ್ಯಕೀಯ ತ್ಯಾಜ್ಯ   

ದಾವಣಗೆರೆ: ಬಳಸಿ ಬಿಸಾಡಿದ ಸಾವಿರಾರು ಸಿರಿಂಜ್‌, ನೀಡಲ್‌, ಔಷಧಿ ಬಾಟಲಿಗಳನ್ನು ಹೆಕ್ಕಿ, ಮರುಬಳಕೆಗೆ ಮಾರುವ ಜಾಲ ನಗರದಲ್ಲಿ ಎಗ್ಗಿಲ್ಲದೇ ದಂಧೆ ನಡೆಸುತ್ತಿದೆ.

ನಗರದ ಗಾಂಧಿನಗರದ ಹಿಂದೂ ರುದ್ರಭೂಮಿ ಸಮೀಪದ ಗುಜರಿ ಅಂಗಡಿಯೊಂದರಲ್ಲಿ ವೈದ್ಯಕೀಯ ತ್ಯಾಜ್ಯ ರಾಶಿಗಟ್ಟಲೆ ಪತ್ತೆಯಾಗಿದ್ದು, ನಾಗರಿಕರಲ್ಲಿ ಭೀತಿ ಹುಟ್ಟಿಸಿದೆ.

ಸಿರಿಂಜ್‌ ಹಾಗೂ ಔಷಧಿ ಬಾಟಲಿಗಳನ್ನು ಪುನರ್ಬಳಕೆ ಮಾಡುವುದು ಅಪರಾಧ. ಹೀಗಿದ್ದರೂ ವೈದ್ಯಕೀಯ ತ್ಯಾಜ್ಯಗಳನ್ನು ಮರುಬಳಕೆ ಮಾಡುವ ದಂಧೆ ನಡೆಯುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ADVERTISEMENT

‘ಸಿರಿಂಜ್‌ ಹಾಗೂ ನೀಡಲ್‌ಗಳನ್ನು ಮರುಬಳಕೆ ಮಾಡುವುದರಿಂದ ಕಾಯಿಲೆಗಳು ಹರಡುವ ಅಪಾಯವಿದೆ. ಎಚ್‌ಐವಿ ಅಂಥ ಮಾರಕ ಸೋಂಕು ಸಹ ಅಮಾಯಕರಿಗೆ ತಗಲುವ ಸಾಧ್ಯತೆಯಿದೆ. ಹೀಗಾಗಿ, ಇಂಥ ದಂಧೆಗೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸುತ್ತಾರೆ ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್.

‘ನರ್ಸಿಂಗ್‌ ಹೋಂ, ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳ ಜೈವಿಕ ತ್ಯಾಜ್ಯ ವಿಲೇವಾರಿ ಹೊಣೆಯನ್ನು ಎನ್‌ಜಿಒ ಒಂದಕ್ಕೆ ವಹಿಸಲಾಗಿದೆ. ಈ ಎನ್‌ಜಿಒಗೆ ನಿರ್ದಿಷ್ಟ ಶುಲ್ಕ ಕೊಟ್ಟು ಆಸ್ಪತ್ರೆಗಳು ತ್ಯಾಜ್ಯ ವಿಲೇವಾರಿ ಮಾಡಬೇಕು. ಆದರೆ, ಹಲವು ವೈದ್ಯಕೀಯ ಸಂಸ್ಥೆಗಳು ಜೈವಿಕ ತ್ಯಾಜ್ಯ ವಿಲೇವಾರಿ ಮಾಡುವ ಎನ್‌ಜಿಒ ಜತೆಗೆ ಒಪ್ಪಂದವನ್ನೇ ಮಾಡಿಕೊಂಡಿಲ್ಲ. ಇಂಥ ಆಸ್ಪತ್ರೆಗಳಲ್ಲಿ ಉತ್ಪತ್ತಿಯಾಗುವ ಜೈವಿಕ ಹಾಗೂ ವೈದ್ಯಕೀಯ ತ್ಯಾಜ್ಯ ಮರುಬಳಕೆ ಮಾಡುವ ಜಾಲಕ್ಕೆ ಸಿಗುತ್ತಿದೆ’ ಎಂದು ಹೇಳುತ್ತಾರೆ ಅವರು.

ವೈದ್ಯಕೀಯ ಮತ್ತು ಜೈವಿಕ ತ್ಯಾಜ್ಯವಿಲೇವಾರಿ ಸಮಸ್ಯೆಗಳು ಜಿಲ್ಲೆಯಲ್ಲಿ ಪದೇಪದೆ ತಲೆದೋರುತ್ತಿವೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅಮಾಯಕರು, ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಶ್ರೀಕಾಂತ್‌.

ಪರಿಶೀಲನೆಗೆ ಸೂಚನೆ

‘ವೈದ್ಯಕೀಯ ತ್ಯಾಜ್ಯ ಮರುಬಳಕೆ ಮಾಡುವ ದಂಧೆ ಬಗ್ಗೆ ಮಾಹಿತಿ ಸಿಕ್ಕಿದ್ದು, ಗುಜರಿ ಅಂಗಡಿಗೆ ತಾಲ್ಲೂಕು ಆರೋಗ್ಯಾಧಿಕಾರಿ ನೇತೃತ್ವದ ತಂಡ ಕಳಹಿಸಿ, ಪರಿಶೀಲನೆ ಮಾಡಿಸಲಾಗಿದೆ. ಗುಜರಿ ಅಂಗಡಿಯವರಿಗೆ ಯಾವ ಆಸ್ಪತ್ರೆಯಿಂದ ತ್ಯಾಜ್ಯ ಸಿಕ್ಕಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುವುದು. ತಪ್ಪಿತಸ್ಥ ಆಸ್ಪತ್ರೆ ವಿರುದ್ಧ ಕೆಪಿಎಂಇ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು. ಹಾಗೆಯೇ ಪರವಾನಗಿಯನ್ನೂ ರದ್ದುಪಡಿಸಲಾಗುವುದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಎಸ್‌. ತ್ರಿಪುಲಾಂಭ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.