ಬಿಜೋಗಟ್ಟೆ (ನ್ಯಾಮತಿ): ಹಬ್ಬ, ಜಾತ್ರೆ, ಸಮಾರಂಭಗಳಲ್ಲಿ ಪುರುಷ-ಮಹಿಳೆಯರು, ಅಬಾಲ ವೃದ್ಧರಾದಿಯಾಗಿ ಎಲ್ಲರೂ ಸೇರಿ ಸಂಭ್ರಮಿಸುವುದು ವಾಡಿಕೆ. ಆದರೆ, ಮಹಿಳೆಯರನ್ನು ದೂರವಿಟ್ಟು ಪುರುಷರಷ್ಟೇ ಆಚರಿಸುವ ಜಾತ್ರೆಯೊಂದು ಈ ಭಾಗದಲ್ಲಿ ಆಚರಣೆಯಲ್ಲಿದೆ.
ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ವೀರಶೈವ ಸಮುದಾಯದವರು ಸೇರಿ ಊರಾಚೆಯ ದೇಗುಲದ ತೋಪಿನಲ್ಲಿ ಆಚರಿಸುವ ಮಹೇಶ್ವರ ಜಾತ್ರೆಯೇ ವಿಶೇಷ ಇದು.
ಈ ಜಾತ್ರೆಯ ಬಗ್ಗೆ ಪುರಾಣದಲ್ಲಿ ಉಲ್ಲೇಖವಿದೆ ಎನ್ನುತ್ತಾರೆ ಹಿರಿಯರು. ಪರಶಿವನೇ ಮಹೇಶ್ವರನ ರೂಪದಲ್ಲಿ ಅವತರಿಸಿದ್ದು, ಇಲ್ಲಿ ನೆಲೆಸಿದ್ದಾನೆ ಎಂಬ ನಂಬಿಕೆ ಇದೆ.
ಜಾತ್ರೆಯ ಹಿನ್ನೆಲೆ: ಭೂಮಿಗೆ ಬಂದ ಪರಶಿವನು ಮಹೇಶ್ವರನಾಗಿ ಹೋದೆಡೆಯಲ್ಲೆಲ್ಲಾ ಭಕ್ತರನ್ನು ಸನ್ಮಾರ್ಗಕ್ಕೆ ತರುತ್ತಿದ್ದ. ಗುರು-ಲಿಂಗ-ಜಂಗಮರನ್ನು ಗೌರವಿಸುತ್ತಿದ್ದರಿಂದ ಮಹೇಶ್ವರನೆಂದು ಪ್ರಸಿದ್ಧನಾದ. ಆತ ತಂಗುತ್ತಿದ್ದ ಸ್ಥಳ ಊರಾಚೆ ಇತ್ತು. ಬ್ರಾಹ್ಮಿ ಮುಹೂರ್ತದಲ್ಲೇ ಪೂಜೆ ಆಚರಿಸುವುದು, ಹೊಸ ಬಾವಿಯಿಂದ ನೀರು ತರುವುದು, ಬ್ರಹ್ಮಚರ್ಯೆ ವ್ರತ ಆಚರಿಸುವುದು ಆತನ ದಿನಚರಿ. ಬ್ರಹ್ಮಚರ್ಯೆ ಆಚರಿಸುತ್ತಿದ್ದರಿಂದ ಸ್ತ್ರೀ ದರ್ಶನ ಮಾಡುತ್ತಿರಲಿಲ್ಲ. ಊರ ಒಳಗೆ ಪ್ರವೇಶಿಸದೆ ಹೊರಗಡೆ ಇರುತ್ತಿದ್ದ. ಹಾಲು–ಹಣ್ಣು ಮಾತ್ರ ಸೇವಿಸುತ್ತಿದ್ದ. ಸಂಚಾರ ಮಾಡಿದ ಸ್ಥಳಗಳಲ್ಲಿ ಮಹೇಶ್ವರ ಪೂಜೆ ಮಾಡುವಂತೆ ಭಕ್ತರಿಗೆ ಹೇಳುತ್ತಿದ್ದ. ಜಾತ್ರೆ ಮಾರ್ಗಶಿರ ಮಾಸದಲ್ಲಿ ಅಮಾವಾಸ್ಯೆ ಒಳಗಿನ ಸೋಮವಾರದಿಂದ ಮೂರು ದಿನ ಆಚರಿಸುವ ಪದ್ಧತಿ ಇದೆ ಎಂದು ಹಿರಿಯರಾದ ಬಿ.ಪಿ. ಚನ್ನೇಶಪ್ಪ, ಬಿ.ಎಸ್. ಪ್ರಕಾಶ ತಿಳಿಸಿದರು.
ಅಕ್ಕಿಯಿಂದ ಮಾಡಿದ ಕಿಚಡಿ (ಅನ್ನ), ಹಾಲು, ತುಪ್ಪ, ಬಾಳೆಹಣ್ಣು, ಬೆಲ್ಲವನ್ನು ಮಾತ್ರ ಪ್ರಸಾದವಾಗಿ ಸೇವಿಬೇಕು. ಕಾರ ಬಳಸುವಂತಿಲ್ಲ, ಹರಕೆ ಹೊತ್ತ ಭಕ್ತರು ಈ ಪದಾರ್ಥಗಳನ್ನು ತಂದು ಅರ್ಪಿಸಿ ಕೃತರಾರ್ಥರಾಗುತ್ತಾರೆ. ಪ್ರಸಾದವನ್ನು ಪುರುಷರೇ ಸಿದ್ಧಗೊಳಿಸುತ್ತಾರೆ. ಈ ಚಪ್ಪರದೊಳಗೆ ಮಹಿಳೆಯರಿಗೆ ಪ್ರವೇಶವಿಲ್ಲ.
ಪಕ್ಕದ ಗ್ರಾಮಗಳಾದ ಕೊಡಚಗೊಂಡನಹಳ್ಳಿ, ಒಡೆಯರಹತ್ತೂರು, ಕುಂಕುವ, ಬಸವನಹಳ್ಳಿ, ಅರಬಗಟ್ಟೆ, ಬಿಜೋಗಟ್ಟೆ ಗ್ರಾಮದ ಬಸವೇಶ್ವರ ಉತ್ಸವಮೂರ್ತಿಗಳು ಹಾಗೂ ಕ್ಯಾಸಿನಕೆರೆ, ಅರೆಹಳ್ಳಿ ವೀರಭದ್ರೇಶ್ವರಸ್ವಾಮಿ ಜಾತ್ರೆಗೆ ಬರುತ್ತವೆ. ಮೂರು ದಿನಗಳ ಜಾತ್ರೆಯ ನಂತರ ದೇವರು ಊರೊಳಗೆ ಬಂದಾಗ ಆಯಾ ಗ್ರಾಮದಲ್ಲಿ ಹಬ್ಬದ ವಾತಾವರಣ ಇರುತ್ತದೆ. ದೇವರ ಮೂರ್ತಿ ಊರ ಒಳಗೆ ಬರುತ್ತಿದ್ದಂತೆ ಪುರುಷರು, ಮಹಿಳೆಯರು, ಮಕ್ಕಳು ಸೇರಿ ಪ್ರಸಾದ ಸ್ವೀಕರಿಸುತ್ತೇವೆ. ಮಹೇಶ್ವರ ಜಾತ್ರೆ ದೊಡ್ಡ ಹಬ್ಬವಿದ್ದಂತೆ ಎಂದು ಹಿರಿಯರಾದ ಬಿ.ಜಿ. ಬಸವರಾಜಪ್ಪ, ಬಿ.ಜಿ. ಷಣ್ಮುಖಪ್ಪ, ಬಿ.ಎಂ. ಶಾಂತಪ್ಪರೆಡ್ಡಿ, ಶಂಕರಗೌಡ, ಕುಬೇರರೆಡ್ಡಿ ವಿವರಿಸಿದರು.
ಮೂರು ದಿನದ ಮಹೇಶ್ವರ ಜಾತ್ರೆಯ ಮೂರನೇ ದಿನ ಹೊಸ ಮಡಕೆಯಲ್ಲಿ ಅನ್ನ ತಯಾರಿಸಿ ಅನ್ನದ ಮಡೆಕೆಗೆ ಪೂಜೆ ನೆರವೇರಿಸಿ ಹಣ್ಣು ಕಾಯಿ ಸಮೇತ ನಿಗದಿತ ಸ್ಥಳದ ಗುಂಡಿಯಲ್ಲಿ ಇಟ್ಟು ಮಣ್ಣು ಮುಚ್ಚಿ ಎಲ್ಲರೂ ಗ್ರಾಮಕ್ಕೆ ಮರಳುತ್ತಾರೆ. ಮುಂದಿನ ವರ್ಷ ಮಹೇಶ್ವರ ಜಾತ್ರೆಯ ಸಮಯದಲ್ಲಿ ಗುಂಡಿ ತೆಗೆದು ನೋಡಿದಾಗ ಮಡಕೆಯಲ್ಲಿ ಇಟ್ಟ ಅನ್ನ ಪ್ರಸಾದ ಹಣ್ಣು ಕಾಯಿ ತಾಜಾ ರೂಪದಲ್ಲಿಯೇ ಇರುವುದು ಇಲ್ಲಿನ ವಿಶೇಷ ಎನ್ನುತ್ತಾರೆ ಗ್ರಾಮದ ಹಿರಿಯರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.