ADVERTISEMENT

ಧಗಧಗಿಸುತ್ತಿದೆ ದಾವಣಗೆರೆ!

ಬಿಸಿಲ ಬೇಗೆಗೆ ಬೆಚ್ಚಿಬಿದ್ದ ಜನ; ಪ್ರಾಣಿ– ಪಕ್ಷಿಗಳ ಸ್ಥಿತಿ ಅಯೋಮಯ

ಸಿದ್ದಯ್ಯ ಹಿರೇಮಠ
Published 1 ಮೇ 2024, 5:40 IST
Last Updated 1 ಮೇ 2024, 5:40 IST
ದಾವಣಗೆರೆಯ ಎಂಬಿಎ ಕಾಲೇಜಿನ ಆಟದ ಮೈದಾನದ ಬಳಿ ಒಣಗುತ್ತಿರುವ ಮರಗಳಿಗೆ ಟ್ಯಾಂಕರ್‌ ಮೂಲಕ ನೀರುಣಿಸುತ್ತಿರುವ ಕಾರ್ಮಿಕರು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಎಂಬಿಎ ಕಾಲೇಜಿನ ಆಟದ ಮೈದಾನದ ಬಳಿ ಒಣಗುತ್ತಿರುವ ಮರಗಳಿಗೆ ಟ್ಯಾಂಕರ್‌ ಮೂಲಕ ನೀರುಣಿಸುತ್ತಿರುವ ಕಾರ್ಮಿಕರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ‘ಜೀವನದಲ್ಲಿ ಅನೇಕ ಬಾರಿ ಮಳೆ ಕೈಕೊಟ್ಟು ಬರ ಪರಿಸ್ಥಿತಿ ತಲೆದೋರಿದ್ದನ್ನು ಕಂಡಿದ್ದೇನೆ. ಆಗೆಲ್ಲ ಬೇಸಿಗೆಯ ಬಿರುಬಿಸಿಲಿನ ದಿನಗಳನ್ನು ನೋಡಿದ್ದೇನೆ. ಆದರೆ, ಇಂಥ ಸುಡುಬಿಸಿಲಿನ ಕಡುಬೇಸಿಗೆಯನ್ನು ಹಿಂದೆಂದೂ ಕಂಡಿರಲಿಲ್ಲ’

ಹೀಗೆಂದು ಹೇಳಿದವರು ಹದಡಿಯ ರೈತ ಶಂಕರಪ್ಪ.

‘ನಡುಬೇಸಿಗೆ ಎಂದರೆ ಬೆಳಿಗ್ಗೆ 9ರಿಂದ ಮಧ್ಯಾಹ್ನ 4ರವರೆಗೆ ಬಿಸಿಲು ಇರುತ್ತಿತ್ತು. ಸಂಜೆ ತಂಪನೆ ಗಾಳಿ ಬೀಸುತ್ತಿತ್ತು. ಆದರೆ ಈಗಿನ ಬೇಸಿಗೆ ನಿಜಕ್ಕೂ ಭಯ ಹುಟ್ಟಿಸುತ್ತಿದೆ. ಮನೆ ಬಿಟ್ಟು ಹೊರಹೋದರೆ ಆಯಾಸ ಆಗುತ್ತಿದೆ. ಕೆಲಸ ಮಾಡಲು ಕೈಕಾಲುಗಳಲ್ಲಿ ಶಕ್ತಿಯೇ ಇಲ್ಲದಂತಾಗಿದೆ’ ಎಂದು ಹೇಳಿದವರು ಸೈಕಲ್‌ ಮೇಲೆ ಬೀದಿಬೀದಿ ಸುತ್ತಿ ತರಕಾರಿ ಮಾರಾಟ ಮಾಡುವ ಸುಬಾನ್‌ಸಾಬ್‌.

ADVERTISEMENT

ಕಳೆದ ಒಂದು ತಿಂಗಳಿಂದ ಜಿಲ್ಲೆಯ ಜನರನ್ನು ಸತಾಯಿಸುತ್ತಿರುವ ಬಿಸಿಲಿನ ಅಟ್ಟಹಾಸ ಕಳೆದೊಂದು ವಾರದಿಂದ ಪರಾಕಾಷ್ಠೆ ತಲುಪಿದೆ. ಆಬಾಲವೃದ್ಧರಾದಿಯಾಗಿ ಪ್ರತಿಯೊಬ್ಬರೂ ಈ ಬಿಸಿಲಿಗೆ ಬೆಂದು, ಬಾಡಿ ಹೋಗಿದ್ದಾರೆ. ನವಜಾತ ಶಿಶುಗಳೂ, ಬಾಣಂತಿಯರೂ ಕನಲಿದ್ದಾರೆ. ಬೀದಿಬದಿಯಲ್ಲಿ, ಸಂತೆಯಲ್ಲಿ ವ್ಯಾಪಾರ ಮಾಡುವವರೂ, ಊರೂರಿನ ಸುತ್ತಾಟದ ಕೆಲಸ ನೆಚ್ಚಿಕೊಂಡಿರುವವರು ಬೆಚ್ಚಿಬಿದ್ದಿದ್ದಾರೆ.

ಮಳೆಯ ಅಭಾವದಿಂದಾಗಿ ವಾತಾವರಣದಲ್ಲಿ ತೇವಾಂಶದ ಕೊರತೆ ಎದುರಾಗಿದ್ದೇ ಈ ಬವಣೆಗೆ ಕಾರಣವೇ? ಈ ಹಿಂದೆಯೂ ಬರಗಾಲದಲ್ಲಿನ ಬೇಸಿಗೆಯಲ್ಲಿ ಈ ಪರಿ ಬಿಸಿಲೇಕೆ ಇರಲಿಲ್ಲ? ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಪರಿಸರ ತಜ್ಞರು ಗಿಡ–ಮರಗಳ ಮಾರಣಹೋಮದ ಕಾರಣ ಮುಂದಿರಿಸುತ್ತಿದ್ದರೆ, ಊರೂರಲ್ಲೆಲ್ಲ ಗಿಡಮರ ಕಡಿದು, ರಸ್ತೆ ಅಗಲೀಕರಣ ಮಾಡಿ, ಸಿಮೆಂಟ್‌ (ಸಿಸಿ) ರಸ್ತೆಗಳನ್ನು ನಿರ್ಮಿಸಿರುವುದೇ ಬಿಸಿ ಹೊರಹೊಮ್ಮಲು ಕಾರಣ ಎಂದು ಮಾತಾಡಿಕೊಳ್ಳುತ್ತಿದ್ದಾರೆ.

‘ಈ ಹಿಂದೆಲ್ಲ ಬಿಸಿಲ ಕಾಲದಲ್ಲಿ ಯಾಕಾದರೂ ಬೆಳಗಾಗುತ್ತದೋ, ಬೆಳಗಾದ ಮೇಲೆ ಮಧ್ಯಾಹ್ನ ಯಾಕಾಗುತ್ತದೋ ಎಂದು ಚಿಂತಿಸುತ್ತಿದ್ದೆವು. ಸಂಜೆಯಾದ ಕೂಡಲೇ ವಾತಾವರಣ ತಣ್ಣಗಾಗಿ ನೆಮ್ಮದಿಯ ನಿದ್ದೆ ಹತ್ತುತ್ತಿತ್ತು. ಈಗ ಹಗಲು–ರಾತ್ರಿ ಒಂದೇ ಆದಂತಾಗಿದೆ. ರಾತ್ರಿ ಯಾಕಾದರೂ ಆಗುತ್ತದೋ ಎಂದು ಆಲೋಚಿಸುವಷ್ಟು ಧಗೆ ಇರುತ್ತದೆ. ಗಿಡ–ಮರಗಳ ಎಲೆಗಳು ಅಲುಗಾಡುವುದಿಲ್ಲ. ಒಂಚೂರೂ ಗಾಳಿ ಬೀಸುವುದಿಲ್ಲ. ಒಂದೊಮ್ಮೆ ಗಾಳಿ ಬೀಸಿದರೂ ಆಹ್ಲಾದಕರ ಅನ್ನಿಸುವುದಿಲ್ಲ. ಅಷ್ಟು ಬಿಸಿಬಿಸಿಯಾಗಿರುತ್ತದೆ’ ಎಂದು ಹೇಳಿದವರು ನಗರದ ಕಾಲೇಜೊಂದರ ಎದುರು ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡುವ ನಾರಪ್ಪ.

‘ಬೇಸಿಗೆ ಎಂದರೆ ರಜೆಯ ಮಜಾ ದಿನಗಳನ್ನು ಅನುಭವಿಸುವ ಕಾಲ. ನಮ್ಮ ಮೊಮ್ಮಕ್ಕಳಿಗೀಗ ರಜೆ ಇದೆ. ಆದರೆ, ಅವರು ಮನೆ ಬಿಟ್ಟು ಹೊರಗೆ ಹೋಗಿ ಆಟವಾಡುವುದಕ್ಕೆ ಆಗುತ್ತಿಲ್ಲ. ನಮ್ಮ ಮಗಳ ಮಕ್ಕಳೂ ರಜೆ ಕಳೆಯಲು ಬೆಂಗಳೂರಿನಿಂದ ಬಂದಿದ್ದಾರೆ. ಮನೆಯ ತುಂಬ ಮಕ್ಕಳ ಕಲರವ ಇದೆ. ಆದರೆ, ಅವರಿಗೆಲ್ಲ ಅಡುಗೆ ಮಾಡಿ ಹಾಕುವುದಕ್ಕೂ ಆಗುತ್ತಿಲ್ಲ. ಅಡುಗೆ ಮನೆಗೆ ಹೋದರೆ ಬೆವರು ಮೈಯೆಲ್ಲ ಸುರಿಯುತ್ತದೆ. ಫ್ಯಾನ್‌ ಹಾಕಿದರೂ ಬಿಸಿಗಾಳಿ ಕಾಡುತ್ತಿದೆ’ ಎಂದು ಬೇಸರ ತೋಡಿಕೊಂಡವರು ಹರಿಹರದ ಸುಮಿತ್ರಮ್ಮ.

‘ನಮ್ಮ ಮನೆಯಲ್ಲಿ ಏರ್‌ ಕಂಡೀಷನರ್‌ ಇಲ್ಲ. ಬಹುಶಃ ಲೋಕಸಭೆ ಚುನಾವಣೆ ಕಾರಣದಿಂದ ವಿದ್ಯುತ್‌ ಸ್ಥಗಿತಗೊಳ್ಳುತ್ತಿಲ್ಲ. ಮೇ 7ಕ್ಕೆ ಮತದಾನ. ನಂತರ ಕರೆಂಟ್‌ ತೆಗೀಬಹುದು. ಕರೆಂಟ್‌ ಇಲ್ಲದಿದ್ದರಂತೂ ಮನೆಯಲ್ಲಿ ಇರುವುದಕ್ಕೇ ಆಗದು’  ಎಂಸಿಸಿ ಬಡಾವಣೆಯ ನಿವಾಸಿ ಸಿ.ರಾಘವೇಂದ್ರ.

‘ಬೈಕ್‌ನಲ್ಲಿ ಹೋಗುತ್ತಿದ್ದರಂತೂ ಬಿಸಿಗಾಳಿ ಕೆಂಡ ಎರಚಿದಂತೆ ಭಾಸವಾಗುತ್ತದೆ. ಸಿಗ್ನಲ್‌ನಲ್ಲಿ ಕಾಯುವ ಶಿಕ್ಷೆಯಂತೂ ಯಾರಿಗೂ ಬೇಡ. ಅಲ್ಲಿ ನಿಲ್ಲಬೇಕಾದ ಒಂದೆರಡು ನಿಮಿಷಗಳಂತೂ ಸೂರ್ಯಾಘಾತ ಎಂದರೆ ಏನೆಂಬುದನ್ನು ಪರಿಚಯಿಸುತ್ತದೆ’ ಎಂಬುದು ಫೂಟ್‌ ಡಿಲೆವರಿ ಕೆಲಸ ಮಾಡುವ ಜೋಮನ್‌ ಹಾಗೂ ಚಂದ್ರಪ್ಪ ಅವರ ಅನುಭವದ ಮಾತು. ಆದಷ್ಟು ಬೇಗ ಅಡ್ಡಮಳೆ ಸುರಿಯಲಿ. ಬಿಸಿಲ ಬೇಗೆ ದೂರವಾಗಲಿ ಎಂದು ಅವರು ಆಶಿಸಿದರು.

ಮುಂದಿನ ನಾಲ್ಕೈದು ದಿನಗಳು ಒಣಹವೆ ಮುಂದುವರೆಯುವ ಲಕ್ಷಣಗಳು ಇವೆ. ಗರಿಷ್ಠ ತಾಪಮಾನ ಮುಂದಿನ ಐದು ದಿನಗಳಲ್ಲಿ 40.6ರಿಂದ 41.2 ಡಿಗ್ರಿ ಸೆಲ್ಸಿಯಸ್ ಎಂದು ಮತ್ತು ಕನಿಷ್ಠ ತಾಪಮಾನ 23.8ರಿಂದ 24 ಡಿಗ್ರಿ ಸೆಲ್ಸಿಯಸ್ ಇರಲಿದೆ ಹವಾಮಾನ ಇಲಾಖೆಯು ಮಾಹಿತಿ ನೀಡಿದೆ.

ದಾವಣಗೆರೆಯ ಜಿಲ್ಲೆಯ ಕೊಂಡಜ್ಜಿ ಗ್ರಾಮದ ಹೊರವಲಯದಲ್ಲಿ ಬಿಸಿಲ ತಾಪ ತಾಳಲಾರದೇ ಬಾಯಾರಿದ ಹಳದಿ ಕೊಕ್ಕಿನ ಹರಟೆಮಲ್ಲ ಪಕ್ಷಿಗಳು (ಯೆಲ್ಲೋ ಬಿಲ್ಲಡ್ ಬಾಬ್ಲರ್ ) ನಳದಿಂದ ಸೊರುತ್ತಿದ್ದ ಹನಿ ಹನಿ ನೀರನ್ನು ಕುಡಿಯುತ್ತಿರುವ ದೃಶ್ಯ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಜಿಲ್ಲೆಯ ಕೊಂಡಜ್ಜಿ ಗ್ರಾಮದ ಹೊರವಲಯದಲ್ಲಿ ಬಿಸಿಲ ತಾಪ ತಾಳಲಾರದೇ ಬಾಯಾರಿದ ಪರ್ಪಲ್ ರಂಪೆಡ್ ಸನ್‌ಬರ್ಡ್ ನಳದಿಂದ ಸೊರುತ್ತಿದ್ದ ಹನಿ ಹನಿ ನೀರನ್ನು ಕುಡಿಯುತ್ತಿರುವ ದೃಶ್ಯ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಜಿಲ್ಲೆಯ ಕೊಂಡಜ್ಜಿ ಗ್ರಾಮದ ಹೊರವಲಯದಲ್ಲಿ ಬಿಸಿಲ ತಾಪ ತಾಳಲಾರದೇ ಬಾಯಾರಿದ ರೋಫಸ್ ಟ್ರೀಪೈ ಪಕ್ಷಿ ನಳದಿಂದ ಸೊರುತ್ತಿದ್ದ ಹನಿ ಹನಿ ನೀರನ್ನು ಕುಡಿಯುತ್ತಿರುವ ದೃಶ್ಯ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಗುರುಭವನ ರಸ್ತೆಯಲ್ಲಿ ಭಾನುವಾರ ಸುಡುತ್ತಿದ್ದ ಬಿಸಿಲಿನಿಂದ ರಕ್ಷಣೆ ಪಡೆಯಲು ಕೊಡೆ ಹಿಡಿದು ಸಾಗಿದ ಯುವತಿಯರು –ಪ್ರಜಾವಾಣಿ ಚಿತ್ರ/ಸತೀಶ ಬಡಿಗೇರ್

ನಿರ್ಜಲೀಕರಣದ ಅಪಾಯ

‘ಬಿಸಿ ಗಾಳಿಯ ಬೀಸುತ್ತಿದ್ದು ನೀರು ಮಜ್ಜಿಗೆ ಕಬ್ಬಿನ ಹಾಲು ಸೇವನೆ ಹಣ್ಣಿನ ರಸವನ್ನು ಹೆಚ್ಚಾಗಿ ಸೇವಿಸಬೇಕು. ವೃದ್ಧರು ಮಕ್ಕಳು ಹಾಗೂ ಮಹಿಳೆಯರು 11ರಿಂದ 3ಗಂಟೆ ಹೊರಗಡೆ ಬಾರದೇ ಇರುವುದು ಒಳ್ಳೆಯದು. ತಲೆಸುತ್ತು ಬಂದರೆ ಕುಳಿತು ಸುಧಾರಿಸಿಕೊಂಡು ನೀರನ್ನು ಕುಡಿಯಬೇಕು. ಯಾರಾದರೂ ರಸ್ತೆಯಲ್ಲಿ ಮೂರ್ಚೆ ಹೋದರೆ ಸಾರ್ವಜನಿಕರು ನೀರು ಕುಡಿಸಿ ಹತ್ತಿರದ ಆಸ್ಪತ್ರೆಗೆ ಕಳುಹಿಸಬೇಕು. ಬಿಸಿಲಾಘಾತದಿಂದ ಸಾಮಾನ್ಯವಾಗಿ ವಾಂತಿ ಭೇದಿ ಕಾಣಿಸಿಕೊಂಡು ನಿರ್ಜಲೀಕರಣ ಉಂಟಾಗುತ್ತದೆ. ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕು. ಹಳಸಿದ ಆಹಾರ ಸೇವಿಸಬಾರದು’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್ ಸಲಹೆ ನೀಡಿದರು

ಹೆಚ್ಚು ಮಳೆಯಾಗುವ ಮುನ್ಸೂಚನೆ

‘ಬರಗಾಲ ಬಂದ ಬಳಿಕ ಬಿಸಿ ಗಾಳಿ ಬರುವುದು ವಾಡಿಕೆ. ಪ್ರತಿ 5 ವರ್ಷಕ್ಕೊಮ್ಮೆ ಇದು ಸಂಭವಿಸುತ್ತದೆ. ಮಳೆ ಜಾಸ್ತಿಯಾಗುವ ಮುನ್ಸೂಚನೆ  ಇದು. ಎಲ್‌ನಿನೊ ಆದ ಮೇಲೆ ಇದು ಸಂಭವಿಸುತ್ತದೆ. ಎರಡು ವಾರಗಳ ಕಾಲ ಇರುತ್ತದೆ. ಆ ಬಳಿಕ  ಮಾನ್ಸೂನ್ ಆರಂಭವಾಗುತ್ತದೆ’ ಎಂದು ಬಬ್ಬೂರು ಫಾರಂನ ಗ್ರಾಮೀಣ ಕೃಷಿ ಹವಾಮಾನ ಘಟಕದ ತಾಂತ್ರಿಕ ಅಧಿಕಾರಿ ಡಾ.ಅಮಿತ್ ಜಿ. ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.