ADVERTISEMENT

ಕೆಳಸೇತುವೆಗಳ ವಿಸ್ತರಣೆಗೆ ಸಚಿವ ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2023, 5:12 IST
Last Updated 28 ಡಿಸೆಂಬರ್ 2023, 5:12 IST
ದಾವಣಗೆರೆಯಲ್ಲಿ ಬುಧವಾರ ನಡೆದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮಾತನಾಡಿದರು.
ದಾವಣಗೆರೆಯಲ್ಲಿ ಬುಧವಾರ ನಡೆದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮಾತನಾಡಿದರು.   

ದಾವಣಗೆರೆ: ‘ಆವರಗೆರೆಯಿಂದ ಹಳೇಬಾತಿಯವರೆಗಿನ ಎಲ್ಲಾ ಕೆಳಸೇತುವೆಗಳನ್ನು ವಿಸ್ತರಿಸಿ, ವೈಜ್ಞಾನಿಕವಾಗಿ ನಿರ್ಮಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅಧಿಕಾರಿಗಳಿಗೆ ಸೂಚಿಸಿದರು.  

ಬುಧವಾರ ನಡೆದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳ ಸಭೆಯಲ್ಲಿ ಅವರು ಮಾತನಾಡಿ, ‘ ಕೆಲವೊಂದು ಕೆಳಸೇತುವೆಗಳು ನಾಲ್ಕುವರೆ ಮೀಟರ್‌ಗಳಷ್ಟು ಚಿಕ್ಕಾಗಿದ್ದು, ಅವುಗಳನ್ನು 12 ಮೀಟರ್‌ಗೆ ವಿಸ್ತರಿಸಬೇಕು’ ಎಂದು ಹೇಳಿದರು.

‘ಹದಡಿ ರಸ್ತೆಯಿಂದ ಶಿರಮಗೊಂಡನಹಳ್ಳಿ ಕಡೆಗೆ ಹೋಗುವ ಅಂಡರ್ ಬ್ರಿಡ್ಜ್‌ ಅವೈಜ್ಞಾನಿಕವಾಗಿದ್ದು, ಇಲ್ಲಿ ಅಪಘಾತಗಳು ಸಂಭವಿಸುತ್ತಿವೆ. ನಾಲೆಗಳಿಗೆ ಹಾನಿಯಾಗದಂತೆ ಅವುಗಳ ಮೇಲ್ಮೈಯನ್ನು ಕವರ್ ಮಾಡಿಕೊಂಡು ಅಲ್ಲಿ ವೃತ್ತ ನಿರ್ಮಿಸಿ ವಾಹನಗಳು ಸರಾಗವಾಗಿ ಸಂಚರಿಸಲು ಅನುಕೂಲ ಮಾಡಿಕೊಡಬೇಕು. ಈ ಬಗ್ಗೆ ಉನ್ನತ ಅಧಿಕಾರಿಗಳ ಜೊತೆ ಚರ್ಚಿಸಿ’ ಎಂದು ಅಧಿಕಾರಿಗಳು ಸಲಹೆ ನೀಡಿದರು.

ADVERTISEMENT

‘ಬನಶಂಕರಿ ಬಡಾವಣೆಯಲ್ಲಿ 12 ಮೀಟರ್ ಕೆಳಸೇತುವೆ ನಿರ್ಮಿಸಲಾಗುತ್ತಿದ್ದು, ಅದಕ್ಕೂ ಮೊದಲು ಇಲ್ಲಿನ ಕೆಳಸೇತುವೆಯನ್ನು ದುರಸ್ತಿಪಡಿಸಬೇಕು. ಕುಂದವಾಡ, ಹಳೇಬಾತಿ, ಎಸ್‌.ಎಸ್‌. ಹೈಟೆಕ್ ಆಸ್ಪತ್ರೆಯ ಬಳಿ ಇರುವ ಕೆಳಸೇತುವೆಗಳನ್ನು ನೇರವಾಗಿ ನಿರ್ಮಿಸಬೇಕು, ಜಾಗ ಇಲ್ಲ ಎಂದು ಯಾವುದೇ ಸಬೂಬು ಹೇಳದೇ ಕೆಲಸ ಮಾಡಬೇಡಿ. ಜನರ ಜೀವಕ್ಕೆ ಹಾನಿಯಾಗದಂತೆ ಕೆಲಸ ಮಾಡಿ. ಇಲ್ಲದಿದ್ದರೆ ಬಿಟ್ಟು ಹೋಗಿ’ ಎಂದು ಎಚ್ಚರಿಸಿದರು.

‘ರಾಜ್ಯ ಸರ್ಕಾರದಿಂದ ಯಾವುದೇ ಕೆಲಸಗಳು ಆಗಬೇಕಿದ್ದಲ್ಲಿ ನನ್ನನ್ನು ಸಂಪರ್ಕಿಸಿ, ಆದರೆ ಕೆಲಸಗಳು ನಡೆಯಬೇಕು’ ಎಂದು ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌, ದಾವಣಗೆರೆ ತಹಶೀಲ್ದಾರ್ ಎಂ.ಬಿ. ಅಶ್ವತ್ಥ್‌, ಧೂಡಾ ಆಯುಕ್ತ ಬಸವನಗೌಡ,  ಸ್ಮಾರ್ಟ್ ಸಿಟಿ ಎಂಡಿ ವೀರೇಶ್‌ಕುಮಾರ್, ಪ್ರಾಜೆಕ್ಟ್ ಡೈರೆಕ್ಟರ್ ಗೌರವ್, ಗುತ್ತಿಗೆದಾರ ಶ್ರೀನಿವಾಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.