ADVERTISEMENT

ಪೇಮೆಂಟ್ ಕೋಟಾ ವ್ಯವಸ್ಥೆ ಜಾರಿಗೆ ವಿರೋಧ: ದಾವಣಗೆರೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಯುಬಿಡಿಟಿ ಕಾಲೇಜು ಉಳಿಸಿ ಹೋರಾಟ ಸಮಿತಿ ನೀಡಿದ್ದ ಕರೆಗೆ ಸಿಗದ ನಿರೀಕ್ಷಿತ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 9:06 IST
Last Updated 16 ಅಕ್ಟೋಬರ್ 2024, 9:06 IST
<div class="paragraphs"><p>ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆಯಿಂದ ಪ್ರತಿಭಟನೆ</p></div>

ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆಯಿಂದ ಪ್ರತಿಭಟನೆ

   

ದಾವಣಗೆರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸರ್ಕಾರಿ ಎಂಜಿನಿಯರಿಂಗ್‌ ಘಟಕ ಕಾಲೇಜುಗಳಲ್ಲಿ ಪೇಮೆಂಟ್‌ ಕೋಟಾ ವ್ಯವಸ್ಥೆ ಜಾರಿಗೊಳಿಸಿರುವುದನ್ನು ವಿರೋಧಿಸಿ ‘ಯುಬಿಡಿಟಿ ಕಾಲೇಜು ಉಳಿಸಿ ಹೋರಾಟ ಸಮಿತಿ’ ಬುಧವಾರ ಕರೆ ನೀಡಿದ್ದ ದಾವಣಗೆರೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಕೆಲವೆಡೆ ಅಂಗಡಿಗಳು ಬಾಗಿಲು ಮುಚ್ಚಿದ್ದು ಹೊರತುಪಡಿಸಿ ಜನಜೀವನ ಸಹಜವಾಗಿದೆ.

ವಿಶ್ವವಿದ್ಯಾಲಯದ ಘಟಕ ಕಾಲೇಜು ಯುಬಿಡಿಟಿಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಶೇ 50ರಷ್ಟು ಸೀಟುಗಳನ್ನು ಪೇಮೆಂಟ್‌ ಕೋಟಾದ ಅಡಿ ಭರ್ತಿ ಮಾಡಿಕೊಳ್ಳಲು ಕೈಗೊಂಡಿರುವ ನಿರ್ಧಾರವನ್ನು ವಿರೋಧಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಒ) ಹೋರಾಟ ಕೈಗೆತ್ತಿಕೊಂಡಿದೆ. ಚಳವಳಿಯನ್ನು ತೀವ್ರಗೊಳಿಸಲು ನಗರ ಬಂದ್‌ಗೆ ನೀಡಿದ್ದ ಕರೆಗೆ ಕನ್ನಡಪರ, ರೈತ, ಕಾರ್ಮಿಕ ಹಾಗೂ ದಲಿತ ಸಂಘಟನೆಗಳು ಬೆಂಬಲ ನೀಡಿದ್ದವು.

ADVERTISEMENT

ನಗರದ ಗಾಂಧಿ ವೃತ್ತ, ಜಯದೇವ ವೃತ್ತ, ವಿದ್ಯಾರ್ಥಿ ಭವನ ವೃತ್ತ, ಅಶೋಕ ರಸ್ತೆ, ಪಿ.ಬಿ.ರಸ್ತೆ, ಹದಡಿ ರಸ್ತೆ ಸೇರಿ ಇತರೆಡೆ ಅಂಗಡಿಗಳು ಅರ್ಧ ದಿನ ಬಾಗಿಲು ತೆರೆಯಲಿಲ್ಲ. ಎವಿಕೆ ಕಾಲೇಜು ರಸ್ತೆ, ಚರ್ಚ್‌ ರಸ್ತೆ, ಶಾಮನೂರು ರಸ್ತೆ ಸೇರಿದಂತೆ ಉಳಿದೆಡೆ ವಾಣಿಜ್ಯ ವಹಿವಾಟು ಎಂದಿನಂತೆ ನಡೆಯಿತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್‌ಗಳ ಸಂಚಾರ ಕೆಲಹೊತ್ತು ಸ್ಥಗಿತಗೊಂಡಿತ್ತು. ನಗರ ಸಾರಿಗೆ ಬಸ್‌ಗಳು ಸಂಚರಿಸಿದರೂ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಆಟೊ, ದ್ವಿಚಕ್ರ ವಾಹನ ಸಂಚಾರ ಸಹಜವಾಗಿತ್ತು.

ಕೆಲಹೊತ್ತು ಸಂಚಾರ ಸ್ಥಗಿತ: ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ ನಿಲ್ದಾಣಕ್ಕೆ ಮುಂಜಾನೆ ಭೇಟಿ ನೀಡಿದ ಹೋರಾಟ ಸಮಿತಿಯ ಕಾರ್ಯಕರ್ತರು ಬಂದ್‌ ಬೆಂಬಲಿಸುವಂತೆ ಮನವಿ ಮಾಡಿಕೊಂಡರು. ಬಸ್‌ ಸಂಚಾರ ಸ್ಥಗಿತಗೊಳಿಸಿ ಹೋರಾಟಕ್ಕೆ ಕೈಜೋಡಿಸುವಂತೆ ಕೋರಿಕೊಂಡರು. ಬೆಳಿಗ್ಗೆ ಕೆಲ ಹೊತ್ತು ಖಾಸಗಿ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸೇವೆ ಲಭ್ಯವಾಗಲಿಲ್ಲ.

ದ್ವಿಚಕ್ರ ವಾಹನಗಳಲ್ಲಿ ಗುಂಪು–ಗುಂಪಾಗಿ ಸಂಚರಿಸಿದ ಪ್ರತಿಭಟನಕಾರರು ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಿಕೊಂಡರು. ಮಾರುಕಟ್ಟೆಗೆ ಭೇಟಿ ನೀಡಿದಾಗ ಅದಾಗಲೇ ಹಣ್ಣು, ತರಕಾರಿ, ಹೂ ಮಾರಾಟ ನಡೆಯುತ್ತಿತ್ತು. ವಹಿವಾಟು ಸ್ಥಗಿತಗೊಳಿಸಿ ಹೋರಾಟಕ್ಕೆ ಸಹಕಾರ ನೀಡುವಂತೆ ಕೋರಿಕೊಂಡರು. ಬಂದ್‌ಗೆ ಬೆಂಬಲ ಸೂಚಿಸಿದ ಬೀದಿಬದಿ ವ್ಯಾಪಾರಿಗಳ ಸಂಘದ ಸದಸ್ಯರು ಹೋರಾಟಕ್ಕೆ ಜೊತೆಯಾದರು.

ಮಳೆಯಲ್ಲಿಯೇ ಹೋರಾಟ: ಜಯದೇವ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಕಾರರು ವಿದ್ಯಾರ್ಥಿಗಳ ಬಂಧನವನ್ನು ಖಂಡಿಸಿದರು. ಕೂಡಲೇ ಅವರನ್ನು ಬಿಡುಗಡೆ ಮಾಡುವಂತೆ ಪಟ್ಟು ಹಿಡಿದರು. ಸುರಿಯುತ್ತಿದ್ದ ಮಳೆಯಲ್ಲಿಯೇ ಮಾನವ ಸರಪಳಿ ರಚಿಸಿ ಘೋಷಣೆಗಳನ್ನು ಕೂಗಿದರು. ಕೆಲ ಹೊತ್ತಿನ ಬಳಿಕ ಬಂಧಿತರನ್ನು ಪೊಲೀಸರು ಬಿಡುಗಡೆ ಮಾಡಲಾಯಿತು. ರೈತರು, ಕಾರ್ಮಿಕರು ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹೋರಾಟ ಸಮಿತಿ ಸದಸ್ಯರ ಜೊತೆಗೂಡಿದರು.

ಇಲ್ಲಿಂದ ಮೆರವಣಿಗೆ ಹೊರಟು ಅಶೋಕ ರಸ್ತೆ ಮೂಲಕ ಗಾಂಧಿ ವೃತ್ತ ತಲುಪಿದರು. ‘ದಾವಣಗೆರೆ ಹೆಮ್ಮೆ ಯುಬಿಡಿಟಿ ಕಾಲೇಜು ಉಳಿಸಿ’, ‘ಶೇ 50 ಪೇಮೆಂಟ್‌ ಕೋಟಾ ರದ್ದುಗೊಳಿಸಿ’ ಎಂಬ ಭಿತ್ತಿಪತ್ರ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಪೇಮೆಂಟ್‌ ಕೋಟಾ ರದ್ದುಪಡಿಸಬೇಕು ಹಾಗೂ ಅಮೃತ ಮಹೋತ್ಸವಕ್ಕೆ ಕಾಲಿಡುತ್ತಿರುವ ಯುಬಿಡಿಟಿ ಕಾಲೇಜಿಗೆ ಅನುದಾನ ನೀಡಬೇಕು ಎಂದು ಆಗ್ರಹಿಸಿದರು. ರೈಲ್ವೆ ನಿಲ್ದಾಣದ ಸಮೀಪದ ಪಿ.ಬಿ ರಸ್ತೆಯಲ್ಲಿ ಬಹಿರಂಗ ಸಭೆ ನಡೆಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್‌.ಲೋಕೇಶ್‌ ಸ್ಥಳಕ್ಕೆ ಧಾವಿಸಿ ಮನವಿ ಸ್ವೀಕರಿಸಿದರು.

ಎಐಡಿಎಸ್‌ಒ ಜಿಲ್ಲಾ ಘಟಕದ ಅಧ್ಯಕ್ಷೆ ಪೂಜಾ ನಂದಿಹಳ್ಳಿ, ಬೀದಿಬದಿ ವ್ಯಾಪಾರಸ್ಥರ ಸಂಘದ ಇಸ್ಮಾಯಿಲ್, ಉಗ್ರಾಣ ಕಾರ್ಮಿಕರ ಸಂಘದ ರಾಜೇಂದ್ರ ಬಂಗೇರ ಇದ್ದರು.

ವಿದ್ಯಾರ್ಥಿಗಳ ಬಂಧನ, ಬಿಡುಗಡೆ

ಸಾರಿಗೆ ಬಸ್‌ ಸಂಚಾರ ತಡೆದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೆ ವಾಗ್ವಾದ ನಡೆಯಿತು.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಬಸ್‌ಗಳು ಹೊರಹೋಗದಂತೆ ವಿದ್ಯಾರ್ಥಿಗಳು ಧರಣಿ ಕುಳಿತಿದ್ದರು. ಸೋನೆ ಮಳೆಯಲ್ಲಿ ಹೋರಾಟ ಮುಂದುವರಿಸಿದ್ದರು. ಒತ್ತಾಯಪೂರ್ವಕವಾಗಿ ಬಸ್‌ ತಡೆಯದಂತೆ ಪೊಲೀಸರು ಎಚ್ಚರಿಕೆ ನೀಡಿದರು. ಇದಕ್ಕೆ ಮಣಿಯದೇ ಇದ್ದಾಗ ಬಂಧನ ಮಾಡಲಾಯಿತು.

ಕೇಂದ್ರದ ಜಿಎಸ್‌ಟಿ ಪರಿಹಾರ ಕಡಿಮೆಯಾಗಿರುವ ನೆಪ ಇಟ್ಟುಕೊಂಡು ಶಿಕ್ಷಣಕ್ಕೆ ನೀಡುವ ಅನುದಾನ ಕಡಿತಗೊಳಿಸಿದ್ದು ಸರಿಯಲ್ಲ. ಶಾಸಕರು, ಸಚಿವರು ತಮ್ಮ ಸೌಲಭ್ಯ ಕಡಿತ ಮಾಡಿಕೊಳ್ಳಲಿ.
–ತೇಜಸ್ವಿ ಪಟೇಲ್, ರೈತ ಮುಖಂಡ

ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆಯಿಂದ ಪ್ರತಿಭಟನೆ

ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆಪಡೆದರು

ಬಂದ್ ಹಿನ್ನೆಲೆ ಅಂಗಡಿಗಳನ್ನುಮುಚ್ಚಲಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.