ಜಗಳೂರು: ತಾಲ್ಲೂಕಿನ ತೋರಣಗಟ್ಟೆ ಗ್ರಾಮದ ಬಡ ದಂಪತಿಯ 5 ವರ್ಷಗಳ ಗ್ಯಾಂಗ್ರೀನ್ ಪೀಡಿತ ಮಗುವನ್ನು ಶಾಸಕ ಬಿ. ದೇವೇಂದ್ರಪ್ಪ ಅವರು ದತ್ತು ಪಡೆದಿದ್ದು, ಆ ಮಗುವಿನ ಭವಿಷ್ಯದ ಎಲ್ಲಾ ಖರ್ಚುಗಳನ್ನು ಭರಿಸಿ ಉತ್ತಮ ಭವಿಷ್ಯ ಕಟ್ಟಿಕೊಡುವ ಭರವಸೆ ನೀಡಿದ್ದಾರೆ.
ಪಟ್ಟಣದ ಗುರುಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ ಅವರು ನಿವೃತ್ತರಾದ ಹಿನ್ನೆಲೆಯಲ್ಲಿ ತಾಲ್ಲೂಕು ನೌಕರರ ಸಂಘ, ವಿವಿಧ ಸಂಘ ಸಂಸ್ಥೆಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ನೌಕರರ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಚುನಾವಣೆ ಸಮಯದಲ್ಲಿ ತೋರಣಗಟ್ಟೆ ಗ್ರಾಮಕ್ಕೆ ತೆರಳಿದ್ದಾಗ ಮಗುವಿನ ಎರಡೂ ಕಾಲುಗಳಿಗೆ ಗ್ಯಾಂಗ್ರೀನ್ ಆಗಿರುವುದನ್ನು ಗಮನಿಸಿದ್ದೆ. ಆಗ ಸೂಕ್ತ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದ್ದೆ. ನಂತರದಲ್ಲಿ ಅಂತೆಯೇ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿ, ಎರಡೂ ಕಾಲುಗಳನ್ನು ಕತ್ತರಿಸಿ ಕೃತಕ ಪಾದಗಳನ್ನು ಅಳವಡಿಸಲಾಗಿದೆ. ಆ ಮಗುವಿಗೆ ಉತ್ತಮ ಭವಿಷ್ಯ ರೂಪಿಸಲು ಎಲ್ಲರೂ ಕೈಜೋಡಿಸಬೇಕು. ಬರುವ ಶ್ರಾವಣದಲ್ಲಿ ಅನಾಥನಿಧಿ ಸಂಗ್ರಹಕ್ಕೆ ಜೋಳಿಗೆ ಹಾಕುವೆ. ಸಂಗ್ರಹವಾಗುವ ನಿಧಿಯನ್ನು ಅನಾಥರು, ನಿರ್ಗತಿಕರ ಸಹಾಯಕ್ಕೆ ಬಳಸಲಾಗುವುದು ಎಂದು ಹೇಳಿದರು.
‘ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ್ವರಪ್ಪ ಅವರು ನಾನು ಚಿತ್ರದುರ್ಗದ ಕಲಾ ಕಾಲೇಜು ಹಾಸ್ಟೆಲ್‌ನಲ್ಲಿ ಇದ್ದಾಗ ಅನ್ನ ಹಾಕಿದ್ದನ್ನು ಮರೆತಿಲ್ಲ. ಕಷ್ಟದಲ್ಲಿರುವವರಿಗೆ ಸಹಾಯಸ್ತ ಚಾಚುವ ಹೃದಯ ಶ್ರೀಮಂತಿಕೆಯ ಅಪರೂಪದ ಅಧಿಕಾರಿ ಅವರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ನಾನು ತೀವ್ರ ಅನಾರೋಗ್ಯಕ್ಕೆ ಸಿಲುಕಿ, ಆಸ್ಪತ್ರೆಯ್ಲಲಿದ್ದ ಸಂದರ್ಭ ಹೊರತುಪಡಿಸಿ ನನ್ನ ಸೇವಾ ಅವಧಿ ಆರಂಭದಿಂದ ನಿವೃತ್ತಿಯವರೆಗೆ ಒಂದೂ ರಜೆ ಹಾಕಿಲ್ಲ. ಜನರ ಅಭಿಮಾನಕ್ಕೆ ಚಿರ ಋಣಿಯಾಗಿದ್ದೇನೆ’ ಎಂದು ಭಾವುಕರಾದರು.
ಮಹೇಶ್ವರಪ್ಪ ಅವರ ಪತ್ನಿ ಗಂಗಮ್ಮ, ತಹಶೀಲ್ದಾರ್ ಸಂತೋಷ್ ಕುಮಾರ್, ಡಿಎಸ್‌ಡಬ್ಲ್ಯೂಒ ನಾಗರಾಜ್, ತಾಲ್ಲೂಕು ಪಂಚಾಯಿತಿ ಇಒ ಚಂದ್ರಶೇಖರ್, ಪಟ್ಟಣ ಪಂಚಾಯಿತಿ ಲೋಕ್ಯಾನಾಯ್ಕ, ಟಿಎಚ್‌ಒ ಡಾ.ನಾಗರಾಜ್, ವಿವಿಧ ಇಲಾಖೆ ಅಧಿಕಾರಿಗಳಾದ ಮಿಥುನ್ ಖಿಮಾವತ್, ಲಿಂಗರಾಜ್, ವೃತ್ತ ನಿರೀಕ್ಷಕ ಶ್ರೀನಿವಾಸ್ ರಾವ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.