ADVERTISEMENT

ಕ್ರೀಡೆಯಿಂದ ಸರ್ವತೋಮುಖ ಅಭಿವೃದ್ಧಿ: ಶಾಸಕ ಕೆ.ಎಸ್‌. ಬಸವಂತಪ್ಪ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 14:22 IST
Last Updated 26 ಅಕ್ಟೋಬರ್ 2024, 14:22 IST
ಬಸವಾಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಶನಿವಾರ ನಡೆದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಶಾಸಕ ಕೆ.ಎಸ್. ಬಸವಂತಪ್ಪ ಬಹುಮಾನ ವಿತರಿಸಿದರು
ಬಸವಾಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಶನಿವಾರ ನಡೆದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಶಾಸಕ ಕೆ.ಎಸ್. ಬಸವಂತಪ್ಪ ಬಹುಮಾನ ವಿತರಿಸಿದರು   

ಬಸವಾಪಟ್ಟಣ: ಶಿಕ್ಷಣದೊಂದಿಗೆ ವಿವಿಧ ಕ್ರೀಡೆಗಳಲ್ಲಿ ತೊಡಗಿಕೊಳ್ಳುವುದರಿಂದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಕೆ.ಎಸ್‌. ಬಸವಂತಪ್ಪ ಅಭಿಪ್ರಾಯಪ‍ಟ್ಟರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಗುಡ್ಡಗಾಡು ಓಟದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಆಧುನಿಕ ಶೈಲಿಯ ಜೀವನಕ್ರಮದಲ್ಲಿ ಇಂದು ದೈಹಿಕ ಶ್ರಮ ಕಡಿಮೆಯಾಗಿದೆ. ಕಾಲೇಜು ಹಂತದಲ್ಲಿ ಇಂತಹ ಗುಡ್ಡಗಾಡು ಪ್ರದೇಶದಲ್ಲಿ ಓಟದ ಸ್ಪರ್ಧೆಯನ್ನು ಏರ್ಪಡಿಸುವುದರಿಂದ ಯುವಕರಿಗೆ ದೈಹಿಕ ಶ್ರಮದೊಂದಿಗೆ ಗ್ರಾಮೀಣ ಪ್ರದೇಶದ ಪರಿಚಯವಾಗುತ್ತದೆ. ಅರಣ್ಯ ಸಂಪನ್ಮೂಲಗಳ ರಕ್ಷಣೆ, ವಿವಿಧ ಕಡೆಗಳಿಂದ ಬಂದಿರುವ ಸ್ಪರ್ಧಿಗಳೊಂದಿಗೆ ಸ್ನೇಹ ಸೌಹಾರ್ದ, ಸ್ಪರ್ಧಾ ಮನೋಭಾವ ಇದರಿಂದ ಬೆಳೆಯಲು ಸಾಧ್ಯ ಎಂದು ಹೇಳಿದರು.

ADVERTISEMENT

‘ಭಾರತ ಜಗತ್ತಿನಲ್ಲಿಯೇ ಅತಿ ಹೆಚ್ಚು ಮಾನವ ಸಂಪನ್ಮೂಲವನ್ನು ಹೊಂದಿದ್ದರೂ ಜಾಗತಿಕ ಮಟ್ಟದ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಸಾಧ್ಯವಾಗಿಲ್ಲ. ಯುವಕರು ಕ್ರೀಡಾ ಪ್ರೇಮ ಬೆಳೆಸಿಕೊಂಡು, ಯಾವುದಾದರೂ ಒಂದು ಕ್ರೀಡೆಯಲ್ಲಿ ಸಾಧನೆ ಮಾಡಿ ಒಲಿಂಪಿಕ್‌ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವಂತಾಗಬೇಕು’ ಎಂದು ಹಾವೇರಿಯ ಸಹಾಯಕ ಪ್ರಾಧ್ಯಾಪಕ ಅಭಯಪ್ರಕಾಶ್‌ ಸಲಹೆ ನೀಡಿದರು.

ಪ್ರಾಂಶುಪಾಲ ಟಿ. ಮಂಜಣ್ಣ ಮಾತನಾಡಿದ್ದರು.

ಚಿತ್ರದುರ್ಗ ಜಿಲ್ಲೆಯ ಐಮಂಗಲದ ಕೋಟೆ ಸಣ್ಣಬೋರಪ್ಪ ಪ್ರಥಮ ದರ್ಜೆ ಕಾಲೇಜಿನ ಡಿ.ಆರ್‌. ಸಚಿನ್‌ 33 ನಿಮಿಷಗಳಲ್ಲಿ 10 ಕಿ.ಮೀ. ದೂರದ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ದಾವಣಗೆರೆಯ ಬಾಪೂಜಿ ದೈಹಿಕ ಶಿಕ್ಷಣ ಕಾಲೇಜಿನ ಕವಿತಾ 44 ನಿಮಿಷಗಳಲ್ಲಿ ಗುರಿ ತಲುಪಿ ಮಹಿಳಾ ವಿಭಾಗದ ಮೊದಲ ಸ್ಥಾನಗಳಿಸಿದರು. ಪುರುಷ ವಿಭಾಗದಲ್ಲಿ ಆರು ಮತ್ತು ಮಹಿಳಾ ವಿಭಾಗದಲ್ಲಿ ಆರು ಬಹುಮಾನ ವಿತರಿಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಜಿ. ಸಚಿನ್‌, ಉಪಾಧ್ಯಕ್ಷೆ ಕುಸುಮ, ಸದಸ್ಯರಾದ ಡಿ.ಆರ್‌. ಹಾಲೇಶ್‌, ಎಂ.ಎಸ್‌. ರಮೇಶ್‌, ಗ್ರಾಮಸ್ಥರಾದ ಎಚ್‌.ಹೊನ್ನಪ್ಪ, ಸೈಯದ್‌ ಹಿದಾಯತ್‌, ಜಹೀರ್‌ ಪಟೇಲ್‌ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

ಬಸವಾಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಶನಿವಾರ ನಡೆದ ಗುಡ್ಡಗಾಡು ಓಟದ ಸ್ಪರ್ಧೆಯನ್ನು ಪ್ರಾಂಶುಪಾಲ ಟಿ.ಮಂಜಣ್ಣ ಜಹೀರ್ಪಟೇಲ್ ಮತ್ತು ಎಚ್.ಹೊನ್ನಪ್ಪ ಉದ್ಘಾಟಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.