ADVERTISEMENT

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ: ಶಾಸಕ ಶಾಂತನಗೌಡ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 14:32 IST
Last Updated 11 ಜುಲೈ 2024, 14:32 IST
ನ್ಯಾಮತಿ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿದರು. ಉಪವಿಭಾಗಾಧಿಕಾರಿ ಅಭಿಷೇಕ ಬಿ. ನಾಯ್ಕ ಉಪಸ್ಥಿತರಿದ್ದರು
ನ್ಯಾಮತಿ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿದರು. ಉಪವಿಭಾಗಾಧಿಕಾರಿ ಅಭಿಷೇಕ ಬಿ. ನಾಯ್ಕ ಉಪಸ್ಥಿತರಿದ್ದರು   

ನ್ಯಾಮತಿ: ಸಮಸ್ಯೆಗಳನ್ನು ಹೊತ್ತು ಕಚೇರಿಗೆ ಬರುವ ಸಾರ್ವಜನಿಕರಿಗೆ ಅಧಿಕಾರಿಗಳು ಸೂಕ್ತ ಪರಿಹಾರ ಒದಗಿಸಬೇಕು ಎಂದು ಶಾಸಕ ಡಿ.ಜಿ.ಶಾಂತನಗೌಡ ತಾಕೀತು ಮಾಡಿದರು.

ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಿತರಕ್ಷಣಾ ಜಾಗೃತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಪರಿಶಿಷ್ಟ ಜಾತಿಯವರಿಗೆ ಸ್ಮಶಾನ ಜಾಗ ನೀಡುವಂತೆ ಹಾಗೂ ಹಾಲಿ ಇರುವ ಸ್ಮಶಾನ ಜಾಗದ ಅಳತೆ ನಿಗದಿಗೊಳಿಸಿ ಮೂಲ ಸೌಲಭ್ಯ ಕಲ್ಪಿಸುವಂತೆ ದಲಿತ ಮುಖಂಡರು ಮನವಿ ಮಾಡಿದ್ದು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅವರು ಗಮನಹರಿಸಬೇಕು ಎಂದು ಸೂಚಿಸಿದರು.

ADVERTISEMENT

ಸಾವಿರ ಜನ ಕುಳಿತುಕೊಳ್ಳಬಲ್ಲ ಸುಜ್ಜಿತವಾದ ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕು ಎಂದು ಬೆಳಗುತ್ತಿ ರಂಗನಾಥ ಮನವಿ ಮಾಡಿದರು.

ಸಂತ ಸೇವಾಲಾಲ್ ಜನ್ಮಸ್ಥಾನ ಭಾಯಗಡ್‌ಗೆ ವಿವಿಧೆಡೆಯಿಂದ ಭಕ್ತರು ಬರುವುದರಿಂದ ಅವರಿಗೆ ಸೌಲಭ್ಯ ಕಲ್ಪಿಸಲು ಸವಳಂಗದಲ್ಲಿ ಬಂಜಾರ ಭವನ ನಿರ್ಮಾಣ ಮಾಡಬೇಕು ಎಂದು ದೂದ್ಯಾನಾಯ್ಕ ದೂರಿದರು.

ಬೆಳಲಕಟ್ಟೆ-ಜಯನಗರದಲ್ಲಿರುವ ಸ್ಮಶಾನವನ್ನು ಅಭಿವೃದ್ಧಿಪಡಿಸಬೇಕು. ಬೆಳಗುತ್ತಿ ಸ್ಮಶಾನ ಜಾಗ ಹದ್ದುಬಸ್ತು, ಯಲ್ಲಾಪುರದ ಅರಣ್ಯಭೂಮಿಯಲ್ಲಿ ಸಾಗುವಳಿ ಮಾಡಿರುವವರಿಗೆ ಭೂಮಿ ಮಂಜೂರು ಮಾಡಬೇಕು. ಚಿನ್ನಿಕಟ್ಟೆಯಲ್ಲಿರುವ 2 ಎಕರೆ ಖಬರಸ್ಥಾನ ಜಾಗದಲ್ಲಿ 1 ಎಕರೆ ಒತ್ತುವರಿಯಾಗಿದ್ದು, ಅದನ್ನು ಬಿಡಿಸಿಕೊಡಬೇಕು. ನ್ಯಾಮತಿ ಪಟ್ಟಣ ಪಂಚಾಯಿತಿ ಪೌರಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆ ಅಡಿ ಮನೆ ಕಟ್ಟಿಸಿಕೊಡಬೇಕು ಎಂದು ಚಿನ್ನಿಕಟ್ಟೆ ರೆಹಮಾನ್ ಮನವಿ ಸಲ್ಲಿಸಿದರು.

ಸವಳಂಗ, ಯರಗನಾಳ್, ಸಾಲಬಾಳು, ಟಿ.ಗೋಪಗೊಂಡನಹಳ್ಳಿ, ಹೊಸಕೊಪ್ಪ, ಬಸವನಹಳ್ಳಿ, ಗೋವಿನಕೋವಿ ಗ್ರಾಮಗಳಲ್ಲಿನ ಸಮಸ್ಯೆಯನ್ನು ಮುಖಂಡರು ಸಭೆಯ ಗಮನಕ್ಕೆ ತಂದರು.

ಪರಿಶಿಷ್ಟರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಮಾದಿಗ ದಂಡೋರ ಸಮಿತಿಯ ಕೆಂಚಿಕೊಪ್ಪ ಮಂಜಪ್ಪ ಮನವಿ ಮಾಡಿದರು.

ಯಾವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಮಶಾನಕ್ಕೆ ಜಾಗ ಇಲ್ಲ ಮತ್ತು ಹದ್ದುಬಸ್ತು ಆಗಿಲ್ಲ ಅಂತಹವುಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪಿಡಿಒಗಳಿಗೆ ಸೂಚನೆ ನೀಡುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಘವೇಂದ್ರ ಅವರಿಗೆ ಉಪವಿಭಾಗಾಧಿಕಾರಿ ವಿ.ಅಭಿಷೇಕ್ ಸೂಚಿಸಿದರು.

ಸಭೆಯಲ್ಲಿ ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ. ರಾಘವೇಂದ್ರ, ಪೊಲೀಸ್ ಇನ್‌ಸ್ಪೆಕ್ಟರ್ ಎನ್.ಎಸ್.ರವಿ ಹಾಗೂ ತಾಲ್ಲೂಕು ಮಟ್ಟದ ಇಲಾಖಾ ಅಧಿಕಾರಿಗಳು ಮತ್ತು ದಲಿತ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಚ್.ಎಲ್.ಉಮಾ ಸಭೆಯನ್ನು ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.