ಮಲೇಬೆನ್ನೂರು: ಪಟ್ಟಣದಲ್ಲಿ ಸಂಗ್ರಹವಾಗುವ ತ್ಯಾಜ್ಯಕ್ಕೆ ಮುಕ್ತಿ ದೊರಕಿಸುವ ನಿಟ್ಟಿನಲ್ಲಿ ಪುರಸಭೆಯಿಂದ ತ್ಯಾಜ್ಯ ಸಂಗ್ರಹಣಾ ಘಟಕ ನಿರ್ಮಿಸಲಾಗಿದೆ. ವೈಜ್ಞಾನಿಕವಾಗಿ ನಿರ್ಮಿಸಿರುವ ಈ ಘಟಕದಲ್ಲಿ ಪರಿಸರ ಸಂರಕ್ಷಣೆಗೆ ಒತ್ತು ನೀಡಲಾಗಿದೆ. ಘಟಕದಿಂದ ಕಾಂಪೋಸ್ಟ್ ಗೊಬ್ಬರವನ್ನೂ ತಯಾರಿಸಲಾಗುತ್ತಿದ್ದು, ಪಟ್ಟಣದ ಸೌಂದರ್ಯೀಕರಣಕ್ಕೆ ಆದ್ಯತೆ ನೀಡಲಾಗಿದೆ.
ವಿವಿಧ ಬಡಾವಣೆಗಳಲ್ಲಿ ಸಂಗ್ರಹವಾಗುವ ಘನ ತ್ಯಾಜ್ಯ, ಹಸಿ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಇದರಿಂದ ಮುಕ್ತಿ ದೊರಕಿದೆ. ಪುರಸಭೆಯ ಹೊಸ ಪ್ರಯತ್ನಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ.
ಪರಿಸರ ಸಂರಕ್ಷಣೆ, ಸ್ವಚ್ಛ ಭಾರತ ಅಭಿಯಾನದ ಧ್ಯೇಯ ವಾಕ್ಯದಡಿ ಯೋಜನೆ ಮುನ್ನೆಡೆದಿದೆ. ₹ 36 ಲಕ್ಷದಲ್ಲಿ ವೈಜ್ಞಾನಿಕವಾಗಿ ಕಟ್ಟಡ ನಿರ್ಮಿಸಲಾಗಿದೆ. ನಿತ್ಯವೂ ಪಟ್ಟಣದಲ್ಲಿ ಸಂಗ್ರಹವಾಗುವ ವಿವಿಧ ಬಗೆಯ ತ್ಯಾಜ್ಯವನ್ನು ವಾಹನಗಳ ಮೂಲಕ ಸಂಗ್ರಹಿಸುವ ಪೌರ ಕಾರ್ಮಿಕರು, ಸಂತೆ ಮೈದಾನದಲ್ಲಿರುವ ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರಕ್ಕೆ ತಂದು ಹಾಕುತ್ತಾರೆ. ಅಲ್ಲಿ ಕಸ ವಿಂಗಡಣೆ ಕಾರ್ಯ ನಡೆಯುತ್ತದೆ ಎಂದು ಪುರಸಭೆಯ ಪರಿಸರ ಎಂಜಿನಿಯರ್ ಉಮೇಶ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಒಣ ಹಾಗೂ ಹಸಿ ಕಸ, ಬಾಟಲಿಗಳು, ಪ್ಲಾಸ್ಟಿಕ್ ವಸ್ತುಗಳು, ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ವಿವಿಧ ರೀತಿಯ ಸಂಸ್ಕರಿಸಬಹುದಾದ ತ್ಯಾಜ್ಯವನ್ನು ಬೇರ್ಪಡಿಸಲಾಗುತ್ತದೆ. ನಂತರ ವೈಜ್ಞಾನಿಕ ರೀತಿ ಸಂಸ್ಕರಿಸಿ, ಕಾಂಪೋಸ್ಟ್ ಗೊಬ್ಬರ ತಯಾರಿಸಲಾಗುತ್ತದೆ.
ತ್ಯಾಜ್ಯ ವಿಲೇವಾರಿಗೆ ಸಿಬ್ಬಂದಿ ಹಾಗೂ ವಾಹನಗಳ ಕೊರತೆ ನಡುವೆ ಹಸಿ- ಒಣ ಕಸ ಸಂಸ್ಕರಣೆ ಮಾಡಲಾಗುತ್ತಿದೆ. ಈ ವರ್ಷ 15 ಟನ್ ಕಾಂಪೋಸ್ಟ್ ಗೊಬ್ಬರ ತಯಾರಿಸಲಾಗಿದೆ. ಮರುಬಳಕೆ ಮಾಡಬಹುದಾದ 500 ಕೆ.ಜಿ. ಒಣತ್ಯಾಜ್ಯ ವಿಲೇವಾರಿ ಮಾಡಲಾಗಿದೆ. ಇದರಿಂದ ಪುರಸಭೆಗೆ ಚಿಕ್ಕ ಆದಾಯವೂ ಬಂದಿದೆ ಎಂದು ಉಮೇಶ್ ತಿಳಿಸಿದರು.
ಸರ್ಕಾರದ ಮಾರ್ಗದರ್ಶನದಂತೆ ಇ–ತ್ಯಾಜ್ಯ ಶೇಖರಣೆ ಮಾಡಲಾಗಿದ್ದು, ಶೀಘ್ರ ವಿಲೇವಾರಿ ಮಾಡಲಾಗುವುದು. ನಗರದ ಸೌಂದರ್ಯ ಹಾಗೂ ಪರಿಸರ ಸಂರಕ್ಷಣೆಯ ಕೆಲಸಕ್ಕೆ ಪುರಸಭೆ ಮುಖ್ಯಾಧಿಕಾರಿ ಎ. ಸುರೇಶ್ ಅವರ ಮಾರ್ಗದರ್ಶನ, ಆರೋಗ್ಯ ವಿಭಾಗದ, ಆರೋಗ್ಯ ನಿರೀಕ್ಷಕ ನವೀನ್ ಕಟ್ಟಿಮನಿ, ಶಿವರಾಜ್ ಹಾಗೂ ಪೌರಕಾರ್ಮಿಕರು ಶ್ರಮವಿದೆ ಎಂದು ಅವರು ಮಾತು ಸೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.