ADVERTISEMENT

ದಾವಣಗೆರೆ: ನೂರು ರೂಪಾಯಿ ಆಸೆಗೆ ₹ 3.49 ಲಕ್ಷ ಕಳೆದುಕೊಂಡರು!

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2018, 5:36 IST
Last Updated 27 ಅಕ್ಟೋಬರ್ 2018, 5:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ: ನಗರದ ಎವಿಕೆ ಕಾಲೇಜು ರಸ್ತೆಯಲ್ಲಿ ವಂಚಕರು ಶುಕ್ರವಾರ ಬೀಳಿಸಿದ ನೂರು ರೂಪಾಯಿ ನೋಟನ್ನು ತೆಗೆದುಕೊಳ್ಳಲು ಹೋದ ಹರಿಹರದ ಬಾತಿ ಚಂದ್ರಶೇಖರಪ್ಪ ಅವರು ತಮ್ಮ ಬಳಿಯಿದ್ದ ₹ 3.49 ಲಕ್ಷವನ್ನು ಕಳೆದುಕೊಂಡಿದ್ದಾರೆ.

ಎಸ್‌ಬಿಐನಿಂದ ₹ 3.49 ಲಕ್ಷವನ್ನು ನಗದೀಕರಿಸಿಕೊಂಡು ಬಂದ ಚಂದ್ರಶೇಖರಪ್ಪ ಅವರು ತಮ್ಮ ಕಾರಿನಲ್ಲಿಟ್ಟು ಒಳಗೆ ಕುಳಿತಿದ್ದರು. ಅದೇ ವೇಳೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ಕಾರಿನ ಚಕ್ರದ ಬಳಿ ₹ 100 ಹಾಗೂ ₹ 10ರ ನೋಟು ಬಿದ್ದಿದೆ ಎಂದು ತೋರಿಸಿದ್ದಾರೆ. ತಮ್ಮದೇ ಹಣವಿರಬೇಕು ಎಂದು ಚಂದ್ರಶೇಖರಪ್ಪ ಅವರು ನೋಟನ್ನು ತೆಗೆದುಕೊಳ್ಳಲು ಹೋದಾಗಿ ಆ ವ್ಯಕ್ತಿಯು ಹಣದ ಬ್ಯಾಗನ್ನು ಎಗರಿಸಿಕೊಂಡು ಪರಾರಿಯಾಗಿದ್ದಾನೆ.

‘ಬ್ಯಾಂಕಿನಿಂದ ಹಣ ಪಡೆದು ಬಂದವರು ಅಪರಿಚಿತರೊಂದಿಗೆ ಮಾತನಾಡಬಾರದು. ವಂಚಕರು ಹಣ ಬಿದ್ದಿದೆ ಎಂದು ತೋರಿಸಿ ಗಮನವನ್ನು ಬೇರೆಡೆಗೆ ಸೆಳೆಯುವುದರಿಂದ ತಮ್ಮ ಜೊತೆಗೆ ಮತ್ತೊಬ್ಬರನ್ನು ಕರೆದುಕೊಂಡು ಬರಬೇಕು. ಪೊಲೀಸರು ಎಂದು ನಟಿಸಿ ಕೆಲವರು ಹಣದ ಚೀಲವನ್ನು ಪಡೆದು ವಂಚಿಸುವ ಸಾಧ್ಯತೆ ಇದೆ. ಹೀಗಾಗಿ ಹಬ್ಬದ ಸಂದರ್ಭದಲ್ಲಿ ಹಣದ ವಹಿವಾಟು ಮಾಡುವವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು’ ಎಂದು ಪೊಲೀಸ್‌ ಅಧಿಕಾರಿಗಳು ಮನವಿ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.