ದಾವಣಗೆರೆ: ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತೆರೆಯಲು ಬಹಳ ಬೇಡಿಕೆ ಇದೆ. ಕನ್ನಡ ಮಾಧ್ಯಮಕ್ಕೆ ತೊಂದರೆ ಆಗದಂತೆ ಇನ್ನಷ್ಟು ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಲಾಗುವುದು ಎಂದು ಶಿಕ್ಷಣ ಸಚಿವ ಎಸ್ ಆರ್. ಶ್ರೀನಿವಾಸ್ ತಿಳಿಸಿದರು.
ಜಗಳೂರು ತಾಲ್ಲೂಕಿನ ಕೊಣಚಿಕಲ್ ಗುಡ್ಡದಲ್ಲಿ ಗುರುವಾರ ಅವರು ಸುದ್ದಿಗಾರರ ಜತೆಗೆ ಮಾತನಾಡಿ, ‘ರಾಜ್ಯದಲ್ಲಿ ಈಗಾಗಲೇ 6000 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಇಂಗ್ಲಿಷ್ ಮೇಲೆ ಪೋಷಕರಿಗೆ ಇರುವ ಪ್ರೀತಿಯಿಂದ ಹಾಗೂ ಶಿಕ್ಷಣ ವ್ಯಾಪಾರೀಕರಣದಿಂದ ಹೀಗಾಗಿದೆ. ಕನ್ನಡ ಮಾಧ್ಯಮದಲ್ಲಿ ಓದಿ ಸಾಧನೆ ಮಾಡಿದ ಬಹಳಷ್ಟು ಮಂದಿ ಇದ್ದರೂ ಇಂಗ್ಲಿಷ್ ಓದಿದರಷ್ಟೇ ಏನಾದರೂ ಮಾಡಬಹುದು ಎಂಬ ಚಿಂತನೆ ಪೋಷಕರದ್ದಾಗಿದೆ. ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತೆರೆದಾಗ ಪೊಷಕರೂ ತಮ್ಮ ಮಕ್ಕಳನ್ನು ಸೇರಿಸುತ್ತಾರೆ. ಜತೆಗೆ ಶಿಕ್ಷಣ ವ್ಯಾಪಾರೀಕರಣಕ್ಕೂ ಕಡಿವಾಣ ಬೀಳುತ್ತದೆ’ ಎಂದು ವಿವರಿಸಿದರು.
ಇಂಗ್ಲಿಷ್ ಮಾಧ್ಯಮಕ್ಕೆ ಪ್ರವೇಶಾತಿ ಸಂಖ್ಯೆಯನ್ನು ಹೆಚ್ಚಿಸುವುದಿಲ್ಲ. ಆದರೆ ಇಂಗ್ಲಿಷ್ ಮಾಧ್ಯಮ ಆರಂಭಿಸುವ ಶಾಲೆಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಶಾಲೆಗಳಿಗೆ ಅಗತ್ಯ ಇರುವ ಕೊಠಡಿ, ಶೌಚಾಲಯ, ನೀರಿನ ಸಮಸ್ಯೆ ಮುಂತಾದ ಮೂಲ ಸೌಕರ್ಯ ಎಲ್ಲೆಲ್ಲಿ ಕೊರತೆ ಇದೆ ಎಂಬುದರ ಬಗ್ಗೆ ವರದಿ ತರಿಸಿಕೊಳ್ಳಲಾಗಿದೆ. ಅಗತ್ಯ ಇರುವ ಕಡೆ ಮೂಲಸೌಕರ್ಯ ಒದಗಿಸಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.