ದಾವಣಗೆರೆ: ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣ ರಾಜಕೀಯ ಷಡ್ಯಂತ್ರ. ಈ ಪ್ರಕರಣದ ಬಾಲಕಿ ಹಾಗೂ ಆಕೆಯ ಅಣ್ಣನ ಹಿಂದೆ ಇಬ್ಬರು ಪ್ರಭಾವಿ ಸಚಿವರು ಇದ್ದು, ಅವರ ಹೆಸರನ್ನು ಶೀಘ್ರ ಬಹಿರಂಗ ಪಡಿಸುತ್ತೇನೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ರಣದೀಪ್ ಸಿಂಗ್ ಸುರ್ಜೆವಾಲಾ ಸೂಚನೆ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋರ್ಟ್ ಮೂಲಕ ಯಡಿಯೂರಪ್ಪ ಬಂಧನಕ್ಕೆ ವಾರೆಂಟ್ ಹೊರಡಿಸುವಂತೆ ಮಾಡಿದ್ದಾರೆ. ಈ ವಿಷಯ ಗೃಹ ಸಚಿವ ಪರಮೇಶ್ವರ ಅವರಿಗೇ ತಿಳಿದಿರಲಿಲ್ಲ’ ಎಂದರು.
‘ಅಂದು ಗೃಹ ಸಚಿವರು ದೂರು ನೀಡಿದಾಕೆ ಮಾನಸಿಕ ಅಸ್ವಸ್ಥೆ. ಐಎಎಸ್ ಅಧಿಕಾರಿಗಳು, ನ್ಯಾಯಾಧೀಶರು ಸೇರಿದಂತೆ 55 ಜನರ ಮೇಲೆ ದೂರು ನೀಡಿದ್ದಾರೆ ಎಂದು ಹೇಳಿದ್ದರು. ನಾಲ್ಕು ದಿನಗಳ ಹಿಂದಷ್ಟೇ ಪ್ರಕರಣಕ್ಕೆ ಮರುಜೀವ ನೀಡಿದ್ದಾರೆ’ ಎಂದು ಆರೋಪಿಸಿದರು.
‘ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಕೋಟ್ಯಂತರ ರೂಪಾಯಿ ಅವ್ಯವಹಾರ ಹಾಗೂ ಲೋಕಸಭಾ ಚುನಾವಣೆಯಲ್ಲಿನ ಕಡಿಮೆ ಸ್ಥಾನ ಬಂದಿರುವ ಹತಾಶೆಯಿಂದ ರಾಜ್ಯ ಸರ್ಕಾರ ಈ ರೀತಿ ದ್ವೇಷದ ರಾಜಕಾರಣ ಮಾಡುತ್ತಾ ಇದೆ’ ಎಂದು ದೂರಿದರು.
‘ಈಗ ದೂರು ನೀಡಿರುವ ಬಾಲಕಿಯ ಸಹೋದರ ಇಷ್ಟು ದಿನ ಅವರ ಜತೆಯಲ್ಲಿ ಇರಲಿಲ್ಲ. ಕಾಂಗ್ರೆಸ್ ನಾಯಕರು ಆತನಿಗೆ ಆಮಿಷ ಒಡ್ಡಿ ದೂರು ದಾಖಲಿಸುವಂತೆ ಮಾಡಿದ್ದಾರೆ. ಯಡಿಯೂರಪ್ಪನವರನ್ನು ಬಂಧಿಸಿದರೆ ರಾಜ್ಯದಾದ್ಯಂತ ಪ್ರತಿಭಟನೆ ಮಾಡುತ್ತೇವೆ’ ಎಂದು ಎಚ್ಚರಿಸಿದರು.
‘ಬಾಲಕಿಯ ತಾಯಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾಗಿ ಆಕೆಯ ಪತಿಯ ಸಹೋದರ ಸಂಬಂಧಿಗಳು ಹಾಗೂ 55 ಜನ ಐಎಎಸ್ ಅಧಿಕಾರಿಗಳ ವಿರುದ್ಧವೂ ದೂರು ನೀಡಿದ್ದರು. ಅವರನ್ನು ಏಕೆ ಬಂಧಿಸಿಲ್ಲ. ಯಡಿಯೂರಪ್ಪ ಅವರನ್ನೇ ಏಕೆ ಗುರಿಯಾಗಿಸಬೇಕು‘ ಎಂದು ಪ್ರಶ್ನಿಸಿದರು.
‘ಪ್ರಕರಣದಲ್ಲಿ ಹೆಸರು ಇರುವ ರುದ್ರೇಶ್ ಅವರು ಬಾಲಕಿಯ ತಾಯಿಯನ್ನು ಕಿಡ್ನಾಪ್ ಮಾಡಿಲ್ಲ. ಆಕೆಯೇ ಲೋಕೇಷನ್ ಕಳಿಸಿ ಅವರನ್ನು ಮನೆಗೆ ಕರೆಯಿಸಿಕೊಂಡಿದ್ದಾರೆ. ಬಾಲಕಿಯ ತಾಯಿ ಬಜಾಜ್ ಕಂಪನಿಯಿಂದ ₹5,000 ಕೋಟಿ ಬರಬೇಕು. ಕೊಡಿಸಿ ಎಂದು ನ್ಯಾಯ ಕೇಳಲು ಯಡಿಯೂರಪ್ಪ ಬಳಿ ಬಂದಿದ್ದರು. ಆ ಹಣ ಎಲ್ಲಿಂದ ಬಂತು’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.