ನ್ಯಾಮತಿ: ತಾಲ್ಲೂಕಿನ ಕುಂಕೋವ ಗ್ರಾಮದ ತೋಟದ ಮನೆಯೊಂದರಲ್ಲಿ ದುಷ್ಕರ್ಮಿಗಳು ಪಾಂಡುರಂಗಯ್ಯ ಅವರ ಕೊಲೆ ಪ್ರಯತ್ನ ಮಾಡಿ ಪರಾರಿಯಾದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ಈ ಸಂಬಂಧ ಪಾಂಡುರಂಗಯ್ಯ ಅವರ ಪತ್ನಿ ಲಕ್ಷ್ಮಮ್ಮ ಅವರು ನ್ಯಾಮತಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
‘ಕುಂಕೋವ ಗ್ರಾಮದ ತೋಟದ ಮನೆಯಲ್ಲಿ ವಾಸವಿದ್ದ ಲಕ್ಷ್ಮಮ್ಮ ಹಾಗೂ ಪಾಂಡುರಂಗಯ್ಯ ಅವರ ಮನೆಗೆ ರಾತ್ರಿ 11.30ರ ಸಮಯಕ್ಕೆ ಬಂದ ಮೂವರು ದುಷ್ಕರ್ಮಿಗಳು ಬಾಗಿಲು ಬಡಿದು ಎಬ್ಬಿಸಿ, ‘ಬೈಕ್‌ನಿಂದ ಬಿದ್ದು ಗಾಯವಾಗಿದೆ ಕುಡಿಯಲು ನೀರು ಕೊಡಿ’ ಎಂದು ಕೇಳಿದ್ದಾರೆ. ದಂಪತಿ ಕೊಟ್ಟ ನೀರನ್ನು ತೆಗೆದುಕೊಂಡು ಹೋದವರು ಸ್ವಲ್ಪ ಹೊತ್ತಿನಲ್ಲಿ ಮತ್ತೆ ಬಂದು ಸ್ವಲ್ಪ ಅರಿಶಿಣ ಕೊಡಿ ಎಂದು ಕೇಳಿದ್ದಾರೆ. ನಂತರ ಸಕ್ಕರೆ ಕೊಡಿ ಎಂದು ಕೇಳಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಸಕ್ಕರೆ ಇಲ್ಲ ಎಂದು ಹೇಳಿದ್ದಕ್ಕೆ ಪತಿಯನ್ನು ಕೆಳಕ್ಕೆ ಕೆಡವಿ ಚಾಕುವಿನಿಂದ ಕತ್ತು ಕೊಯ್ಯಲು ಯತ್ನಿಸಿದರು. ಪತಿ ಚೀರಾಡುತ್ತಿರುವ ಶಬ್ಧ ಕೇಳಿ ಹೊರಗೆ ಬಂದು ನೋಡಿದೆ. ಒಬ್ಬ ವ್ಯಕ್ತಿ ಪತಿಯ ಕಾಲು ಹಿಡಿದುಕೊಂಡಿದ್ದ, ಇನ್ನೊಬ್ಬ ಕತ್ತು ಕುಯ್ಯುತ್ತಿದ್ದುದನ್ನು ಕಂಡು ಚೀರಾಡಿದಾಗ ಬಿಟ್ಟು ಓಡಿ ಹೋದರು’ ಎಂದು ಲಕ್ಷ್ಮಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ತಕ್ಷಣವೇ ಹಾಲೇಶ ಎಂಬುವವರಿಗೆ ಫೋನ್ ಮಾಡಿ ಆಂಬುಲೆನ್ಸ್ ತರಿಸಿಕೊಂಡು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದೆವು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಚಾಕುವನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.