ADVERTISEMENT

ಮರಿಗೊಂಡನಹಳ್ಳಿ ಕೊಲೆ ಪ್ರಕರಣ: 10 ಜನರ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2024, 16:24 IST
Last Updated 19 ಸೆಪ್ಟೆಂಬರ್ 2024, 16:24 IST

ನ್ಯಾಮತಿ: ಮರಳು ಗಣಿಗಾರಿಕೆ ಸಂಬಂಧ ತಾಲ್ಲೂಕಿನ ಚೀಲೂರು ಕಡದಕಟ್ಟೆ ಹಾಗೂ ಮರಿಗೊಂಡನಹಳ್ಳಿ ಗ್ರಾಮಸ್ಥರ ನಡುವೆ ಬುಧವಾರ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಚಿ.ಕಡದಕಟ್ಟೆ ಗ್ರಾಮದ 10 ಜನರ ವಿರುದ್ಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘರ್ಷಣೆ ವೇಳೆ ಶಿವರಾಜ (33) ಕೊಲೆಯಾಗಿದ್ದು, ಭರತ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಚೀಲೂರು ಕಡದಕಟ್ಟೆ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಸತೀಶ, ಅಭಿಷೇಕ್, ರಘು, ಸೋಗಿಲು ಶೇಖರಪ್ಪ, ಅಪ್ಪಾಜಿ, ಸಂದೀಪ, ಅನಿಲ, ಚಿದಾನಂದ, ಫಾಲಾಕ್ಷಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಗಣೇಶ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ADVERTISEMENT

ಆರೋಪಿಗಳು ಮರಿಗೊಂಡನಹಳ್ಳಿ ಪಕ್ಕದ ತುಂಗಭದ್ರಾ ನದಿಯಿಂದ ಮರಳು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದರು. ಬುಧವಾರ ದಾವಣಗೆರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು.

‘ಇಲಾಖೆ ಅಧಿಕಾರಿಗಳಿಗೆ ನನ್ನ ಪತಿ ಶಿವರಾಜ ಮಾಹಿತಿ ನೀಡುತ್ತಿದ್ದಾರೆ ಎಂದು 20 ಬೈಕ್‌ಗಳಲ್ಲಿ 40 ಜನರು ಗುಂಪು ಕಟ್ಟಿಕೊಂಡು ಬಂದು ಕೇರಿಗೆ ನುಗ್ಗಿ ಅವ್ಯಾಚ ಶಬ್ಧಗಳಿಂದ ಬೈಯುತ್ತ ಮನೆಯೊಳಗಿದ್ದ ಪತಿಯನ್ನು ಎಳೆದು ಹೊಡೆಯಲು ಆರಂಭಿಸಿದರು. ಬಿಡಿಸಲು ಹೋದಾಗ ನನ್ನ ಸೀರೆ ಎಳೆದು, ಮೈ– ಕೈ ಮುಟ್ಟಿ, ಅವ್ಯಾಚ ಶಬ್ದಗಳಿಂದ ನಿಂದಿಸಿದರು’ ಎಂದು ಪತ್ನಿ ಚೈತ್ರಾ ದೂರಿನಲ್ಲಿ ತಿಳಿಸಿದ್ದಾರೆ.

‘ಪತಿಯನ್ನು ದೂರ ಎಳೆದೊಯ್ದು ಸತೀಶ್‌ ಎಂಬಾತ ಹಿಡಿದುಕೊಂಡನು. ಆತನ ಮಗ ಅಭಿಷೇಕ ದೊಡ್ಡದಾದ ಚಾಕುವಿನಿಂದ ಎದೆಯ ಎಡ ಭಾಗಕ್ಕೆ ಬಲವಾಗಿ ಚುಚ್ಚಿದರು. ಬಿಡಿಸಲು ಬಂದ ಭರತ್‌ನಿಗೂ ಅಭಿಷೇಕ ಚಾಕುವಿನಿಂದ ಚುಚ್ಚಿ ಗಾಯಗೊಳಿಸಿದ’ ಎಂದು ದೂರಿದ್ದಾರೆ.

ಪತಿಯನ್ನು ಕೊಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಕೋರಿದ್ದಾರೆ.

ಪೊಲೀಸರ ನಿಯೋಜನೆ: ಚಿ.ಕಡದಕಟ್ಟೆ ಮತ್ತು ಮರಿಗೊಂಡನಹಳ್ಳಿ ಎರಡು ಗ್ರಾಮಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಎನ್.ಎಸ್.ರವಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.