ADVERTISEMENT

ಏಸುಕ್ರಿಸ್ತರದ್ದು ಅಖಂಡ ಪ್ರೀತಿ: ಮುರುಘಾಶ್ರೀ

ಹರಿಹರದ ಆರೋಗ್ಯ ಮಾತೆ ಚರ್ಚ್‌ ‘ಕಿರು ಬೆಸಿಲಿಕಾ’ ಘೋಷಣೆ ಸಮಾರಂಭ

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 14:03 IST
Last Updated 15 ಜನವರಿ 2020, 14:03 IST
ಹರಿಹರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆರೋಗ್ಯ ಮಾತೆ ಚರ್ಚ್‌ ಅನ್ನು ‘ಕಿರು ಬೆಸಿಲಿಕ’ ಎಂದು ಘೋಷಿಸುವ ಸಮಾರಂಭವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು.
ಹರಿಹರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆರೋಗ್ಯ ಮಾತೆ ಚರ್ಚ್‌ ಅನ್ನು ‘ಕಿರು ಬೆಸಿಲಿಕ’ ಎಂದು ಘೋಷಿಸುವ ಸಮಾರಂಭವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು.   

ಹರಿಹರ: ‘ಆಧುನಿಕ ಜಗತ್ತಿನಲ್ಲಿ ಪ್ರೀತಿ ಅತ್ಯಂತ ದುಬಾರಿ ವಸ್ತುವಾಗಿದೆ. ತನ್ನವರನ್ನು ಮಾತ್ರ ಪ್ರೀತಿಸು ಎನ್ನುವ ಜಾತಿ ಪ್ರೀತಿಯೇ ಇಂದು ಸಮಾಜದಲ್ಲಿ ಹೆಚ್ಚಾಗುತ್ತಿದೆ’ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಆರೋಗ್ಯ ಮಾತೆ ಚರ್ಚ್‌ ಅನ್ನು ‘ಕಿರು ಬೆಸಿಲಿಕಾ’ (ಮಹಾ ದೇವಾಲಯ) ಎಂದು ಅಧಿಕೃತವಾಗಿ ಘೋಷಿಸುವ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮೂರು ಬಗೆಯ ಪ್ರೀತಿಗಳಿರುತ್ತವೆ. ಮೊದಲನೇಯದ್ದು ಜಾತಿ ಪ್ರೀತಿ. ಇದು ಅಂತ್ಯಂತ ಸಂಕುಚಿತವಾದುದು. ಎರಡನೇಯದ್ದು ಮಾನವ ಪ್ರೀತಿ. ಇದು ವಿಶಾಲವಾದದ್ದು. ಇದನ್ನು ವಿಶ್ವ ಪ್ರೀತಿ ಎಂದೂ ಕರೆಯಬಹುದು. ಹುಟ್ಟಿದ್ದು ಯಾವುದೇ ಜಾತಿಯಲ್ಲಾದರೂ ಎಲ್ಲರನ್ನೂ ಪ್ರೀತಿಸುವುದಾಗಿದೆ. ಇಂದು ಜಾತಿ ಪ್ರೀತಿಯಿಂದ ಮಾನವ ಪ್ರೀತಿಯ ಕಡೆಗೆ ಸಾಗಬೇಕಾಗಿದೆ. ವಿಶ್ವ ಪ್ರೀತಿಯನ್ನು ಸಾಧಿಸುವುದು ಸವಾಲಿನ ಕೆಲಸವಾಗಿದೆ’ ಎಂದು ಹೇಳಿದರು.

ADVERTISEMENT

‘ಏಸುಕ್ರಿಸ್ತರದ್ದು ಅಖಂಡ ಪ್ರೀತಿಯಾಗಿತ್ತು. ಅವರು ತಮ್ಮ ವಿರೋಧಿಗಳನ್ನೂ ಪ್ರೀತಿಸು ಎಂದು ಹೇಳಿದ ದಾರ್ಶನಿಕರು. ಹೀಗಾಗಿಯೇ ಅವರು ವಿಶ್ವ ಮಾನವರು ಎನಿಸಿಕೊಂಡರು. ಬುದ್ಧ, ಬಸವಣ್ಣ, ಏಸುಕ್ರಿಸ್ತ, ಪೈಗಂಬರ, ಮಹಾವೀರರಂತಹ ದಾರ್ಶಕನಿಕರು ವಿಶ್ವ ಪ್ರೀತಿಗೆ ಒತ್ತು ನೀಡಿದ್ದರು’ ಎಂದು ತಿಳಿಸಿದರು.

‘ಕೊನೆಯದ್ದು ಜೀವ ಪ್ರೀತಿ. ಇದು ಸಕಲ ಜೀವ ಸಂಕುಲವನ್ನೂ ಪ್ರೀತಿಸುವುದಾಗಿದೆ. ಜೀವ ಕಾರುಣ್ಯ, ದಯಾಳುತನ ಇಂದು ಬೇಕಾಗಿದೆ. ಮಾನವ ಪ್ರೀತಿಯ ಜೊತೆಗೆ ಜೀವ ಪ್ರೀತಿಯನ್ನೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜಾತಿ–ಜಾತಿ; ಧರ್ಮ–ಧರ್ಮಗಳ ನಡುವೆ ಸಾಮರಸ್ಯ ಕಾಪಾಡಿಕೊಳ್ಳುವ ಹಾಗೂ ವಿಶ್ವ ಶಾಂತಿಯನ್ನು ಬೆಳೆಸುವ ಹೊಣೆಗಾರಿಕೆ ಎಲ್ಲರ ಮೇಲಿದೆ’ ಎಂದು ಮುರುಘಾ ಶರಣರು ಅಭಿಪ್ರಾಯಪಟ್ಟರು.

ಇಸ್ಲಾಂ ಧರ್ಮಗುರು ಬಿ.ಎ. ಇಬ್ರಾಹಿಂ ಸಕಾಫಿ, ‘12ನೇ ಶತಮಾನದಲ್ಲಿ ಬಸವಣ್ಣ ಮಾನವ ಧರ್ಮದ ಬಗ್ಗೆ ಪ್ರತಿಪಾದಿಸಿದ್ದರು. ಪೈಗಂಬರರೂ ಇದೇ ಸಂದೇಶ ಸಾರಿದ್ದರು. ಮಾನವೀಯತೆ, ಪ್ರೀತಿ–ಸ್ನೇಹ, ಸಹಕಾರದಿಂದ ಒಟ್ಟಾಗಿ ಬಾಳಿದಾಗಲೇ ನಮ್ಮ ಬದುಕು ಸಾರ್ಥಕವಾಗಲಿದೆ’ ಎಂದು ಹೇಳಿದರು.

ಗೋವಾ ಹಾಗೂ ದಮನ್‌ನ ಆರ್ಚ್‌ ಬಿಷಪ್‌ ಡಾ. ಫಿಲಿಪ್‌ ನೇರಿ ಫೆರಾವೊ, ‘ಹರಿಹರ ಧಾರ್ಮಿಕ ಸಾಮರಸ್ಯ ಕೇಂದ್ರವಾಗಿ ಹೆಸರು ಗಳಿಸಿದೆ. ವಿವಿಧ ಧರ್ಮಿಯರು ಇಲ್ಲಿ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಇಲ್ಲಿನ ಕಿರು ಬೆಸಿಲಿಕಾ ಧಾರ್ಮಿಕ ಸಾಮರಸ್ಯವನ್ನು ಇನ್ನಷ್ಟು ಪೋಷಿಸಲಿ. ಎಲ್ಲರೂ ಪ್ರೀತಿ ಹಾಗೂ ಗೌರವಿಸುವ ಗುಣವನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಗೋವಾ, ದಮನ್‌ ಆರ್ಚ್‌ ಬಿಷಪ್‌ ಡಾ. ಫಿಲಿಪ್‌ ನೆರಿ ಫೆರಾವೊ ಅವರು ಬೆಳಿಗ್ಗೆ ‘ಬಲಿಪೂಜೆ’ ವಿಧಾನಗಳನ್ನು ನಡೆಸಿಕೊಟ್ಟರು.

ಸ್ವಾಗತಿಸಿದ ಶಿವಮೊಗ್ಗದ ಬಿಷಪ್‌ ಫ್ರಾನ್ಸಿಸ್‌ ಸೆರಾವೊ ಎಸ್‌.ಜೆ. ಅವರು, ‘ಇಂದು ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. ಆರೋಗ್ಯ ಮಾತೆ ಚರ್ಚ್‌ ಭಾರತದ 25ನೇ ಹಾಗೂ ರಾಜ್ಯದ 3ನೇ ‘ಕಿರು ಬೆಸಿಲಿಕಾ’ ಮನ್ನಣೆ ಪಡೆಯುತ್ತಿದೆ’ ಎಂದರು.

ಸಂಸದರಾದ ಜಿ.ಎಂ. ಸಿದ್ದೇಶ್ವರ, ಬಿ.ವೈ. ರಾಘವೇಂದ್ರ, ಶಾಸಕ ಎಸ್‌. ರಾಮಪ್ಪ, ಬಿಷಪ್‌ಗಳಾದ ಮಂಗಳೂರಿನ ಅಲೋಸಿಯಸ್‌ ಪೌಲ್‌ ಡಿಸೋಜ, ಬಳ್ಳಾರಿಯ ಹೆನ್ರಿ ಡಿಸೋಜ, ಉಡುಪಿಯ ಗೆರಾಲ್ಡ್‌ ಇಸಾಕ್‌ ಲೊಬೊ, ಚಿಕ್ಕಮಗಳೂರಿನ ಟಿ. ಅಂಥೋನಿ ಸ್ವಾಮಿ, ಕಲಬುರ್ಗಿಯ ರಾಬರ್ಟ್‌ ಎಂ. ಮಿರಾಂಡ, ಬೆಳಗಾವಿಯ ಡೆರೆಕ್‌ ಫರ್ನಾಂಡೀಸ್‌, ಪುತ್ತೂರಿನ ಗೀವರ್ಗೀಸ್‌ ಮಾರ್‌ ಮಕಾರಿಯಸ್‌ ಕಲಾಯಿಲ್‌, ಮೈಸೂರಿನ ಕೆ.ಎ. ವಿಲಿಯಂ, ಬರೇಲಿಯ ಇಗ್ನೇಷಿಯಸ್‌ ಡಿಸೋಜ ಹಾಜರಿದ್ದರು.

ಮರಿಯಾ ನಿವಾಸ್‌ ವಿದ್ಯಾರ್ಥಿಗಳು ಪ್ರಾರ್ಥನಾ ನೃತ್ಯ ಪ್ರದರ್ಶಿಸಿದರು. ಕೀರ್ತನೆಗಳು ಒಳಗೊಂಡಿರುವ ‘ಸ್ತುತ್ಯಾಂಜಲಿ’ ಸಿಡಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

ಸಾಮರಸ್ಯಕ್ಕೆ ಮತ್ತಷ್ಟು ಕೊಡುಗೆ ನೀಡಲಿ: ಸಿಎಂ

‘ಆರೋಗ್ಯ ಮಾತೆ ಚರ್ಚ್‌ಗೆ ಕಿರು ಬೆಸಿಲಿಕಾ ಮನ್ನಣೆ ಲಭಿಸಿರುವುದು ಹೆಮ್ಮೆಯ ವಿಷಯ. ಧರ್ಮ, ಜಾತಿ, ಮತದ ಎಲ್ಲೆಗಳನ್ನು ಮೀರಿ ಭಕ್ತರನ್ನು ಹೊಂದಿರುವ ಈ ಮಹಾ ದೇವಾಲಯದ ಉತ್ಸವದಲ್ಲಿ ಲಕ್ಷಾಂತರ ಜನ ಪಾಲ್ಗೊಳ್ಳುವುದನ್ನು ನೋಡಿದ್ದೇವೆ. ಈ ಮಾನ್ಯತೆ ಪಡೆಯಲು ಶ್ರಮಿಸಿದ ಎಲ್ಲರಿಗೂ ಅಭಿನಂದನೆ. ಈ ಕಿರು ಬೆಸಿಲಿಕಾ ಶಾಂತಿ–ಸಾಮರಸ್ಯಗಳಿಗೆ ಮತ್ತಷ್ಟು ಕೊಡುಗೆಗಳನ್ನು ನೀಡುವಂತಾಗಲಿ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಆಶಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಅವರು, ‘ಧರ್ಮದ ಕಾರಣಕ್ಕೆ ದೌರ್ಜನ್ಯಕ್ಕೆ ಒಳಗಾದ ಪಾರ್ಸಿಗಳು ಭಾರತಕ್ಕೆ ಸಾವಿರಾರು ವರ್ಷಗಳ ಹಿಂದೆಯೇ ವಲಸೆ ಬಂದರು. ಅವರ ಧಾರ್ಮಿಕ ಬದುಕು ಔನ್ನತ್ಯಕ್ಕೆ ತಲುಪಿರುವುದನ್ನು ಇತಿಹಾಸ ದಾಖಲಿಸಿದೆ. ಪಾರ್ಸಿಗಳು ಇಂದು ಜಗತ್ತಿನಲ್ಲಿ ತಮ್ಮ ಸಾಧನೆಗಳಿಂದ ಪ್ರಸಿದ್ಧರಾಗಿದ್ದಾರೆ. ಇದೇ ರೀತಿ ಕ್ರೈಸ್ತರು ಸಹ ಭಾರತಕ್ಕೆ ಬಂದು ನೆಲೆಗೊಂಡರು. ಅವರನ್ನು ಭಾರತೀಯರು ಔದಾರ್ಯದಿಂದ ಸ್ವೀಕರಿಸಿ ಅಭ್ಯುದಯ ಹೊಂದಲು ಸಹಕರಿಸಿದರು. ಭಾರತದ ಸರ್ವ ಧರ್ಮದ ಸಮನ್ವಯದ ದೇಶ. ಸ್ವಧರ್ಮ ಪಾಲನೆ, ಪರ ಧರ್ಮ ಸಹಿಷ್ಣುತೆ ಪಾಲನೆ ರಕ್ತಗತವಾಗಿದೆ’ ಎಂದು ಪ್ರತಿಪಾದಿಸಿದರು.

‘ಗಾಂಧೀಜಿ ಮಾತಿನಂತೆ ಭಾರತೀಯರು ಎಲ್ಲ ಧರ್ಮವನ್ನು ಪ್ರೀತಿಸುತ್ತಾರೆ; ತಮ್ಮ ಧರ್ಮದಲ್ಲಿ ಜೀವಿಸುತ್ತಿದ್ದಾರೆ. ಅದೇ ರೀತಿ ಎಲ್ಲ ಸಂಸ್ಕೃತಿಯನ್ನೂ ನಾವು ಆದರಿಸುತ್ತೇವೆ; ನಮ್ಮ ಸಂಸ್ಕೃತಿಯನ್ನು ಅನುಸರಿಸುತ್ತಿದ್ದೇವೆ’ ಎಂದು ಯಡಿಯೂರಪ್ಪ ಹೇಳಿದರು.

ಧಾರ್ಮಿಕ, ನೈತಿಕ ಆರೋಗ್ಯ ಮುಖ್ಯ: ಮಚಾದೊ

‘ಆರೋಗ್ಯ ಭಾಗ್ಯವೇ ಶ್ರೇಷ್ಠ ಭಾಗ್ಯ. ಆರೋಗ್ಯ ಇದ್ದರೆ ಏನನ್ನಾದರೂ ಸಾಧಿಸಬಹುದು. ದೈಹಿಕ, ಮಾನಸಿಕ, ಧಾರ್ಮಿಕ ಮತ್ತು ನೈತಿಕ ಆರೋಗ್ಯವೂ ಮುಖ್ಯವಾಗಿದೆ. ಈ ಪುಣ್ಯಕ್ಷೇತ್ರ ಈಗ ಕಿರು ಬೆಸಿಲಿಕಾ ಆಗಿದ್ದು, ಆರೋಗ್ಯ ಮಾತೆಯು ಎಲ್ಲರಿಗೂ ಸಂಪೂರ್ಣ ಆರೋಗ್ಯ ಭಾಗ್ಯವನ್ನು ಕರುಣಿಸಲಿ’ ಎಂದು ಬೆಂಗಳೂರಿನ ಆರ್ಚ್‌ ಬಿಷಪ್‌ ಡಾ. ಪೀಟರ್‌ ಮಚಾದೊ ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಚಾದೊ, ‘ನಾವು ಅಲ್ಪಸಂಖ್ಯಾತರಾದರೂ ಬಹುಸಂಖ್ಯಾತರಿಗೆ ಸೇವೆ ನೀಡುತ್ತಿದ್ದೇವೆ. ನಾವೂ ಭಾರತದ ಪ್ರಜೆಗಳು. ನಮ್ಮ ಹಕ್ಕನ್ನು ಒದಗಿಸಿಕೊಡುವುದು ಸರ್ಕಾರದ ಜವಾಬ್ದಾರಿ. ದೇವಾಲಯಕ್ಕೆ 10 ಕೆರೆ ಜಾಗವನ್ನು ಕೇಳಿದ್ದೇವೆ. ಅದನ್ನು ಕಲ್ಪಿಸಿಕೊಡಬೇಕು’ ಎಂದು ಮನವಿ ಮಾಡಿದರು.

ಎಸ್‌ಸಿ ಒಳಮೀಸಲಾತಿಗಾಗಿ ಘೋಷಣೆ

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭಾಷಣ ಮುಗಿಸಿ ಹೊರಡಲು ಮುಂದಾದಾಗ ದಲಿತ ಸಂಘರ್ಷ ಸಮಿತಿ ಹರಿಹರ ಘಟಕದ ಸಂಚಾಲಕ ಪಿ.ಜೆ. ಮಹಾಂತೇಶ ‘ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗೊಳಿಸಿ’ ಎಂದು ಘೋಷಣೆಗಳನ್ನು ಕೂಗಿದರು.

ಸುಮ್ಮನಿರುವಂತೆ ಹೇಳಿದರೂ ಮತ್ತೆ ಘೋಷಣೆ ಕೂಗಿದ್ದರಿಂದ ಪೊಲೀಸರು ಮಹಾಂತೇಶ ಅವರನ್ನು ವಶಕ್ಕೆ ಪಡೆದು, ಬಳಿಕ ಬಿಡುಗಡೆಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.