ದಾವಣಗೆರೆ: ಅಲ್ಲಿ ಸಂಗೀತ ಅಲೆ ಅಲೆಯಾಗಿ ತೇಲಿಬರುತ್ತದೆ. ಹಸಿರು ಮುಕ್ಕುವ ಸಸ್ಯರಾಶಿ ಕಣ್ಣಿಗೆ ತಂಪೆರೆದರೆ, ಸಂಗೀತದ ತರಂಗಗಳು ಕಿವಿಗೆ ಇಂಪು ನೀಡುತ್ತವೆ.
ನಗರದ ಕಾಸಲ್ ಶ್ರೀನಿವಾಸ ಶ್ರೇಷ್ಠಿ ಉದ್ಯಾನದಲ್ಲಿ (ವಾಟರ್ ಟ್ಯಾಂಕ್ ಪಾರ್ಕ್) ಅಳವಡಿಸಿರುವ ಮ್ಯೂಸಿಕ್ ಸಿಸ್ಟಂಗಳು ಜನರ ಮನೆಗೆದ್ದಿವೆ. ಮುಂಜಾನೆ, ಮುಸ್ಸಂಜೆ ಸಂಗೀತ, ಹಾಡು, ಎಫ್‌ಎಂ ರೇಡಿಯೊ ಕಾರ್ಯಕ್ರಮಗಳು ರಂಜನೆ ನೀಡುತ್ತಿವೆ. ಸಂಗೀತ ಪ್ರಿಯರ ಸೆಳೆಯುತ್ತಿವೆ.
ವಾಕ್‌ಪಥಲ್ಲಿ ನೂರಾರು ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ. ಇವು ಮೆಲು ಧ್ವನಿಯಲ್ಲಿ ಒಮ್ಮೆಗೆ ಸಂಗೀತ ಹೊರಹೊಮ್ಮಿಸುತ್ತವೆ. ವಾಕ್‌ಫಥದ ಉದ್ದಕ್ಕೂ ಸಣ್ಣ, ಸಣ್ಣ ಸ್ಪೀಕರ್‌ಗಳನ್ನು ಇರಿಸಿರುವುದರಿಂದ ಶಬ್ದ ಜೋರಾಗಿ ಬರದಿದ್ದರೂ ಬೀಸು ನಡಿಗೆ ನಡೆಯುತ್ತಲೇ ಸಂಗೀತ ಆಸ್ವಾದಿಸಲು ಅಡಚಣೆಯಾಗದು.
‘ಈ ಮೊದಲು ಹೆಡ್‌ಫೋನ್, ಬ್ಲೂಟೂತ್ ಹಾಕಿಕೊಂಡು ಸಂಗೀತ ಆಲಿಸುತ್ತಾ ವಾಕ್ ಮಾಡುತ್ತಿದ್ದೆ. ಜೋರಾಗಿ ನಡೆಯುವಾಗ ಹೆಡ್‌ಫೋನ್, ಬ್ಲೂಟೂತ್ ಕಿವಿಯಿಂದ ಜಾರುತ್ತಿದ್ದವು. ಸಹಜವಾಗಿ ನಡೆಯಲು ಸ್ಪೀಕರ್ ಕೇಬಲ್ ಅಡ್ಡಿಯಾಗುತ್ತಿದ್ದವು. ಉದ್ಯಾನದಲ್ಲಿ ಮ್ಯೂಸಿಕ್ ಸಿಸ್ಟಂ ಅಳವಡಿಸಿದಾಗಿನಿಂದ ಹೆಡ್‌ಫೋನ್ ಬಳಸುವುದನ್ನು ಬಿಟ್ಟಿದ್ದೇನೆ. ಪಾರ್ಕ್‌ನಲ್ಲಿ ಪ್ರಸಾರವಾಗುವ ಎಫ್‌ಎಂ ಆಲಿಸುತ್ತಲೇ ವಾಕಿಂಗ್ ಮಾಡುತ್ತಿದ್ದೇನೆ’ ಎನ್ನುತ್ತಾರೆ ಎಂಸಿಸಿ ‘ಬಿ’ ಬ್ಲಾಕ್ ನಿವಾಸಿ ಪ್ರಭಾಕರ್.
‘ಕೆಲವೊಮ್ಮೆ ಎಫ್‌ಎಂ ಸಂಪರ್ಕ ಕಡಿತಗೊಳ್ಳುತ್ತದೆ. ಕೆಲ ಸ್ಪೀಕರ್‌ಗಳಲ್ಲಿ ‘ನಾಯ್ಸ್’ ಇದೆ. ಅದನ್ನು ಸರಿಪಡಿಸಿದರೆ ಇನ್ನೂ ಸುಶ್ರಾವ್ಯವಾಗಿ ಸಂಗೀತ ಆಲಿಸಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಅವರು.
₹ 5.5 ಲಕ್ಷ ವೆಚ್ಚ: ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಅವರ ಅನುದಾನದಲ್ಲಿ ಮ್ಯೂಸಿಕ್ ಸಿಸ್ಟಂ ಅಳವಡಿಸಲು ₹ 5.5 ಲಕ್ಷ ಅನುದಾನ ನೀಡಲಾಗಿದೆ. ಭೂಸೇನಾ ನಿಗಮ ಏಳು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಪಾಲಿಕೆಗೆ ಹಸ್ತಾಂತರಿಸಿದೆ. ವಾಟರ್‌ಟ್ಯಾಂಕ್ ಪಾರ್ಕ್‌ನಲ್ಲಿರುವ ನೀರಗಂಟಿಯೇ ಮ್ಯೂಸಿಕ್ ಸಿಸ್ಟಂನ ನಿರ್ವಹಣೆ ಮಾಡುತ್ತಿದ್ದಾರೆ.
ಹೆಚ್ಚಿದ ಬೇಡಿಕೆ: ‘ವಾಟರ್ ಟ್ಯಾಂಕ್ ಪಾರ್ಕ್‌ನಲ್ಲಿ ಅಳವಡಿಸಿರುವಂಥ ಮ್ಯೂಸಿಕ್ ಸಿಸ್ಟಂ ಅನ್ನು ವಿದ್ಯಾನಗರ ಉದ್ಯಾನದಲ್ಲೂ ಅಳವಡಿಸಲಾಗಿದೆ. ಅದರ ಉದ್ಘಾಟನೆ ಬಾಕಿಯಿದೆ. ಇದರ ನಿರ್ವಹಣೆಯನ್ನು ಉದ್ಯಾನದ ಹಿರಿಯ ನಾಗರಿಕರ ಸಂಘದ ಸದಸ್ಯರು ಮಾಡಲಿದ್ದಾರೆ. ಇದೀಗ ಚಿಗಟೇರಿ ಆಸ್ಪತ್ರೆ ಎದುರಿನ ವಿಶ್ವೇಶ್ವರಯ್ಯ ಉದ್ಯಾನದಲ್ಲೂ ಮ್ಯೂಸಿಕ್ ಸಿಸ್ಟಂ ಅಳವಡಿಸುವಂತೆ ಕೆಲ ವೈದ್ಯರು ಮನವಿ ಮಾಡಿದ್ದಾರೆ. ಅಲ್ಲಿಯೂ ಸಂಗೀತ ಸಾಧನ ಅಳವಡಿಸಲು ಶಾಸಕರು ನಿರ್ಧರಿಸಿದ್ದಾರೆ’ ಎನ್ನುತ್ತಾರೆ ಶಾಸಕ ಎಸ್.ಎ. ರವೀಂದ್ರನಾಥ್ ಅವರ ಕಚೇರಿ ಸಿಬ್ಬಂದಿ.
‘ಗಾಜಿನ ಮನೆಯಲ್ಲೂ ಮ್ಯೂಸಿಕ್ ಸಿಸ್ಟಂ ಅಳವಡಿಸುವ ಆಲೋಚನೆಯಿದೆ. ಸರ್ಕಾರಕ್ಕೆ ₹ 5 ಕೋಟಿ ಅನುದಾನಕ್ಕಾಗಿ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಮ್ಯೂಸಿಕ್ ಸಿಸ್ಟಂ ಅಳವಡಿಸುವ ಯೋಜನೆಯನ್ನೂ ಸೇರಿಸಲಾಗಿದೆ ಎಂದು ಮಾಹಿತಿ ನೀಡುತ್ತಾರೆ’ ಅವರು.
ಸುಸ್ಥಿತಿಯಲ್ಲಿದೆ:‘ಎಸ್.ಎ. ರವೀಂದ್ರನಾಥ ಅವರು ಸಚಿವರಾಗಿದ್ದಾಗ ಆಂಜನೇಯ ಬಡಾವಣೆಯ ಉದ್ಯಾನದಲ್ಲಿ ಸಂಗೀತ ಸಾಧನ ಅಳವಡಿಸಿದ್ದರು. ಅದು ಇನ್ನೂ ಸುಸ್ಥಿತಿಯಲ್ಲಿದೆ. ಸ್ಥಳೀಯರು ಅದರ ಉತ್ತಮ ನಿರ್ವಹಣೆ ಮಾಡುತ್ತಿದ್ದಾರೆ’ ಬಡಾವಣೆಯ ಮುಖಂಡ ಶಿವರಾಜ ಪಾಟೀಲ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.