ನ್ಯಾಮತಿ: ಪಟ್ಟಣದ ಎಚ್.ಶಿವಾನಂದಪ್ಪ ಬಡಾವಣೆಯ ಪೇಂಟರ್ ಸುರೇಶ ಅವರ ಪತ್ನಿ ಹುಲಿಗೆಮ್ಮ (45) ಅವರಿಗೆ ಗುರುವಾರ ಬೆಳಿಗ್ಗೆ ಮನೆಯಲ್ಲಿ ಮುಸಿಯಾ ಕಚ್ಚಿ ಗಾಯಗೊಳಿಸಿದೆ.
ಮನೆಯ ಹಿಂಭಾಗದ ಡ್ರಮ್ ಬಳಿ ಬಂದು ಕುಳಿತ ಮುಸಿಯಾವನ್ನು ಕಂಡು ರೊಟ್ಟಿ ಕೊಡಲು ಮುಂದಾಗಿದ್ದಾರೆ. ಆ ಸಮಯದಲ್ಲಿ ಮಹಿಳೆಯ ಹಣೆಯನ್ನು ಕಚ್ಚಿ ಗಾಯಗೊಳಿಸಿದೆ. ಅಕ್ಕಪಕ್ಕದ ಮನೆಯವರು ಕೂಗಾಡಿದ್ದರಿಂದ ಗಾಬರಿಗೊಂಡು ಮುಸಿಯಾ ಓಡಿದೆ.
ಕಣ್ಣಿನ ಮೇಲ್ಭಾಗದ ಹಣೆ ಕಚ್ಚಿದ್ದರಿಂದ ಗಂಭೀರ ಗಾಯವಾಗಿದ್ದು, ತಕ್ಷಣ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದರು.
ಅದೇ ಮುಸಿಯಾ ಕೆಪಿಎಸ್ ಶಾಲೆ ಆವರಣದಲ್ಲಿ ಕಂಡು ಬಂದಾಗ ವಿದ್ಯಾರ್ಥಿಗಳು ಕಲ್ಲೆಸೆದು ಚೇಷ್ಟೆ ಮಾಡಿದ್ದರಿಂದ ವಿದ್ಯಾರ್ಥಿಗಳನ್ನು ಅಟ್ಟಿಸಿಕೊಂಡು ಹೋಗಿದೆ. ಆ ವೇಳೆ ಎರಡು ಮೂರು ವಿದ್ಯಾರ್ಥಿಗಳು ಬಿದ್ದು ಗಾಯಗೊಂಡಿದ್ದಾರೆ. ತಕ್ಷಣ ಶಾಲೆಯ ಎಲ್ಲ ವಿದ್ಯಾರ್ಥಿಗಳನ್ನು ಕೊಠಡಿಗೆ ಕಳುಹಿಸಿ, ಬೆಳಿಗ್ಗೆಯ ಪ್ರಾರ್ಥನೆಯನ್ನು ಆಯಾ ಕೊಠಡಿಯಲ್ಲಿಯೇ ಮಾಡಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಯಿತು.
ಈ ಬಗ್ಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗಮನಕ್ಕೆ ತರಲಾಗಿದೆ ಎಂದು ಮುಖ್ಯಶಿಕ್ಷಕ ಸಿದ್ದಪ್ಪ ಜಿಗಪಣ್ಣನವರ ತಿಳಿಸಿದರು.
‘ಮೂರು ದಿನದಿಂದ ಬಡಾವಣೆಯಲ್ಲಿ ಮುಸಿಯಾ ಸಂಚಾರ ಮಾಡುತ್ತಿದ್ದು, ಯಾರಿಗೂ ತೊಂದರೆ ಕೊಡುತ್ತಿರಲಿಲ್ಲ. ಆದರೆ ಇಂದು ಅದರ ವರ್ತನೆಯಿಂದ ಬಡಾವಣೆ ನಿವಾಸಿಗಳು ಮತ್ತು ಕೆಪಿಎಸ್ ಶಾಲೆಯ ವಿದ್ಯಾರ್ಥಿಗಳು ಗಾಬರಿಗೊಂಡಿದ್ದಾರೆ. ಮುಸಿಯಾವನ್ನು ಹಿಡಿಸಿ ಸ್ಥಳಾಂತರ ಮಾಡಬೇಕು’ ಎಂದು ಸಫಾಯಿ ಕರ್ಮಚಾರಿಗಳ ನಾಮನಿರ್ದೇಶಕ ಸದಸ್ಯ ಓಬಳೇಶ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.