ADVERTISEMENT

ಜನರನ್ನು ಒಡೆದು ಆಳುವ ಬಿಜೆಪಿ ಬಗ್ಗೆ ಜಾಗರೂಕರಾಗಿರಿ; ಎನ್.ಜಿ.ರಾಮಚಂದ್ರ

ಎದ್ದೇಳು ಕರ್ನಾಟಕ ಅಭಿಯಾನದ  ಎನ್.ಜಿ.ರಾಮಚಂದ್ರ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2024, 5:59 IST
Last Updated 8 ಏಪ್ರಿಲ್ 2024, 5:59 IST
ಎನ್.ಜಿ.ರಾಮಚಂದ್ರ
ಎನ್.ಜಿ.ರಾಮಚಂದ್ರ   

ಹರಿಹರ: ಜಾತಿ, ಧರ್ಮದಂತಹ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಜನರನ್ನು ಪ್ರಚೋದಿಸುವ ಬಿಜೆಪಿ ಕುರಿತು ಜನರು ಜಾಗರೂಕರಾಗಿರಬೇಕು ಎಂದು ತುಮಕೂರಿನ ರೈತ ಮುಖಂಡ ಎನ್.ಜಿ.ರಾಮಚಂದ್ರ ಎಚ್ಚರಿಸಿದರು.

ಬಿಜೆಪಿ ಷಡ್ಯಂತ್ರಗಳ ಬಗ್ಗೆ ಜನರಲ್ಲಿ ಜಗೃತಿ ಮೂಡಿಸಲು ಪ್ರಗತಿಪರರು, ಚಿಂತಕರು ಸೇರಿಕೊಂಡು ಎದ್ದೇಳು ಕರ್ನಾಟಕ ಅಭಿಯಾನ ಆರಂಭಿಸಿದ್ದಾರೆ. ಬಿಜೆಪಿಯ 10 ವರ್ಷಗಳ ಆಡಳಿತದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಯೋಜನೆಗಳು ಕಾರ್ಯಗತವಾಗಿಲ್ಲ. ಜನ ಸಾಮಾನ್ಯರಿಗೆ ಸಬ್ಸಿಡಿ ಹೆಚ್ಚಿಸದೆ, ಎಲ್ಲವನ್ನೂ ಕಡಿತಗೊಳಿಸಲಾಗಿದೆ ಎಂದು ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ದುರ್ಬಲರಿಗೆ ಕೊಡಬೇಕಾದ ಹಣವನ್ನು ಅವರ ಕಾರ್ಪೊರೇಟ್ ಮಿತ್ರರ ತಿಜೋರಿಗೆ ಸದ್ದಿಲ್ಲದಂತೆ ಹರಿಸಲಾಗಿದೆ. ಈ 10 ವರ್ಷಗಳಲ್ಲಿ ಕಾರ್ಪೊರೇಟ್ ಕಂಪನಿಗಳ ₹ 55 ಲಕ್ಷ  ತೆರಿಗೆಗೆ ವಿನಾಯಿತಿ ನೀಡಲಾಗಿದೆ. ಅಮೂಲ್ಯವಾದ ಸರ್ಕಾರಿ ಉದ್ದಿಮೆಗಳನ್ನು ಬಿಡಿಗಾಸಿಗೆ ಹರಾಜು ಮಾಡುವ ಮೂಲಕ ಹಗಲು ದರೋಡೆ ನಡೆಸಿದೆ ಎಂದು ದೂರಿದರು.

ADVERTISEMENT

‘ಮೋದಿಯವರ ಮಿತ್ರರಾದ ಅದಾನಿ, ಅಂಬಾನಿಯವರ ಆಸ್ತಿ 3 ವರ್ಷಗಳಲ್ಲಿ 6 ಪಟ್ಟು ಹೆಚ್ಚಾಗಿದೆ. ಕಪ್ಪು ಹಣ ತರುವುದಿರಲಿ, ನಮ್ಮ ಬ್ಯಾಂಕುಗಳಿಗೆ ಸಾವಿರಾರು ಕೋಟಿ ಪಂಗನಾಮ ಹಾಕಿದ ನೀರವ್ ಮೋದಿ, ವಿಜಯ್ ಮಲ್ಯ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಇಂದು ಬಿಜೆಪಿ ದೇಶದಲ್ಲಿ ಬೃಹತ್ ಭ್ರಷ್ಟರ ಗ್ಯಾಂಗ್ ಆಗಿ ಪರಿವರ್ತನೆಯಾಗಿದೆ’ ಎಂದು ಆರೋಪಿಸಿದರು.

ಭಾರತೀಯರನ್ನು ಭಾವನಾತ್ಮಕ ವಿಚಾರಗಳಿಂದ ಹಿಡಿದಿಟ್ಟು ದೇಶವನ್ನು ಕಂಪನಿಗಳ ಪಾಲು ಮಾಡುತ್ತಿರುವ ಬಿಜೆಪಿಯನ್ನು ನಾಶಪಡಿಸದಿದ್ದರೆ ದೇಶದ ಜನಸಾಮಾನ್ಯರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತದೆ. ಭಾವನಾತ್ಮಕ ವಿಚಾರಗಳಿಗೆ ಸಿಲುಕದೆ ಪ್ರಜ್ಞಾವಂತಿಗೆಯಿಂದ ಈ ಬಾರಿ ಬಿಜೆಪಿಗೆ ವಿರುದ್ಧವಾಗಿ ಮತದಾನ ಮಾಡಬೇಕು’ ಎಂದು ಮನವಿ ಮಾಡಿದರು.

ಕಾರ್ಮಿಕ ಮುಖಂಡ ಎಚ್.ಕೆ.ಕೊಟ್ರಪ್ಪ ಮಾತನಾಡಿ, ‘ಎದ್ದೇಳು ಕರ್ನಾಟಕ ವೇದಿಕೆಯಿಂದ ದೇಶ ಉಳಿಸಿ ಸಂಕಲ್ಪ ಯಾತ್ರೆ ಆಯೋಜಿಸುವ ದುಃಸ್ಥಿತಿ ದೇಶಕ್ಕೆ ಬಂದಿದೆ ಎಂದರೆ ದೇಶ ಎತ್ತ ಸಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಎದ್ದೇಳು ಕರ್ನಾಟಕ ಅಭಿಯಾನಕ್ಕೆ ಕಾರ್ಮಿಕ ಸಂಘಟನೆಗಳು ಬೆಂಬಲ ನೀಡಲಿವೆ’ ಎಂದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಸಂತೋಷ್ ನೋಟದವರ್, ರೈತ ಮುಖಂಡ ಕೆ.ಎಚ್ ಆನಂದಮೂರ್ತಿ, ಅಪ್ಪಾ ಸಾಹೇಬ್, ಗೋಣಿ ಬಸಪ್ಪ, ಹೊನ್ನಪ್ಪ ಮರಿಯಪ್ಪನವರ್, ದಲಿತ ಮುಖಂಡ ಮಂಜುನಾಥ, ಮಾನವ ಬಂಧುತ್ವ ವೇದಿಕೆಯ ಮಂಜುನಾಥ್, ಇಕ್ಬಾಲ್, ಕೃಷ್ಣಪ್ಪ, ಆಶ್ಫಾಖ್, ನಿಜಾಮುದ್ದೀನ್ ಸೇರಿ ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.