ದಾವಣಗೆರೆ: ಪ್ರಸಕ್ತ ವರ್ಷ ಬರಗಾಲದ ಬವಣೆಗೆ ಸಿಲುಕಿ ಜಿಲ್ಲೆಯಲ್ಲಿರುವ ಹಲವಾರು ಕೆರೆಗಳು ನೀರಿಲ್ಲದೇ ಸೊರಗಿವೆ. ಬೇಸಿಗೆ ಆರಂಭದಲ್ಲೂ ಕೆರೆಗಳಲ್ಲಿ ನೀರಿನ ಕುರುಹೂ ಕಾಣದಾಗಿದೆ. ಇನ್ನು ಕೆಲವು ಕೆರೆಗಳು ಬರಗಾಲದಲ್ಲೂ ತಕ್ಕಷ್ಟು ನೀರನ್ನು ಒಡಲಲ್ಲಿಟ್ಟುಕೊಂಡು ಅಸ್ತಿತ್ವವನ್ನು ಉಳಿಸಿಕೊಂಡಿವೆ.
ಜಿಲ್ಲೆಯ ಬಹುತೇಕ ಕೆರೆಗಳಲ್ಲಿ ಶೇ 10ರಿಂದ 20ರಷ್ಟು ನೀರಿದ್ದು, ಸಾಕು ಪ್ರಾಣಿಗಳು, ಕಾಡು ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಕುಡಿಯಲು ಬಳಕೆಯಾಗುತ್ತಿದೆ. ಗ್ರಾಮೀಣ ಭಾಗದ ಪ್ರಮುಖ ಜಲಮೂಲಗಳಾದ ಕೆರೆಗಳನ್ನು ಉಳಿಸಲು ಸರ್ಕಾರ ಹಾಗೂ ವಿವಿಧ ಸಂಘ–ಸಂಸ್ಥೆಗಳಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಲೇ ಇವೆ. ಈ ಕಾರಣಕ್ಕೆ ಹಲವು ಕೆರೆಗಳು ಬರಗಾಲದ ಈ ದಿನಗಳಲ್ಲೂ ನೀರನ್ನು ಸಂಗ್ರಹಿಸಿಟ್ಟುಕೊಂಡು ಜನ– ಜಾನುವಾರುಗಳಿಗೆ ನೀರುಣಿಸುತ್ತಿವೆ.
ಜಿಲ್ಲೆಯಲ್ಲಿ 380ಕ್ಕೂ ಹೆಚ್ಚು ಕೆರೆಗಳಿದ್ದು, ಜಿಲ್ಲಾ ಪಂಚಾಯಿತಿಯಿಂದ ಕಳೆದ ವರ್ಷ ‘ಅಮೃತ ಸರೋವರ’ ಯೋಜನೆಯಡಿ 126 ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಈ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತಂದಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (ಮನರೇಗಾ) ಕೆರೆ ಅಭಿವೃದ್ಧಿ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ಜಿಲ್ಲಾ ಪಂಚಾಯಿತಿಯಿಂದ 825 ಕಾಮಗಾರಿಗಳನ್ನು ಅನುಷ್ಠಾನಗಳಿಸಲಾಗುತ್ತಿದೆ. ಇದರಲ್ಲಿ ಕೆರೆ ಹೂಳೆತ್ತುವುದು, ಬದು ಅಭಿವೃದ್ಧಿ, ಕೆರೆಯ ಪೂರಕ ನಾಲಾ ಅಭಿವೃದ್ಧಿ, ಕೋಡಿ ನಿರ್ಮಾಣ ಇತ್ಯಾದಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.
ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 72 ಕೆರೆಗಳಿವೆ. 1 ಹೆಕ್ಟೆರ್‌ನಿಂದ 40 ಹೆಕ್ಟೆರ್ ಅಚ್ಚುಕಟ್ಟು ಪ್ರದೇಶ ಹೊಂದಿರುವ ಕೆರೆಗಳು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಹಾಗೂ 40 ಹೆಕ್ಟೆರ್‌ನಿಂದ 2,000 ಹೆಕ್ಟೆರ್ ಅಚ್ಚುಕಟ್ಟು ಪ್ರದೇಶ ಹೊಂದಿರುವ ಕೆರೆಗಳು ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತವೆ.
‘ಗ್ರಾಮೀಣ ಭಾಗದಲ್ಲಿ ಕೆರೆಗಳ ಒತ್ತುವರಿ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಅಂತಹ ಕೆರೆಗಳ ಒತ್ತುವರಿ ತೆರವುಗೊಳಿಸಿ, ಸರ್ವೆ ಮಾಡಿಸಿ ಕೆರೆಯ ವ್ಯಾಪ್ತಿಯನ್ನು ನಿಗದಿಗೊಳಿಸಲಾಗುತ್ತದೆ. ಮತ್ತೆ ಒತ್ತುವರಿ ಆಗದಂತೆ ನಿಗಾ ವಹಿಸಲಾಗುತ್ತಿದೆ’ ಎನ್ನುತ್ತಾರೆ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರವೀಣ್ ಬಿ.ಕೆ.
ಗ್ರಾಮೀಣ ಭಾಗದ ಹಲವು ಕೆರೆಗಳು ಅಭಿವೃದ್ಧಿ ಕಂಡಿಲ್ಲ. ಕೆಲವು ಕಡೆ ಕೆರೆಗಳ ಅಸ್ತಿತ್ವವೂ ಇಲ್ಲದಂತಾಗಿವೆ. ಬಹುತೇಕ ಕಡೆ ನಾಮಫಲಕ ಅಳವಡಿಸಿಲ್ಲ. ಗಡಿ ಗುರುತಿಸಿಲ್ಲ. ಒತ್ತುವರಿಯಿಂದ ಬಹುತೇಕ ಸಣ್ಣ ಕೆರೆಗಳು ಕುರುಹನ್ನು ಕಳೆದುಕೊಂಡಿವೆ. ಇನ್ನು ಕೆಲವು ಕೆರೆಗಳು ಹೂಳು ತುಂಬಿ, ಪಾಚಿ ಕಟ್ಟಿಕೊಂಡು, ತ್ಯಾಜ್ಯದ ನೀರು ತುಂಬಿಕೊಂಡು ದುರ್ವಾಸನೆ ಬೀರುವ, ರೋಗಗಳನ್ನು ಹರಡುವ ತಾಣಗಳಾಗುತ್ತಿವೆ. ಇಂತಹ ಕೆರೆಗಳನ್ನು ಸಂಬಂಧಪಟ್ಟ ಇಲಾಖೆಗಳು ಗುರುತಿಸಿ ಅಭಿವೃದ್ಧಿ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ಧರ್ಮಸ್ಥಳ ಸಂಘದಿಂದ ನಳನಳಿಸಿದವು ಕೆರೆ:
ಕೆರೆಗಳ ಪುನಶ್ಚೇತನ ಕಾರ್ಯದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮಹತ್ವದ ಹೆಜ್ಜೆ ಇರಿಸಿದೆ. ‘ನಮ್ಮೂರು ನಮ್ಮ ಕರೆ’ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಈವರೆಗೆ 15 ಕೆರೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ರಾಜ್ಯದಾದ್ಯಂತ 643 ಕೆರೆಗಳು ಪುನಶ್ಚೇತನಗೊಂಡಿವೆ. ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಕೆರೆ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.
‘ಕೆರೆ ಅಭಿವೃದ್ಧಿ ಮಾಡಿಕೊಳ್ಳಲು ಮುಂದೆ ಬರುವ ಗ್ರಾಮಗಳಿಗೆ ಆದ್ಯತೆ ನೀಡಲಾಗುತ್ತದೆ. ಹೂಳು ಎತ್ತಲು ಹಿಟಾಚಿಯ ಸಹಕಾರವನ್ನು ಸಂಸ್ಥೆಯಿಂದ ನೀಡಲಾಗುತ್ತದೆ. ತೆಗೆದ ಹೂಳಿನ ವಿಲೇವಾರಿ ಜವಾಬ್ದಾರಿಯನ್ನು ಗ್ರಾಮಸ್ಥರಿಗೆ ವಹಿಸಲಾಗುವುದು. ಇದಕ್ಕಾಗಿ ಕೆರೆ ಸಮಿತಿ ರಚಿಸಿ ಗ್ರಾಮಸ್ಥರಿಂದಲೇ ಕೆರೆ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗುವುದು. ಅಭಿವೃದ್ಧಿಗೊಂಡ ಕೆರೆಯ ಉಸ್ತುವಾರಿಯನ್ನೂ ಗ್ರಾಮಸ್ಥರಿಗೇ ವಹಿಸಲಾಗುವುದು’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಲಕ್ಷ್ಮಣ ಎಂ. ಮಾಹಿತಿ ನೀಡಿದರು.
ದಾವಣೆಗೆರೆ ತಾಲ್ಲೂಕಿನಲ್ಲಿ 3, ಹೊನ್ನಾಳಿಯಲ್ಲಿ 3, ಬಸವಾಪಟ್ಟಣ ವ್ಯಾಪ್ತಿಯಲ್ಲಿ 1, ಮಲೆಬೆನ್ನೂರು 2, ಚನ್ನಗಿರಿ 2, ಸಂತೆಬೆನ್ನೂರು 2, ಜಗಳೂರು 2 ಸೇರಿ ಒಟ್ಟು 15 ಕೆರೆಗಳನ್ನು ಅಭಿವೃದ್ಧಿ ಮಾಡಲಾಗಿದೆ. ಇದಕ್ಕಾಗಿ ಯೋಜನೆಯಿಂದ ₹ 1.48 ಕೋಟಿ ಅನುದಾನವನ್ನು ವಿನಿಯೋಗಿಸಲಾಗಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 11 ಕೆರೆಗಳನ್ನು ಪುನಃಶ್ಚೇತನ ಮಾಡುವ ಉದ್ದೇಶವನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹೊಂದಿದೆ.
ಕಳೆದ ವರ್ಷ ‘ಅಮೃತ ಸರೋವರ’ ಯೋಜನೆಯಡಿ 150 ಕೆರೆಗಳನ್ನು ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿತ್ತು. ಇದರಲ್ಲಿ 126 ಕೆರೆಗಳು ಅಭಿವೃದ್ಧಿಗೊಂಡಿವೆ. ಇನ್ನು 24 ಕೆರೆಗಳ ಕಾಮಗಾರಿ ಪ್ರಗತಿಯಲ್ಲಿದೆ.ಸುರೇಶ್ ಇಟ್ನಾಳ್ ಜಿಲ್ಲಾ ಪಂಚಾಯಿತಿ ಸಿಇಒ
ಕೆರೆಗಳಲ್ಲಿ ನೀರು ಸೋರಿಕೆ ಆಗದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ತೂಬು ಕೀಳಲು ಅವಕಾಶ ನೀಡದಂತೆ ನಿಗಾ ವಹಿಸಲಾಗುತ್ತಿದೆ. ಅನ್ಯ ಉದ್ದೇಶಗಳಿಗೆ ಬಳಸದೆ ಕೆರೆಯಲ್ಲಿ ನೀರು ಸಂಗ್ರಹಿಸಿ ಅಂತರ್ಜಲ ವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ.ಪ್ರವೀಣ್ ಬಿ.ಕೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಣ್ಣ ನೀರಾವರಿ ಇಲಾಖೆ ದಾವಣಗೆರೆ
ಅಂತರ್ಜಲ ಮಟ್ಟ ವೃದ್ಧಿಸುವ ನೀರು ಸಂರಕ್ಷಿಸುವ ಭಾಗವಾಗಿ ಸಂಸ್ಥೆಯಿಂದ ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮ ರೂಪಿಸಿದ್ದೇವೆ. ರೈತರಿಗೂ ನೀರಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಕೆರೆ ಪುನಶ್ಚೇತನದ ಮೂಲಕ ಬರಗಾಲದಂತಹ ಸಂದರ್ಭವನ್ನು ಸಮರ್ಥವಾಗಿ ಎದುರಿಸಬಹುದು.ಲಕ್ಷ್ಮಣ ಎಂ ಜಿಲ್ಲಾ ನಿರ್ದೇಶಕ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ
ತಾಲ್ಲೂಕಿನ ಬಹುತೇಕ ಕೆರೆಗಳಲ್ಲಿ ಮುಳ್ಳಿನ ಕಂಟಿಗಳು ಬೆಳೆದಿವೆ. ಅನುದಾನ ಬಿಡುಗಡೆಯಾದ ಕೂಡಲೇ ಎಲ್ಲ ಕೆರೆ ಏರಿಗಳ ಮುಳ್ಳುಕಂಟಿಗಳನ್ನು ತೆರವುಗೊಳಿಸಲಾಗುವುದು.ರಾಘವೇಂದ್ರ ಸಹಾಯಕ ಎಂಜಿನಿಯರ್ ಸಣ್ಣ ನೀರಾವರಿ ಇಲಾಖೆ ಜಗಳೂರು
ಊರಿನ ಸೌಂದರ್ಯ ಹೆಚ್ಚಿಸಿದ ಕೆರೆ
ನಮ್ಮೂರ ಕೆರೆ ಅಭಿವೃದ್ಧಿಗೂ ಮುನ್ನ ಪಾಳು ಬಿದ್ದಿತ್ತು. ಊರಿನ ತ್ಯಾಜ್ಯವೆಲ್ಲ ಕೆರೆ ಸೇರಿ ಹಲವು ರೋಗಗಳನ್ನು ಹರಡುವ ತಾಣವಾಗಿತ್ತು. ಧರ್ಮಸ್ಥಳ ಯೋಜನೆಯಿಂದ ಕೆರೆ ಪುನಃಶ್ಚೇತನಗೊಂಡು ನಳನಳಿಸುತ್ತಿದೆ. ಬರಗಾಲದ ಈ ದಿನಗಳಲ್ಲೂ ನಮ್ಮೂರ ಕೆರೆ ನೀರು ತುಂಬಿಕೊಂಡು ನಳನಳಿಸುತ್ತಿದೆ. ಊರಿನ ಸೌಂದರ್ಯ ಹೆಚ್ಚಿಸಿದೆ. ದನ ಕರುಗಳಿಗೆ ಪಕ್ಷಿಗಳಿಗೆ ನೀರುಣಿಸುತ್ತಿದೆ. ಅಂತರ್ಜಲವೂ ವೃದ್ಧಿಯಾಗಿದೆ. ಹನುಮಂತಪ್ಪ ಬಿ.ಟಿ ಕೆರೆ ಸಮಿತಿ ಸದಸ್ಯ ಹರಳಹಳ್ಳಿ ಮಲೆಬೆನ್ನೂರು ಹೋಬಳಿ
ತುಂಬಿದ ಹೂಳು;
ನೀರಿನ ಸಂಗ್ರಹ ಕ್ಷೀಣ ಎಚ್.ವಿ.ನಟರಾಜ್ ಚನ್ನಗಿರಿ: ತಾಲ್ಲೂಕಿನಲ್ಲಿರುವ ಬಹುತೇಕ ಕೆರೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೂಳು ತುಂಬಿದ್ದು ನೀರಿನ ಸಂಗ್ರಹ ಕಡಿಮೆಯಾಗಲು ಕಾರಣವಾಗಿದೆ. ತಾಲ್ಲೂಕಿನಲ್ಲಿ ಒಂದಷ್ಟು ಕೆರೆಗಳು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪುನಃಶ್ಚೇತನಗೊಂಡಿವೆ. ನಾಲ್ಕು ವರ್ಷಗಳಲ್ಲಿ ₹ 52 ಲಕ್ಷ ವೆಚ್ಚದಲ್ಲಿ ತಾಲ್ಲೂಕಿನ 6 ಕೆರೆಗಳು ಅಭಿವೃದ್ಧಿ ಭಾಗ್ಯ ಕಂಡಿವೆ. ‘ಜೋಳದಹಾಳ್ ದೋಣಿಹಳ್ಳಿ ಹಿರೇ ಉಡ ಚಿಕ್ಕೂಡ ನೀತಿಗೆರೆ ಹಾಗೂ ಪಾಂಡೋಮಟ್ಟಿ ಗ್ರಾಮಗಳ ಕೆರೆಗಳನ್ನು ಅಭಿವೃದ್ಧಿ ಮಾಡಿದ್ದು ಇದರಲ್ಲಿ ಜೋಳದಹಾಳ್ ಗ್ರಾಮದ ಕೆರೆ ‘ಮಾದರಿ’ ಕೆರೆ ಎಂದು ಪ್ರಶಸ್ತಿ ಪಡೆದುಕೊಂಡಿದೆ. ಪ್ರಸಕ್ತ ವರ್ಷ ತಾಲ್ಲೂಕಿನ ಆಗರಬನ್ನಿಹಟ್ಟಿ ಹಾಗೂ ಮುದಿಗೆರೆ ಗ್ರಾಮಗಳ ಕೆರೆಗಳನ್ನು ಅಭಿವೃದ್ಧಿಗೊಳಿಸಲು ಸಂಸ್ಥೆ ಆಯ್ಕೆ ಮಾಡಿದೆ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಕೆ. ಹನುಮಂತಪ್ಪ ತಿಳಿಸಿದರು. ‘ಸರ್ಕಾರದಿಂದ 2023ನೇ ಸಾಲಿನಲ್ಲಿ ತಾಲ್ಲೂಕಿನ ಹಿರೇಕೋಗಲೂರು 2 ಕಾಕನೂರು ಅರಳಿಕಟ್ಟೆ ಗ್ರಾಮಗಳಲ್ಲಿ ತಲಾ ಒಂದು ಮಿನಿ ಕೆರೆಗಳ ನಿರ್ಮಾಣಕ್ಕಾಗಿ ₹ 24 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಇದರಲ್ಲಿ ಅರಳಿಕಟ್ಟೆ ಗ್ರಾಮದ ಕೆರೆ ನಿರ್ಮಾಣ ಕಾಮಗಾರಿ ಮಾತ್ರ ಮುಕ್ತಾಯಗೊಂಡಿದ್ದು ಇನ್ನುಳಿದ ಗ್ರಾಮಗಳಲ್ಲಿ ಕಾಮಗಾರಿ ಆರಂಭವಾಗಬೇಕಿದೆ’ ಎಂದು ಸಣ್ಣ ನೀರಾವರಿ ಇಲಾಖೆಯ ಎಇಇ ಶಿವಮೂರ್ತಿ.
ಸ್ವಚ್ಛಗೊಂಡಿತು ದೊಡ್ಡ ಮಾಗಡಿ ಕೆರೆ
ಮಂಜುನಾಥ ಎಸ್.ಎಂ.
ಮಾಯಕೊಂಡ: ಸಮೀಪದ ದೊಡ್ಡ ಮಾಗಡಿ ಕೆರೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಅಭಿವೃದ್ಧಿಗೊಳ್ಳುತ್ತಿದೆ. ಯಂತಗ್ರ ಬಳಸಿ ಕೆರೆಯ ಹೂಳು ತೆಗೆಯುವ ಕೆಲಸ ತಿಂಗಳಿಂದ ನಡೆದಿದೆ. ಕೆರೆಯು 10 ಎಕರೆ ವಿಸ್ತೀರ್ಣ ಹೊಂದಿದ್ದು ಕೆರೆ ಅಂಗಳದ ಅಂದಾಜು 3 ಎಕರೆ ಪ್ರದೇಶದಲ್ಲಿ ಮಣ್ಣು ತೆಗೆಯುವ ಕಾರ್ಯ ಸಾಗಿದೆ. ನಿತ್ಯವೂ ಹತ್ತಾರು ಟ್ರ್ಯಾಕ್ಟರ್‌ಗಳಿಂದ ನೂರಾರು ಲೋಡ್ ಮಣ್ಣನ್ನು ಸಾಗಿಸಲಾಗಿದೆ. ಕೆರೆಯ ಸುತ್ತಲೂ ಭದ್ರವಾದ ಬದುವನ್ನು ನಿರ್ಮಿಸಲಾಗಿದೆ. ಸುಮಾರು ಹತ್ತರಿಂದ ಹನ್ನೆರಡು ಅಡಿಗಳಷ್ಟು ಆಳಕ್ಕೆ ಮಣ್ಣು ತೆಗೆಯಲಾಗಿದೆ. ಇದರಿಂದ ಕೆರೆಯ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಲಿದೆ. ನೀರು ಬಹಳ ದಿನಗಳವರೆಗೂ ಕೆರೆಯಲ್ಲಿ ಉಳಿದು ಅಂತರ್ಜಲ ಮಟ್ಟ ಹೆಚ್ಚಲಿದೆ ಎಂಬ ಸಂತಸ ದೊಡ್ಡಮಾಗಡಿ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರಿದ್ದಾಗಿದೆ. ಧರ್ಮಸ್ಥಳ ಸಂಸ್ಥೆಯಿಂದ ಕೆರೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಪ್ರಸ್ತುತ ದಾವಣಗೆರೆ ತಾಲ್ಲೂಕಿನಲ್ಲಿ ಮೂರು ಕೆರೆಗಳ ಪುನಶ್ಚೇತನ ಕಾರ್ಯ ಮಾಡಲಾಗುತ್ತಿದೆ. ಸ್ಥಳೀಯರಿಂದ ಸಹಕಾರ ಅಗತ್ಯವಿದೆ ಎಂದು ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿ ಯಶೋದಾ ತಿಳಿಸಿದರು.
ಅಭಿವೃದ್ಧಿ ನಿರೀಕ್ಷೆಯಲ್ಲಿ ಹೆಳವನಕಟ್ಟೆ ಕೆರೆ
ಎಂ.ನಟರಾಜನ್
ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯ ಕೊಮಾರನಹಳ್ಳಿ ಗ್ರಾಮದಲ್ಲಿರುವ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ 97 ಎಕರೆ ವಿಸ್ತೀರ್ಣದ ಲಕ್ಷ್ಮೀರಂಗನಾಥ ದೇವಾಲಯದ ಕೆರೆ ಅಭಿವೃದ್ಧಿಗೆ ಕಾಯುತ್ತಿದೆ. ಒಮ್ಮೆ ಕೆರೆಯಲ್ಲಿ ನೀರು ಸಂಗ್ರಹವಾದರೆ ಏಳೆಂಟು ಕಿಮೀ ಸುತ್ತಮುತ್ತಲ ಪ್ರದೇಶ ಜಲಪೂರಣವಾಗಿ ಅಂತರ್ಜಲ ಹೆಚ್ಚಾಗುತ್ತದೆ. ಕುಡಿಯುವ ನೀರಿನ ಸಮಸ್ಯೆ ನೀಗುತ್ತದೆ. ಕಳೆದ ವರ್ಷ ಉತ್ತಮ ಮಳೆ ಸುರಿದ ಕಾರಣ ಕೆರೆ ಭರ್ತಿಯಾಗಿತ್ತು. ಈಗ ಶೇ 65ರಷ್ಟು ಖಾಲಿಯಾಗಿದೆ. ಒಮ್ಮೆ ಮಾತ್ರ ₹ 50 ಲಕ್ಷ ಅನುದಾನದಲ್ಲಿ ಹೂಳೆತ್ತಿಸಿ ಕೆರೆ ಮಧ್ಯೆ ಪಕ್ಷಿಧಾಮ ನಿರ್ಮಿಸಲಾಗಿದೆ. ಈಗ ಕೆರೆ ಒಣಗಿದ್ದು ಪಕ್ಷಿಗಳು ವಲಸೆ ಹೋಗಿವೆ. ‘ಕೆರೆಯು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದೆ. ಪ್ರವಾಸೋದ್ಯಮ ಇಲಾಖೆ ವಾಕಿಂಗ್ ಪಾತ್ ಮಕ್ಕಳ ಉದ್ಯಾನ ದೋಣಿ ವಿಹಾರ ಆರಂಭಿಸಿದರೆ ಸುಂದರ ಪ್ರವಾಸಿ ತಾಣವಾಗುವುದರಲ್ಲಿ ಸಂದೇಹವಿಲ್ಲ. ಮೀನುಗಾರಿಕೆಗೆ ವಿಪುಲ ಅವಕಾಶವಿದೆ’ ಎನ್ನುತ್ತಾರೆ ಗ್ರಾಮಸ್ಥರು. ಧರ್ಮಸ್ಥಳ ಯೋಜನೆ: ಸಮೀಪದ ಹರಳಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆ ಅಡಿ 40 ಎಕರೆ ವಿಸ್ತೀರ್ಣದ ಕೆರೆ ಸುಮಾರು 10 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದೆ. ಕೆರೆ ನೀರು ಕೊಳವೆ ಬಾವಿಗೆ ಜೀವ ತುಂಬಿದೆ. ಜನ– ಜಾನುವಾರುಗಳ ಜಲದಾಹ ನೀಗಿಸಿದೆ. ‘ಕಲ್ಕಟ್ಟಣೆ ತೂಬಿನ ಕೆಲಸಕ್ಕೆ ಉದ್ಯೋಗ ಖಾತ್ರಿ ಯೋಜನೆ ಅಡಿ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ’ ಎನ್ನುತ್ತಾರೆ ಪಿಡಿಒ ಕೆ.ಬಿ. ಶಾಂತಪ್ಪ.
ಬೆಳೆದು ನಿಂತ ಮುಳ್ಳುಕಂಟಿ; ಕೆರೆ ಏರಿಗೆ ಅಪಾಯ
ಡಿ. ಶ್ರೀನಿವಾಸ್
ಜಗಳೂರು: ತುಂಗಭದ್ರಾ ನದಿಯಿಂದ ತಾಲ್ಲೂಕಿನ 51 ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಯೋಜನೆಯ ಕಾಮಗಾರಿ ಅಂತಿಮ ಹಂತದಲ್ಲಿದ್ದು ಬರಪೀಡಿತ ಎಂಬ ಹಣೆಪಟ್ಟೆ ಕಟ್ಟಿಕೊಂಡಿರುವ ತಾಲ್ಲೂಕಿನ ಕೆರೆಗಳು ಮೈದುಂಬಿ ಕೊಳ್ಳುತ್ತಿರುವುದು ರೈತರ ನಿರೀಕ್ಷೆ ಗರಿಗೆದರಿದೆ. ಕಳೆದ ಮುಂಗಾರಿನಲ್ಲಿ ತುಪ್ಪದಹಳ್ಳಿ ಕೆರೆಗೆ ಮಾತ್ರ ನೀರು ಹರಿದು ಕೋಡಿ ಬಿದ್ದಿತ್ತು. ಆದರೆ ಬಹುತೇಕ ಕೆರೆಗಳು ಮುಳ್ಳುಕಂಟಿಗಳು ಹೂಳಿನಿಂದ ಆವೃತವಾಗಿದ್ದು ನೀರು ಹರಿಸಿದರೂ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹವಾಗುವ ನಿರೀಕ್ಷೆ ಇಲ್ಲ. ದಶಕಗಳಿಂದ ಬರಿದಾಗಿರುವ ಕೆರೆಗಳಿಗೆ ನೀರು ಹರಿಯುವ ಮುನ್ನ ಮುಂಜಾಗ್ರತೆಯಾಗಿ ಕೆರೆಗಳ ಸ್ಥಿತಿಗತಿ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಇದುವರೆಗೆ ಪರಿಶೀಲಿಸಿಲ್ಲ. ಕೆರೆಗಳ ಏರಿ ಮತ್ತು ವಿಶಾಲವಾದ ಅಂಗಳದಲ್ಲಿ ಮುಳ್ಳಿನ ಕಂಟಿಗಳು ಪೊದೆಗಳು ವ್ಯಾಪಕವಾಗಿ ಆವರಿಸಿಕೊಂಡಿದ್ದು ಕೆಲವು ಕೆರೆಗಳ ಏರಿಗಳ ಭದ್ರತೆಯ ಬಗ್ಗೆ ರೈತರಲ್ಲಿ ಆತಂಕ ಮೂಡಿಸಿದೆ. ಸಣ್ಣ ನೀರಾವರಿ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 50ಕ್ಕೂ ಹೆಚ್ಚು ಕೆರೆಗಳು ನಿರ್ವಹಣೆ ಕೊರತೆಯಿಂದ ಕಳೆಗುಂದಿವೆ. ಅನುದಾನ ಕೊರತೆಯ ನೆಪವೊಡ್ಡಿ ಕೆರೆ ಏರಿ ಮತ್ತು ಅಂಗಳದಲ್ಲಿರುವ ಮುಳ್ಳಿನ ಕಂಟಿಗಳನ್ನು ಕಾಲಕಾಲಕ್ಕೆ ತೆರವುಗೊಳಿಸದ ಕಾರಣ ಅಪಾಯಕಾರಿ ರೀತಿಯಲ್ಲಿ ಬೆಳೆದುನಿಂತಿವೆ. ‘ನಮ್ಮ ಭಾಗದ ಸುಮಾರು 25 ಹಳ್ಳಿಗಳಲ್ಲಿ ಅಂತರ್ಜಲದ ಮೂಲವಾಗಿರುವ ಸಂಗೇನಹಳ್ಳಿ ಕೆರೆಯ ಏರಿ ಮತ್ತು ಅಂಗಳದಲ್ಲಿ ಭಾರಿ ಪ್ರಮಾಣದಲ್ಲಿ ಜಾಲಿ ಮರಗಳು ಬೆಳೆದು ನಿಂತಿವೆ. ಹಲವು ವರ್ಷಗಳಿಂದ ಸ್ವಚ್ಛಗೊಳಿಸದ ಕಾರಣ ಏರಿಯಲ್ಲಿ ಬಿರುಕುಗಳು ಬಂದಿವೆ’ ಎಂದು ತಾಲ್ಲೂಕಿನ ಸಿದ್ದಿಹಳ್ಳಿ ಗ್ರಾಮದ ರೈತ ಮಂಜುನಾಥ ರೆಡ್ಡಿ ಆತಂಕ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.