ADVERTISEMENT

ವಿಷನ್‌–5 ಗುರಿ ಸಾಧನೆಗೆ ಶಿಕ್ಷಕರಿಂದ ಭಿನ್ನ ಪ್ರಯೋಗ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯನ್ನು 5 ಸ್ಥಾನದೊಳಗೆ ತರಲು ಸಿದ್ಧತೆ ಕೈಗೊಂಡಿರುವ ಶಿಕ್ಷಣ ಇಲಾಖೆ

ಅನಿತಾ ಎಚ್.
Published 27 ನವೆಂಬರ್ 2023, 6:38 IST
Last Updated 27 ನವೆಂಬರ್ 2023, 6:38 IST
ದಾವಣಗೆರೆ ಜಿಲ್ಲೆ ಜಗಳೂರಿನ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶಿಕ್ಷಕ ಮಂಜುನಾಥ್‌ ಸಾಹುಕಾರ್‌ ಅವರು ಪ್ರಯೋಗಗಳ ಮೂಲಕ ಕಲಿಸುತ್ತಿರುವುದು
ದಾವಣಗೆರೆ ಜಿಲ್ಲೆ ಜಗಳೂರಿನ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶಿಕ್ಷಕ ಮಂಜುನಾಥ್‌ ಸಾಹುಕಾರ್‌ ಅವರು ಪ್ರಯೋಗಗಳ ಮೂಲಕ ಕಲಿಸುತ್ತಿರುವುದು   

ದಾವಣಗೆರೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಸುಧಾರಣೆ ತರಲು ಶಿಕ್ಷಣ ಇಲಾಖೆ ಸನ್ನದ್ಧವಾಗಿದೆ. ರಾಜ್ಯದಲ್ಲಿ ಜಿಲ್ಲೆಗೆ 5ರೊಳಗೆ ಸ್ಥಾನ ದೊರೆಯುವಂತಾಗಲು ಶಾಲಾ ಶಿಕ್ಷಣ ಇಲಾಖೆಯು ವಿಷನ್‌–5 ಯೋಜನೆ ರೂಪಿಸಿದ್ದು, ಗುರಿ ಸಾಧನೆಗಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತಿದೆ.

ಈ ನಿಟ್ಟಿನಲ್ಲಿ ಶಿಕ್ಷಕರು ಖಾಸಗಿ ಶಾಲೆಗಳಿಗೇನೂ ಕಮ್ಮಿ ಇಲ್ಲವೆಂಬಂತೆ ವಿದ್ಯಾರ್ಥಿಗಳಿಗೆ ಭಿನ್ನ ರೀತಿಯಲ್ಲಿ ಪಾಠ ಬೋಧಿಸಲು ಹಲವು ಪ್ರಯೋಗ ನಡೆಸಿದ್ದಾರೆ.

ಜಿಲ್ಲೆಯು 2022–2023ನೇ ಸಾಲಿನಲ್ಲಿ (ಕಳೆದ ವರ್ಷ) ರಾಜ್ಯದಲ್ಲಿ 14ನೇ ಸ್ಥಾನವನ್ನು (ಶೇ 90.14 ಫಲಿತಾಂಶ) ಪಡೆದುಕೊಂಡಿತ್ತು. ಶಾಲೆಗಳಲ್ಲಿ ಸಮರ್ಪಕ ಕಲಿಕೆ ಮತ್ತು ಶೈಕ್ಷಣಿಕ ಅಭಿವೃದ್ಧಿಯ ಅಗತ್ಯವನ್ನು ಮನಗಂಡು ವಿಷನ್‌–5 ಅಡಿ ಶೇ 95ಕ್ಕಿಂತ ಹೆಚ್ಚು ಮಕ್ಕಳು ಶೇ 95ಕ್ಕಿಂತ ಹೆಚ್ಚು ಸರಾಸರಿ ಅಂಕಗಳನ್ನು ಗಳಿಸುವಂತೆ ಕ್ರಮ ವಹಿಸಲು ಮೇ ತಿಂಗಳಿನಿಂದಲೇ ಶಾಲಾ ಹಂತದಿಂದ ಜಿಲ್ಲಾ ಹಂತದವರೆಗೆ ಹಲವು ಕಾರ್ಯ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ಸಾಕಷ್ಟು ಕಾರ್ಯಕ್ರಮಗಳು ಈಗಾಗಲೇ ಅನುಷ್ಠಾನಗೊಂಡಿವೆ.

ADVERTISEMENT

ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ: ಕಳೆದ ವರ್ಷ ‘ಸಿ’ ಗ್ರೇಡ್‌ ಪಡೆದಿರುವ 40 ಶಾಲೆಗಳನ್ನು ವಿವಿಧ ಅಧಿಕಾರಿಗಳಿಗೆ ದತ್ತು ನೀಡಲಾಗಿತ್ತು. ಅವರು ಶಾಲೆಗಳಿಗೆ ಭೇಟಿ ನೀಡಿ ಫಲಿತಾಂಶ ಸುಧಾರಣೆಗೆ ಶಾಲೆಗಳಲ್ಲಿ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿ ವರದಿ ನೀಡಿದ್ದರು. ಈ ಸಂಬಂಧ ಸಭೆ ನಡೆಸಿ ಫಲಿತಾಂಶ ಸುಧಾರಣೆಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಷಯವಾರು ಕ್ರಿಯಾಯೋಜನೆ ಸಿದ್ಧಪಡಿಸಲು ಸಂಪನ್ಮೂಲ ಶಿಕ್ಷಕರಿಗೆ ಕಾರ್ಯಾಗಾರಗಳನ್ನು ನಡೆಸಲಾಗಿದೆ.

ಪ್ರತಿ ತಾಲ್ಲೂಕಿನಲ್ಲಿ ವಿಷಯ ಶಿಕ್ಷಕರ ವೇದಿಕೆ ರಚಿಸಿದ್ದು, ಎಲ್ಲಾ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ ನಡೆಸಲಾಗಿದೆ. ಅತಿಥಿ ಶಿಕ್ಷಕರ ಬಲವರ್ಧನೆಗೆ ಪುನಶ್ಚೇತನ ಕಾರ್ಯಾಗಾರ ನಡೆಸಲಾಗಿದೆ. ವಿಶೇಷ ತರಗತಿಗಳು, ಗುಂಪು ಅಧ್ಯಯನ, ಪೋಷಕರ ಸಭೆ, ತಾಯಂದಿರ ಸಭೆ ನಡಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಮನೆಗಳಿಗೆ ಶಿಕ್ಷಕರು ಭೇಟಿ ನೀಡಿ ಮಾರ್ಗದರ್ಶನ ನೀಡುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿನ ‘ಪರೀಕ್ಷಾ ಭಯ’ ಹೋಗಲಾಡಿಸಿ, ಆತ್ಮವಿಶ್ವಾಸ ತುಂಬಲು ಅಂತಿಮ ಪರೀಕ್ಷೆಗೆ ಮುನ್ನ ಮತ್ತೊಂದು ಪ್ರೇರಣಾ ಶಿಬಿರವನ್ನು ತಾಲ್ಲೂಕು ಮಟ್ಟದಲ್ಲಿ ನಡಸುವ ಯೋಜನೆ ಇದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ (ಆಡಳಿತ) ಜಿ. ಕೊಟ್ರೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪಾಠ ಬೋಧನೆಗೆ ಪ್ರೊಜೆಕ್ಟರ್‌: ದಾವಣಗೆರೆ ತಾಲ್ಲೂಕಿನ ಎಚ್‌.ಬಸಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಶ್ರೀಕಾಂತ್‌ ಅವರು ಆಡಿಯೊ ಮತ್ತು ವಿಡಿಯೊ, ಪ್ರೊಜೆಕ್ಟರ್‌ ಮೂಲಕ ವಿದ್ಯಾರ್ಥಿಗಳಿಗೆ ಸರಳವಾಗಿ ಬೋಧಿಸುತ್ತಿದ್ದಾರೆ. ಪ್ರತಿ ಪಾಠಕ್ಕೂ ಘಟಕ ಪರೀಕ್ಷೆ, ಆ ದಿನವೇ ಮೌಲ್ಯಮಾಪನ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿದ್ದಾರೆ. 2–3 ಅಂಕದ ಪ್ರಶ್ನೆಗಳು ಹಾಗೂ ದೀರ್ಘ ಉತ್ತರಗಳನ್ನು ಬರೆಯುವುದನ್ನು ಅಭ್ಯಾಸ ಮಾಡಿಸುತ್ತಿದ್ದಾರೆ. ಭಾರತದ ನಕ್ಷೆಯಲ್ಲಿ ರಾಜಧಾನಿಗಳು, ಪ್ರಮುಖ ಬಂದರುಗಳು, ಕೈಗಾರಿಕಾ ಪ್ರದೇಶಗಳನ್ನು ಗುರುತಿಸುವುದನ್ನು ಕಲಿಸುತ್ತಿದ್ದಾರೆ.

ದಿನಕ್ಕೊಂದು ಲೆಕ್ಕ: ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳೂ ಕನಿಷ್ಠ ಅಂಕ ಪಡೆಯಲು ಯೋಜನೆ ರೂಪಿಸಿದ್ದಾರೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಸಾಸ್ವೆಹಳ್ಳಿ ಕೆಪಿಎಸ್‌ ಶಾಲೆಯ ಗಣಿತ ಶಿಕ್ಷಕ ಎಂ.ಎಚ್‌. ಸಂತೋಷ್‌. 1,2,3 ಅಂಕಗಳ ಮಾದರಿ ಪ್ರಶ್ನೆಗಳನ್ನು ಸಿದ್ಧಪಡಿಸಿದ್ದಾರೆ. ಅದಕ್ಕೆ ‘ಯಶಸ್ಸಿನ ಮೆಟ್ಟಿಲು’ ಎಂದು ಹೆಸರಿಸಲಾಗಿದ್ದು, ನಿತ್ಯವೂ ಒಂದೊಂದು ಲೆಕ್ಕ ಮಾಡಿ ತರುವಂತೆ ಸೂಚಿಸಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರತ್ಯೇಕ ಗುಂಪು ರಚಿಸಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಮನೆಯಲ್ಲೂ ವೇಳಾಪಟ್ಟಿ ಅನುಸಾರ ಓದಿಸಲು ಸೂಚಿಸಿದ್ದು, ನಿತ್ಯ ಬೆಳಿಗ್ಗೆ 5 ಗಂಟೆಗೆ ಎದ್ದು ಓದಲು ಕೂರುವ ಹಾಗೂ ರಾತ್ರಿ 11.30ಕ್ಕೆ ಮಲಗುವ ಮುನ್ನ ತಮ್ಮ ಮೊಬೈಲ್‌ಗೆ ಮಿಸ್‌ ಕಾಲ್‌ ಕೊಡುವಂತೆ ತಿಳಿಸಿದ್ದಾರೆ. ಈ ವೇಳೆಯಲ್ಲಿ ಮಕ್ಕಳು ಓದುತ್ತಿದ್ದಾರೋ, ಇಲ್ಲವೋ ಎಂಬ ಬಗ್ಗೆ ನಿಗಾ ವಹಿಸುವಂತೆ ಪಾಲಕರಿಗೆ ತಿಳಿಸಿದ್ದಾರೆ.

ಪ್ರಯೋಗಗಳಿಗೆ ಒತ್ತು: ಜಗಳೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಒಟ್ಟು 190 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದು, ಶಿಕ್ಷಕ ಮಂಜುನಾಥ್‌ ಸಾಹುಕಾರ್‌ ಅವರು ವಿಜ್ಞಾನ ಬೋಧನೆಯಲ್ಲಿ ಪ್ರಯೋಗಗಳಿಗೆ ಒತ್ತು ನೀಡಿದ್ದಾರೆ. ಶಾಲೆಯಲ್ಲಿ ‘ಅಟಲ್‌ ಟಿಂಕರಿಂಗ್‌ ಪ್ರಯೋಗಾಲಯ’ಗಳಿದ್ದು, ಅವುಗಳ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾಸಾಯನಿಕ ಕ್ರಿಯೆಗಳನ್ನು ಪ್ರಯೋಗಗಳ ಮೂಲಕ ಹೇಳಿ ಕೊಟ್ಟಾಗ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಲ್ಲಿ ಆಸಕ್ತಿ ಮೂಡುತ್ತದೆ. ಪ್ರತಿಭಾವಂತ ವಿದ್ಯಾರ್ಥಿಗಳೂ ವಿಷಯದಲ್ಲಿ ಪಕ್ವಗೊಳ್ಳುತ್ತಾರೆ ಎನ್ನುತ್ತಾರೆ ಅವರು.

ಪ್ರಮೇಯ, ಸೂತ್ರ, ‘ಕನಿಷ್ಠ’ ಕೈಪಿಡಿ: ಗಣಿತ ಪರೀಕ್ಷೆಯಲ್ಲಿ ಸುಲಭದಲ್ಲಿ ಉತ್ತೀರ್ಣರಾಗಲು ಪ್ರತಿ ಅಧ್ಯಾಯಗಳಿಂದ ಆಯ್ದ 150 ಪ್ರಶ್ನೆಗಳ ‘ಕನಿಷ್ಠ’ ಕೈಪಿಡಿ ತಯಾರಿಸಿ, ವಿದ್ಯಾರ್ಥಿಗಳಿಗೆ ತಿಳಿಸುವ ಮೂಲಕ ಗಮನ ಸೆಳೆದಿದ್ದಾರೆ ಜಗಳೂರು ತಾಲ್ಲೂಕಿನ ಗುತ್ತಿದುರ್ಗ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕ ಜ್ಯೋತಿಕುಮಾರ್‌.

ಈ ಶಾಲೆಗೆ ವರ್ಗಾವಣೆಯಾಗಿ ಬಂದಾಗ ವಿದ್ಯಾರ್ಥಿಗಳ ಕಲಿಕಾಮಟ್ಟ ಕಂಡು ಬೇಸರವಾಗಿತ್ತು. ‘ಗಣಿತ ಕಬ್ಬಿಣದ ಕಡಲೆ’ ಎಂಬ ಭಾವನೆ ಇದೆ. ವಿದ್ಯಾರ್ಥಿಗಳ ಕಲಿಕೆಯನ್ನು ಸರಳಗೊಳಿಸಲು ಹಲವು ವಿಧಾನಗಳನ್ನು ಕಂಡುಕೊಳ್ಳಲಾಯಿತು. 6 ಪ್ರಮೇಯಗಳಲ್ಲಿ 2 ಪ್ರಮೇಯಗಳು ಪರೀಕ್ಷೆಗೆ ಬರುವುದು ಖಚಿತವಿದ್ದು, ಇವನ್ನು ಕಲಿತರೆ 7 ಅಂಕಗಳು ಗ್ಯಾರಂಟಿ. ಈ ಕುರಿತು ಹತ್ತು ಪುಟಗಳ ಪುಸ್ತಕ ತಯಾರಿಸಲಾಗಿದೆ. ಲೆಕ್ಕಗಳನ್ನು ಬಿಡಿಸಲು ಸೂತ್ರಗಳನ್ನು ಕಲಿಯುವುದು ಅನಿವಾರ್ಯ. ಸೂತ್ರಗಳ ಕಲಿಕೆಗೆ 13 ಪುಟಗಳ ಪುಸ್ತಕ ಸಿದ್ಧಪಡಿಸಲಾಗಿದೆ. ‘ದಿನಕ್ಕೊಂದು ಲೆಕ್ಕ, ಆಗುವುದು ಪಕ್ಕಾ’ ಪರಿಕಲ್ಪನೆ ಅಡಿ ‘ಕನಿಷ್ಠ’ ಪುಸ್ತಕವನ್ನು ನೀಡಿದ್ದು, ವಿದ್ಯಾರ್ಥಿಗಳು ನಿತ್ಯ ಅಭ್ಯಾಸ ಮಾಡುತ್ತಿದ್ದಾರೆ. ನಿರಾತಂಕವಾಗಿ ಪರೀಕ್ಷೆ ಎದುರಿಸುವ ವಿಶ್ವಾಸ ಅವರಲ್ಲಿ ಮೂಡಿದೆ’ ಎಂದು ಜ್ಯೋತಿಕುಮಾರ್‌  ತಿಳಿಸಿದರು.

ದಾವಣಗೆರೆ ತಾಲ್ಲೂಕಿನ ಎಚ್‌.ಬಸಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಶ್ರೀಕಾಂತ್‌ ಅವರು ವಿದ್ಯಾರ್ಥಿಗಳಿಗೆ ಘಟಕ ಪರೀಕ್ಷೆ ನಡೆಸುತ್ತಿರುವುದು
ದಾವಣಗೆರೆಯಲ್ಲಿ ಪ್ರೇರಣಾ ಶಿಬಿರದಲ್ಲಿ ಪಾಲ್ಗೊಂಡಿದ್ದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳು
ದಾವಣಗೆರೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಶಿಕ್ಷಕರು
ಸಂತೇಬೆನ್ನೂರು ಸಮೀಪದ ಕೆರೆಬಿಳಚಿ ಗ್ರಾಮದ ಸರ್ಕಾರಿ ಉರ್ದು ಪ್ರೌಢಶಾಲಾ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗಣಿತ ಪ್ರಯೋಗಾಲಯದಲ್ಲಿ ವಿಶೇಷ ತರಗತಿ ನೀಡುತ್ತಿರುವ ಶಿಕ್ಷಕ ಸುಹೇಬ್ ಬೇಗ್
ಜಿ. ಕೊಟ್ರೇಶ್‌
ಸುರೇಶ್‌ ಇಟ್ನಾಳ್‌
ಎಸ್‌.ಗೀತಾ
ಎಲ್.ಜಯಪ್ಪ
ವೈಷ್ಣವಿ ಐ.
ಎಂ. ಹನುಮಂತಪ್ಪ 
ಹರಿಹರದ ತಾಲ್ಲೂಕಿನ ಗುತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ರಂಗೋಲಿಯಲ್ಲಿ ರಚಿಸಿದ ವಿಜ್ಞಾನದ ಚಿತ್ರ

ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಗುಣಾತ್ಮಕ ಬದಲಾವಣೆ ತರಲು ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ವಿಷನ್‌–5 ಗುರಿ ಸಾಧಿಸುವ ವಿಶ್ವಾಸ ಇದೆ.

-ಸುರೇಶ್ ಇಟ್ನಾಳ್‌, ಜಿಲ್ಲಾ ಪಂಚಾಯಿತಿ ಸಿಇಒ

ಕಾರ್ಯಾಗಾರಗಳಲ್ಲಿ ಶಿಕ್ಷಕರು ಅನುಸರಿಸುತ್ತಿರುವ ಕಲಿಕಾ ವಿಧಾನಗಳ ಕುರಿತ ಅನುಭವ ಹಂಚಿಕೆ ಹಲವರಿಗೆ ಪ್ರೇರಣೆಯಾಗಿದೆ. ವಿದ್ಯಾರ್ಥಿಗಳ ಕಲಿಕೆಯನ್ನು ಸರಳಗೊಳಿಸಿ ಫಲಿತಾಂಶ ಹೆಚ್ಚಾಗುವ ನಿರೀಕ್ಷೆ ಇದೆ.

-ಎಸ್‌. ಗೀತಾ, ಉಪನಿರ್ದೇಶಕರು (ಅಭಿವೃದ್ಧಿ) ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ

ವಿಷನ್-5 ಯಶಸ್ಸಿಗೆ ತಾಲ್ಲೂಕಿನ ಹತ್ತು ಕೇಂದ್ರಗಳಲ್ಲಿ ಬರುವ ವಾರದಿಂದ ಪರೀಕ್ಷಾ ಹಬ್ಬ ಆಚರಿಸಲಾಗುವುದು. ಮಕ್ಕಳ ಓದಿನ ಬಗ್ಗೆ ನಿಗಾ ವಹಿಸಲು ಮುಖ್ಯಶಿಕ್ಷಕರ ಮೂಲಕ ತಾಯಿಂದರಿಗೆ ಪತ್ರ ಅಭಿಯಾನ ರೂಪಿಸಲಾಗಿದೆ.

-ಎಲ್. ಜಯಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಗಿರಿ

ತಾಲ್ಲೂಕಿನ ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರ ಸಭೆ ಸಮಾಲೋಚನೆ ಸಭೆ ನಡೆಸುತ್ತಿದ್ದೇವೆ. ಜಿಲ್ಲೆ ಹಾಗೂ ರಾಜ್ಯಮಟ್ಟದ ಸಂಪನ್ಮೂಲ ಶಿಕ್ಷಕರಿಂದ ಉಪನ್ಯಾಸಗಳನ್ನು ನಡೆಸಲಾಗುತ್ತಿದೆ. 

- ಎಂ. ಹನುಮಂತಪ್ಪ, ಬಿಇಒ ಹರಿಹರ ತಾಲ್ಲೂಕು

ನಮ್ಮ ಶಾಲೆಯ ಶಿಕ್ಷಕರು ತಯಾರಿಸಿರುವ ಗಣಿತ ವಿಷಯದ ಪಾಠೋಪಕರಣಗಳು ದಾರಿ ದೀಪವಾಗಿವೆ.ಇವುಗಳನ್ನು ಕೊಠಡಿಗಳ ಗೋಡೆಗೆ ಅಂಟಿಸಿದ್ದು ಪ್ರತಿ ದಿನ ಮನನ ಮಾಡುತ್ತಿದ್ದೇನೆ.

ವೈಷ್ಣವಿ ಐ., 10ನೇ ತರಗತಿ ವಿದ್ಯಾರ್ಥಿನಿ ಸರ್ಕಾರಿ ಪ್ರೌಢಶಾಲೆ ಗುತ್ತಿದುರ್ಗ

ಪ್ರತಿಭಾನ್ವಿತರಿಗಾಗಿ ವಾಟ್ಸ್‌ಆ್ಯಪ್‌ ಗ್ರೂಪ್‌

ಇದುವರೆಗೆ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳ ಕಡೆಗಷ್ಟೇ ಗಮನ ಹರಿಸಲಾಗುತ್ತಿತ್ತು. ಆದರೆ ಪ್ರಸಕ್ತ ವರ್ಷ ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಇಟ್ನಾಳ್‌ ಅವರ ಮಾರ್ಗದರ್ಶನದ ಮೇರೆಗೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 9 ಹಾಗೂ 10ನೇ ತರಗತಿಯಲ್ಲಿ ಓದುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಾಲ್ಲೂಕು ಹಂತದಲ್ಲಿ ಪ್ರೇರಣಾ ಶಿಬಿರ ಹಮ್ಮಿಕೊಂಡು ಓದುವ ಕೌಶಲ ಧ್ಯಾನ ಮುಂತಾದ ವಿಷಯಗಳ ಬಗ್ಗೆ ತಿಳಿವಳಿಕೆ ನೀಡಲಾಗಿದೆ. ಈ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿದ್ದು ವಿಷಯವಾರು ಸಂಪನ್ಮೂಲ ಶಿಕ್ಷಕರನ್ನು ಸೇರಿಸಲಾಗಿದೆ. ಪಠ್ಯಗಳ ಕುರಿತ ಅನುಮಾನಗಳು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದು ಸಮಾಜ ವಿಜ್ಞಾನ ವಿಷಯ ಪರಿವೀಕ್ಷರರಾದ ಶಶಿಕಲಾ ಎಂ. ಹಾಗೂ ಗಣಿತ ವಿಷಯ ಪರಿವೀಕ್ಷಕರಾದ ಸುರೇಶಪ್ಪ ಎಂ. ತಿಳಿಸಿದರು.

ಪ್ರಶ್ನೋತ್ತರದ ಪ್ರಾಯೋಗಿಕ ತರಬೇತಿ

ಕೆ.ಎಸ್. ವೀರೇಶ್ ಪ್ರಸಾದ್ ಸಂತೇಬೆನ್ನೂರು: ಸಮೀಪದ ಕೆರೆಬಿಳಚಿ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಗರಿಷ್ಠ ಸಾಧನೆಗೆ ವಿನೂತನ ಯೋಜನೆ ಹಾಕಿಕೊಳ್ಳಲಾಗಿದೆ. ಅರ್ಧವಾರ್ಷಿಕ ಪರೀಕ್ಷೆಯಲ್ಲಿ 6 ವಿಷಯಗಳಲ್ಲಿ ತೇರ್ಗಡೆ ಹೊಂದಿದವರು ‘ಎ’ ಗುಂಪು ಮೂರು ವಿಷಯಗಳಲ್ಲಿ ತೇರ್ಗಡೆ ಹೊಂದಿದವರು ‘ಬಿ’ ಗುಂಪು ಹಾಗೂ ಮೂರಕ್ಕಿಂತ ಹೆಚ್ಚು ವಿಷಯಗಳಲ್ಲಿ ಅನುತ್ತೀರ್ಣರಾದವರಿಗೆ ‘ಸಿ’ ಗುಂಪು ಎಂದು ವಿಭಜಿಸಲಾಗಿದೆ. ಪ್ರತಿ ಗುಂಪಿಗೆ ಶಿಕ್ಷಕರು ಶಾಲಾವಧಿ ಹೊರತಾಗಿ ವಿಶೇಷ ತರಗತಿಗಳನ್ನು ನಡೆಸುತ್ತಿದ್ದಾರೆ. ಬೆಳಿಗ್ಗೆ 8.30ರಿಂದ ರಾತ್ರಿ 8ರವರೆಗೂ ಕಲಿಕಾಭ್ಯಾಸ ಸಾಗಿದೆ. ಗಣಿತ ವಿಜ್ಞಾನ ಇಂಗ್ಲಿಷ್ ಸಮಾಜ ವಿಜ್ಞಾನದ ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸುವ ವಿಧಾನದ ಬಗ್ಗೆ ಪ್ರಾಯೋಗಿಕವಾಗಿ ತರಬೇತಿ ನೀಡಲಾಗುತ್ತಿದೆ ಎಂದು ಶಿಕ್ಷಕ ಸುಹೇಬ್ ಬೇಗ್ ತಿಳಿಸಿದರು. ತಾವರೆಕೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಲವು ಸೃಜನಾತ್ಮಕ ಕಾರ್ಯಕ್ರಮ ರೂಪಿಸಲಾಗಿದೆ. ಡಿಜಿಟಲ್ ಮಾಧ್ಯಮದ ಮೂಲಕ ಪಠ್ಯಾಧಾರಿತ ಪಿಪಿಟಿ ಸಿದ್ಧಗೊಳಿಸಿ ಬೋಧಿಸುತ್ತಿದ್ದಾರೆ. ವಿದ್ಯಾರ್ಥಿಗಳ ಗುಂಪು ರಚಿಸಿದ್ದು ಗುಂಪಿನ ನಾಯಕ ಸದಸ್ಯರ ಕಲಿಕಾ ಮಟ್ಟ ವೀಕ್ಷಿಸಬೇಕು. ಪಠ್ಯ ಪುಸ್ತಕ ಓದಿಸುವುದು. ಘಟಕ ಪರೀಕ್ಷೆಗಳು ಮೌಲ್ಯಮಾಪನ ನೀಲ ನಕ್ಷೆ ಹಾಗೂ ವಾರ್ಷಿಕ ಪರೀಕ್ಷೆ ಆಧಾರಿತ ಪ್ರಶ್ನೆ ಪತ್ರಿಕೆ ರಚಿಸುವ ಮೂಲಕ ಹೆಚ್ಚು ಅಂಕಗಳಿಸುವ ಪ್ರಯತ್ನ ಸಾಗಿದೆ. ವಿದ್ಯಾರ್ಥಿಗಳ ವೈಯಕ್ತಿಕ ಸಂದರ್ಶನ ಮಾಡುವುದು ತಂಡಗಳನ್ನು ರಚಿಸಿ ಪ್ರತಿ ವಾರ ರಸಪ್ರಶ್ನೆ ಕಾರ್ಯಕ್ರಮ ನಡೆಸುತ್ತಿದ್ದಾರೆ. ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಕರು ಸಾಂಘಿಕವಾಗ ಶ್ರಮಿಸುತ್ತಿದ್ದಾರೆ ಎನ್ನುತ್ತಾರೆ ಮುಖ್ಯಶಿಕ್ಷಕ ಜಿ.ಪಿ.ಲಿಂಗೇಶ್ ಮೂರ್ತಿ.

ರಂಗೋಲಿಯಲ್ಲಿ ವಿಜ್ಞಾನ ಚಿತ್ರ ಕಲಿಕೆ

-ಇನಾಯತ್‌ ಉಲ್ಲಾ ಟಿ.

ಹರಿಹರ: ತಾಲ್ಲೂಕಿನಲ್ಲಿರುವ ಶಿಕ್ಷಣ ಇಲಾಖೆ ಅದಿಕಾರಿಗಳು ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಟೊಂಕ ಕಟ್ಟಿ ಶ್ರಮಿಸುತ್ತಿದ್ದಾರೆ. ಕ್ಲಸ್ಟರ್ ಮಟ್ಟದಲ್ಲಿ ನಿಧಾನ ಕಲಿಕೆ ವಿದ್ಯಾರ್ಥಿಗಳಿಗೆ ತಜ್ಞ ಶಿಕ್ಷಕರಿಂದ ವಿಶೇಷ ತರಗತಿ ವ್ಯವಸ್ಥೆ ಮಾಡಲಾಗಿದೆ. ವಿಜ್ಞಾನ ಚಿತ್ರಗಳನ್ನು ರಂಗೋಲಿ ಮೂಲಕ ಬಿಡಿಸುವುದು ವಿದ್ಯಾರ್ಥಿಗಳು ಕೈಮೇಲೆ ಮೆಹಂದಿ ಮೂಲಕ ಆ ಚಿತ್ರಗಳನ್ನು ಬಿಡಿಸಿಕೊಳ್ಳುವುದನ್ನು ಹೇಳಿಕೊಡುತ್ತಿದ್ದೇವೆ. ಈ ಮೂಲಕ ವಿಜ್ಞಾನ ವಿಷಯ ಪರೀಕ್ಷೆಯಲ್ಲಿ ಚಿತ್ರ ಬಿಡಿಸಲು ಇರುವ 12 ಅಂಕ ಪಡೆಯಲು ಅನುಕೂಲವಾಗುತ್ತದೆ ಎಂದು ಗುತ್ತೂರು ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಶ್ರೀಧರ್ ಮಯ್ಯ ತಿಳಿಸಿದರು. ಜಾಣ ಸಾಧಾರಣ ಹಾಗೂ ನಿಧಾನ ಕಲಿಕೆ ಹೀಗೆ ಶಾಲೆಯ ವಿದ್ಯಾರ್ಥಿಗಳನ್ನು ಮೂರು ವಿಧವಾಗಿ ಗುರುತಿಸಿ ಅವರವರ ಮಟ್ಟದಲ್ಲೇ ಪಾಠ ನಡೆಸಲಾಗುತ್ತಿದೆ. ವಿವಿಧ ವಿಷಯಗಳ ಕುರಿತು ರಸಪ್ರಶ್ನೆ ಪ್ರಬಂಧ ಚರ್ಚೆ ಇಂಗ್ಲಿಷ್‌ ಕನ್ನಡ ಕಾಗುಣಿತ ತಿಳಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಮುಖ್ಯಶಿಕ್ಷಕ ಟಿ. ಸಿದ್ದಪ್ಪ ವಿವರಿಸಿದರು. ಒಬ್ಬೊಬ್ಬ ಶಿಕ್ಷಕರಿಗೆ ಇಂತಿಷ್ಟು ಎಂಬಂತೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ದತ್ತು ನೀಡಲಾಗಿದೆ. ಅವರ ಪಾಠ ಕಲಿಕೆ–ಗ್ರಹಿಕೆ ಪಾಲಕರೊಂದಿಗೆ ಸಂವಹನ ಬೆಳಿಗ್ಗೆ ವಿದ್ಯಾರ್ಥಿಗಳ ಮೊಬೈಲ್‌ಗೆ ಮಿಸ್ಡ್ ಕಾಲ್ ನೀಡಿ ಓದಲು ಸಿದ್ಧಗೊಳಿಸುವುದು ಹೀಗೆ ವಿವಿಧ ರೀತಿಯಲ್ಲಿ ಗಮನ ಹರಿಸಲಾಗುತ್ತಿದೆ ಎಂದು ಭಾನುವಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯ ವಿಜ್ಞಾನ ಶಿಕ್ಷಕ ಮಂಜುನಾಥ ಎಂ.ಜಿ. ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.