ADVERTISEMENT

ಮಾಯಕೊಂಡ: ದೇಶದ ರಕ್ಷಣೆಗೆ ಮೋದಿ ಅನಿವಾರ್ಯ: ಜಿ.ಎಂ.ಸಿದ್ದೇಶ್ವರ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2024, 6:13 IST
Last Updated 20 ಮಾರ್ಚ್ 2024, 6:13 IST
ಮಾಯಕೊಂಡ ಸಮೀಪದ ಬಾಡ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಸಂಸದ ಜಿ.ಎಂ. ಸಿದ್ದೇಶ್ವರ ಉದ್ಘಾಟಿಸಿದರು, ಮುಖಂಡ ವಿ.ಸೋಮಣ್ಣ, ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಶಾಸಕ ಬಿ.ಪಿ. ಹರೀಶ್ ಇತರರು ಇದ್ದರು.
ಮಾಯಕೊಂಡ ಸಮೀಪದ ಬಾಡ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಸಂಸದ ಜಿ.ಎಂ. ಸಿದ್ದೇಶ್ವರ ಉದ್ಘಾಟಿಸಿದರು, ಮುಖಂಡ ವಿ.ಸೋಮಣ್ಣ, ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಶಾಸಕ ಬಿ.ಪಿ. ಹರೀಶ್ ಇತರರು ಇದ್ದರು.   

‌‌‌ಮಾಯಕೊಂಡ: ‘ನನಗೆ ಅತಿ ಹೆಚ್ಚು ಮತ ನೀಡಿ ಆಶೀರ್ವಾದ ಮಾಡುತ್ತಿರುವ ಕ್ಷೇತ್ರ ಮಾಯಕೊಂಡ. ಈ ಬಾರಿಯೂ ಹೆಚ್ಚು ಮತಗಳನ್ನು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರಿಗೆ ನೀಡಬೇಕು’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಮನವಿ ಮಾಡಿದರು.

ಸಮೀಪದ ಬಾಡ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ರಾಮ ಮಂದಿರ ನಮ್ಮೆಲ್ಲರ ನಂಬಿಕೆ, ನಮ್ಮ ಭಾವನೆ. ಈ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅನಿವಾರ್ಯ. ಪಾಕಿಸ್ತಾನ ಜಿಂದಾಬಾದ್ ಎಂದು ವಿಧಾನಸಭೆಯಲ್ಲಿ ಕೂಗುವವರಿದ್ದಾಗ ದೇಶದ ಸ್ಥಿತಿ ಏನು ಎಂದು ಚಿಂತಿಸಬೇಕಿದೆ. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ನರೇಂದ್ರ ಮೋದಿ ಮತ್ತೊಮ್ಮೆ ಬೇಕು’ ಎಂದರು.

ತುಮಕೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಮಾತನಾಡಿ, ‘ದೇಶಕ್ಕೆ ಸದೃಢ ನಾಯಕತ್ವ ಬೇಕು. ನಮ್ಮ ಮುಂದಿನ ಪೀಳಿಗೆಗೆ ಉತ್ತಮ ದೇಶ ಉಳಿಸಬೇಕು, ದೇಶದ ಸಂಸ್ಕೃತಿ, ಇತಿಹಾಸ ಉಳಿಸಲು ನರೇಂದ್ರ ಮೋದಿ ಅನಿವಾರ್ಯ. ಕೋವಿಡ್ ವೇಳೆ ಆರ್ಥಿಕ ಸದೃಢ ದೇಶಗಳೇ ತತ್ತರಿಸಿದ್ದ ವೇಳೆ ಭಾರತವನ್ನು ಮುನ್ನಡೆಸಿದವರು ನರೇಂದ್ರ ಮೋದಿ. ದೇಶದ ಭದ್ರತೆಗಾಗಿ ಮತ ಚಲಾಯಿಸಬೇಕು’ ಎಂದು ತಿಳಿಸಿದರು.

ADVERTISEMENT

‘ಮಹಿಳೆಯರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ನನಗೆ ಟಿಕೆಟ್ ನೀಡಿದ್ದಾರೆ. ಈ ಅವಕಾಶವನ್ನು ಬಳಸಿಕೊಂಡು ಸೇವೆ ಮಾಡುವ ಮೂಲಕ ನಿಮ್ಮ ಋಣ ತೀರಿಸುತ್ತೇನೆ. ನರೇಂದ್ರ ಮೋದಿ ಜಾರಿಗೆ ತರದ ಯೋಜನೆಗಳಿಲ್ಲ. ದೇಶದ ಅಭಿವೃದ್ದಿಗೆ ಬಿಜೆಪಿಗೆ ಮತ ನೀಡಿ ನನ್ನ ಗೆಲ್ಲಿಸಿದರೆ ಅದು ಮೋದಿ ಗೆಲುವು’ ಎಂದು ದಾವಣಗೆರೆ ಬಿಜೆಪಿ ಲೋಕಸಭಾ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಕೋರಿದರು.

'ವಿಶ್ವವೇ ಬೆರಗಿಂದ ನೋಡುತ್ತಿರುವುದು ಭಾರತದ ಚುನಾವಣೆ. ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಅಭಿವೃದ್ದಿ ಕಾರ್ಯ ಮಾಡಿದ್ದು ಬಿಟ್ಟರೆ, ಕಾಂಗ್ರೆಸ್‌ ಸರ್ಕಾರದಲ್ಲಿ ಅಭಿವೃದ್ದಿ ಕನಸಾಗಿದೆ. ನಾನು ಹಿಂದೆ ಶಾಸಕನಾಗಿದ್ದಾಗ ಗಂಗಾ ಕಲ್ಯಾಣ ಯೋಜನೆಯಡಿ ಹೆಚ್ಚಿನ ಜನರಿಗೆ ಕೊಳವೆ ಬಾವಿಗಳಿಗೆ ಹಣ ಮಂಜೂರು ಮಾಡಿಸಿದ್ದೆ. ಈಗ ಒಂದೂ ಇಲ್ಲದಂತಾಗಿದೆ. ಬಿಜೆಪಿ ಅಭಿವೃದ್ದಿ ಕಾರ್ಯಗಳನ್ನು ಜನರಿಗೆ ತಿಳಿಸಿ ಗಾಯತ್ರಿ ಅವರನ್ನ ಗೆಲ್ಲಿಸಿ’ ಎಂದು ಹರಿಹರ ಶಾಸಕ ಬಿ.ಪಿ. ಹರೀಶ್ ತಿಳಿಸಿದರು.

‘ಬಿಜೆಪಿ ಕಾರ್ಯಕರ್ತರು ಪ್ರಬುದ್ದರಿದ್ದಾರೆ. ಅವರಿಂದ ಪಕ್ಷ ಸಮೃದ್ದವಾಗಿದೆ. ಬಿಜೆಪಿ ಗೆಲುವಿಗೆ‌ ಒಗ್ಗಟ್ಟಿನಿಂದ ಶ್ರಮಿಸೋಣ’ ಎಂದು ಮಾಜಿ ಶಾಸಕ ಪ್ರೊ. ಲಿಂಗಣ್ಣ ಕರೆ ನೀಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ರಾಜಶೇಖರ್, ಮಾಜಿ ಅಧ್ಯಕ್ಷ ವೀರೇಶ್ ಹನಗವಾಡಿ, ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ, ಜಿ.ಎಸ್. ಶ್ಯಾಮ್, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ, ಅನಿಲ್ ಕುಮಾರ್ ನಾಯ್ಕ, ಮಂಜಾನಾಯ್ಕ, ಬಿ.ಎಸ್. ರಮೇಶ್, ಹನುಮಂತನಾಯ್ಕ, ಮಂಡಲ ಅಧ್ಯಕ್ಷ ಶಾಗಲೆ ದೇವೇಂದ್ರಪ್ಪ ಮಾತನಾಡಿದರು.

ಅಣಬೇರು ಜೀವನಮೂರ್ತಿ, ಗಂಗನಕಟ್ಟೆ ಸಂಗಣ್ಣ, ಧನಂಜಯ ಕಡಲೇಬಾಳು, ಅಣಜಿ ಗುಡ್ಡೇಶ್, ಕಂದಗಲ್ಲು ಪರಮೇಶ್ವರಪ್ಪ, ಎನ್. ಜಿ. ನಟರಾಜ, ಆರ್. ಜಿ. ಹಳ್ಳಿ ಮರುಳಸಿದ್ದಪ್ಪ, ಪಾಲಾಕ್ಷಪ್ಪ, ಕವಿತಾ, ಕರಿಲಕ್ಕೇನಹಳ್ಳಿ ಓಂಕಾರಪ್ಪ, ಹೆಬ್ಬಾಳು ಮಹೇಂದ್ರ, ಮಾಯಕೊಂಡ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.