ADVERTISEMENT

ನಾರಾಯಣ ಗುರು ಪರಂಪರೆ ಮುಂದುವರಿಸೋಣ: ವಿಖ್ಯಾತಾನಂದ ಸ್ವಾಮೀಜಿ

ಸೋಲೂರಿನ ನಾರಾಯಣಗುರು ಮಹಾಸಂಸ್ಥಾನದ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2024, 10:18 IST
Last Updated 18 ಆಗಸ್ಟ್ 2024, 10:18 IST
   

ದಾವಣಗೆರೆ: ಶಿಕ್ಷಣ, ಸ್ವಚ್ಛತೆ, ದೇಗುಲ ಸ್ಥಾಪನೆ ವಿಚಾರದಲ್ಲಿ ನಾರಾಯಣ ಗುರು ಸಿದ್ಧಾಂತಕ್ಕೆ ವಿರುದ್ಧವಾದ ಜೀವನ ಕ್ರಮವನ್ನು ಮೈಗೂಡಿಸಿಕೊಂಡಿದ್ದೇವೆ. ಈ ತಪ್ಪು ತಿದ್ದಿಕೊಂಡು ನಾರಾಯಣ ಗುರು ಪರಂಪರೆಯನ್ನು ಮುಂದುವರೆಸಿಕೊಂಡು ಹೋಗೋಣ ಎಂದು ಸೋಲೂರಿನ ನಾರಾಯಣಗುರು ಮಹಾಸಂಸ್ಥಾನದ ವಿಖ್ಯಾತಾನಂದ ಸ್ವಾಮೀಜಿ ಸಲಹೆ ನೀಡಿದರು.

ಇಲ್ಲಿನ ವಿನೋಬನಗರದ ಪಿ.ಬಿ ರಸ್ತೆಯಲ್ಲಿ ಜಿಲ್ಲಾ ಆರ್ಯ ಈಡಿಗರ ಸಂಘ ನೂತನವಾಗಿ ನಿರ್ಮಿಸಿದ ಬಾಲಕರ ವಿದ್ಯಾರ್ಥಿ ನಿಲಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪೂಜೆ, ಧಾರ್ಮಿಕ ಆಚರಣೆಗಳು ನಮ್ಮ ಸಂಸ್ಕೃತಿಯ ಭಾಗ. ಇವನ್ನು ಎಲ್ಲರೂ ಪಾಲಿಸುವ ಅಗತ್ಯ ಇದೆ. ಆದರೆ, ಧಾರ್ಮಿಕ ಕೈಂಕರ್ಯಗಳಿಗೆ ಬದುಕು ಸೀಮಿತ ಆಗಬಾರದು. ಶಿಕ್ಷಣದ ಮೂಲಕ ಸಂಸ್ಕೃತಿಯ ಪಥವನ್ನು ಹಿಡಿಯಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಆಂಗ್ಲ ಮಾಧ್ಯಮ ಶಿಕ್ಷಣ ಪಡೆಯುವಂತೆ ನಾರಾಯಣ ಗುರು ಅವರು ಆಗಲೇ ಸಲಹೆ ನೀಡಿದ್ದರು. ಕೇರಳದಲ್ಲಿ ಇದು ಸಾಧ್ಯವಾಗಿದ್ದು, ಅಲ್ಲಿ ಶೈಕ್ಷಣಿಕವಾಗಿ ಸಮುದಾಯ ಮುಂದುವರಿದಿದೆ. ಕೇವಲ ನಾಲ್ವರು ಶ್ರೀಮಂತರಾದರೆ ಸಾಲದು. ಸಮುದಾಯವನ್ನು ಶೈಕ್ಷಣಿಕವಾಗಿ ಮೇಲೆತ್ತುವ ಕೆಲಸ ಕರ್ನಾಟಕದಲ್ಲಿಯೂ ಆಗಬೇಕು. ಆದರೆ, ಮಕ್ಕಳು ಅಂಕ ಗಳಿಸುವ ಯಂತ್ರಗಳಾಗಬಾರದು’ ಎಂದು ಅಭಿಪ್ರಾಯಪಟ್ಟರು.

ಜೆ.ಪಿ.ಫೌಂಡೇಶನ್ ಅಧ್ಯಕ್ಷ ಜೆ.ಪಿ.ಸುಧಾಕರ, ‘ಒಂದು ಕಾಲದಲ್ಲಿ ಸಮುದಾಯಕ್ಕೆ ಮದ್ಯ ಕುಲಕಸುಬಾಗಿತ್ತು. ಆಗ ಮಕ್ಕಳಿಗೆ ಶಿಕ್ಷಣ ನೀಡಲು ಸಾಧ್ಯವಾಗುತ್ತಿರಲಿಲ್ಲ. ಸಾರಾಯಿ ನಿಷೇಧವಾದ ಬಳಿಕ ಜನಾಂಗಕ್ಕೆ ಮುಖ್ಯವಾಗಿ ಬೇಕಾಗಿರುವುದು ಶಿಕ್ಷಣ ಮಾತ್ರ. ನಾರಾಯಣಗುರು ಅವರ ಆಶಯದಂತೆ ಎಲ್ಲರೂ ಶಿಕ್ಷಣ ಪಡೆಯಬೇಕು. ಬಡವರು ವಿದ್ಯೆಪಡೆದು ಏಳಿಗೆ ಹೊಂದಬೇಕು’ ಎಂದು ಹೇಳಿದರು.

‘ಸಮುದಾಯದ ಹಾಸ್ಟೆಲ್‌ನಲ್ಲಿ ವ್ಯಾಸಂಗ ಮಾಡಿದ ಅನೇಕರು ಉನ್ನತ ಹುದ್ದೆಗೆ ಏರಿದರೂ ನೆರವು ನೀಡಲು ಆಸಕ್ತಿ ತೋರುತ್ತಿಲ್ಲ. ಸಮುದಾಯದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ವಸತಿ ಹಾಗೂ ಊಟ ಅಗತ್ಯವಾಗಿ ಬೇಕಾಗುತ್ತದೆ. ಸಮುದಾಯದ ಏಳಿಗೆಗೆ ಎಲ್ಲರೂ ದಾನ ನೀಡುವ ಮನಸ್ಥಿತಿ ಬೆಳೆಸಿಕೊಳ್ಳಿ’ ಎಂದು ಸಲಹೆ ನೀಡಿದರು.

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ, ‘ರಾಜ್ಯದಲ್ಲಿ 79 ವರ್ಷಗಳ ಹಿಂದೆ ಆರ್ಯ ಈಡಿಗರ ಸಂಘ ಸ್ಥಾಪನೆಯಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ನೆರವಾಗಬೇಕು ಎಂಬ ಉದ್ದೇಶದಿಂದ ಹಾಸ್ಟೆಲ್ ಶುರು ಮಾಡಲಾಯಿತು. ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹಾಸ್ಟೆಲ್ ನೆರವಾಗಿದೆ’ ಎಂದರು.

ದಾವಣಗೆರೆ ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಚ್.ಶಂಕರ್, ‘ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ 1963ರಲ್ಲಿ ಊಟದ ಮನೆ ಶುರು ಮಾಡಲಾಯಿತು. ಅನೇಕರ ಸಹಕಾರದಿಂದ ಇದು ಹಾಸ್ಟೆಲ್ ಸ್ವರೂಪ ಪಡೆಯಿತು. ಸಂಘದ ವತಿಯಿಂದ 25 ವರ್ಷಗಳಿಂದ ಪ್ರತಿಭಾ ಪುರಸ್ಕಾರ ಮಾಡಲಾಗುತ್ತಿದೆ. ಆಲ್.ಎಲ್.ಜಾಲಪ್ಪ ಮತ್ತು ಜೆ.ಪಿ.ಫೌಂಡೇಶನ್ ವತಿಯಿಂದ ಇದು ಮುಂದುವರಿಯುತ್ತಿದೆ’ ಎಂದು ಹೇಳಿದರು.

ತೀರ್ಥಹಳ್ಳಿ ತಾಲ್ಲೂಕಿನ ಗರ್ತಿಕೆರೆಯ ನಾರಾಯಣ ಗುರು ಮಹಾಸಂಸ್ಥಾನದ ರೇಣುಕಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಜಿಲ್ಲಾ ಆರ್ಯ ಈಡಿಗರ ಸಂಘದ ಕಾರ್ಯದರ್ಶಿ ಎ.ನಾಗರಾಜ್, ಉಪಾಧ್ಯಕ್ಷ ಶಾಂತಾರಾಮ್, ಚಿತ್ರದುರ್ಗ ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಚ್. ಜೀವನ್, ಗರ್ತಿಕೆರೆ ಗುರುಪೀಠದ ಅಂಬರೀಶ್, ಮಹಿಳಾ ಘಟಕದ ಅಧ್ಯಕ್ಷ ಲಕ್ಷ್ಮಿ ತಿಮ್ಮಪ್ಪ, ರೇಣುಕಾಂಬಾ ಸಹಕಾರ ಸಂಘದ ಸುಮಾ ಭರಮಪ್ಪ ಇದ್ದರು.

ಈಡಿಗ ಸಮುದಾಯ ಜನಸಂಖ್ಯೆಯಲ್ಲಿ ರಾಜ್ಯದಲ್ಲಿ ಆರನೇ ಸ್ಥಾನದಲ್ಲಿದೆ. ಸಮುದಾಯದ ಏಳಿಗೆಗೆ ಸರ್ಕಾರದ ಮೇಲಷ್ಟೇ ಅವಲಂಬನೆ ಆಗುವುದು ಬೇಡ. ಎಲ್ಲರೂ ಕೈಜೋಡಿಸಿದರೆ ಸಮುದಾಯ ಇನ್ನಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ.
–ಪಿ.ಶಿವಕುಮಾರ್, ಉಪಾಧ್ಯಕ್ಷ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.