ADVERTISEMENT

ಹರಿಹರ: ಹೆಸರಿಗೆ ಮಾತ್ರ ಕ್ರೀಡಾಂಗಣ, ಉತ್ಸಾಹಕ್ಕೆ ಬೇಕು ಸೌಲಭ್ಯಗಳು

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 5:20 IST
Last Updated 2 ಜೂನ್ 2022, 5:20 IST
ಹರಿಹರದ ತಾಲ್ಲೂಕು ಕ್ರೀಡಾಂಗಣದ ವಿಹಂಗಮ ನೋಟ
ಹರಿಹರದ ತಾಲ್ಲೂಕು ಕ್ರೀಡಾಂಗಣದ ವಿಹಂಗಮ ನೋಟ   

ಹರಿಹರ: ಕ್ರೀಡೆ ಮನುಷ್ಯನ ಬದುಕಿನ ಅವಿಭಾಜ್ಯ ಅಂಗವೆಂದೇ ಪರಿಗಣಿಸಲಾಗಿದೆ. ಇದಕ್ಕಾಗಿ ರಾಜ್ಯ, ಕೇಂದ್ರ ಸರ್ಕಾರಗಳು ಕೋಟಿಗಟ್ಟಲೆ ಅನುದಾನವನ್ನು ಪ್ರತಿ ವರ್ಷ ಬಿಡುಗಡೆ ಮಾಡುತ್ತವೆ. ಆದರೆ, ಕ್ರೀಡೆಗಳಿಗೆ ವಾಸ್ತವವಾಗಿ ಸಿಗುತ್ತಿರುವ ಪ್ರೋತ್ಸಾಹ ನೋಡಿದರೆ ನಿರಾಶೆಯಾಗುತ್ತದೆ.

ಜಿಲ್ಲೆಯ 2ನೇ ದೊಡ್ಡ ನಗರವೆನಿಸಿದ ಹರಿಹರದ ಕ್ರೀಡಾ ವಿಷಯಕ್ಕೆ ಬಂದರೂ ಖುಷಿಯಾಗುವುದಿಲ್ಲ. ತಾಲ್ಲೂಕು ಕೇಂದ್ರದ ಕ್ರೀಡಾಂಗಣವೆಂದರೆ ಅದು ಹತ್ತಾರು ಬಗೆಯ ಕ್ರೀಡೆಗಳ, ಕ್ರೀಡಾಪಟುಗಳ ಸಾಧನೆಗೆ ವೇದಿಕೆಯಾಗಬೇಕು. ಕ್ರೀಡೆಗೆ ಕ್ರೀಡಾಂಗಣ ಮುಕುಟಮಣಿಯಾಗಿ ಹೊಳೆಯಬೇಕು. ಆದರೆ, ಇಲ್ಲಿನ ಕ್ರೀಡಾಂಗಣವು ಹತ್ತು, ಹಲವು ಕೊರತೆಗಳಿಂದ ನರಳುತ್ತಿವೆ. ಈಗಿನ ಕಾಲಮಾನಕ್ಕೆ ತಕ್ಕಂತೆ ಇದು ಸ್ಪರ್ಧಾತ್ಮಕವಾಗಿ ಹೊರಹೊಮ್ಮಿಲ್ಲ ಎಂಬ ಕೊರಗು ಕ್ರೀಡಾಪ್ರಿಯರದ್ದಾಗಿದೆ.

ನಗರದ ಕೇಂದ್ರ ಭಾಗದ ಗಾಂಧಿ ವೃತ್ತಕ್ಕೆ ಹೊಂದಿಕೊಂಡು ನಾಲ್ಕೂವರೆ ಎಕರೆ ಪ್ರದೇಶದಲ್ಲಿ ಈ ಕ್ರೀಡಾಂಗಣವಿದೆ. ಮಾರುಕಟ್ಟೆ ಪ್ರದೇಶವಾಗಿರುವುದರಿಂದ 40 ಮಳಿಗೆಗಳ ಉತ್ತಮ ಆದಾಯ ನೀಡುವ ವಾಣಿಜ್ಯ ಸಂಕೀರ್ಣವಿದೆ. ಈ ಕ್ರೀಡಾಂಗಣ ನಗರದ ನಾಲ್ಕೂ ಭಾಗದ ಕ್ರೀಡಾಪಟುಗಳು ಬಂದು ಹೋಗಲು ಅನುಕೂಲಕರ ಸ್ಥಳದಲ್ಲಿದೆ.

ADVERTISEMENT

200 ಮೀಟರ್ ಟ್ರ್ಯಾಕ್‌, ಜಿಮ್, 200 ಜನ ಸಾಮರ್ಥ್ಯದ ಪ್ರೇಕ್ಷಕರ ಗ್ಯಾಲರಿ, ಒಳಾಂಗಣ ಈಜುಕೊಳ, ವಾಲಿಬಾಲ್, ಬ್ಯಾಸ್ಕೆಟ್‌ಬಾಲ್‌, ಕೊಕ್ಕೊ, ಕಬಡ್ಡಿ, ಲಾಂಗ್ ಜಂಪ್, ಡಿಸ್ಕಸ್‌ ಥ್ರೋ ಅಂಕಣಗಳಿವೆ. ಅಲಿ ಎಂಬ ಕ್ರೀಡಾಪಟು ಸ್ಕೇಟಿಂಗ್‌, ಪ್ರಭಾಕರ ಎಂಬ ಕ್ರೀಡಾಪಟು ಟೇಕ್ವಾಂಡೊ ಕ್ರೀಡೆಯ ತರಬೇತಿಯನ್ನೂ ಇಲ್ಲಿಯೇ ನೀಡುತ್ತಿದ್ದು, 70ಕ್ಕೂ ಹೆಚ್ಚು ಮಕ್ಕಳು ನಿತ್ಯ ತರಬೇತಿ ಪಡೆಯಲು ಬರುತ್ತಾರೆ.

ಕೊರತೆಗಳು: ಜಿಮ್ ಕಟ್ಟಡ ದೊಡ್ಡದಾಗಬೇಕು ಹಾಗೂ ಉಪಕರಣಗಳು ಇನ್ನಷ್ಟು ಬೇಕು. ಮಳೆ ನೀರು ಹರಿದು ಹೋಗಲು ಒಳಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಬೇಕು. ಸಂಜೆಯ ನಂತರದ ತರಬೇತಿ ಪಡೆಯುವ ಕ್ರೀಡಾಪಟುಗಳಿಗೆ ಬೆಳಕಿನ ವ್ಯವಸ್ಥೆ ಆಗಬೇಕಿದೆ. ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕು. ಕುಡಿಯುವ ನೀರು ಹಾಗೂ ರಿಫ್ರೆಶ್‌ ಆಗಲು ಸುಸಜ್ಜಿಯ ವಾಶ್ ರೂಂ, ಈಜು, ಅಥ್ಲೀಟ್, ವಾಲಿಬಾಲ್, ಫುಟ್‌ಬಾಲ್‌ಗೆ ತರಬೆತುದಾರರ ಸೌಲಭ್ಯವನ್ನು ಕಲ್ಪಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.