ಬಸವಾಪಟ್ಟಣ: ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್ ಸಿಬ್ಬಂದಿ ಶುಕ್ರವಾರ ಭೇಟಿ ನೀಡಿ, ಈವರೆಗೆ ಗೃಹಲಕ್ಷ್ಮಿ ಯೋಜನೆಯಲ್ಲಿ ಹಣ ಬಾರದ ಮಹಿಳೆಯರ ಖಾತೆಗಳನ್ನು ಪರಿಶೀಲಿಸಿದರು.
ಖಾತೆಗಳಲ್ಲಿ ಇರುವ ಸಮಸ್ಯೆಗಳನ್ನು ಸರಿಪಡಿಸಿ ಮುಂದಿನ ತಿಂಗಳಿನಿಂದ ಮಾಸಿಕ ಹಣ ಪಾವತಿಗೆ ವ್ಯವಸ್ಥೆ ಮಾಡಿದರು.
ಜಿಲ್ಲೆಯಲ್ಲಿ ಈವರೆಗೆ 25ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿ, ಗೃಹಲಕ್ಷ್ಮಿ ಯೋಜನೆಯಲ್ಲಿ ಮಾಸಿಕ ಹಣ ಬಾರದ ಮಹಿಳೆಯರ ಖಾತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಂಚೆ ಇಲಾಖೆಯ ಮನೋಜ್‌ಕುಮಾರ್ ತಿಳಿಸಿದರು.
‘ಸಮಸ್ಯೆ ಎದುರಿಸುತ್ತಿರುವ ಮಹಿಳೆಯರಿಗೆ ಅಂಚೆ ಕಚೇರಿಗಳಲ್ಲಿ ಹೊಸ ಖಾತೆ ತೆರೆದು, ಹಣ ಪಾವತಿಯಾಗುವಂತೆ ಮಾಡಲಾಗಿದೆ. ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್ ವತಿಯಿಂದ ಈ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಯೋಜನೆಯಲ್ಲಿ ಒಮ್ಮೆಯೂ ಹಣ ಬಾರದ 10ಕ್ಕಿಂತಲೂ ಹೆಚ್ಚಿನ ಮಹಿಳೆಯರಿದ್ದರೆ, 9743077935 ಸಂಖ್ಯೆಗೆ ಕರೆ ಮಾಡಿದಲ್ಲಿ, ಗ್ರಾಮಕ್ಕೇ ಭಟಿ ನೀಡಿ ಸರಿಪಡಿಸಲಾಗುವುದು ಎಂದು ಅವರು ಹೇಳಿದರು.
‘ಚನ್ನಗಿರಿ ತಾಲ್ಲೂಕಿನಲ್ಲಿ ಯೋಜನೆಯಡಿ 80,000 ಮಹಿಳೆಯರು ಸೇರ್ಪಡೆ ನಿರೀಕ್ಷೆ ಇತ್ತು. ಮೊದಲ ಹಂತದಲ್ಲಿ 72,000 ಮಹಿಳೆಯರು ಅರ್ಜಿ ಸಲ್ಲಿಸಿದ್ದು, ಎರಡನೇ ಹಂತದಲ್ಲಿ ಮೂರು ಸಾವಿರ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಕೆಲವರಿಗೆ ತಾಂತ್ರಿಕ ಸಮಸ್ಯೆಯಿಂದ ಹಣ ಬಾರದವರಿಗೆ ಅಂಚೆ ಇಲಾಖೆಯಲ್ಲಿ ಹೊಸ ಖಾತೆ ತೆರೆದು ಹಣ ಬರುವಂತೆ ಮಾಡಲಾಗುತ್ತಿದೆ’ ಎಂದು ಇಲಾಖೆಯ ಎಸ್.ಟಿ.ಪ್ರವೀಣ್ ಹೇಳಿದರು.
ಹಲವು ಮಹಿಳೆಯರಿಗೆ ಒಂದು ಕಂತಿನ ಹಣವೂ ಬಂದಿಲ್ಲ. ಕೆಲವರಿಗೆ ಒಂದು ತಿಂಗಳು ಬಂದು ನಿಂತು ಹೋಗಿದೆ. ಈಗ ಅಂಚೆ ಇಲಾಖೆಯ ಸಿಬ್ಬಂದಿ ಸರಿಪಡಿಸುತ್ತಿರುವುದು ಪ್ರಶಂಸನೀಯ ಎಂದು ಗ್ರಾಮದ ಶಾರದಮ್ಮ, ಮಮ್ತಾಜ್‌ಬಾನು, ರತ್ನಮ್ಮ ಮತ್ತು ಹಾಲಮ್ಮ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.