ADVERTISEMENT

ಹೊನ್ನಾಳಿ: ರೈತರಿಗೆ ವರವಾದ ಜಿಟಿ ಜಿಟಿ ಮಳೆ 

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 15:54 IST
Last Updated 3 ಜುಲೈ 2024, 15:54 IST
ಹೊನ್ನಾಳಿ ಪಟ್ಟಣದಲ್ಲಿ ಬುಧವಾರ ಬಿದ್ದ ಜಿಟಿ ಜಿಟಿ ಮಳೆಯಿಂದ ಕಾಲೇಜಿನ ವಿದ್ಯಾರ್ಥಿನಿಯರು ಕೊಡೆ ಹಿಡಿದು ಬರುತ್ತಿರುವುದು
ಹೊನ್ನಾಳಿ ಪಟ್ಟಣದಲ್ಲಿ ಬುಧವಾರ ಬಿದ್ದ ಜಿಟಿ ಜಿಟಿ ಮಳೆಯಿಂದ ಕಾಲೇಜಿನ ವಿದ್ಯಾರ್ಥಿನಿಯರು ಕೊಡೆ ಹಿಡಿದು ಬರುತ್ತಿರುವುದು    

ಹೊನ್ನಾಳಿ: ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಿಗ್ಗೆಯಿಂದ ಜಿಟಿ ಜಿಟಿ ಮಳೆಯಾಗಿದೆ.

ತಾಲ್ಲೂಕಿನ ಮಾರಿಕೊಪ್ಪ, ಹತ್ತೂರು, ಎರೆಹಳ್ಳಿ, ಕತ್ತಿಗೆ, ಮಾದೇನಹಳ್ಳಿ ಭಾಗದಲ್ಲಿ ಎರೆಭೂಮಿ ಇದ್ದು, ಜಿಟಿ ಜಿಟಿ ಮಳೆಯಿಂದ ಭೂಮಿ ಹದಗೊಂಡಿದೆ ಎಂದು ಹತ್ತೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಾರಿಕೊಪ್ಪ ಹನುಮಂತಪ್ಪ ತಿಳಿಸಿದರು.

ಕಳೆದ ತಿಂಗಳು ಉತ್ತಮ ಮಳೆಯಾಗಿತ್ತು. 10 ಎಕರೆಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದೆವು. ನಂತರ 15 ದಿನ ಮಳೆ ಕೈಕೊಟ್ಟಿದ್ದರಿಂದ ಮೆಕ್ಕೆಜೋಳ ಸರಿಯಾಗಿ ಹುಟ್ಟಲಿಲ್ಲ. ಮಂಗಳವಾರದಿಂದ ಉತ್ತಮ ಮಳೆ ಆಗುತ್ತಿದ್ದು, ಹೊಸದಾಗಿ ಬಿತ್ತನೆ ಮಾಡಲಾಗುವುದು ಎಂದು ಅವರು ಹೇಳಿದರು.

ADVERTISEMENT

ತಾಲ್ಲೂಕಿನ ದಿಡಗೂರು, ಹರಳಹಳ್ಳಿ, ಗೋವಿನಕೋವಿ ಗ್ರಾಮಗಳಲ್ಲಿ ಈ ಹಿಂದೆ ಬಿತ್ತಿದ್ದ ಬೆಳೆಗಳಿಗೂ ಹಾಗೂ ಮುಂದೆ ಬಿತ್ತನೆ ಮಾಡುವವರಿಗೂ ಈ ಮಳೆ ಒಂದಿಷ್ಟು ಅನುಕೂಲ ಮಾಡಿಕೊಡಲಿದೆ ಎಂದು ರೈತಮುಖಂಡ ದಿಡಗೂರು ಫಾಲಾಕ್ಷಪ್ಪ ತಿಳಿಸಿದರು.

ತಾಲ್ಲೂಕಿನ ತರಗನಹಳ್ಳಿ, ಸಿಂಗಟಗೆರೆ, ತಿಮ್ಲಾಪುರ, ನೇರಲಗುಂಡಿ ಗ್ರಾಮಗಳಲ್ಲಿ ಬಿತ್ತನೆ ಕೆಲಸ ಬಾಕಿ ಇದ್ದು,  ಜಿಟಿ ಜಿಟಿ ಮೂಲಕ ಹದ ಮಳೆಯಾದಲ್ಲಿ ಅನುಕೂಲವಾಗುತ್ತದೆ ಎಂದು ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಜಿ. ರಮೇಶ್‍ಗೌಡ ಹೇಳಿದರು.

ತಾಲ್ಲೂಕಿನ ಬಲಮುರಿ, ಎಚ್. ಗೋಪಗೊಂಡನಹಳ್ಳಿ, ಎಸ್. ಮಲ್ಲಾಪುರ ಭಾಗಗಳಲ್ಲಿ ಶೇ 40ರಷ್ಟು ಬಿತ್ತನೆಯಾಗಿತ್ತು. ಮಳೆಯಿಂದ ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರಗತಿಪರ ರೈತ ಮಲ್ಲಿಕಾರ್ಜುನ್ ಸಂತಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.