ADVERTISEMENT

ಬಿತ್ತನೆ ಮಾಡದ ರೈತರಿಗಿಲ್ಲ ಬರ ಪರಿಹಾರ!

ನಿಯಮಾವಳಿ ಅನ್ವಯ ದೊರೆಯದ ನೆರವು * ಬರದಿಂದ ಕಂಗೆಟ್ಟಿದ್ದ ರೈತರ ಮೇಲೆ ಮತ್ತೊಂದು ಬರೆ

ಸಿದ್ದಯ್ಯ ಹಿರೇಮಠ
Published 18 ಮೇ 2024, 19:07 IST
Last Updated 18 ಮೇ 2024, 19:07 IST
ಬರ ಪರಿಹಾರ ಮೊತ್ತ ಪಾವತಿಯಾಗದ್ದರಿಂದ ದಾವಣಗೆರೆ ಜಿಲ್ಲೆಯ ಜಗಳೂರಿನ ತಹಶೀಲ್ದಾರ್ ಕಚೇರಿಯಲ್ಲಿ ನೂರಾರು ರೈತರು ಮಾಹಿತಿ ಪಡೆಯಲು ಮುಗಿಬಿದ್ದಿರುವುದು –ಪ್ರಜಾವಾಣಿ ಚಿತ್ರ: ಡಿ.ಶ್ರೀನಿವಾಸ್‌
ಬರ ಪರಿಹಾರ ಮೊತ್ತ ಪಾವತಿಯಾಗದ್ದರಿಂದ ದಾವಣಗೆರೆ ಜಿಲ್ಲೆಯ ಜಗಳೂರಿನ ತಹಶೀಲ್ದಾರ್ ಕಚೇರಿಯಲ್ಲಿ ನೂರಾರು ರೈತರು ಮಾಹಿತಿ ಪಡೆಯಲು ಮುಗಿಬಿದ್ದಿರುವುದು –ಪ್ರಜಾವಾಣಿ ಚಿತ್ರ: ಡಿ.ಶ್ರೀನಿವಾಸ್‌   

ದಾವಣಗೆರೆ: ಮಳೆ ಕೊರತೆಯಿಂದಾಗಿ ‘ಬರಪೀಡಿತ’ ಎಂದು ಘೋಷಿಸಿದ್ದ ಪ್ರದೇಶಗಳಲ್ಲಿ ಬಿತ್ತನೆಯನ್ನೇ ಮಾಡದ ರೈತರನ್ನು ಬರ ಪರಿಹಾರದ ಫಲಾನುಭವಿಗಳ ಪಟ್ಟಿಯಿಂದ ಹೊರಗಿಡಲಾಗಿದ್ದು, ಬರದಿಂದ ತತ್ತರಿಸಿದ್ದ ರೈತರ ಗಾಯದ ಮೇಲೆ ಮತ್ತೊಂದು ಬರೆ ಎಳೆದಂತಾಗಿದೆ.  

ಕಳೆದ ವರ್ಷದ ಮುಂಗಾರು ಹಂಗಾಮಿನಲ್ಲಿ ವಾಡಿಕೆಯಷ್ಟು ಮಳೆ ಸುರಿಯದೇ ಬರ ಆವರಿಸಿದ್ದ ಕಡೆ ಬೆಳೆ ನಷ್ಟ ಅನುಭವಿಸಿದ್ದ ರೈತರ ಖಾತೆಗೆ ಮೇ ಮೊದಲ ವಾರದಲ್ಲಿ ಸರ್ಕಾರ ಬರ ಪರಿಹಾರ ಮೊತ್ತವನ್ನು ಜಮೆ ಮಾಡಿದೆ. ಆದರೆ, ಮಳೆ ಸುರಿಯದ ಕಾರಣದಿಂದ ಬಿತ್ತನೆಯನ್ನೇ ಮಾಡದ ರಾಜ್ಯದ ಸಾವಿರಾರು ರೈತರನ್ನು ಪರಿಹಾರದ ಫಲಾನುಭವಿಗಳ ಪಟ್ಟಿಯಿಂದ ಈಗ ಹೊರಗಿಡಲಾಗಿದೆ.

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌) ನಿಯಮಾವಳಿ ಪ್ರಕಾರ, ರೈತರು ಜಮೀನಿನಲ್ಲಿ ಬಿತ್ತನೆ ಮಾಡಿದ ನಂತರ ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಬೆಳೆಹಾನಿ ಆದರೆ ಮಾತ್ರ ಪರಿಹಾರಕ್ಕೆ ಪರಿಗಣಿಸಲಾಗುತ್ತದೆ. ಈ ಸಂಬಂಧ ನಡೆಸಲಾಗುವ ಬೆಳೆ ಸಮೀಕ್ಷೆ ವೇಳೆ ಬಿತ್ತಿದ್ದನ್ನು ಖಚಿತಪಡಿಸಿಕೊಂಡು ಪರಿಹಾರಕ್ಕೆ ಆಯ್ಕೆ ಮಾಡಲಾಗುತ್ತದೆ. ಆದರೆ, ಮಳೆಯೇ ಸುರಿಯದ್ದರಿಂದ ಬಿತ್ತನೆ ಮಾಡಲು ಆಗದೇ ನಷ್ಟಕ್ಕೆ ಒಳಗಾದ ರೈತರು ಇದೀಗ ಪರಿಹಾರವೂ ದೊರೆಯದೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ADVERTISEMENT

ಕಳೆದ ವರ್ಷ ಹಿಂಗಾರು ಹಂಗಾಮಿನಲ್ಲೂ ಮಳೆ ಆಗದ್ದರಿಂದ ಅನೇಕ ರೈತರು ಬಿತ್ತನೆ ಮಾಡುವ ಗೋಜಿಗೆ ಹೋಗಿಲ್ಲ. ಹಿಂಗಾರು ಹಂಗಾಮಿನ ಬರ ಪರಿಹಾರ ವಿತರಣೆ ಸಂದರ್ಭವೂ ಅವರಿಗೆ ನಿಯಮಾವಳಿಗಳ ಪ್ರಕಾರ ಪರಿಹಾರ ದೊರೆಯುವ ಸಾಧ್ಯತೆಗಳು ಇಲ್ಲ.

ಇದೀಗ ರಾಜ್ಯದ ವಿವಿಧೆಡೆ ಮುಂಗಾರುಪೂರ್ವ ಮಳೆ ಆರಂಭವಾಗಿದೆ. ಬಹುತೇಕ ರೈತರು ಭೂಮಿ ಹದಗೊಳಿಸಿ ಮುಂಗಾರು ಹಂಗಾಮಿನ ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಬಿತ್ತನೆಬೀಜ, ರಸಗೊಬ್ಬರ ಖರೀದಿಗೆ ಹಾಗೂ ಕೃಷಿ ಕೂಲಿಕಾರರಿಗೆ ಸಂಬಳ ನೀಡಲು ಸರ್ಕಾರ ಸಂದಾಯ ಮಾಡಿರುವ ಬರ ಪರಿಹಾರದಿಂದ ರೈತರಿಗೆ ನೆರವಾಗಿದೆ. ಆದರೆ, ಪರಿಹಾರ ದೊರೆಯದ ರೈತರು ಬಿತ್ತನೆಗೆ ಹಣವಿಲ್ಲದೇ ಸಾಲಕ್ಕೆ ಕೈಚಾಚುವ ಸ್ಥಿತಿ ನಿರ್ಮಾಣವಾಗಿದೆ.

ಮಳೆಯಾಶ್ರಿತ ಪ್ರತಿ ಹೆಕ್ಟೇರ್‌ ಭೂಮಿಗೆ ₹ 8,500, ನೀರಾವರಿಯ ಭೂಮಿಗೆ ₹ 17,000ದಂತೆ ಪ್ರತಿ ರೈತರಿಗೆ ಗರಿಷ್ಠ ಎರಡು ಹೆಕ್ಟೇರ್‌ವರೆಗೆ ಪರಿಹಾರ ನೀಡಲಾಗಿದೆ. ಜಿಲ್ಲೆಯ ಜಗಳೂರು ತಾಲ್ಲೂಕೊಂದರಲ್ಲೇ 4,200ಕ್ಕೂ ಹೆಚ್ಚು ರೈತರಿಗೆ ತಾಂತ್ರಿಕ ಕಾರಣ ಮುಂದಿರಿಸಿ ಪರಿಹಾರದ ಹಣ ಜಮಾ ಮಾಡಲಾಗಿಲ್ಲ. ತೀವ್ರ ಗೊಂದಲಕ್ಕೆ ಒಳಗಾದ ರೈತರು ನಿತ್ಯ ತಹಶೀಲ್ದಾರ್‌ ಕಚೇರಿಗೆ ಎಡತಾಕುತ್ತಿದ್ದಾರೆ.

‘ಬಿತ್ತನೆ ಮಾಡಿದವರಿಗೆ ಮಾತ್ರ ಪರಿಹಾರ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಕೆಲವು ಗ್ರಾಮಗಳಲ್ಲಿ ಬಿತ್ತನೆ ಮಾಡದ ರೈತರಿಗೂ ಪರಿಹಾರ ದೊರೆತಿದೆ. ಬಿತ್ತನೆ ಮಾಡದ ಬಹುತೇಕ ರೈತರು ಪರಿಹಾರಕ್ಕೆ ಅರ್ಹರಾಗಿಲ್ಲ. ಮತ್ತೆ ಬಿತ್ತನೆ ಮಾಡಲು ನಮಗೆ ಹಣಕಾಸಿನ ಸಮಸ್ಯೆ ಎದುರಾಗಿದೆ’ ಎಂದು ಜಗಳೂರು ತಾಲ್ಲೂಕಿನ ಭರಮಸಮುದ್ರ, ಹಿರೇಮಲ್ಲನಹೊಳೆ, ಸೊಕ್ಕೆ ಮತ್ತಿತರ ಗ್ರಾಮಗಳ ರೈತರು ‘ಪ್ರಜಾವಾಣಿ’ಗೆ ತಿಳಿಸಿದರು.

ಆಗಸ್ಟ್‌ ನಂತರ ಸಮೀಕ್ಷೆ:

ಮುಂಗಾರು ಹಂಗಾಮಿನಲ್ಲಿ ಅನೇಕ ರೈತರು ಬಿತ್ತನೆ ಮಾಡಿಲ್ಲ. ಇನ್ನು ಕೆಲವು ರೈತರು ಬಿತ್ತಿದ ಬೆಳೆ ಮಳೆ ಕೊರತೆಯಿಂದ  ಒಣಗಿದ ಕಾರಣ ಅಳಿಸಿ ಹಾಕಿ, ಅಲ್ಪಾವಧಿ ಬೆಳೆ ಬೆಳೆಯಬೇಕೆಂದು ಮತ್ತೆ ಮಳೆಗಾಗಿ ಕಾದರೂ ಪ್ರಯೋಜನವಾಗಲಿಲ್ಲ. ಸರ್ಕಾರ ಮಳೆಯ ಅಭಾವ ಅವಲೋಕಿಸಿ ಆಗಸ್ಟ್‌ 19ರಿಂದ ರಾಜ್ಯದ ಅನೇಕ ತಾಲ್ಲೂಕುಗಳನ್ನು ಹಂತಹಂತವಾಗಿ ‘ಬರಪೀಡಿತ’ ಎಂದು ಘೋಷಸಿತ್ತು. ಘೋಷಣೆಯ ನಂತರವಷ್ಟೇ ಕೃಷಿ ಇಲಾಖೆಯು ಸಮೀಕ್ಷೆಗಾಗಿ ನಿಯೋಜಿಸಿದ್ದ ಖಾಸಗಿ ನಿವಾಸಿಗಳು ಜಮೀನುಗಳಿಗೆ ತೆರಳಿ ಬೆಳೆ ಸಮೀಕ್ಷೆ ನಡೆಸಿದ್ದಾರೆ.

ಆದರೆ, ಅವರು ಸಮೀಕ್ಷೆಗೆ ತೆರಳಿದಾಗ ಬೆಳೆ ಒಣಗಿಹೋಗಿ ಅಥವಾ ಅಳಿಸಿ ಹಾಕಿದ್ದರಿಂದ ಬಿತ್ತನೆ ಮಾಡಿದ ಕುರುಹೂ ಇರಲಿಲ್ಲ. ಅಂಥ ಜಮೀನುಗಳಲ್ಲೂ ‘ಬಿತ್ತನೆ ಆಗಿಲ್ಲ’ ಎಂದೇ ನಮೂದಿಸಿದ್ದರಿಂದ ಪರಿಹಾರಕ್ಕೆ ಅರ್ಹರಾಗಿದ್ದ ರೈತರೂ ವಂಚಿತರಾಗಿದ್ದಾರೆ.

‘ನಾನು ಬಿತ್ತನೆಗಾಗಿ ಟ್ರ್ಯಾಕ್ಟರ್ ಮೂಲಕ 4 ಎಕರೆ ಭೂಮಿ ಹದಗೊಳಿಸಿದ್ದೆ. ಪ್ರತಿ ಎಕರೆಗೆ 4 ಲೋಡ್‌ನಂತೆ ಕೊಟ್ಟಿಗೆ ಗೊಬ್ಬರ ಖರೀದಿಸಿ ಭೂಮಿಗೆ ಹಾಕಿದೆ. ಇದಕ್ಕಾಗಿ ₹ 40,000 ಖರ್ಚಾಗಿತ್ತು. ಮಳೆಯೇ ಸುರಿಯದ್ದರಿಂದ ಬಿತ್ತನೆ ಮಾಡಲಿಲ್ಲ. ಬಿತ್ತನೆ ಮಾಡಿದವರಿಗೆ ಮಾತ್ರವಲ್ಲ ನನಗೂ ನಷ್ಟವಾಗಿದೆ. ಸರ್ಕಾರ ನಮ್ಮಂಥ ರೈತರನ್ನು ಪರಿಹಾರದಿಂದ ಹೊರಗಿಟ್ಟಿದ್ದು ನ್ಯಾಯಯುತವೇ? ಎಂದು ಜಗಳೂರು ಗೊಲ್ಲರಹಟ್ಟಿ ಗ್ರಾಮದ ರೈತ ಹರೀಶ್ ರೆಡ್ಡಿ ಪ್ರಶ್ನಿಸಿದರು.

ಬೆಳೆ ಸಮೀಕ್ಷೆಯಿಂದ ಮಾಹಿತಿ:

‘ಜಮೀನು ಹೊಂದಿರುವ ಎಲ್ಲ ರೈತರೂ ಬಿತ್ತನೆ ಮಾಡುವುದಿಲ್ಲ. ಕೆಲವರು ಕೃಷಿಯೇತರ ಚಟುವಟಿಕೆ ಉದ್ದೇಶಕ್ಕೆಂದೇ ಜಮೀನನ್ನು ಖಾಲಿ ಬಿಟ್ಟಿರುತ್ತಾರೆ. ಅಂಥವರಿಗೂ ಪರಿಹಾರ ಮೊತ್ತ ಪಾವತಿಯಾಗುವುದನ್ನು ತಪ್ಪಿಸಲೆಂದೇ ಸರ್ಕಾರ 2017ರಿಂದ ಪ್ರತ್ಯೇಕವಾಗಿ ಬೆಳೆ ಸಮೀಕ್ಷೆ ದತ್ತಾಂಶದ ಮೂಲಕ ಮಾಹಿತಿ ಸಂಗ್ರಹಕ್ಕೆ ಚಾಲನೆ ನೀಡಿದೆ. ಬೆಳೆ ಸಮೀಕ್ಷೆಗಾಗಿ ಪ್ರತ್ಯೇಕ ಸಾಫ್ಟ್‌ವೇರ್‌ ಸಿದ್ಧಪಡಿಸಲಾಗಿದೆ. ದತ್ತಾಂಶ ಮಾಹಿತಿ ಸಂಗ್ರಹಕ್ಕಾಗಿ ಸಿಬ್ಬಂದಿ ನಿಯೋಜಿಸಲಾಗುತ್ತದೆ’ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಇದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ. ಆದರೆ, ಇದರಲ್ಲೂ ಅನೇಕ ನ್ಯೂನತೆಗಳಿವೆ. ಲೋಪದೋಷ ಸರಿಪಡಿಸಿದಲ್ಲಿ ಅರ್ಹ ಫಲಾನುಭವಿಗಳೂ ಪರಿಹಾರದಿಂದ ವಂಚಿತರಾಗದಂತೆ ತಡೆಯಬಹುದಾಗಿದೆ. ಕೃಷಿ ಇಲಾಖೆ ನಿಯೋಜಿಸಿದ ಸಿಬ್ಬಂದಿ ಪ್ರತಿ ಜಮೀನಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಬೇಕಿದೆ. ಬದಲಿಗೆ, ಜಿಪಿಎಸ್‌ ಆಧರಿತ ಸಮೀಕ್ಷೆಗಳು ನಡೆದಲ್ಲಿ ಖಚಿತ ಮಾಹಿತಿ ದೊರೆಯಲಿದೆ ಎಂಬುದು ರೈತರ ಸಲಹೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.