ದಾವಣಗೆರೆ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ಮಾಡಿ ಬುದ್ಧಿವಾದ ಹೇಳಿದ್ದಾರೆಯೇ ಹೊರತು ನೋಟಿಸ್ ನೀಡಿಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ ಯಡಿಯೂರಪ್ಪ ಕರೆ ಮಾಡಿ ಬುದ್ಧಿವಾದ ಹೇಳಿದ್ದು ಸತ್ಯ. ಕಚ್ಚಾಡಬೇಡಿ, ಒಂದಾಗಿರಿ ಎಂದು ಹೇಳಿದ್ದಾರೆ. ಆದರೆ ನೋಟಿಸ್ ಕೊಟ್ಟಿಲ್ಲ. ಉಚ್ಛಾಟನೆ ಮಾಡುತ್ತೇನೆ ಎಂದಿಲ್ಲ. ನನಗೆ ಹೊಡೆದು ಹೇಳುವ ಅಧಿಕಾರ ಅವರಿಗೆ ಇದೆ. ಇವರೆಲ್ಲ ನನ್ನ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಹೇಳಿದರು.
‘ಹಿರಿಯರ ನೇತೃತ್ವದಲ್ಲಿ ನಿಯೋಗ ಹೋಗಿ ಯಡಿಯೂರಪ್ಪ ಅವರಿಗೆ ಸತ್ಯದ ಮನವರಿಕೆ ಮಾಡುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಸಂಸದ ಸಿದ್ದೇಶ್ವರ ಹಠಾವೋ ಎಂದಿದ್ದು ನಾನಲ್ಲ. ಕಾಂಗ್ರೆಸ್‌ನವರು, ನಾನು ಪಕ್ಷದ ವಿರುದ್ದ ಮಾತನಾಡಿಲ್ಲ. ಶಾಸಕ ಬಿ.ಪಿ. ಹರೀಶ್ ಅವರಿಂದ ನೀತಿ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ. ಬಿ.ಪಿ. ಹರೀಶ್ 2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಹೇಳದೇ ಕೇಳದೇ ರಾತ್ರೋ ರಾತ್ರಿ ಕಾಂಗ್ರೆಸ್‌ಗೆ ಹೋಡಿ ಹೋಗಿದ್ದರು. ಇವರಿಂದ ನೀತಿ ಪಾಠ ಬೇಕಾಗಿಲ್ಲ’ ಎಂದು ಟೀಕಿಸಿದರು.
‘ಸಮೀಕ್ಷೆ ಮಾಡಿ ಲೋಕಸಭೆಗೆ ಟಿಕೆಟ್ ಕೊಡಿ ಎಂದಿದ್ದು ತಪ್ಪಲ್ಲ. ಕೇವಲ ಸೃಷ್ಟಿ ಮಾಡಿ ಅಪಪ್ರಚಾರ ಮಾಡಿದ್ದಾರೆ. ಬಿಎಸ್‌ವೈ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆ. ಇವರ ಗುಂಡಾಗಿರಿಗೆ ನಾನು ಹೆದರುವುದಿಲ್ಲ. ಕೀಳುಮಟ್ಟದ ರಾಜಕಾರಣ ಮಾಡುವುದಿಲ್ಲ. ನಾನೂ ಯಾರ ಕಾಲಿಗೂ ಬಿದ್ದು ‘ಬಿ’ ಫಾರಂ ಪಡೆದಿಲ್ಲ. ಕಾಲಿಗೆ ಬೀಳುವ ಜಾಯಮಾನವೂ ನನ್ನದಲ್ಲ’ ಎಂದು ತಿರುಗೇಟು ನೀಡಿದರು.
‘ಕಾಂಗ್ರೆಸ್ ನಾಯಕರ ಭೇಟಿ ಮಾಡಿದ್ದು, ಅವಳಿ ತಾಲ್ಲೂಕುಗಳನ್ನ ಬರಗಾಲ ಪಟ್ಟಿಗೆ ಸೇರಿಸಲೇ ಹೊರತು ಮ್ಯಾಚ್ ಫಿಕ್ಸಿಂಗ್ ಬುದ್ಧಿ ನನ್ನದಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.