ADVERTISEMENT

ನಾಲ್ಕು ತಿಂಗಳಿಂದ ವೇತನವಿಲ್ಲ: ಆರೋಗ್ಯ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 4:01 IST
Last Updated 11 ಆಗಸ್ಟ್ 2021, 4:01 IST
ಬಾಕಿ ಇರುವ ನಾಲ್ಕು ತಿಂಗಳ ವೇತನ ನೀಡುವಂತೆ ಆರೋಗ್ಯ ಇಲಾಖೆಯ ಪ್ರಯೋಗ ಶಾಲಾ ತಂತ್ರಜ್ಞರು ಮತ್ತು ಡಾಟಾ ಎಂಟ್ರಿ ಆಪರೇಟರ್‌ಗಳು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಮನವಿ ಸಲ್ಲಿಸಿದರು
ಬಾಕಿ ಇರುವ ನಾಲ್ಕು ತಿಂಗಳ ವೇತನ ನೀಡುವಂತೆ ಆರೋಗ್ಯ ಇಲಾಖೆಯ ಪ್ರಯೋಗ ಶಾಲಾ ತಂತ್ರಜ್ಞರು ಮತ್ತು ಡಾಟಾ ಎಂಟ್ರಿ ಆಪರೇಟರ್‌ಗಳು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಮನವಿ ಸಲ್ಲಿಸಿದರು   

ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಯೋಗಾಲಯ ತಂತ್ರಜ್ಞರು, ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ನಾಲ್ಕು ತಿಂಗಳುಗಳಿಂದ ವೇತನ ನೀಡಿಲ್ಲ. ಕೂಡಲೇ ನೀಡಬೇಕು ಎಂದು ಸಿಐಟಿಯು ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಆರೋಗ್ಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸಂಚಾರಿ ಕ್ಷಿಪ್ರ ಪ್ರತಿಜನಕ ಪರೀಕ್ಷಾ ತಂಡದಲ್ಲಿ ತಾತ್ಕಾಲಿಕವಾಗಿ ಕೋವಿಡ್ ಮೊದಲ ಅಲೆಯ ಸಮಯದಲ್ಲಿ ಪ್ರಯೋಗಶಾಲಾ ತಂತ್ರಜ್ಞರು ಹಾಗೂ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಪ್ರಯೋಗಶಾಲಾ ತಂತ್ರಜ್ಞರಿಗೆ ₹ 10,000 ವೇತನ ಹಾಗೂ ಪ್ರತಿ ಗಂಟಲು ದ್ರವ ಸಂಗ್ರಹಕ್ಕೆ ₹ 15 ಪ್ರೋತ್ಸಾಹಧನ ಮತ್ತು ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ₹ 14,000 ವೇತನ ನಿಗದಿಪಡಿಸಲಾಗಿದೆ. ಆದರೆ ಏಪ್ರಿಲ್‌ನಿಂದ ವೇತನ, ಪ್ರೋತ್ಸಾಹಧನ ಪಾವತಿ ಮಾಡಿಲ್ಲ ಎಂದು ಪ್ರತಿಭಟನಕಾರರು ದೂರಿದರು.

ವೇತನ ಕೇಳಿದರೆ ಕೆಲಸದಿಂದ ತೆಗೆದುಹಾಕುವುದಾಗಿ ನೌಕರರನ್ನು ತಾಲೂಕು ಆರೋಗ್ಯ ಅಧಿಕಾರಿ ಬೆದರಿಸುತ್ತಿರುವ ದೂರುಗಳಿವೆ. ತಕ್ಷಣವೇ ನೌಕರರಿಗೆ ಬಾಕಿ ವೇತನ ಮತ್ತು ಪ್ರೋತ್ಸಾಹಧನ ಕೊಡದಿದ್ದರೆ ಅನಿರ್ಧಿಷ್ಟ ಅವಧಿವರೆಗೆ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ADVERTISEMENT

ಸಿಐಟಿಯು ಜಿಲ್ಲಾ ಸಂಚಾಲಕ ಕೆ.ಎಚ್. ಆನಂದರಾಜು, ನೇತ್ರಾ, ಮಹಿಮಾ, ಪ್ರಮೋದ, ಅನಿತಾ, ದಿವ್ಯಶ್ರೀ, ಜಯಶ್ರೀ ಬಾಯಿ, ನಾಗರಾಜ, ಮಧುರಾಜ, ಮಂಜುನಾಥ, ಶ್ರೀಧರ, ಸುಮಾ ಅವರೂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.