ADVERTISEMENT

ದಾವಣಗೆರೆ: ಸಾಲ ಮಾಡಿ ಪ್ರೀಮಿಯಂ ಕಟ್ಟಿದ ಕೃಷಿಕರಿಗೆ ‘ಬಡ್ಡಿ’ ಹೊರೆ

ಬೆಳೆ ವಿಮೆ ಪರಿಹಾರಕ್ಕಾಗಿ ತಪ್ಪದ ಅಲೆದಾಟ; ಸಂಕಷ್ಟದಲ್ಲಿ ಅನ್ನದಾತರು

ರಾಮಮೂರ್ತಿ ಪಿ.
Published 22 ಜುಲೈ 2024, 8:27 IST
Last Updated 22 ಜುಲೈ 2024, 8:27 IST
ಜಗಳೂರು ತಾಲ್ಲೂಕಿನ ಗ್ರಾಮವೊಂದರಲ್ಲಿ ಕಳೆದ ವರ್ಷ ತೀವ್ರ ಬರಗಾಲದಿಂದ ಮೆಕ್ಕೆಜೋಳದ ಬೆಳೆ ಒಣಗಿತ್ತು (ಸಂಗ್ರಹ ಚಿತ್ರ)
ಜಗಳೂರು ತಾಲ್ಲೂಕಿನ ಗ್ರಾಮವೊಂದರಲ್ಲಿ ಕಳೆದ ವರ್ಷ ತೀವ್ರ ಬರಗಾಲದಿಂದ ಮೆಕ್ಕೆಜೋಳದ ಬೆಳೆ ಒಣಗಿತ್ತು (ಸಂಗ್ರಹ ಚಿತ್ರ)   

ದಾವಣಗೆರೆ: ‘2023–24ರ ಮುಂಗಾರು ಹಂಗಾಮಿನ ಮೆಕ್ಕೆಜೋಳ ಬೆಳೆಗೆ (ಮಳೆಯಾಶ್ರಿತ) ಪ್ರತೀ ಎಕರೆಗೆ ₹ 440 ರಂತೆ ಬೆಳೆ ವಿಮೆ ಪ್ರೀಮಿಯಂ ಕಟ್ಟಿದ್ದೇವೆ. ಹಿಂಗಾರು ಕಳೆದು ಇದೀಗ ಮತ್ತೆ ಮುಂಗಾರು ಬಿತ್ತನೆಯನ್ನೂ ನಡೆಸಿದ್ದೇವೆ. ಆದರೂ, ಬೆಳೆ ವಿಮೆ ಪರಿಹಾರದ ಮೊತ್ತ ಜಮೆಯಾಗಿಲ್ಲ. ಬೀಜ, ಗೊಬ್ಬರ ಖರೀದಿಗೆ ದುಬಾರಿ ಬಡ್ಡಿ ದರದಲ್ಲಿ ಸಾಲ ತರಬೇಕಾಯಿತು. ಆದರೆ ಕೃಷಿ ಇಲಾಖೆಯ ಅಧಿಕಾರಿಗಳು ‘ತಾಂತ್ರಿಕ ಸಮಸ್ಯೆ’ಯ ನೆಪ ಹೇಳುತ್ತಿದ್ದಾರೆ’ ಎಂದು ಜಗಳೂರು ತಾಲ್ಲೂಕಿನ ಹಸಗೋಡು ಗ್ರಾಮದ ರೈತ ಮುಖಂಡ ಕೆ.ಬಿ.ರವಿ ಬೇಸರ ವ್ಯಕ್ತಪಡಿಸಿದರು. 

‘ಅಧಿಕಾರಿಗಳು ಹಾಗೂ ಇನ್ಶುರೆನ್ಸ್‌ ಕಂಪನಿಯವರು ಬೆಳೆ ವಿಮೆ ಪ್ರೀಮಿಯಂ ಕಟ್ಟಿಸಿಕೊಳ್ಳುವಾಗ ತೋರುವ ಆಸಕ್ತಿಯನ್ನು ಪರಿಹಾರದ ಮೊತ್ತ ಬಿಡುಗಡೆ ಮಾಡಲು ತೋರುವುದಿಲ್ಲ. ಬೆಳೆ ವಿಮೆ ಪರಿಹಾರ ಶೀಘ್ರವೇ ಬ್ಯಾಂಕ್‌ ಖಾತೆಗೆ ಜಮೆಯಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದು, ಅದನ್ನೇ ಎದುರು ನೋಡುತ್ತಿದ್ದೇವೆ’ ಎಂದು ಜಗಳೂರು ತಾಲ್ಲೂಕಿನ ಮತ್ತೊಬ್ಬ ರೈತ ರಾಘವೇಂದ್ರ ಅಳಲು ತೋಡಿಕೊಂಡರು.

‘ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ಹಾಳಾದರೆ ಪರಿಹಾರವಾದರೂ ಸಿಗುತ್ತದೆ ಎಂಬ ಆಶಾಭಾವದಲ್ಲಿ ಬಡ್ಡಿಗೆ ಕೈಸಾಲ ತಂದು ಬೆಳೆ ವಿಮೆ ಪ್ರೀಮಿಯಂ ಪಾವತಿಸಿದ ಜಿಲ್ಲೆಯ ಕೆಲವು ಗ್ರಾಮ ಪಂಚಾಯಿತಿಗಳ ರೈತರಿಗೆ ಇದುವರೆಗೂ ಪರಿಹಾರದ ಮೊತ್ತ ದೊರಕಿಲ್ಲ. ವಿಮೆ ಪರಿಹಾರ ನೀಡಿ ಎಂದು ಅನ್ನದಾತರು ಕೃಷಿ ಇಲಾಖೆ, ತಹಶೀಲ್ದಾರ್‌ ಕಚೇರಿ, ಜಿಲ್ಲಾಧಿಕಾರಿಯವರ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕುತ್ತಿರುವುದು ನಿಂತಿಲ್ಲ.

ADVERTISEMENT

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಯಡಿ 2023–24ರ ಮುಂಗಾರು ಬೆಳೆಗೆ ವಿಮೆ ಪಾವತಿಸಿದ ರೈತರ ಪೈಕಿ ಕೆಲವರ ಖಾತೆಗಳಿಗೆ ಇದುವರೆಗೂ ಪರಿಹಾರದ ಹಣ ಪಾವತಿಯಾಗಿಲ್ಲ. ಮಳೆ ಕೊರತೆ ಹಾಗೂ ಇನ್ನಿತರ ಕಾರಣಗಳಿಂದ ಬೆಳೆ ಹಾಳಾದರೆ ರೈತರಿಗೆ ನ್ಯಾಯಯುತ ಪರಿಹಾರ ನೀಡಬೇಕಾದದ್ದು ಬೆಳೆ ವಿಮೆ ಪ್ರೀಮಿಯಂ ಕಟ್ಟಿಸಿಕೊಂಡ ಕಂಪನಿಯ ಜವಾಬ್ದಾರಿ. ಆದರೆ, ಬೆಳೆ ಹಾನಿಯಾದಾಗ ಬೆಳೆ ವಿಮೆಯ ಪರಿಹಾರ ನೀಡುವಲ್ಲಿ ವಿಳಂಬವಾಗುತ್ತಿದೆ. ಇದರಿಂದಾಗಿ ಸಾಲ ಮಾಡಿ ಕೃಷಿಯಲ್ಲಿ ತೊಡಗಿರುವ ರೈತರಿಗೆ ‘ಬಡ್ಡಿ’ಯ ಹೊರೆ ಹೆಚ್ಚುತ್ತಿದೆ.

‘ಬೆಳೆ ವಿಮೆ ಮೊತ್ತ ಪಾವತಿಯಾಗದ ಗ್ರಾಮ ಪಂಚಾಯಿತಿಗಳ ಪೈಕಿ, ಜಗಳೂರು ತಾಲ್ಲೂಕಿನ ಪಂಚಾಯಿತಿಗಳೇ ಹೆಚ್ಚಿವೆ. ಬೆಳೆ ವಿಮೆಯ ಪ್ರೀಮಿಯಂ ಕಟ್ಟಿಸಿಕೊಂಡ ಅಗ್ರಿಕಲ್ಚರಲ್‌ ಇನ್ಶುರೆನ್ಸ್‌ ಕಂಪನಿಯು (ಎಐಸಿ) ಇದೀಗ ಹಣ ಪಾವತಿಸದೇ ಕುಂಟು ನೆಪ ಹೇಳುತ್ತಿದೆ. ಇದರಿಂದ ಸಮಸ್ಯೆಯಾಗುತ್ತಿದೆ’ ಎಂದು ಜಗಳೂರು ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ದೂರುತ್ತಿದ್ದಾರೆ.

‘ದೇವಿಕೆರೆ, ಅಸಗೋಡು, ಬಿಳಿಚೋಡು, ಮಡ್ರಳ್ಳಿ, ಗುತ್ತಿದುರ್ಗ ಸೇರಿದಂತೆ ಜಗಳೂರು ತಾಲ್ಲೂಕಿನ 8 ಗ್ರಾಮ ಪಂಚಾಯಿತಿ, ಹೊನ್ನಾಳಿ – ನ್ಯಾಮತಿ ತಾಲ್ಲೂಕಿನ 3 ಗ್ರಾಮ ಪಂಚಾಯಿತಿ ಹಾಗೂ ದಾವಣಗೆರೆ ತಾಲ್ಲೂಕಿನ ಕೆಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 2023–24ರ ಮುಂಗಾರು ಬೆಳೆಯ ಪರಿಹಾರ ಮೊತ್ತ ಪಾವತಿಯಾಗಬೇಕಿದೆ’ ಎನ್ನುತ್ತಾರೆ ರೈತರು.

2023–24ರ ಮುಂಗಾರಿನಲ್ಲಿ ಜಿಲ್ಲೆಯಲ್ಲಿ 41,000 ಹೆಕ್ಟೇರ್‌ ಜಮೀನಿನಲ್ಲಿ ಬೆಳೆದ ಬೆಳೆಗಳಿಗೆ ರೈತರು ಬೆಳೆ ವಿಮೆ ಪ್ರೀಮಿಯಂ ಪಾವತಿಸಿದ್ದರು. ಹಿಂಗಾರು ಬೆಳೆಗೆ 1,200 ರಿಂದ 1,300 ರೈತರು ಮಾತ್ರ ಬೆಳೆ ವಿಮೆ ಪ್ರೀಮಿಯಂ ಕಟ್ಟಿದ್ದಾರೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಹೊಂದಾಣಿಕೆಯಾಗದ ಬೆಳೆ:

ವಿಮೆ ಪರಿಹಾರ ಬಿಡುಗಡೆಗೂ ಮುನ್ನ ವಿಮೆ ಕಂಪನಿ, ಕೃಷಿ, ಕಂದಾಯ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಅಧಿಕಾರಿಗಳು ಜಂಟಿಯಾಗಿ ವಿಮಾ ಘಟಕಗಳಿಗೆ (ಗ್ರಾಮ ಪಂಚಾಯಿತಿ ವಿಭಾಗವಾರು) ತೆರಳಿ ‘ಬೆಳೆ ಕಟಾವು ಪ್ರಯೋಗ’ ನಡೆಸುತ್ತಾರೆ. ಈ ಪ್ರಕ್ರಿಯೆಯಲ್ಲಿನ ಫಲಿತಾಂಶ ಆಧರಿಸಿ ರೈತರಿಗೆ ನೀಡಬೇಕಾದ ವಿಮೆ ಪರಿಹಾರದ ಮೊತ್ತವನ್ನು ನಿರ್ಧರಿಸಲಾಗುತ್ತದೆ.

‘ಬೆಳೆ ಕಟಾವು ಪ್ರಯೋಗ’ಕ್ಕೆ ತೆರಳಿದಾಗ ಹಲವು ಬಾರಿ ಬೆಳೆ ಹೊಂದಾಣಿಕೆಯಾಗಿಲ್ಲ. ವಿಮೆಗೆ ನೋಂದಾಯಿಸಿದ ಬೆಳೆ ಹಾಗೂ ಜಮೀನಿನಲ್ಲಿರುವ ಬೆಳೆ ಬೇರೆ ಬೇರೆ ಇರುವುದು ಕಂಡುಬರುತ್ತದೆ. ಹೀಗಾದಾಗ ಬೆಳೆ ವಿಮೆ ಪರಿಹಾರ ಬಿಡುಗಡೆಯೂ ವಿಳಂಬವಾಗುತ್ತದೆ’ ಎಂದು ಅಧಿಕಾರಿಗಳು ತಿಳಿಸಿದರು.

ಯೂನಿಟ್ ಆಧಾರದ ಮೇಲೆ ಬೆಳೆ ವಿಮೆ ಪರಿಹಾರ ನೀಡುವ ಮಾನದಂಡದಲ್ಲಿ ದೋಷಗಳಿದ್ದು ಸರಿಪಡಿಸಬೇಕು. ಪರಿಹಾರದ ಹಣ ಜಮೆಯಾಗುವುದು ವಿಳಂಬವಾದಷ್ಟೂ ರೈತರ ಸಾಲದ ಬಡ್ಡಿ ಹೆಚ್ಚಾಗುತ್ತದೆ
ತೇಜಸ್ವಿ ಪಟೇಲ್‌ ರೈತ ಮುಖಂಡ
15 ಎಕರೆ ಮೆಕ್ಕೆಜೋಳ ಬೆಳೆಗೆ ಬೆಳೆ ವಿಮೆ ಪ್ರೀಮಿಯಂ ಪಾವತಿಸಿದ್ದೆ. ಒಟ್ಟು ₹ 3 ಲಕ್ಷ ಪರಿಹಾರ ಮೊತ್ತ ಬರಬೇಕಿದೆ. ಈಗಾಗಲೇ ಸಾಕಷ್ಟು ವಿಳಂಬವಾಗಿದ್ದು ಆದಷ್ಟು ಬೇಗ ಪರಿಹಾರ ಮೊತ್ತ ಜಮೆ ಮಾಡಬೇಕು
ರಾಘವೇಂದ್ರ ರೈತ ಮುಖಂಡ ಹಸಗೋಡು ಜಗಳೂರು
5 ಬಾರಿ ಬೆಂಗಳೂರಿಗೆ ತೆರಳಿ ಕೃಷಿ ಇಲಾಖೆ ಆಯುಕ್ತರು ಇನ್ಶುರೆನ್ಸ್‌ ಕಂಪನಿಯ ವ್ಯವಸ್ಥಾಪಕರೊಂದಿಗೆ ಚರ್ಚಿಸಿ ಮನವಿ ಸಲ್ಲಿಸಿದ್ದೇವೆ. ಸಾಧ್ಯವಾದಷ್ಟು ಬೇಗ ಪರಿಹಾರ ನೀಡಿದರೆ ಕೃಷಿ ಕಾರ್ಯಕ್ಕೆ ಅನುಕೂಲವಾಗುತ್ತದೆ
ಕೆ.ಬಿ.ರವಿ ರೈತ ಮುಖಂಡ ಹಸಗೋಡು ಜಗಳೂರು
₹140 ಕೋಟಿ ಬಿಡುಗಡೆ: ಚಿಂತಾಲ್‌
‘ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಯಡಿ 2023–24ರ ಮುಂಗಾರು ಬೆಳೆಗೆ ಜಿಲ್ಲೆಯ 34000 ರೈತರು ಪ್ರೀಮಿಯಂ ಪಾವತಿಸಿದ್ದರು. ಬೆಳೆ ವಿಮೆ ಪರಿಹಾರವಾಗಿ ₹ 140 ಕೋಟಿ ಬಿಡುಗಡೆ ಆಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್‌ ತಿಳಿಸಿದರು. ‘ಜಿಲ್ಲೆಯ ಬಹುತೇಕ ರೈತರ ಖಾತೆಗಳಿಗೆ ಬೆಳೆ ವಿಮೆ ಪರಿಹಾರದ ಮೊತ್ತ ಜಮೆಯಾಗಿದೆ. ತಾಂತ್ರಿಕ ಕಾರಣದಿಂದ ಕೆಲವು ರೈತರ ಖಾತೆಗಳಿಗೆ ಹಣ ಜಮೆಯಾಗದಿರುವುದು ಗಮನಕ್ಕೆ ಬಂದಿದ್ದು ಶೀಘ್ರವೇ ಎಲ್ಲ ಅರ್ಹ ರೈತರ ಖಾತೆಗಳಿಗೆ ಬೆಳೆ ವಿಮೆ ಪರಿಹಾರದ ಮೊತ್ತ ಜಮೆಯಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.