ADVERTISEMENT

ನ್ಯಾಮತಿ | ಬ್ಯಾಂಕ್‌ಗೆ ಕನ್ನ: ₹ 13 ಕೋಟಿ ಮೌಲ್ಯದ ಚಿನ್ನಾಭರಣ ಕಳವು

ನ್ಯಾಮತಿಯ ಎಸ್‌ಬಿಐ ಶಾಖೆಯ ಕಿಟಕಿ ಮುರಿದು ಕೃತ್ಯ ಎಸಗಿದ ದುಷ್ಕರ್ಮಿಗಳು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 16:17 IST
Last Updated 28 ಅಕ್ಟೋಬರ್ 2024, 16:17 IST
ನ್ಯಾಮತಿ ಮುಖ್ಯ ರಸ್ತೆಯಲ್ಲಿರುವ ಎಸ್‌ಬಿಎಂ ಬ್ಯಾಂಕ್‌ನಲ್ಲಿ ಭಾನುವಾರ ರಾತ್ರಿ ದರೋಡೆ ನಡೆದಿದ್ದು, ಸಾರ್ವಜನಿಕರು ಕುತೂಹಲದಿಂದ ಬ್ಯಾಂಕ್ ಮುಂದೆ ನೆರೆದಿರುವುದು.
ನ್ಯಾಮತಿ ಮುಖ್ಯ ರಸ್ತೆಯಲ್ಲಿರುವ ಎಸ್‌ಬಿಎಂ ಬ್ಯಾಂಕ್‌ನಲ್ಲಿ ಭಾನುವಾರ ರಾತ್ರಿ ದರೋಡೆ ನಡೆದಿದ್ದು, ಸಾರ್ವಜನಿಕರು ಕುತೂಹಲದಿಂದ ಬ್ಯಾಂಕ್ ಮುಂದೆ ನೆರೆದಿರುವುದು.   

ನ್ಯಾಮತಿ: ಪಟ್ಟಣದ ನೆಹರೂ ರಸ್ತೆಯಲ್ಲಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಶಾಖೆಯ ಕಿಟಕಿಯ ಸರಳುಗಳನ್ನು ಮುರಿದು ಒಳನುಗ್ಗಿದ ದುಷ್ಕರ್ಮಿಗಳು, ಲಾಕರ್‌ನಲ್ಲಿದ್ದ ₹ 12.95 ಕೋಟಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ.

ಸೋಮವಾರ ಬೆಳಿಗ್ಗೆ ಸಿಬ್ಬಂದಿ ಬ್ಯಾಂಕ್ ಬಾಗಿಲು ತೆರೆದಾಗ ಪ್ರಕರಣ ಗೊತ್ತಾಗಿದೆ. ಅಕ್ಟೋಬರ್‌ 25 ಅಥವಾ 26ರ ರಾತ್ರಿಯೇ ಈ ಕೃತ್ಯ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಬ್ಯಾಂಕ್‌ ಕಟ್ಟಡದ ಎಡಭಾಗದ ಕಿಟಕಿ ಮೂಲಕ ನುಗ್ಗಿರುವ ದುಷ್ಕರ್ಮಿಗಳು, ಗ್ಯಾಸ್‌ ಕಟರ್‌ ಮೂಲಕ ಭದ್ರತಾ ಕೊಠಡಿಯ ಬಾಗಿಲು ಮುರಿದಿದ್ದಾರೆ. ಮೂರು ಲಾಕರ್‌ಗಳ ಪೈಕಿ ಚಿನ್ನಾಭರಣ ಇಟ್ಟಿದ್ದ ಒಂದು ಲಾಕರ್‌ ಅನ್ನು ಗ್ಯಾಸ್‌ ಕಟರ್ ಮೂಲಕ ಕತ್ತರಿಸಲಾಗಿದೆ. ಉಳಿದ ಎರಡು ಲಾಕರ್‌ಗಳನ್ನು ಮುರಿಯುವ ಪ್ರಯತ್ನ ಫಲನೀಡಿಲ್ಲ. ಬ್ಯಾಂಕ್‌ನಲ್ಲಿದ್ದ ಸಿ.ಸಿ. ಟಿವಿ ಕ್ಯಾಮೆರಾದ ಡಿವಿಆರ್‌ ಕೂಡ ಹೊತ್ತೊಯ್ದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಎರಡು ದಿನ ಬ್ಯಾಂಕ್‌ಗೆ ರಜೆ ಇರುವ ವಾರಾಂತ್ಯವನ್ನು ಆಯ್ಕೆ ಮಾಡಿಕೊಂಡು ಕನ್ನ ಹಾಕಲಾಗಿದೆ. ಬ್ಯಾಂಕ್‌ ಒಳಗೆ ನುಗ್ಗಿದ ತಕ್ಷಣ ಸಿ.ಸಿ.ಟಿ.ವಿ, ಸೈರನ್‌ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಅಂದಾಜು ₹ 30 ಲಕ್ಷ ಹಣ ಹಾಗೂ ಚಿನ್ನಾಭರಣ ಇದ್ದ ಇನ್ನೆರಡು ಲಾಕರ್‌ಗಳನ್ನು ಕತ್ತರಿಸಲು ಪ್ರಯತ್ನಿಸಿದ್ದಾರೆ. ಗ್ಯಾಸ್‌ ಖಾಲಿಯಾಗಿ ಅಥವಾ ಸಮಯ ಮೀರಿದ್ದರಿಂದ ಪರಾರಿಯಾಗಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಕೃತ್ಯ ಎಸಗಿದ ಬಳಿಕ ಕಟ್ಟಡದ ತುಂಬ ಖಾರದ ಪುಡಿ ಎರಚಿದ್ದಾರೆ. ಶ್ವಾನದಳಕ್ಕೆ ಸುಳಿವು ಸಿಗಬಾರದು ಎಂಬ ಉದ್ದೇಶದಿಂದ ಈ ತಂತ್ರ ಅನುಸರಿಸಲಾಗಿದೆ. ಬೆರಳಚ್ಚು ತಜ್ಞರು, ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಪರಿಶೀಲನೆ ನಡೆಸಿ ಸಾಕ್ಷ್ಯ ಸಂಗ್ರಹಕ್ಕೆ ಪ್ರಯತ್ನಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಶ್ವಾನದಳ ಸವಳಂಗ ರಸ್ತೆಯ ಸಾಲಬಾಳು ಗ್ರಾಮದವರೆಗೆ ತೆರಳಿವೆ. ಇದೇ ಮಾರ್ಗದಲ್ಲಿ ದುಷ್ಕರ್ಮಿಗಳು ಪರಾರಿಯಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಜನವಸತಿ ಪ್ರದೇಶದಿಂದ ಬ್ಯಾಂಕ್‌ ಕೊಂಚ ದೂರದಲ್ಲಿದೆ. ಮುಖ್ಯರಸ್ತೆಗೆ ಹೊಂದಿಕೊಂಡ ಬ್ಯಾಂಕ್‌ನ ಬಾಗಿಲು ಮುಚ್ಚಿದ್ದರಿಂದ ಈ ಕೃತ್ಯ ಸಾರ್ವಜನಿಕರ ಗಮನಕ್ಕೆ ಬಂದಿಲ್ಲ. ಸಾಲಬಾಳು ರಸ್ತೆಯಲ್ಲಿರುವ ಪೆಟ್ರೋಲ್‌ ಬಂಕ್‌ನಲ್ಲಿ ಮಾತ್ರ ಸಿ.ಸಿ.ಟಿವಿ ಕ್ಯಾಮೆರಾ ಇದ್ದು, ಇಲ್ಲಿನ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಪೂರ್ವ ವಲಯದ ಡಿಐಜಿ ಬಿ.ರಮೇಶ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

‘ಬ್ಯಾಂಕ್‌ಗೆ ರಾತ್ರಿ ವೇಳೆ ಕಾವಲುಗಾರರನ್ನು ನೇಮಿಸಿಲ್ಲ. ಹಳೆಯ ಕಾಲದ ಸೈರನ್‌ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಬ್ಯಾಂಕ್‌ ಭದ್ರತಾ ಲೋಪದಿಂದ ಇದು ನಡೆದಿದೆ. ಪ್ರಕರಣದ ತನಿಖೆಗೆ ಐವರು ಪೊಲೀಸ್‌ ಇನ್‌ಸ್ಟೆಕ್ಟರ್‌ಗಳ ನೇತೃತ್ವದ 5 ತಂಡಗಳನ್ನು ರಚಿಸಲಾಗಿದೆ. 10 ಜನ ಪಿಎಸ್‌ಐಗಳು ಸೇರಿ ಹಲವು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ತನಿಖೆ ಆರಂಭವಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಮಾಹಿತಿ ನೀಡಿದ್ದಾರೆ.

ಲಾಕರ್‌ನಲ್ಲಿ ಚಿನ್ನಾಭರಣ ಇಟ್ಟವರು ಹಾಗೂ ಚಿನ್ನಾಭರಣ ಅಡವಿಟ್ಟು ಸಾಲ ಪಡೆದ ಗ್ರಾಹಕರು ಆತಂಕಗೊಂಡು ಬ್ಯಾಂಕ್‌ ಬಳಿಗೆ ಧಾವಿಸಿದ್ದರು. ತಮ್ಮ ಚಿನ್ನಾಭರಣದ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದರು.

ಬ್ಯಾಂಕ್ ಬಲಬದಿಯ ಕಿಟಕಿಯನ್ನು ಮುರಿದು ಕಳ್ಳರು ಒಳಹೊಕ್ಕಿರುವುದು.
ಬ್ಯಾಂಕ್‌ನ ಭದ್ರತಾ ಕೊಠಡಿಯ ಬಾಗಿಲನ್ನು ಕಟ್ ಮಾಡಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.