ದಾವಣಗೆರೆ: ಸೂರ್ಯದೇವ ಮೂಡಣದಿಂದ ಮೈದಡವಿಕೊಂಡು ಆಗ ತಾನೆ ಮೇಲೇಳುತ್ತಿದ್ದ. ಗೂಡು ಬಿಟ್ಟು ಹೊರ ಬರುತ್ತಿದ್ದ ಹಕ್ಕಿಗಳು ಚಿಲಿಪಿಲಿ ಗಾನ ಮೊಳಗಿಸುತ್ತಾ ಬಾನತ್ತ ಹಾರುತ್ತಿದ್ದವು. ಅದೇ ಹೊತ್ತಿನಲ್ಲಿ ಬಿಜೆಪಿ ಕಾರ್ಯಕರ್ತರು ತಂಡೋಪತಂಡವಾಗಿ ದಾವಣಗೆರೆ ಹೊರ ವಲಯದ ಜಿಎಂಐಟಿ ಗೆಸ್ಟ್ ಹೌಸ್‌ನತ್ತ ಹೆಜ್ಜೆ ಇಡುತ್ತಿದ್ದರು.
ಅದಾಗಲೇ ಪ್ರಚಾರಕ್ಕೆ ಹೊರಡಲು ಸಿದ್ಧರಾಗಿದ್ದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್, ಆತ್ಮೀಯತೆಯಿಂದಲೇ ಅವರೆಲ್ಲರನ್ನೂ ಮಾತನಾಡಿಸುತ್ತಾ ನಿಂತಿದ್ದರು. ಅಲ್ಲಿಗೆ ಮೈಸೂರಿನ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಂದರು. ಅವರನ್ನು ಕಂಡೊಡನೆ ಅಭಿಮಾನಿಗಳು ಫೋಟೊಗೆ ಮುಗಿಬಿದ್ದರು.
ಹೊತ್ತು ಬೆಳಿಗ್ಗೆ 7.30 ಆಗಿತ್ತು. ಕಾರ್ಯಕರ್ತರನ್ನು ಮಾತನಾಡಿಸುತ್ತಲೇ ಗೆಸ್ಟ್ ಹೌಸ್‌ನಿಂದ ಹೊರ ಬಂದ ಯದುವೀರ್ ಹಾಗೂ ಗಾಯತ್ರಿ ಅವರು ಕಾರುಗಳನ್ನೇರಿ ದಾವಣಗೆರೆಯ ಬಾತಿಯಲ್ಲಿರುವ ರೇವಣ ಸಿದ್ದೇಶ್ವರ ದೇವಸ್ಥಾನಕ್ಕೆ ಹೋದರು. ಅಲ್ಲಿ ವಿಶೇಷ ಪೂಜೆ ಸಲ್ಲಿಸಿ ದುಗ್ಗಮ್ಮನ ದೇವಸ್ಥಾನಕ್ಕೆ ಬಂದು ದೇವಿಯ ದರ್ಶನ ಪಡೆದರು. ಬಳಿಕ ಬಾಪೂಜಿ ದಂತ ವೈದ್ಯಕೀಯ ಕಾಲೇಜಿನ ಎದುರಿರುವ ಕೊಟ್ಟೂರೇಶ್ವರ ಹೋಟೆಲ್‌ಗೆ ತೆರಳಿ ಬೆಣ್ಣೆ ದೋಸೆಯ ಸ್ವಾದ ಅನುಭವಿಸಿದರು.
ಪೂರ್ವ ನಿಗದಿಯಂತೆ ರೋಡ್ ಶೋನಲ್ಲಿ ಪಾಲ್ಗೊಳ್ಳಲು ಭಗತ್ ಸಿಂಗ್ ನಗರದ ಚೌಡಮ್ಮ ದೇವಿ ದೇವಸ್ಥಾನದ ಬಳಿ ಹೋದಾಗ ಅಲ್ಲಿ ಚುನಾವಣಾ ಪ್ರಚಾರ ವಾಹನ ಸಜ್ಜಾಗಿ ನಿಂತಿತ್ತು. ಅದನ್ನೇರಿದ ಯದುವೀರ್ ಹಾಗೂ ಗಾಯತ್ರಿ ಅವರು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರತ್ತ ಕೈಬೀಸುತ್ತಾ ಸಾಗಿದರು. ಗಾಯತ್ರಿ ಪರ ಮತ ಚಲಾಯಿಸುವಂತೆ ಯದುವೀರ್ ಕೈಮುಗಿದು ಕೇಳಿಕೊಳ್ಳುತ್ತಿದ್ದರು. ರಾಜ ವಂಶಕ್ಕೆ ಸೇರಿದ ಅವರು ತಮಗೆ ನಮಿಸುತ್ತಿದ್ದುದ್ದನ್ನು ಕಂಡು ಪುಳಕಿತರಾದಂತೆ ಕಂಡ ಜನ ಪ್ರತಿಯಾಗಿ ತಾವೂ ಕೈಮುಗಿದು ಗೌರವ ಸೂಚಿಸುತ್ತಿದ್ದ ದೃಶ್ಯ ರೋಡ್ ಶೋ ಸಾಗಿದ ದಾರಿಯುದ್ದಕ್ಕೂ ಕಂಡುಬಂತು.
ನಿಟುವಳ್ಳಿ ರಸ್ತೆ, ಕೆಟಿಜೆ ನಗರ, ಶಿವಪ್ಪಯ್ಯ ಸರ್ಕಲ್ ಹಾಗೂ ಜಯದೇವ ವೃತ್ತದಲ್ಲಿ ಸೇರಿದ್ದ ಬಿಜೆಪಿ ಬೆಂಬಲಿಗರು, ಪ್ರಚಾರ ವಾಹನಕ್ಕೆ ಅಳವಡಿಸಿದ್ದ ಧ್ವನಿವರ್ಧಕದಲ್ಲಿ ‘ಕರ್ನಾಟಕದ ಜನತೆಗೆ ನನ್ನ ನಮಸ್ಕಾರಗಳು’ ಎಂದು ಮೋದಿ ಅವರು ಹೇಳಿದ್ದ ಸಾಲು ಹೊರಹೊಮ್ಮುತ್ತಿದ್ದಂತೆ ಹರ್ಷೋದ್ಗಾರ ಮೊಳಗಿಸುತ್ತಿದ್ದರು. ಬಿಸಿಲು ನೆತ್ತಿ ಸುಡಲು ಆರಂಭಿಸಿದರೂ ಕಿಂಚಿತ್ತೂ ವಿಚಲಿತರಾಗದೆ ಉತ್ಸಾಹದಿಂದ ಹೆಜ್ಜೆ ಹಾಕುತ್ತಿದ್ದರು.
ಯದುವೀರ್ ಅವರನ್ನು ಹತ್ತಿರದಿಂದ ಕಣ್ತುಂಬಿಕೊಂಡ, ಅವರ ಕೈಕುಲುಕುತ್ತಿದ್ದ, ಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದವರ ಸಂತಸಕ್ಕೆ ಪಾರವೇ ಇರಲಿಲ್ಲ.
ಸಂಜೆ ದಾವಣಗೆರೆಯ ಗಾಂಧಿನಗರದ ಹುಲಿಗೆಮ್ಮ ದೇವಸ್ಥಾನದ ಬಳಿ ಬಿಜೆಪಿ ಪ್ರಚಾರ ಭರಾಟೆ ಜೋರಾಗಿತ್ತು. ಮಂಡಿಪೇಟೆ, ಚೌಕಿಪೇಟೆ, ಹಾಸಬಾವಿ ವೃತ್ತ ಹಾಗೂ ಗರಿಯಾರ ಕಂಬದ ಬಳಿ ಯದುವೀರ್ ಹಾಗೂ ಗಾಯತ್ರಿ ಅವರು ರೋಡ್ ಶೋ ಮೂಲಕ ಸಂಚಲನ ಮೂಡಿಸಿದರು.
‘ಮೈಸೂರಿನ ಮಹಾರಾಜರೆಂದರೆ ಎಲ್ಲರಿಗೂ ಅಭಿಮಾನ. ಯದುವೀರ್ ಅವರನ್ನು ನೋಡಲು ಬಂದಿದ್ದೆ. ಹತ್ತಿರದಿಂದ ಕಂಡು ಖುಷಿಯಾಯಿತು. ಈ ಬಾರಿ ಜಿಲ್ಲೆಯಲ್ಲಿ ಬಿಜೆಪಿ ಪರ ಅಲೆ ಇದೆ’ ಎಂದು ಗಾಂಧಿನಗರದ ನಾಗರಾಜಪ್ಪ ಹೇಳಿದರು.
ನಿಟುವಳ್ಳಿಯ ಚಿದಾನಂದಪ್ಪ ಅವರನ್ನು ಮಾತಿಗೆಳೆದಾಗ, ‘ಯದುವೀರ್ ಎಂದರೆ ಎಲ್ಲರಿಗೂ ಕುತೂಹಲ. ಹೀಗಾಗಿ ಹೆಚ್ಚಿನವರು ಅವರನ್ನು ನೋಡಲು ಬಂದಿದ್ದಾರೆ. ಈ ಬಾರಿ ಕಾಂಗ್ರೆಸ್–ಬಿಜೆಪಿ ನಡುವೆ ತೀವ್ರ ಸ್ಪರ್ಧೆ ಇರಬಹುದು. ಆದರೆ ಗೆಲುವು ಬಿಜೆಪಿಯದ್ದೆ. ಗಾಯತ್ರಿ ಸಿದ್ದೇಶ್ವರ ಗೆದ್ದೇ ಗೆಲ್ಲುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹರಪನಹಳ್ಳಿಯಲ್ಲೂ ಮೋದಿ ಮಾಯೆ...
ವಿಜಯನಗರ ಜಿಲ್ಲೆ ಹರಪನಹಳ್ಳಿಯಲ್ಲಿ ನಡೆದ ರೋಡ್ ಶೋ ವೇಳೆಯೂ ಮೋದಿ ಮಾಯೆ ಜೋರಾಗಿಯೇ ಇತ್ತು. ಹರಿಹರ ವೃತ್ತದಿಂದ ಕೊಟ್ಟೂರು ಸರ್ಕಲ್‌ವರೆಗೂ ನಡೆದ ರೋಡ್ ಶೋನಲ್ಲಿ ವೃದ್ಧೆಯರು, ಮಧ್ಯ ವಯಸ್ಕರು, ಮಹಿಳೆಯರು ಹೀಗೆ ಸಾವಿರಾರು ಮಂದಿ ಪಾಲ್ಗೊಂಡಿದ್ದರು.
ಕೇಸರಿ ಟೋಪಿ ಧರಿಸಿ, ಮೋದಿ ಭಾವಚಿತ್ರ ಇರುವ ಕಟೌಟ್‌ಗಳನ್ನು ಹಿಡಿದು ಹೆಜ್ಜೆ ಹಾಕುತ್ತಿದ್ದ ಜನ, ಬಿಜೆಪಿ ಪರ ಘೋಷಣೆಗಳನ್ನು ಮೊಳಗಿಸಿ ಅಭಿಮಾನ ಮೆರೆಯುತ್ತಿದ್ದರು.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಹಿಂಬದಿಯಲ್ಲಿರುವ ಆಟೊ ಸ್ಟ್ಯಾಂಡ್‌ನಲ್ಲಿ ಮಾತಿಗೆ ಸಿಕ್ಕ ಚಾಲಕ ಜಾವೀದ್ ‘ಬಿಜೆಪಿಯವರ ಪ್ರಚಾರ ಬಹಳ ಜೋರಾಗಿದೆ’ ಬಿಡ್ರಿ ಎಂದರು.
‘ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪರವಾದ ಅಲೆ ಇದೆ. ಮತದಾರರು ಯಾವ ಕಡೆ ವಾಲುತ್ತಾರೆ ಎಂಬುದನ್ನು ಈಗಲೇ ಹೇಳೋದಕ್ಕೆ ಆಗುವುದಿಲ್ಲ. ಅದಕ್ಕಾಗಿ ಮತದಾನದ ದಿನದವರೆಗೂ ಕಾಯಬೇಕು’ ಎನ್ನುತ್ತಾ ಪ್ರಯಾಣಿಕರೆನ್ನೇರಿಸಿಕೊಂಡು ಮುಖ್ಯ ರಸ್ತೆಯತ್ತ ಹೊರಟರು.
ಅಲ್ಲಿಂದ 700 ಮೀಟರ್‌ನಷ್ಟು ದೂರದಲ್ಲಿದ್ದ ಮೌನೇಶ ಬುಕ್ ಡಿಪೋ ಮಾಲೀಕ ಮಾಣಪ್ಪ ಅವರನ್ನು ಕೇಳಿದಾಗ ಅವರಿಂದಲೂ ಇದೇ ಅಭಿಪ್ರಾಯ ವ್ಯಕ್ತವಾಯಿತು.
ರೋಡ್ ಶೋ ಕೊಟ್ಟೂರು ವೃತ್ತದ ಮಾರ್ಗಕ್ಕೆ ಕಾಲಿಟ್ಟಾಗ ಕಾರ್ಯಕರ್ತರ ಉತ್ಸಾಹ ಇಮ್ಮಡಿಯಾದಂತೆ ಕಂಡಿತು. ಧ್ವನಿ ವರ್ಧಕದಲ್ಲಿ ‘ಇದು ಗೆಲುವಿನ ಪಕ್ಷ ಬಿಜೆಪಿ... ಇದು ಅಭಿವೃದ್ಧಿಯ ಪಕ್ಷ ಬಿಜೆಪಿ...’ ಎಂಬ ಹಾಡು ಮೊಳಗುತ್ತಿದ್ದಂತೆ ಕಾರ್ಯಕರ್ತರು ಮೋದಿ ಕಟೌಟ್‌ಗಳನ್ನು ಎತ್ತಿ ಹಿಡಿದು ಕುಣಿದಾಡಿದರು.
ರೋಡ್ ಶೋ ನೋಡಲು ಮನೆಯ ಎದುರು ನಿಂತಿದ್ದ ಪುಷ್ಪಾ ಅವರನ್ನು ಮಾತನಾಡಿಸುತ್ತಿದ್ದಂತೆಯೇ ಅವರು ಮೋದಿಯ ಗುಣಗಾನ ಮಾಡಲು ಶುರುಮಾಡಿದರು. ‘ಮೋದಿ ದೇಶಕ್ಕಾಗಿ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಅವರಿಗಾಗಿಯೇ ನಾವು ಬಿಜೆಪಿಗೆ ಮತ ಹಾಕುತ್ತೇವೆ. ನಮ್ಮ ಭಾಗದಲ್ಲಿ ಮೋದಿ ಅಲೆ ಜೋರಾಗಿದೆ’ ಎಂದರು.
ಚಿಗಟೇರಿಯಿಂದ ಬಂದಿದ್ದ ಸಣ್ಯಪ್ಪ ಹಾಗೂ ಗೋಣಪ್ಪ ‘ಈ ಬಾರಿ ನಮ್ಮ ಮತ ಬಿಜೆಪಿಗೆ. ಪಕ್ಷದ ಅಭ್ಯರ್ಥಿ ಗಾಯತ್ರಿ ದೊಡ್ಡ ಅಂತರದಿಂದ ಗೆಲ್ಲುತ್ತಾರೆ’ ಎಂದು ಫಲಿತಾಂಶಕ್ಕೂ ಮುನ್ನವೇ ಷರಾ ಬರೆದುಬಿಟ್ಟರು.
Quote - ಕಾರ್ಯಕರ್ತರ ಉತ್ಸಾಹ ನೋಡಿದರೆ ಈ ಬಾರಿ ಗಾಯತ್ರಿ ಸಿದ್ದೇಶ್ವರ್ ಭಾರೀ ಅಂತರದಿಂದ ಗೆಲ್ಲಲಿದ್ದಾರೆ. ಕೋವಿಡ್ ಸಮಯದಲ್ಲಿ ಲಸಿಕೆ ನೀಡಿ ಕೋಟ್ಯಂತರ ಜನರ ಜೀವ ಉಳಿಸಿದ್ದು ಮೋದಿ ಸರ್ಕಾರ. ಇದು ಮೋದಿ ಗ್ಯಾರಂಟಿಯ ಚುನಾವಣೆ–ಕರುಣಾಕರ ರೆಡ್ಡಿ ಹರಪನಹಳ್ಳಿ ಕ್ಷೇತ್ರದ ಮಾಜಿ ಶಾಸಕ
Quote - ಭಾರತದ ಅಭಿವೃದ್ಧಿಗಾಗಿ ನಾವು ಮತ್ತೊಮ್ಮೆ ಮೋದಿ ಕೈಗೆ ದೇಶದ ಕೀಲಿಕೈ ಕೊಡಬೇಕು. ಪ್ರತಿಪಕ್ಷಗಳಲ್ಲಿ ಮೋದಿಗೆ ಸರಿಸಾಟಿಯಾಗಬಲ್ಲ ನಾಯಕ ಯಾರೂ ಇಲ್ಲ. ಬಡವರ ಕೆಲಸ ಮಾಡಿಕೊಡಲು ಮೋದಿಯೇ ಬೇಕು–ಶೋಭಾ ಕರಂದ್ಲಾಜೆ ಕೇಂದ್ರ ಸಚಿವೆ
Quote - ದೇಶದ ಯಾವ ಮೂಲೆಗೆ ಹೋದರೂ ಜನ ಮೋದಿ ಹೆಸರು ಗುನುಗುತ್ತಿದ್ದಾರೆ. ಚಿಕ್ಕ ಮಕ್ಕಳೂ ಮೋದಿ ಜಪ ಮಾಡುತ್ತಿದ್ದಾರೆ. ಈ ಬಾರಿ ಮತದಾರರು ದೇಶದ ರಕ್ಷಣೆಗಾಗಿ ಮತ ಚಲಾಯಿಸಬೇಕು–ಗಾಯತ್ರಿ ಸಿದ್ದೇಶ್ವರ್ ಬಿಜೆಪಿ ಅಭ್ಯರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.