ADVERTISEMENT

ದಾವಣಗೆರೆ: ಬದಲಾವಣೆಗೆ ತೆರೆದುಕೊಂಡ ಸರ್ಕಾರಿ ಆಸ್ಪತ್ರೆಗಳು..

ಸೌಲಭ್ಯಗಳಲ್ಲಿ ಹೆಚ್ಚಳ: ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳತ್ತ ರೋಗಿಗಳು

ಚಂದ್ರಶೇಖರ ಆರ್‌.
Published 1 ಮಾರ್ಚ್ 2021, 3:40 IST
Last Updated 1 ಮಾರ್ಚ್ 2021, 3:40 IST
ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿನ ಎಂಐಸಿಯು ವಾರ್ಡ್‌ನಲ್ಲಿ ಚಿಕಿತ್ಸೆ ನೀಡುತ್ತಿರುವುದು
ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿನ ಎಂಐಸಿಯು ವಾರ್ಡ್‌ನಲ್ಲಿ ಚಿಕಿತ್ಸೆ ನೀಡುತ್ತಿರುವುದು   

ದಾವಣಗೆರೆ: ಕೊರೊನಾ ಕಾರಣ ಜಿಲ್ಲಾ ಆಸ್ಪತ್ರೆ ಸೇರಿ ಜಿಲ್ಲೆಯ ವಿವಿಧ ತಾಲ್ಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ ಸೌಲಭ್ಯ, ಹಾಸಿಗೆಗಳ ಹೆಚ್ಚಳ, ಮೂಲಸೌಕರ್ಯ ಅಭಿವೃದ್ಧಿಗೊಂಡಿದೆ.

ಕೊರೊನಾ ಪ್ರಕರಣಗಳು ತೀವ್ರಗತಿಯಲ್ಲಿ ಏರುತ್ತಿದ್ದ ಪರಿಣಾಮ ಸರ್ಕಾರ ಕೋವಿಡ್‌ ರೋಗಿಗಳಿಗಾಗಿ ಆಸ್ಪತ್ರೆಗಳಿಗೆ ಸೌಲಭ್ಯ ಕಲ್ಪಿಸಿದ್ದು ಆಶಾದಾಯಕ ಬೆಳವಣಿಗೆ.

ವೈದ್ಯರು, ತಂತ್ರಜ್ಞರು, ‘ಡಿ’ ಗ್ರೂಪ್‌ ನೌಕರರು ಸೇರಿ ಸಿಬ್ಬಂದಿಯನ್ನೂ ಆಸ್ಪತ್ರೆಗಳಿಗೆ ನಿಯೋಜಿಸಲಾಯಿತು. ಕೋವಿಡ್ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಸಲುವಾಗಿ ಹೆಚ್ಚಿಸಿದ ಸೌಲಭ್ಯ ಹಾಗೂ ಸಿಬ್ಬಂದಿ ನಿಯೋಜನೆ ಆಸ್ಪತ್ರೆಗಳಿಗೆ ವರದಾನವಾಯಿತು.

ADVERTISEMENT

ಕನಿಷ್ಠ ಹಾಸಿಗೆಗಳಿಗೆ ಸೀಮಿತವಾಗಿದ್ದ ತಾಲ್ಲೂಕು ಆಸ್ಪತ್ರೆಗಳು, ದಶಕಗಳಿಂದ ವೆಂಟಿಲೇಟರ್‌, ಸಿಬ್ಬಂದಿ ಕಾಣದಿದ್ದ ಆಸ್ಪತ್ರೆಗಳಿಗೂ ಸೌಲಭ್ಯ ದೊರಕಿದ್ದು ಗಮನಾರ್ಹ. ಆಸ್ಪತ್ರೆಗಳಲ್ಲಿ ಆದ ಗಣನೀಯ ಬದಲಾವಣೆಗಳು ಸರ್ಕಾರಿ ಆಸ್ಪತ್ರೆಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿ‌ಗಳು ಬರುವಂತೆ ಮಾಡಿತು. ಇದು ಜಿಲ್ಲೆಯ ಜನರಲ್ಲಿ ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿತು.

ಕೇವಲ 20, 30 ಹಾಸಿಗೆಗಳು ಇದ್ದ ತಾಲ್ಲೂಕು ಆಸ್ಪತ್ರೆಗಳೂ ಸೌಲಭ್ಯ ಕಂಡಿವೆ. ಜಿಲ್ಲೆಯ ತಾಲ್ಲೂಕು ಆಸ್ಪತ್ರೆಗಳಿಗೆ ಹೆಚ್ಚುವರಿಯಾಗಿ 50 ಹಾಸಿಗೆಗಳನ್ನು ನೀಡಲಾಗಿದೆ.ಜಿಲ್ಲಾ ಆಸ್ಪತ್ರೆಯಲ್ಲಿ ಐಸಿಎಂಆರ್‌ ಘಟಕ, ಹಾಸಿಗೆಗಳು, ಆಕ್ಸಿಜನ್‌ ಸಿಲಿಂಡರ್, ಎಂಐಸಿಯು (ಮೆಡಿಕಲ್‌ ಇಂಟೆನ್ಸಿವ್‌ ಕೇರ್‌ ಯುನಿಟ್‌), ಆಂಬುಲೆನ್ಸ್‌‌... ಹೀಗೆ ಹಲವು ವಿಭಾಗಗಳಲ್ಲಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಚಿಗಟೇರಿ ಆಸ್ಪತ್ರೆಯಲ್ಲಿ ಸೌಲಭ್ಯ: ಕೊರೊನಾ ಪ್ರಕರಣಗಳ ನಿರ್ವಹಣೆಗಾಗಿಯೇ ಇಲ್ಲಿನ ಚಿಗಟೇರಿ ಆಸ್ಪತ್ರೆಗೆ ಒಂದಿಷ್ಟು ಸೌಲಭ್ಯಗಳನ್ನು ನೀಡಲಾಯಿತು. ಇದರಿಂದ ವೈದ್ಯರು, ಸಿಬ್ಬಂದಿಯಲ್ಲಿ ಹರ್ಷ ಮನೆ ಮಾಡಿದೆ.

ಜಿಲ್ಲಾ ಆಸ್ಪತ್ರೆಯಲ್ಲಿ ಮೊದಲು ಕೇವಲ 8 ವೆಂಟಿಲೇಟರ್‌ಗಳು ಇದ್ದವು. ಈಗ30 ವೆಂಟಿಲೇಟರ್‌ಗಳು ಇವೆ. ಅದರಲ್ಲಿ 25 ವೆಂಟಿಲೇಟರ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಉಳಿದ 5 ಅನ್ನು ಅಳವಡಿಸುವ ಪ್ರಕ್ರಿಯೆ ನಡೆದಿದೆ. ಮೊದಲಿದ್ದಕ್ಕಿಂತ ಮೂರು ಪಟ್ಟು ಹೆಚ್ಚುವೆಂಟಿಲೇಟರ್‌ಗಳು ಬಂದಿದ್ದು ಗಮನಾರ್ಹ ಬದಲಾವಣೆ.

ಚಿಗಟೇರಿ ಆಸ್ಪತ್ರೆಯಲ್ಲಿ 20 ಬೆಡ್‌ಗಳಎಂಐಸಿಯು ತೆರೆಯಲಾಗಿದೆ. ಮೊದಲು 15 ಬೆಡ್‌ಗಳ ಎಂಐಸಿಯು ಇತ್ತು. ಈಗ ಹೆಚ್ಚುವರಿಯಾಗಿ 20 ಬೆಡ್‌ಗಳ ಎಂಐಸಿಯು ತೆರೆಯಲಾಗಿದೆ.

ಲಿಕ್ವಿಡ್‌ ಆಕ್ಸಿಜನ್‌ ಪ್ಲಾಂಟ್‌, ಪರೀಕ್ಷೆಗಾಗಿ ಬೇಕಾಗುವ ಮಾನಿಟರ್ಸ್‌, ಎಕೋ ಮಷಿನ್‌ಗಳು ಸೇರಿ ಇಂಟೆನ್ಸಿವ್‌ ಕೇರ್‌ ಯುನಿಟ್‌ಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಹೊಂದಿರುವುದು ವಿಶೇಷ.ಈ ಮೊದಲು 60 ಹಾಸಿಗೆಗಳಿಗೆ ಮಾತ್ರ ಆಕ್ಸಿಜನ್‌ ಪೂರೈಸುವ ಸೌಲಭ್ಯ ಇತ್ತು. ಈಗ 240 ಆಕ್ಸಿಜನ್‌ ಬೆಡ್‌ಗಳು ಬಂದಿವೆ. ಎಲ್ಲ ತಾಲ್ಲೂಕು ಆಸ್ಪತ್ರೆಗಳಿಗೆ ತಲಾ ಮೂರು ವೆಂಟಿಲೇಟರ್‌ ಸೌಲಭ್ಯ ಕಲ್ಪಿಸಲಾಗಿದೆ.

ಕೋವಿಡ್‌ ಆಸ್ಪತ್ರೆಯಾದ ಕಾರಣ ಹೆಚ್ಚಿನ ಸಿಬ್ಬಂದಿಯ ನೇಮಕಕ್ಕೂ ಸರ್ಕಾರ ಹಾಗೂ ಜಿಲ್ಲಾಡಳಿತ ಅವಕಾಶ ನೀಡಿತು. ಇದರಿಂದ 20 ಜನ ಸ್ಟಾಫ್‌ ನರ್ಸ್‌, 5 ಮಂದಿ ತಂತ್ರಜ್ಞರು, 10 ಜನ ‘ಡಿ’ ಗ್ರೂಪ್‌ ನೌಕರರು, ಮೂವರು ವೈದ್ಯರು (10 ವೈದ್ಯರ ಹುದ್ದೆ ಖಾಲಿ ಇದ್ದರೂ ಬಂದಿದ್ದು ಮೂವರು ಮಾತ್ರ) ಚಿಗಟೇರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವಂತಾಯಿತು.

‘ಜಿಲ್ಲಾ ಆಸ್ಪತ್ರೆ ಸೇರಿ ತಾಲ್ಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಬೆಡ್‌ಗಳ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕು ಆಸ್ಪತ್ರೆಗಳನ್ನು 50 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗರಾಜ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಅದಲ್ಲದೇ ನನ್ನ ಅಧೀನದಲ್ಲಿ ಗ್ರಾಮೀಣ ಭಾಗದಲ್ಲಿ ಕೆಲಸ ನಿರ್ವಹಿಸಲು 7 ಜನಸ್ಟಾಫ್‌ ನರ್ಸ್‌, 12 ಜನ ಫಾರ್ಮಾಸಿಸ್ಟ್‌ರನ್ನು ನೇಮಕ ಮಾಡಿಕೊಳ್ಳಲು ಅವಕಾಶ ಸಿಕ್ಕಿತು. 25 ಜನ ಲ್ಯಾಬ್‌ ಟೆಕ್ನಿಷಿಯನ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಅವರನ್ನು ಸದ್ಯ ಬಿಡುಗಡೆ ಮಾಡಲಾಗಿದೆ. ಮೊಬೈಲ್‌ ಟೀಂ ಮಾಡಿಕೊಂಡಿದ್ದು, ಅದರಲ್ಲಿ 72 ಜನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾರ್ಚ್‌ 31ಕ್ಕೆ ಅವರ ಅವಧಿಯೂ ಕೊನೆಗೊಳ್ಳಲಿದೆ’ ಎಂದು ತಿಳಿಸಿದರು.

ಸಿಬ್ಬಂದಿಯನ್ನು ಅಗತ್ಯಕ್ಕೆ ಅನುಗುಣವಾಗಿ ಬಿಡುಗಡೆ ಮಾಡಲಾಗುವುದು. ಆದರೆ, ಕೊರೊನಾ ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ಬಂದ ಎಲ್ಲ ಸೌಲಭ್ಯಗಳು ಮುಂದುವರಿಯಲಿವೆ ಎಂದು ಅವರು ತಿಳಿಸಿದರು.

ರೋಗಿಗಳ ಸಂಖ್ಯೆ ಹೆಚ್ಚಳ
ಆಸ್ಪತ್ರೆಗಳಲ್ಲಿನ ಸೌಲಭ್ಯಗಳ ಅಭಿವೃದ್ಧಿ ಕಾರಣ ಜಿಲ್ಲಾ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ಕೊಂಚ ಹೆಚ್ಚಳವಾಗಿದೆ. ಚಿಗಟೇರಿ ಆಸ್ಪತ್ರೆಯಲ್ಲಿ ಸದ್ಯ ಶಸ್ತ್ರಚಿಕಿತ್ಸೆ ಹೊರತುಪಡಿಸಿ ಎಲ್ಲ ಸೇವೆಗಳನ್ನು ನೀಡಲಾಗುತ್ತಿದೆ. ಹೀಗಾಗಿ ರೋಗಿಗಳು ಬರುತ್ತಿದ್ದಾರೆ. ಒಟಿ (ಆಪರೇಷನ್‌ ಥಿಯೇಟರ್)ಯನ್ನು ಕೊರೊನಾ ಕಾರಣಕ್ಕೆ ವರ್ಷದಿಂದ ಬಳಸಿಲ್ಲ. ಹೀಗಾಗಿ ಕೊಂಚ ರಿನೋವೇಷನ್‌ ಮಾಡುವ ಅಗತ್ಯ ಇದೆ. ಆ ಪ್ರಕ್ರಿಯೆ ನಡೆದಿದೆ. ಮಾರ್ಚ್‌ ತಿಂಗಳ ಕೊನೆ ವಾರದ ವೇಳೆಗೆಶಸ್ತ್ರಚಿಕಿತ್ಸೆ ಸೌಲಭ್ಯ ಆರಂಭಿಸಲಾಗುವುದು ಎಂದು ಡಿಎಚ್ಒ ಡಾ. ನಾಗರಾಜ್‌ ತಿಳಿಸಿದರು.

ತಾಲ್ಲೂಕು ಆಸ್ಪತ್ರೆಗಳಲ್ಲೂ ಐಸಿಯು: ಚಿಂತನೆ
‘ತಾಲ್ಲೂಕು ಆಸ್ಪತ್ರೆಗಳಲ್ಲೂ ತೀವ್ರ ನಿಗಾ ಘಟಕ (ಐಸಿಯು) ಮಾಡಬೇಕೆಂಬ ಚಿಂತನೆ ಇದೆ. ಆದರೆ ಅಲ್ಲಿ ಒಬ್ಬರೇ ತಾಲ್ಲೂಕು ವೈದ್ಯಾಧಿಕಾರಿ ಇರುತ್ತಾರೆ. ಅದರ ನಿರ್ವಹಣೆ, ಜವಾಬ್ದಾರಿಗೆ ಹೆಚ್ಚಿನ ಸಿಬ್ಬಂದಿ ಬೇಕು. ಸಿಬ್ಬಂದಿ ಕೊರತೆ ಕಾರಣ ಅದು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಮಾನವ ಸಂಪನ್ಮೂಲ ಇದ್ದರೆ ತಾಲ್ಲೂಕು ಆಸ್ಪತ್ರೆಗಳಲ್ಲೂ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕಾಣಬಹುದು’ ಎಂದು ಡಾ. ನಾಗರಾಜ್‌ ಆಶಾವಾದ ವ್ಯಕ್ತಪಡಿಸಿದರು.

‘ಜಿಲ್ಲಾ ಆಸ್ಪತ್ರೆಯಲ್ಲಿ ಸೌಲಭ್ಯ ಹೆಚ್ಚಿಸಿ’
ಕೊರೊನಾ ಸಂದರ್ಭದಲ್ಲಿಜಿಲ್ಲಾ ಆಸ್ಪತ್ರೆಯಲ್ಲಿ ಒಂದಿಷ್ಟು ಸೌಲಭ್ಯ ಬಂದಿದ್ದು ಉತ್ತಮ ಬೆಳವಣಿಗೆ. ಆದರೆ ಇನ್ನೂ ಹೆಚ್ಚಿನ ಸೌಲಭ್ಯದ ಅಗತ್ಯ ಇದೆ.ಈಗಲೂ ಪಿಎಪಿ ಟೆಸ್ಟ್ ವ್ಯವಸ್ಥೆ ಇಲ್ಲ. ಗರ್ಭಿಣಿಯರ ಹಲವು ಪರೀಕ್ಷೆಗೆ ಖಾಸಗಿ ಆಸ್ಪತ್ರೆಗೆ ಹೋಗಲು ಸೂಚಿಸುತ್ತಾರೆ. ಕೇಂದ್ರ ರಾಜ್ಯ ಸರ್ಕಾರಗಳು ಆರೋಗ್ಯ ವ್ಯವಸ್ಥೆ ಬಲಪಡಿಸಲು ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಬೇಕು ಎಂದು ಒತ್ತಾಯಿಸುತ್ತಾರೆ ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಅಧ್ಯಕ್ಷೆಜಬೀನಾ ಖಾನಂ.

ವಿವಿಧ ಯೋಜನೆಗಳ ಸೌಲಭ್ಯಕ್ಕೆ ವೈದ್ಯರ ಪ್ರಮಾಣಪತ್ರದ ಅವಶ್ಯಕತೆ ಇರುತ್ತದೆ. ಅದನ್ನು ಪಡೆಯಲು ಹೆಚ್ಚಿನ ಹಣ ನೀಡಬೇಕು. ಇದಕ್ಕೆ ಕಡಿವಾಣ ಹಾಕಿ, ಪ್ರತ್ಯೇಕ ಕೌಂಟರ್ ಮಾಡಬೇಕು ಎಂದು ಒತ್ತಾಯಿಸುತ್ತಾರೆ ಅವರು.

‘ಮಾನಸಿಕ ರೋಗಿಗಳಿಗೆ ಸೌಲಭ್ಯ ನೀಡಿ’
ಜಿಲ್ಲಾ ಆಸ್ಪತ್ರೆಯಲ್ಲಿ ಸೌಲಭ್ಯ ಬಂದರೂ ಅಗತ್ಯ ಸಿಬ್ಬಂದಿ ಇಲ್ಲ. ಸ್ವಚ್ಛತೆಗೆ ಹೆಚ್ಚಿನ ಗಮನಹರಿಸಬೇಕು. ‘ಡಿ’ ಗ್ರೂಪ್‌ ನೌಕರರಿಗೆ ಸೌಲಭ್ಯ ನೀಡಬೇಕು. ಮುಖ್ಯವಾಗಿ ಮಾನಸಿಕ ರೋಗಿಗಳಿಗೆ ಹೆಚ್ಚಿನ ಸೌಲಭ್ಯ ನೀಡಬೇಕು. ಅವರನ್ನು ಕಾಳಜಿಯಿಂದ ನೋಡಿಕೊಳ್ಳುವ ವ್ಯವಸ್ಥೆ ಬರಬೇಕು. ಆಸ್ಪತ್ರೆಗಳಿಗೆ ಸೌಲಭ್ಯ ಕಲ್ಪಿಸಲು ಸರ್ಕಾರಗಳು ಗಮನಹರಿಸಬೇಕು ಎಂದು ಒತ್ತಾಯಿಸುತ್ತಾರೆ ಹೋರಾಟಗಾರ ಹಾಗೂ ಸಫಾಯಿ ಕರ್ಮಚಾರಿ ಕಾವಲು ಸಮಿತಿಯ ಜಿಲ್ಲಾ ಸಂಚಾಲಕ ಡಿ.ಎಸ್‌. ಬಾಬಣ್ಣ.

ಆರೋಗ್ಯ ಕೇಂದ್ರದಲ್ಲಿ ಅಭಿವೃದ್ಧಿ
ಚನ್ನಗಿರಿ:
ತಾಲ್ಲೂಕಿನ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದೆ. ಚನ್ನಗಿರಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರವನ್ನು 50 ಹಾಸಿಗೆಗಳ ಆಸ್ಪತ್ರೆಯಾಗಿ ಅಭಿವೃದ್ಧಿಪಡಿಸಲಾಗಿದೆ. ವೆಂಟಿಲೇಟರ್ ಸೌಲಭ್ಯ ಕಲ್ಪಿಸಲಾಗಿದೆ. ಇದು ರೋಗಿಗಳಿಗೆ ವರದಾನವಾಗಿದೆ.

ಕೊರೊನಾ ಪ್ರಕರಣಗಳಿಗಾಗಿ ಚನ್ನಗಿರಿ ಪಟ್ಟಣ, ಕೆರೆಬಿಳಚಿ ಹಾಗೂ ಸಂತೇಬೆನ್ನೂರು ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ.

ತಾಲ್ಲೂಕು ಆಸ್ಪತ್ರೆಗೆ ಅಗತ್ಯವಾದ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ‌‌ಸಾಕಷ್ಟು ಔಷಧಗಳ ದಾಸ್ತಾನು ಕೂಡ ಇದೆ. ಜಿಲ್ಲಾ ಆರೋಗ್ಯ ಇಲಾಖೆಯಿಂದ ಔಷಧ ಸರಬರಾಜು ಮಾಡಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಬಿ.ಎಂ. ಪ್ರಭು ತಿಳಿಸಿದರು.

ಸರ್ಕಾರ ಆಸ್ಪತ್ರೆ ಈಗ ಸುಸಜ್ಜಿತ
ಜಗಳೂರು:
ಹಲವು ವರ್ಷಗಳಿಂದ ಮೂಲ ಸೌಲಭ್ಯಗಳಿಲ್ಲದೆ ಅವ್ಯವಸ್ಥೆಯ ತಾಣವಾಗಿದ್ದ ಸರ್ಕಾರಿ ಅಸ್ಪತ್ರೆಗಳಿಗೆ ಕೊರೊನಾ ಸಂದರ್ಭದಲ್ಲಿ ಪರೋಕ್ಷವಾಗಿ ಕಾಯಕಲ್ಪ ಸಿಕ್ಕಿದೆ.

ಪಟ್ಟಣದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲವು ತಿಂಗಳ ಹಿಂದೆ ವೆಂಟಿಲೇಟರ್ ಸೌಲಭ್ಯ ಇರಲಿಲ್ಲ. ಈಗ ಕಾರ್ಯನಿರ್ವಹಿಸುತ್ತಿವೆ.

ವೈದ್ಯರು, ಸಿಬ್ಬಂದಿ ಕೊರತೆಯಿಂದ ನಲುಗಿದ್ದ ಆಸ್ಪತ್ರೆಯಲ್ಲಿ ಇದೀಗ 15ಕ್ಕೂ ಹೆಚ್ಚು ವೈದ್ಯರು ಹಾಗೂ 20ಕ್ಕೂ ಹೆಚ್ಚು ಸ್ವಚ್ಛತಾ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.

‘ಶಾಸಕ ಎಸ್.ವಿ. ರಾಮಚಂದ್ರ ಅವರ ಕಾಳಜಿಯಿಂದಾಗಿ ತಾಲ್ಲೂಕು ಆಸ್ಪತ್ರೆಯಲ್ಲಿ ನೇತ್ರ, ಕಿವಿ, ಮೂಗು, ಗಂಟಲು ಹಾಗೂ ಶಸ್ತ್ರಚಿಕಿತ್ಸಾ ಸೇರಿ ಎಲ್ಲಾ ವಿಭಾಗಗಳಲ್ಲಿ ತಜ್ಞರ ನೇಮಕ ಆಗಿದೆ. 6 ವೆಂಟಿಲೇಟರ್‌ಗಳ ಪೈಕಿ ಎರಡು ವೆಂಟಿಲೇಟರ್‌ಗಳು ಕಾರ್ಯನಿರ್ವಹಿಸುತ್ತಿವೆ’ ಎಂದು ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ನೀರಜ್ ತಿಳಿಸಿದರು.

ತಾಲ್ಲೂಕು ಮಾತ್ರವಲ್ಲದೆ ಪಕ್ಕದ ಚಳ್ಳಕೆರೆ, ಮೊಳಕಾಲ್ಮುರು ಹಾಗೂ ಕೂಡ್ಲಿಗಿ ತಾಲ್ಲೂಕುಗಳಿಂದ ಪ್ರತಿನಿತ್ಯ ನೂರಾರು ರೋಗಿಗಳು ಈ ಆಸ್ಪತ್ರೆಗೆ ಬರುತ್ತಾರೆ. ಆಸ್ಪತ್ರೆ ಈಗ ಪ್ರಾಥಮಿಕ ಸೌಲಭ್ಯಗಳಿಂದ ಜನರ ಮೆಚ್ಚುಗೆಗೆ ಕಾರಣವಾಗಿದೆ.

ಸೌಲಭ್ಯ ಬಂತು: ಸಿಬ್ಬಂದಿ ಇಲ್ಲ
ಹರಪನಹಳ್ಳಿ:
ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್‌ ಚಿಕಿತ್ಸೆಗಾಗಿ ಪ್ರತ್ಯೇಕ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ.2 ವೆಂಟಿಲೇಟರ್‌ಗಳನ್ನು ಅಳವಡಿಸಿದ್ದು, ಒಬ್ಬ ವೈದ್ಯರಿಗೆ ನಿರ್ವಹಣಾ ತರಬೇತಿ ನೀಡಲಾಗಿದೆ.

ಕೊರೊನಾ ಸಮಯದಲ್ಲಿ ತುರ್ತು ಚಿಕಿತ್ಸೆ ನಿರ್ವಹಣೆಗೆ 5 ಜನ ಲ್ಯಾಬ್‍ ಟೆಕ್ನೀಷಿಯನ್‌, 5 ಜನ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಿಸಲಾಗಿದೆ. ಔಷಧ ಕೊರತೆ ಇಲ್ಲದಂತೆ ಜಾಗೃತಿ ವಹಿಸಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ್ ತಿಳಿಸಿದರು.

ಸಿಬ್ಬಂದಿ ಕೊರತೆ: ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಕಣ್ಣಿನ ತಜ್ಞರು, ಹೆರಿಗೆ ತಜ್ಞ ವೈದ್ಯರು ಇಲ್ಲದ ಪರಿಣಾಮ ರೋಗಿಗಳು ಪರದಾಡುವಂತಾಗಿದೆ. ಆಸ್ಪತ್ರೆಯಲ್ಲಿ 8 ತಿಂಗಳಿಂದ ಆಸ್ಪತ್ರೆಗೆ ಬರುವ ತುರ್ತು ಚಿಕಿತ್ಸೆಗೆ ಗರ್ಭಿಣಿಯರನ್ನು ದಾವಣಗೆರೆಗೆ ಶಿಫಾರಸು ಮಾಡುವುದು ಅನಿವಾರ್ಯವಾಗಿದೆ ಎಂದು ರೋಗಿಗಳು ದೂರುತ್ತಿದ್ದಾರೆ.

ತುರ್ತು ಚಿಕಿತ್ಸೆ ಸಂದರ್ಭದಲ್ಲಿ ಆಂಬುಲೆನ್ಸ್‌ಗಳು ಸಿಗುವುದಿಲ್ಲ. ಹೆಚ್ಚುವರಿ ಆಂಬುಲೆನ್ಸ್‌ ಒದಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.