ADVERTISEMENT

ಹೊನ್ನಾಳಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಬುರ್ಖಾಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2022, 12:32 IST
Last Updated 5 ಫೆಬ್ರುವರಿ 2022, 12:32 IST
   

ಹೊನ್ನಾಳಿ: ಕರಾವಳಿ ಜಿಲ್ಲೆಗಳಲ್ಲಿ ಸದ್ದು ಮಾಡುತ್ತಿದ್ದ ಹಿಜಾಬ್ ಮತ್ತು ಕೇಸರಿ ಶಾಲು ಧರಿಸಿ ಬರುವ ವಿಚಾರ, ಇದೀಗ ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲೂ ಶನಿವಾರ ಸಣ್ಣದಾಗಿ ಸದ್ದು ಮಾಡಿದೆ.

‘ತರಗತಿಗಳಲ್ಲಿ ವಿದ್ಯಾರ್ಥಿನಿಯರು ಬುರ್ಖಾ ಧರಿಸುವುದನ್ನು ನಿಷೇಧಿಸಿ’ ಎಂದು ಕೆಲ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ಮನವಿ ಮಾಡಿದರು.

ಕಾಲೇಜಿನ ವಿದ್ಯಾರ್ಥಿಗಳ ಪೈಕಿ ರೋಹನ್ ಹಾಗೂ ಇತರ ಐವರು ವಿದ್ಯಾರ್ಥಿಗಳು ಲಿಖಿತ ಮನವಿ ಸಲ್ಲಿಸಿದ್ದು, ಅದಕ್ಕೆ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಸಹಿ ಹಾಕಿಸಿದ್ದಾರೆ. ಆದರೆ, ಮನವಿಯಲ್ಲಿ ‘ಹಿಜಾಬ್’ ಎಂದು ಎಲ್ಲಿಯೂ ನಮೂದಿಸಿಲ್ಲ. ‘ಬುರ್ಖಾ’ ನಿಷೇಧಿಸಿ ಎಂದು ಮಾತ್ರ ಇದೆ.

ADVERTISEMENT

‘ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಬರುವಾಗ ಹೇಗಾದರೂ ಬರಲಿ. ಆದರೆ, ತರಗತಿಯೊಳಗೆ ಬುರ್ಖಾ ಧರಿಸದಂತೆ ಸೂಚನೆ ನೀಡಬೇಕು. ಇಲ್ಲದಿದ್ದರೆ ನಾವು ಪ್ರತಿಭಟಿಸಬೇಕಾಗುತ್ತದೆ. ನಾವೂ ಕೇಸರಿ ಶಾಲು ಧರಿಸಿ ಬರಬೇಕಾಗುತ್ತದೆ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಪ್ರಾಂಶುಪಾಲರಿಗೆ ಮನವಿ ಕೊಡುವಾಗಲೂ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡಿದ್ದು ಕಂಡು ಬಂತು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾಲೇಜಿನ ಪ್ರಾಂಶುಪಾಲ ಬಸಪ್ಪ ಎಚ್. ಎತ್ತಿನಹಳ್ಳಿ, ‘ನಮ್ಮ ಕಾಲೇಜಿನಲ್ಲಿ ಯೂನಿಫಾರ್ಮ್ ಕಡ್ಡಾಯವಿಲ್ಲ. ಸಮವಸ್ತ್ರಕ್ಕೆ ಸಂಬಂಧಿಸಿದ ಯಾವುದೇ ಆದೇಶವಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಶಾಂತವಾಗಿ ಕುಳಿತು ಪಾಠ ಕೇಳಬೇಕು. ಯಾವುದೇ ವಿಚಾರ ಕುರಿತು ಗಲಾಟೆ ಮಾಡುವಂತಿಲ್ಲ. ಬುರ್ಖಾ ಅಥವಾ ಹಿಜಾಬ್ ಕುರಿತು ಗಲಾಟೆ ಮಾಡಿದರೆ ಪೊಲೀಸರಿಗೆ ದೂರು ನೀಡಲಾಗುವುದು’ ಎಂದು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು.

ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಹಾಗೂ ಕಾಲೇಜು ಶಿಕ್ಷಣ ಇಲಾಖೆಗೆ ಬುರ್ಖಾ ಹಾಗೂ ಕೇಸರಿ ಶಾಲು ವಿಚಾರ ಕುರಿತು ಸೂಕ್ತ ನಿರ್ದೇಶನ ನೀಡುವಂತೆ ಕೋರಲಾಗಿದೆ ಎಂದು ಪ್ರಾಂಶುಪಾಲರು ಸ್ಪಷ್ಟಪಡಿಸಿದರು.

‘ಅತಿಥಿ ಉಪನ್ಯಾಸಕರು ಎರಡು ತಿಂಗಳ ಕಾಲ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದ್ದರಿಂದ ಸರಿಯಾಗಿ ತರಗತಿಗಳು ನಡೆದಿರಲಿಲ್ಲ. ಆದರೆ, ಈಗ ಎಲ್ಲವೂ ಬಗೆಹರಿದಿದ್ದು, ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುವುದಾಗಿ ವರದಿ ಮಾಡಿಕೊಂಡಿದ್ದಾರೆ. ಆದ್ದರಿಂದ ಸೋಮವಾರದಿಂದ ಕಾಲೇಜು ಯಥಾವತ್ತಾಗಿ ನಡೆಯಲಿದೆ. ಮಾರ್ಚ್ ತಿಂಗಳಲ್ಲಿ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ಹೀಗಾಗಿ ವಿದ್ಯಾರ್ಥಿಗಳು ಇಂತಹ ವಿಚಾರಗಳನ್ನು ಕೈಬಿಟ್ಟು ಪಾಠಗಳತ್ತ ಗಮನಹರಿಸಬೇಕು’ ಎಂದು ಬಸಪ್ಪ ಎಚ್. ಎತ್ತಿನಹಳ್ಳಿ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.