ಹರಿಹರ: ಸುಳ್ಳು ಸಾಲ ಸೃಷ್ಟಿಸಿ, ಬ್ಯಾಂಕ್ ಖಾತೆಯಿಂದ ಹಣ ಕಡಿತ ಮಾಡಿಕೊಳ್ಳುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಹಕರೊಬ್ಬರಿಗೆ ₹50 ಸಾವಿರ ಪರಿಹಾರ ಹಾಗೂ ₹ 10 ಸಾವಿರ ದಾವೆಯ ಖರ್ಚು ನೀಡುವಂತೆ ರಾಜ್ಯ ಗ್ರಾಹಕರ ಆಯೋಗವುಬಜಾಜ್ ಫೈನಾನ್ಸ್ ಮತ್ತು ನಗರದ ಟಿವಿ ಏಜೆನ್ಸಿಯೊಂದಕ್ಕೆ ನಿರ್ದೇಶನ ನೀಡಿದೆ.
ನಗರದ ಮೀನಾಕ್ಷಿ ಎಂಬುವರು 2017ರ ಜೂನ್ ತಿಂಗಳಿನಲ್ಲಿ ಹರಿಹರದ ಟಿವಿ ಏಜೆನ್ಸಿಯಿಂದ ಬಜಾಜ್ ಫೈನಾನ್ಸ್‌ನ ಸಾಲ ಸೌಲಭ್ಯದಡಿ ಯುಪಿಎಸ್ ಖರೀದಿಸಿ ದ್ದರು. ಸಾಲದ ತಿಂಗಳ ಕಂತು ಅವರ ಕೆನರಾ ಬ್ಯಾಂಕ್ ಖಾತೆಯಿಂದ ಇಸಿಎಸ್ ಮೂಲಕ ಜಮೆಯಾಗುತ್ತಿದ್ದವು.
ಈ ಮಧ್ಯೆ ಅವರಿಗೆ ಸಂಬಂಧವೇ ಇಲ್ಲದ ಮತ್ತೊಂದು ಸಾಲದ ಖಾತೆಗೂ ಹಣ ಕಡಿತವಾಗ ತೊಡಗಿತ್ತು. ಇದು ತಿಳಿದ ತಕ್ಷಣವೇ ಅವರು, ಸಾಲ ಪಡೆಯದಿರುವುದರಿಂದ ನನ್ನ ಖಾತೆಯಿಂದ ಹಣ ನೀಡಬಾರದು ಎಂದು ಸ್ಥಳೀಯ ಬ್ಯಾಂಕ್ ಅಧಿಕಾರಿಗಳಿಗೆಮನವಿ ಮಾಡಿದ್ದರು. ‘ಇದು ಮುಂಬೈ ಕೇಂದ್ರ ಕಚೇರಿಯಿಂದ ನಡೆಯುವ ಪ್ರಕ್ರಿಯೆ. ನಾವು ನಿಲ್ಲಿಸಲಾಗದು’ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದರು.
ಬಳಿಕ ಇದನ್ನು ಪರಿಶೀಲಿಸಿದಾಗ ಬಜಾಜ್ ಫೈನಾನ್ಸ್‌ನ ಸ್ಥಳೀಯ ಸಿಬ್ಬಂದಿ ಮತ್ತು ಇತರರು ಶಾಮೀಲಾಗಿ ಮೀನಾಕ್ಷಿ ಅವರ ಹೆಸರಿನಲ್ಲಿ ₹ 73 ಸಾವಿರ ಮೊತ್ತದ ಮತ್ತೊಂದು ನಕಲಿ ಸಾಲ ಸೃಷ್ಟಿಸಿ, ಅದಕ್ಕೆ ಹಣ ಜಮೆ ಮಾಡಿಕೊಳ್ಳುತ್ತಿರುವುದು ಗೊತ್ತಾಯಿತು. ಇದರ ವಿರುದ್ಧ 2019ರ ಮಾರ್ಚ್ 22 ಅವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ದೂರು ದಾಖಲಿಸಿದ್ದರು.
ವಿಚಾರಣೆ ವೇಳೆ ಬಜಾಜ್ ಫೈನಾನ್ಸ್ ತಮ್ಮ ಕೆಲ ಸಿಬ್ಬಂದಿ ನಕಲಿ ಸಾಲ ಸೃಷ್ಟಿಸಿದ್ದನ್ನು ಒಪ್ಪಿಕೊಂಡಿತ್ತು. ಹೀಗಾಗಿ ಮೀನಾಕ್ಷಿ ಅವರಿಗೆ ನಕಲಿ ಸಾಲಕ್ಕೆ ಕಡಿತವಾದ ₹ 15 ಸಾವಿರ, ಪರಿಹಾರವಾಗಿ ₹3 ಸಾವಿರ ಹಾಗೂ ₹ 3 ಸಾವಿರ ದಾವೆಯ ಖರ್ಚನ್ನು 30 ದಿನದೊಳಗೆ ನೀಡುವಂತೆ ವೇದಿಕೆಯ ಅಂದಿನ ಅಧ್ಯಕ್ಷ ಗೋಖಲೆ ಜಿ. ಹಾಗೂ ಸದಸ್ಯರಾದ ಶಿವಕುಮಾರ್ ಅವರು 2021ರ ಆಗಸ್ಟ್ 16ರಂದು ಆದೇಶಿಸಿದ್ದರು.
ಆದರೆ, ವೇದಿಕೆಯ ಮಹಿಳಾ ಸದಸ್ಯರಾದ ಜ್ಯೋತಿ ರಾಧೇಶ್ ಜಂಬಗಿ ಅವರು ಪ್ರತಿವಾದಿಗಳಿಂದ ಸೇವಾ ನ್ಯೂನತೆಯಾಗಿಲ್ಲ ಎಂದು ದೂರು ತಿರಸ್ಕರಿಸಿ ಪ್ರತ್ಯೇಕ ಆದೇಶ ಮಾಡಿದ್ದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಆದೇಶ ಪ್ರಶ್ನಿಸಿ, ನಗರದ ಗಾಂಧಿ ವೃತ್ತದಲ್ಲಿರುವ ಟಿವಿ ಏಜೆನ್ಸಿಯವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ರಾಜ್ಯ ಗ್ರಾಹಕರ ಆಯೋಗವು ಪರಿಹಾರ ಮೊತ್ತವನ್ನು ₹ 3 ಸಾವಿರದಿಂದ ₹50 ಸಾವಿರ ಹೆಚ್ಚಿಸಿದೆ. ಅಲ್ಲದೆ ದಾವೆ ಖರ್ಚು ₹10 ಸಾವಿರ ನೀಡಬೇಕು ಎಂದು ಆದೇಶಿಸಿದೆ. 60 ದಿನದೊಳಗೆ ಆದೇಶ ಪಾಲಿಸದಿದ್ದರೆ ದೂರು ದಾಖಲಿಸಿದ ದಿನದಿಂದ ಶೇ 6ರ ದರದಲ್ಲಿ ಬಡ್ಡಿ ಸೇರಿಸಿ ನೀಡಬೇಕು ಎಂದು ಸೂಚಿಸಿದೆ. ದೂರುದಾರರ ಪರವಾಗಿ ನಗರದ ಹಿರಿಯ ವಕೀಲರಾದ ಬಿ.ಎಂ.ಸಿದ್ದಲಿಂಗಸ್ವಾಮಿ, ಇನಾಯತ್ ಉಲ್ಲಾ ಟಿ., ಜಿ.ಎಚ್. ಭಾಗೀರಥಿ ವಾದ ಮಂಡಿಸಿದ್ದರು.
‘ಮಹಿಳಾ ಸದಸ್ಯರದ್ದು ನ್ಯಾಯಿಕ ಅಶಿಸ್ತು’
ಜಿಲ್ಲಾ ಗ್ರಾಹಕರ ವೇದಿಕೆಯ ಅಧ್ಯಕ್ಷರು ಮತ್ತು ಒಬ್ಬ ಸದಸ್ಯರ ಬಹುಮತದ ಆದೇಶಕ್ಕೆ ವಿರುದ್ಧವಾಗಿ ದೂರು ವಜಾ ಮಾಡಿರುವ ಹಿಂದಿನ ಮಹಿಳಾ ಸದಸ್ಯೆ ಜ್ಯೋತಿ ರಾಧೇಶ್ ಜಂಬಗಿ ಅವರ ಕ್ರಮ ನ್ಯಾಯಿಕ ಅಶಿಸ್ತಿನಿಂದ ಕೂಡಿದೆ ಎಂದು ರಾಜ್ಯ ಗ್ರಾಹಕರ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್, ಸದಸ್ಯರಾದ ಕೆ.ಬಿ. ಸಂಗಣ್ಣನವರ್ ಮತ್ತು ಎಂ.ದಿವ್ಯಶ್ರಿ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
‘ಗ್ರಾಹಕಿಯ ಹೆಸರಿನಲ್ಲಿ ನಕಲಿ ಸಾಲ ಸೃಷ್ಟಿಸಿರುವುದನ್ನು ಸ್ವತಃ ಎದುರುದಾರರೇ ಒಪ್ಪಿಕೊಂಡಿದ್ದಾರೆ. ಆದರೆ, ದೂರು ದಾಖಲಿಸುವ ಮುನ್ನವೇ ನಕಲಿ ಸಾಲ ಕ್ಲೋಸ್ ಮಾಡಿರುವುದರಿಂದ ಸೇವಾ ನ್ಯೂನತೆಯಾಗಿಲ್ಲ ಎಂದು ಮಹಿಳಾ ಸದಸ್ಯೆ ದೂರು ವಜಾ ಮಾಡಿರುವುದು ದುರದೃಷ್ಟಕರ. ಗ್ರಾಹಕರ ಹಿತರಕ್ಷಣಾ ಕಾಯ್ದೆಯಲ್ಲಿ ಈ ರೀತಿ ಪ್ರತ್ಯೇಕ ಆದೇಶ ಮಾಡಲು ಅವಕಾಶವಿಲ್ಲ. ಕಾಯ್ದೆಯ ಸೆಕ್ಷನ್ 14(2ಎ) ಪ್ರಕಾರ ಆಯೋಗದ ಒಬ್ಬ ಸದಸ್ಯರಿಗೆ ಪ್ರಕರಣದ ವಿವಾದದ ಅಂಶದ ಬಗ್ಗೆ ಭಿನ್ನಾಭಿಪ್ರಾಯವಿದ್ದರೆ ಅದನ್ನು ಇತರೆ ಸದಸ್ಯರಿಗೆ ತಿಳಿಸಿ, ಆ ಅಂಶಗಳ ಬಗ್ಗೆ ಪ್ರಕರಣವನ್ನು ಪರಿಶೀಲಿಸುವಂತೆ ನೋಡಿಕೊಳ್ಳಬೇಕೇ ವಿನಾ ಪ್ರತ್ಯೇಕ ಆದೇಶ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ತಿಳಿಸಿದೆ.
‘ಮಹಿಳಾ ಸದಸ್ಯರು ಮಾಡಿರುವ ಪ್ರತ್ಯೇಕ ಆದೇಶ, ಆದೇಶವೇ ಅಲ್ಲ. ಅದಕ್ಕೆ ಕಾನೂನು ಮಾನ್ಯತೆಯಿಲ್ಲ. ಅವರು ತಮ್ಮ ವ್ಯಾಪ್ತಿ ಮೀರಿ ಅಧಿಕಾರ ಚಲಾಯಿಸಿದ್ದಾರೆ. ಇದು ಕಾನೂನು ಉಲ್ಲಂಘನೆ ಮಾತ್ರವಲ್ಲದೆ ನ್ಯಾಯಿಕ ಅಶಿಸ್ತಾಗಿದೆ’ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.