ADVERTISEMENT

ನಿಲುಗಡೆ ಶುಲ್ಕದ ನೆಪದಲ್ಲಿ ಹಣ ಲೂಟಿ: ಬಿಸಿಲಲ್ಲೇ ವಾಹನ ನಿಲುಗಡೆ, ಸವಾರರ ಪರದಾಟ

ರಾಘವೇಂದೆ ಕೆ.
Published 28 ಏಪ್ರಿಲ್ 2019, 19:50 IST
Last Updated 28 ಏಪ್ರಿಲ್ 2019, 19:50 IST
ಹರಿಹರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಬಿಸಿಲಿನಲ್ಲಿ ನಿಂತಿರುವ ಬೈಕ್‌ಗಳು
ಹರಿಹರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಬಿಸಿಲಿನಲ್ಲಿ ನಿಂತಿರುವ ಬೈಕ್‌ಗಳು   

ಹರಿಹರ: ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ವಾಹನ ನಿಲುಗಡೆಗೆ ಚಾವಣಿ, ಭದ್ರತಾ ವ್ಯವಸ್ಥೆ ಸೌಲಭ್ಯ ಇಲ್ಲ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ.

ಸೌಲಭ್ಯವಿಲ್ಲದಿದ್ದರೂ ವಾಹನ ನಿಲುಗಡೆಗೆ ನಿಗದಿತ ಶುಲ್ಕ ಪಾವತಿಸಬೇಕಾಗಿದೆ ಎಂಬುದು ಸವಾರರ ಆರೋಪ.

ದ್ವಿಚಕ್ರ ವಾಹನಕ್ಕೆ ₹ 5 ಹಾಗೂ ಲಘು ವಾಹನಗಳಿಗೆ ₹ 10 ನಿಲುಗಡೆ ಶುಲ್ಕ ವಿಧಿಸಲಾಗುತ್ತದೆ. ಆಸ್ಪತ್ರೆಯಲ್ಲಿ ನಿತ್ಯ 90ಕ್ಕೂ ಹೆಚ್ಚು ಒಳರೋಗಿಗಳಿರುತ್ತಾರೆ. 500ಕ್ಕೂ ಹೆಚ್ಚು ಹೊರರೋಗಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ನಿತ್ಯ ಕನಿಷ್ಠ 400ಕ್ಕೂ ಹೆಚ್ಚು ದ್ವಿಚಕ್ರ ಹಾಗೂ ಲಘುವಾಹನ ಆಸ್ಪತ್ರೆ ಆವರಣದಲ್ಲಿ ನಿಲುಗಡೆಯಾಗುತ್ತವೆ. ಅವರಿಂದ ಗುತ್ತಿಗೆದಾರರು ನಿತ್ಯ ₹ 2ಸಾವಿರಕ್ಕೂ ಹೆಚ್ಚು ಶುಲ್ಕ ಸಂಗ್ರಹಿಸುತ್ತಿದ್ದಾರೆ. ಯಾವುದೇ ಸೌಲಭ್ಯ ನೀಡದೇ ಗ್ರಾಹಕರಿಂದ ನಿಲುಗಡೆ ಶುಲ್ಕ ಸಂಗ್ರಹಿಸುತ್ತಿರುವುದು ಹಗಲು ದರೋಡೆ ಎಂಬುದು ವಾಹನ ಮಾಲೀಕರ ಆರೋಪ.

ADVERTISEMENT

ನಿಲುಗಡೆ ಗುತ್ತಿಗೆ ಪ್ರಕ್ರಿಯೆ ಸರ್ಕಾರಿ ಮಾನದಂಡಗಳಿಗೆ ಅನುಗುಣವಾಗಿ ನಡೆಯಬೇಕಾದುದು ನಿಯಮ. ಆಸ್ಪತ್ರೆಯಲ್ಲಿ ಯಾವುದೇ ನಿಯಮ ಪಾಲನೆಯಾಗಿಲ್ಲ. ಕನಿಷ್ಠ ಆರೋಗ್ಯ ಸಮಿತಿ ಸದಸ್ಯರಿಗೂ ಈ ಬಗ್ಗೆ ಮಾಹಿತಿ ಇಲ್ಲ. ನಿಲುಗಡೆ ಗುತ್ತಿಗೆ ಅವಧಿ ಪೂರ್ಣಗೊಂಡು 5 ತಿಂಗಳಾದರೂ ನವೀಕರಣಗೊಳಿಸದೇ ಶುಲ್ಕ ಸಂಗ್ರಹಣೆ ಮುಂದುವರಿಸಿರುವುದು ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿ ಎಂದು ಸಾರ್ವಜನಿಕ ಆಸ್ಪತ್ರೆ ನಾನ್‍ಕ್ಲಿನಿಕಲ್‍ ನೌಕರರ ಸಂಘದಗೌರವಾಧ್ಯಕ್ಷ ಎಚ್‍.ಕೆ. ಕೊಟ್ರಪ್ಪ ದೂರುತ್ತಾರೆ.

ವಾರ್ಷಿಕ ₹ 1,500 ಭದ್ರತಾ ಠೇವಣಿ ಹಾಗೂ ಮಾಸಿಕ ₹ 1,400 ಬಾಡಿಗೆ ಆಧಾರದಲ್ಲಿ ಚಾವಣಿ ಹಾಗೂ ಭದ್ರತಾ ವ್ಯವಸ್ಥೆ ನಿರ್ಮಿ‍ಸಿಕೊಳ್ಳುವ ಕರಾರಿನ ಮೇಲೆ 2017ರಲ್ಲಿ ಖುರ್ಷಿದ್‍ ಬೇಗ್‍ ಎಂಬುವರಿಗೆ ವಾಹನ ನಿಲುಗಡೆ ಟೆಂಡರ್‍ ನೀಡಲಾಗಿತ್ತು. ಗುತ್ತಿಗೆದಾರರು 5 ತಿಂಗಳುಗಳಿಂದ ಮಾಸಿಕ ಬಾಡಿಗೆ ಪಾವತಿಸದೇ ನಿಲುಗಡೆ ಶುಲ್ಕ ಸಂಗ್ರಹಿಸುತ್ತಿದ್ದಾರೆ. ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಅವರೂ ಇದರಲ್ಲಿ ಶಾಮೀಲಾಗಿರಬಹುದು ಎಂಬ ಅನುಮಾನ ಮೂಡಿಸಿದೆ ಎಂದು ಅವರು ಆರೋಪಿಸುತ್ತಾರೆ.

ಸಾರ್ವಜನಿಕ ಆಸ್ಪತ್ರೆಯಲ್ಲಿ ಜಾತಿ ಹಾಗೂ ಹಣದ ಪ್ರಭಾವದಿಂದ ಕೆಲ ಸಿಬ್ಬಂದಿ ಆಯಕಟ್ಟಿನ ಸ್ಥಳದಲ್ಲಿ ಆಕ್ರಮಿಸಿಕೊಂಡಿರುವುದು ಆಸ್ಪತ್ರೆಯ ಆಡಳಿತ ವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿ. ನಿಯಮಗಳಿಗೆ ಅನುಗುಣವಾಗಿ ಜನರಿಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಿ ನಂತರ ವಾಹನ ನಿಲುಗಡೆ ಶುಲ್ಕ ಸಂಗ್ರಹಿಸಲಿ ಎಂಬುವುದು ಸಾರ್ವಜನಿಕರ ಆಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.