ADVERTISEMENT

ಹರಿಹರ: ಆತಂಕ ಮೂಡಿಸಿದ ‘ಓವರ್‌ಲೋಡ್’ ಕಬ್ಬು ಸಾಗಣೆ ವಾಹನಗಳು

ದುರಂತ ನಡೆಯುವ ಮುನ್ನ ಬೇಕು ನಿಯಂತ್ರಣ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 5:13 IST
Last Updated 17 ನವೆಂಬರ್ 2024, 5:13 IST
ಹರಿಹರ ಹೊರವಲಯದ ಕರಲಹಳ್ಳಿ ಬಳಿ ಹೊಸಪೇಟೆ-ಶಿವಮೊಗ್ಗ ಹೆದ್ದಾರಿಯಲ್ಲಿ ಅ.9ರಂದು ಕಬ್ಬು ಸಾಗಣೆಯ ಡಬಲ್ ಟ್ರ್ಯಾಲಿ ಟ್ರ್ಯಾಕ್ಟರ್ ಉರುಳಿ ಬಿದ್ದು ಬೆಳಿಗ್ಗೆಯಿಮದ ಸಂಜೆವರೆಗೂ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು
ಹರಿಹರ ಹೊರವಲಯದ ಕರಲಹಳ್ಳಿ ಬಳಿ ಹೊಸಪೇಟೆ-ಶಿವಮೊಗ್ಗ ಹೆದ್ದಾರಿಯಲ್ಲಿ ಅ.9ರಂದು ಕಬ್ಬು ಸಾಗಣೆಯ ಡಬಲ್ ಟ್ರ್ಯಾಲಿ ಟ್ರ್ಯಾಕ್ಟರ್ ಉರುಳಿ ಬಿದ್ದು ಬೆಳಿಗ್ಗೆಯಿಮದ ಸಂಜೆವರೆಗೂ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು   

ಹರಿಹರ: ಓವರ್‌ಲೋಡ್ ಕಬ್ಬು ಸಾಗಣೆಯ ವಾಹನಗಳ ಅರ್ಭಟ ಈಗ ಮತ್ತೆ ಆರಂಭವಾಗಿದ್ದು, ನಗರದಲ್ಲಿ ಸಂಚಾರ ಮಾಡುವ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಾಗುವಂತಾಗಿದೆ.

ಅಕ್ಟೋಬರ್ ಕೊನೆಯ ವಾರದಿಂದ ಕಬ್ಬುಸಾಗಣೆಯ ಡಬಲ್ ಟ್ರ್ಯಾಲಿ ಟ್ರ್ಯಾಕ್ಟರ್, ಲಾರಿಗಳ ಸಂಚಾರ ಅರ್ಭಟ ಆರಂಭವಾಗಿದೆ. ವಾಹನ ಎಲ್ಲಿ ಉರುಳಿ ಬೀಳುತ್ತದೆಯೋ ಎಂದು ಆತಂಕವಾಗುವಂತೆ ಕಬ್ಬನ್ನು ಲೋಡ್ ಮಾಡಲಾಗಿರುತ್ತದೆ.

ಒಂದು ಟ್ರ್ಯಾಲಿಯಲ್ಲಿ ಎರಡು ಟ್ರ್ಯಾಲಿಯಷ್ಟು ಕಬ್ಬು ಲೋಡ್ ಮಾಡಲಾಗಿರುತ್ತದೆ. ಇಂತಹ ಎರಡು ಟ್ರ್ಯಾಲಿಗಳನ್ನು ಒಂದು ಟ್ರ್ಯಾಕ್ಟರ್ ಎಂಜಿನ್‌ಗೆ ಜೋಡಿಸಿ ಸಾಗಣೆ ಮಾಡಲಾಗುತ್ತದೆ. ಲಾರಿಗಳಲ್ಲಿಯೂ ಕೂಡ ಅಪಾಯಕಾರಿ ಎನಿಸುವಷ್ಟು ಪ್ರಮಾಣದಲ್ಲಿ ಕಬ್ಬು ಸಾಗಣೆ ನಡೆಯುತ್ತಿದೆ.

ADVERTISEMENT

ಕಬ್ಬು ಸಾಗಣೆ ಟ್ರ್ಯಾಕ್ಟರ್‌ಗೆ ಸಿಲುಕಿ ನಾಲ್ಕು ವರ್ಷಗಳ ಹಿಂದೆ ನಗರದ ನಾಡಬಂದ್‌ ಷಾವಲಿ ದರ್ಗಾ ಬಳಿ ಬಾಲಕನೊಬ್ಬ ಮೃತಪಟ್ಟಿದ್ದ. ಹಲವೆಡೆ ರಸ್ತೆಗೆ ಉರುಳಿ ಬಿದ್ದು ಹಲವು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ತೊಡಕುಂಟಾಗಿರುವ ಪ್ರಕರಣಗಳೂ ನಡೆಯುತ್ತಿವೆ.

ಇದೇ ಅ.9 ರಂದು ಕರಲಹಳ್ಳಿ ಬಳಿ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಕಬ್ಬು ಸಾಗಣೆಯ ಡಬಲ್ ಟ್ರ್ಯಾಲಿ ಟ್ರ್ಯಾಕ್ಟರೊಂದು ಬೆಳಗಿನಜಾವ ಉರುಳಿ ಬಿದ್ದಿತ್ತು. ಕಬ್ಬು ಸಾಗಣೆ ಗುತ್ತಿಗೆದಾರ ತನ್ನ ಕೂಲಿಕಾರರನ್ನು ಕರೆಸಿ ಕಬ್ಬನ್ನು ಲೋಡ್ ಮಾಡುವಷ್ಟರಲ್ಲಿ ಸಂಜೆ ಆಗಿತ್ತು. ಅಲ್ಲಿವೆರೆಗೂ ಆ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು. ಹಾವೇರಿ ಜಿಲ್ಲೆ ಭಾಗದಿಂದ ಕಬ್ಬು ಲೋಡ್ ಮಾಡಿದ ಲಾರಿ ಮತ್ತು ಟ್ರ್ಯಾಕ್ಟರ್‌ಗಳು ನಗರದೊಳಗೆ ಬೀರೂರು-ಸಮ್ಮಸಗಿ ಹೆದ್ದಾರಿ (ತುಂಗಭದ್ರಾ ಸೇತುವೆ) ಮೂಲಕ ಪ್ರವೇಶಿಸುತ್ತವೆ. ನಂತರ ಗಾಂಧಿ ವೃತ್ತದ ಮೂಲಕ ಹರಪನಹಳ್ಳಿ ಕಡೆಗೆ ಹೊಸಪೇಟೆ-ಶಿವಮೊಗ್ಗ ಹೆದ್ದಾರಿಯಲ್ಲಿ ಸಾಗುತ್ತವೆ.

ನಗರದ ವ್ಯಾಪ್ತಿಯಲ್ಲಿ ಒಟ್ಟು ನಾಲ್ಕು ಕಿ.ಮೀ. ಈ ವಾಹನಗಳು ಸಾಗುತ್ತವೆ. ನಿಗದಿಗಿಂತ ಹೆಚ್ಚಿನ ಭಾರ ಹಾಗೂ ಹೆಚ್ಚಿನ ಗಾತ್ರದಲ್ಲಿ ಲೋಡ್ ಮಾಡಿಕೊಂಡು ಸಾಗುತ್ತಿರುವುದರಿಂದ ಈ ವಾಹನಗಳನ್ನು ಕಂಡರೆ ಜನತೆ ಆತಂಕ ಪಡುವಂತಾಗಿದೆ.

ಅತಿಯಾದ ಭಾರ ಹಾಗೂ ಗಾತ್ರದಿಂದಾಗಿ ಈ ವಾಹನಗಳು ತೆವಳುತ್ತಾ ಸಾಗುವಾಗ ಓಲಾಡುತ್ತವೆ. ಈ ವಾಹನದ ಹಿಂದೆ ಸಂಚರಿಸುವ ಬೇರೆ ವಾಹನ ಸವಾರರು ಈ ಕಬ್ಬಿನ ವಾಹನವನ್ನು ಹೇಗೆ ಓವರ್ ಟೇಕ್ ಮಾಡುವುದು, ಎಲ್ಲಿ ತಮ್ಮ ವಾಹನದ ಮೇಲೆ ಬೀಳುತ್ತದೋ ಎಂಬ ಆತಂಕದಲ್ಲಿ ಸಾಗುತ್ತಾರೆ.

ಬೆಳಿಗ್ಗೆ ಮತ್ತು ಸಂಜೆ ಶಾಲೆಗಳು ಆರಂಭ ಹಾಗೂ ಬಿಡುವ ಸಮಯದಲ್ಲಿ ನಗರದೊಳಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುವ ಆಟೊ, ಕಾರು ಸಂಚಾರ ಅಧಿಕವಾಗಿರುತ್ತವೆ. ಆ ಸಮಯದಲ್ಲಿ ಕಬ್ಬು ಸಾಗಣೆ ವಾಹನಗಳ ಸಂಚಾರವೂ ಅಧಿಕವಾಗಿರುತ್ತದೆ. ಅಕಸ್ಮಾತ್ ಅಪಘಾತ ನಡೆದರೆ ದೊಡ್ಡ ದುರಂತ ಸಂಭವಿಸುತ್ತದೆ. ಸಂಬಂಧಿತ ಇಲಾಖಾ ಅಧಿಕಾರಿಗಳು ಓವರ್ ಲೋಡ್ ಕಬ್ಬು ಸಾಗಣೆ ಮಾಡದಂತೆ ಕ್ರಮ ವಹಿಸಬೇಕೆಂಬುದು ನಾಗರಿಕರ ಆಗ್ರಹವಾಗಿದೆ.

ಹರಪನಹಳ್ಳಿ ಹೆದ್ದಾರಿಯ ರೈಲ್ವೆ ಅಂಡರ್ ಬ್ರಿಡ್ಜ್‌ನಲ್ಲಿ ಕಬ್ಬು ಸಾಗಣೆಯ ವಾಹನಗಳು ಏದುಸಿರು ಬಿಡುತ್ತಾ ಸಾಗುವಾಗ ಆ ವಾಹನಗಳು ಎಲ್ಲಿ ಹಿಂದಕ್ಕೆ ಜಾರುತ್ತವೆಯೋ ಅಕ್ಕಪಕ್ಕ ವಾಲುತ್ತವೆಯೋ ಎಂಬ ಆತಂಕ ಉಂಟಾಗುತ್ತದೆ.
-ಆರಿಫ್ ಪಾಷಾ, ವಿದ್ಯಾರ್ಥಿಗಳನ್ನು ಕರೆದೊಯ್ಯುವ ಆಟೊ ಚಾಲಕ
ಸಿಬ್ಬಂದಿ ಕೊರತೆಯಿಂದಾಗಿ ಓವರ್‌ಲೋಡ್ ವಾಹನಗಳ ತಪಾಸಣೆ ಮಾಡಲಾಗುತ್ತಿಲ್ಲ. ಆದರೂ ಕೂಡ ಕಬ್ಬು ಸಾಗಣೆದಾರರಿಗೆ ಈ ಕುರಿತು ಜಾಗೃತಿ ಮೂಡಿಸಲಾಗುವುದು.
-ಪ್ರಮುತೇಶ್, ದಾವಣಗೆರೆ ಆರ್‌ಟಿಒ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.