ಜಗಳೂರು: ತಾಲ್ಲೂಕಿನ ಪಲ್ಲಾಗಟ್ಟೆ ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸು ಯೋಜನೆ ಹಾಗೂ ನರೇಗಾ ಯೋಜನೆಯಡಿ ನಕಲಿ ಬಿಲ್ ಸೃಷ್ಟಿಸಿ ₹ 1 ಕೋಟಿಗೂ ಹೆಚ್ಚು ಹಣ ಲೂಟಿ ಮಾಡಿರುವುದು ತನಿಖೆಯಲ್ಲಿ ಸಾಬೀತಾಗಿದ್ದು, ಪಿಡಿಒ ಶಶಿಧರ್ ಪಾಟೀಲ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಬಿ. ಇಟ್ನಾಳ್ ಆದೇಶಿಸಿದ್ದಾರೆ.
ಪಲ್ಲಾಗಟ್ಟೆ ಪಂಚಾಯಿತಿಯಲ್ಲಿ 2021-22 ಮತ್ತು 2022-23ನೇ ಸಾಲಿನಲ್ಲಿ ಅಸ್ತಿತ್ವದಲ್ಲೇ ಇಲ್ಲದ ಏಜೆನ್ಸಿಗಳ ಹೆಸರಿನಲ್ಲಿ ನಕಲಿ ಬಿಲ್ ಸೃಷ್ಟಿಸಿ ಜನವರಿ 2021ರಿಂದ ಅಕ್ಟೋಬರ್ 15, 2022ರ ವರೆಗೆ ಪಿಡಿಒ ಶಶಿಧರ್ ಪಾಟೀಲ್ ಅವರು ಬೇಕಾಬಿಟ್ಟಿ ಹಣ ಡ್ರಾ ಮಾಡಿಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಿ ಸದಸ್ಯರು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು.
ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ 2022ರ ಅ.18ರಂದು ವರದಿಯಾಗಿತ್ತು. ವರದಿಯ ಆಧಾರದ ಮೇಲೆ ಜಿಲ್ಲಾ ಪಂಚಾಯಿತಿ ಸಿಇಒ ಅವರು ಮುಖ್ಯ ಲೆಕ್ಕಾಧಿಕಾರಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದರು.
‘ಅಂಗವಿಕಲರ ಕಲ್ಯಾಣಕ್ಕೆ ₹ 2.41 ಲಕ್ಷ ಬಿಡುಗಡೆ ಮಾಡಿಕೊಂಡಿದ್ದರೂ, ಅಂಗವಿಕಲರಿಗಾಗಿ ಒಂದು ಪೈಸೆಯೂ ಖರ್ಚಾಗಿಲ್ಲ. ಬಟ್ಟೆ ಖರೀದಿಸಲು ಅವಕಾಶ ಇಲ್ಲದಿದ್ದರೂ, ₹ 6 ಲಕ್ಷಕ್ಕೂ ಅಧಿಕ ಮೊತ್ತದ 3 ಬಿಲ್ ಡ್ರಾ ಮಾಡಲಾಗಿತ್ತು. ಬೀದಿ ದೀಪಗಳ ಖರೀದಿಗೆ 8 ತಿಂಗಳಲ್ಲಿ 3 ಬಾರಿ ₹ 7 ಲಕ್ಷ ಹಾಗೂ ಮೋಟಾರ್ ಪಂಪ್ ಖರೀದಿ ಹೆಸರಿನಲ್ಲಿ 8 ತಿಂಗಳಲ್ಲಿ ₹ 8 ಲಕ್ಷ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದ್ದು, ಪಿಡಿಒ ಶಶಿಧರ್ ಪಾಟೀಲ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಹಣ ವಸೂಲಿಗೆ ಕ್ರಮ ಕೈಗೊಳ್ಳಬೇಕು’ ಎಂದು ಸದಸ್ಯರು ಒತ್ತಾಯಿಸಿದ್ದರು.
ಪಿಡಿಒ ಶಶಿಧರ್ ಪಾಟೀಲ್ ವಿರುದ್ಧ ಹಣಕಾಸಿನ ಅವ್ಯವಹಾರದ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ, ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.
‘ಪಲ್ಲಾಗಟ್ಟೆ ಗ್ರಾಮ ಪಂಚಾಯಿತಿ ಸದಸ್ಯರ ದೂರು ಹಾಗೂ ‘ಪ್ರಜಾವಾಣಿ’ ವರದಿ ಆಧಾರದ ಮೇಲೆ ಹಿಂದಿನ ಪಲ್ಲಾಗಟ್ಟೆ ಪಿಡಿಒ ಶಶಿಧರ್ ಪಾಟೀಲ್ ವಿರುದ್ಧ ಸಮಗ್ರ ತನಿಖೆ ನಡೆಸಲಾಗಿತ್ತು. ಪಿಡಿಒ ವಿರುದ್ಧದ ಎಲ್ಲ 11 ಆರೋಪಗಳು ಸಾಬೀತಾಗಿವೆ. ಕರ್ನಾಟಕ ನಾಗರಿಕ ಸೇವಾ ನಿಯಮಗಳಡಿ ಶಶಿಧರ್ ಪಾಟೀಲ್ ಅವರ ಮುಂದಿನ 5 ವರ್ಷಗಳ ವಾರ್ಷಿಕ ವೇತನ ಬಡ್ತಿಗಳನ್ನು ತಕ್ಷಣದಿಂದ ತಡೆಹಿಡಿಯಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಬಿ.ಇಟ್ನಾಳ್ ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.