ADVERTISEMENT

ಕಡರನಾಯ್ಕನಹಳ್ಳಿ: ಈ ಗ್ರಂಥಾಲಯಕ್ಕೆ ಗ್ರಾಮಸ್ಥರದ್ದೇ ನೆರವು

ಹೊಳೆ ಸಿರಿಗೆರೆ ಜನರ ಜ್ಞಾನ ವಿಸ್ತಾರಕ್ಕೆ ಪ್ರೋತ್ಸಾಹ

ನಾಗೇಂದ್ರಪ್ಪ ವಿ.
Published 24 ಮೇ 2024, 6:32 IST
Last Updated 24 ಮೇ 2024, 6:32 IST
ಕಡರನಾಯ್ಕನಹಳ್ಳಿ ಸಮೀಪದ ಹೊಳೆಸಿರಿಗೆರೆ ಗ್ರಾಮದಲ್ಲಿ ಸುಭಾಷ್ ಚಂದ್ರ ಬೋಸ್ ಮುಂದುವರಿಕೆ ಶಿಕ್ಷಣ ಕೇಂದ್ರದ ಉಚಿತ ಗ್ರಂಥಾಲಯ
ಕಡರನಾಯ್ಕನಹಳ್ಳಿ ಸಮೀಪದ ಹೊಳೆಸಿರಿಗೆರೆ ಗ್ರಾಮದಲ್ಲಿ ಸುಭಾಷ್ ಚಂದ್ರ ಬೋಸ್ ಮುಂದುವರಿಕೆ ಶಿಕ್ಷಣ ಕೇಂದ್ರದ ಉಚಿತ ಗ್ರಂಥಾಲಯ   

ಕಡರನಾಯ್ಕನಹಳ್ಳಿ: ಅನುದಾನ ಸೇರಿದಂತೆ ಎಲ್ಲ ಸೌಲಭ್ಯಗಳಿದ್ದರೂ ಹಲವು ಗ್ರಂಥಾಲಯಗಳು ನಿರ್ವಹಣೆಯಲ್ಲಿ ಸೊರಗಿರುತ್ತವೆ. ಆದರೆ ಹೊಳೆಸಿರಿಗೆರೆ ಗ್ರಾಮದ ಉಚಿತ ಗ್ರಂಥಾಲಯವೊಂದು ಸರ್ಕಾರದ ಯಾವುದೇ ಅನುದಾನದ ನೆರವಿಲ್ಲದೆಯೂ ಇತರೆ ಗ್ರಂಥಾಲಯಗಳಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಎನ್ನುವಂತೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ. 

ಗ್ರಾಮದ ಸುಭಾಷ್ ಚಂದ್ರ ಬೋಸ್ ಮುಂದುವರಿಕೆ ಶಿಕ್ಷಣ ಕೇಂದ್ರದ ಗ್ರಂಥಾಲಯವನ್ನು ಗ್ರಂಥಪಾಲಕ ಎಂ.ಶಿವಕುಮಾರ್ ಹಾಗೂ ಉಪಗ್ರಂಥಪಾಲಕಿ ಎನ್.ಜಿ ಅನುಸೂಯಮ್ಮ ಮುನ್ನಡೆಸುತ್ತಿದ್ದಾರೆ. ಈ ಗ್ರಂಥಾಲಯಕ್ಕೆ ಸರ್ಕಾರದ ಅನುದಾನವಿಲ್ಲ. ಸಿಬ್ಬಂದಿಗೆ ವೇತನವೂ ಇಲ್ಲ. ಆದರೂ ಓದುಗರಿಗಾಗಿ ಸದಾ ಗ್ರಂಥಾಲಯದ ಬಾಗಿಲು ತೆರೆದಿರುತ್ತದೆ. 

2001ರಲ್ಲಿ ಆಗಿನ ಜಿಲ್ಲಾಧಿಕಾರಿ ಕೆ.ಶಿವರಾಂ ಅವರು ಸುಭಾಷ್ ಚಂದ್ರ ಬೋಸ್ ಮುಂದುವರಿಕೆ ಶಿಕ್ಷಣ ಕೇಂದ್ರ ಉದ್ಘಾಟಿಸಿದ್ದರು. ಗ್ರಂಥಾಲಯದಲ್ಲಿ 2,000ಕ್ಕೂ ಹೆಚ್ಚು ಪುಸ್ತಕಗಳಿವೆ. ‘ಪ್ರಜಾವಾಣಿ’ ಸೇರಿದಂತೆ ಹಲವು ದಿನಪತ್ರಿಕೆಗಳು ಓದುಗರ ಜ್ಞಾನ ವಿಸ್ತರಿಸುತ್ತಿವೆ. ಪ್ರತಿದಿನ ಬೆಳಿಗ್ಗೆ 7 ರಿಂದ 11 ಗಂಟೆಯವರೆಗೆ ಹಾಗೂ ಸಂಜೆ 6 ರಿಂದ 8ರವರೆಗೆ ಗ್ರಂಥಾಲಯ ತೆರದಿರುತ್ತದೆ.

ADVERTISEMENT

ಓದುಗರು ನೋಂದಣಿ ಪುಸ್ತಕದಲ್ಲಿ ತಮ್ಮ ವಿವರ ಬರೆದು ಸಹಿ ಮಾಡುವ ಪದ್ಧತಿ ಇದೆ. ಗ್ರಾಮಕ್ಕೆ ಭೇಟಿ ನೀಡುವ ಅಧಿಕಾರಿಗಳು, ಜನಪ್ರತಿನಿಧಿಗಳು ಇಲ್ಲಿನ ಸಂದರ್ಶಕರ ಪುಸ್ತಕದಲ್ಲಿ ತಮ್ಮ ಅನಿಸಿಕೆ ಬರೆಯುತ್ತಾರೆ. ನಿಧನರಾದ ಗ್ರಾಮಸ್ಥರು ವಿವರವನ್ನು ರಿಜಿಸ್ಟರ್‌ನಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. 

ಕಡರನಾಯ್ಕನಹಳ್ಳಿ ಸಮೀಪದ ಹೊಳೆಸಿರಿಗೆರೆ ಗ್ರಾಮದಲ್ಲಿ ಸುಭಾಷ್ ಚಂದ್ರ ಬೋಸ್ ಮುಂದುವರಿಕೆ ಶಿಕ್ಷಣ ಕೇಂದ್ರದ ಉಚಿತ ಗ್ರಂಥಾಲಯದಲ್ಲಿ ಓದಿನಲ್ಲಿ ಮಗ್ನರಾಗಿರುವ ಗ್ರಾಮಸ್ಥರು

ಮುಂದಿನ ದಿನಗಳಲ್ಲಿ ಗ್ರಾಮೀಣ ವಿದ್ಯಾವಂತ ಯುವಕರು ಯುವತಿಯರಿಗೆ ನೆರವಾಗುವ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳ ಸಂಗ್ರಹ ಹಾಗೂ ಮಾರ್ಗದರ್ಶನ ನೀಡುವ ಯೋಜನೆ ಇದೆ. ಪುಸ್ತಕ ಓದುವ ಅಭಿರುಚಿ ಬೆಳೆಸುವ ಬಯಕೆ ನನ್ನದು ಎಂ.ಶಿವಕುಮಾರ್ ಗ್ರಂಥಪಾಲಕ

Quote - ಜನರು ಕೈಯಲ್ಲಿ ಮೊಬೈಲ್ ಹಿಡಿದು ತಿರುಗುವ ಈ ಕಾಲದಲ್ಲಿ ಓದುವ ಅಭಿರುಚಿಯನ್ನು ಬೆಳೆಸುತ್ತಿರುವ ಗ್ರಂಥಾಲಯಕ್ಕೆ ಅನುದಾನ ಮತ್ತು ಗ್ರಂಥಪಾಲಕರಿಗೆ ವೇತನ ಕೊಟ್ಟು ಸರ್ಕಾರ ಉತ್ತೇಜಿಸಬೇಕು ಕುಂದೂರು ಮಂಜಪ್ಪ ಹವ್ಯಾಸಿ ಬರಹಗಾರ ಹೊಳೆ ಸಿರಿಗೆರೆ

Cut-off box - ವೈವಿಧ್ಯಮಯ ಚಟುವಟಿಕೆ ಬಹುಮುಖಿ ವ್ಯಕ್ತಿತ್ವದ ಗ್ರಂಥಪಾಲಕ ಎಂ.ಶಿವಕುಮಾರ್ ಅವರು ಈವರೆಗೆ 200ಕ್ಕೂ ಹೆಚ್ಚು ಬೀದಿ ನಾಟಕಗಳನ್ನು ನಿರ್ವಹಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಎಸ್‌ಎಸ್‌ಎಲ್‌ಸಿ ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ.  ಗ್ರಾಮದಲ್ಲಿ ನೌಕರರು ನಿವೃತ್ತರಾದಲ್ಲಿ ಅವರನ್ನು ಗುರುತಿಸಿ ಗೌರವಿಸುತ್ತಾರೆ. ಗ್ರಾಮದ ಯುವಕ ಯುವತಿಯರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಕ್ರೀಡೆಗಳನ್ನು ಏರ್ಪಡಿಸುತ್ತಾರೆ. ಇಂತಹ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ಗ್ರಂಥಾಲಯದ ಪಾತ್ರ ಇದ್ದೇ ಇರುತ್ತದೆ. ರಾಜ್ಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅನೇಕ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.

Cut-off box - ಖರ್ಚು ವೆಚ್ಚ ಭರಿಸುವ ಗ್ರಾಮಸ್ಥರು ವೇತನ ಅನುದಾನ ಎಲ್ಲ ಇದ್ದರೂ ಎಷ್ಟೋ ಗ್ರಂಥಾಲಯಗಳ ಪರಿಸ್ಥಿತಿ ಹದಗೆಟ್ಟಿರುತ್ತದೆ. ಇಲ್ಲಿನ ಗ್ರಂಥಾಲಯ ಪ್ರತಿನಿತ್ಯವೂ ಓದುಗರನ್ನು ಆಕರ್ಷಿಸುತ್ತಿದೆ. ಪತ್ರಿಕೆಗಳ ಚಂದಾದಾರಿಕೆ ಹಣವನ್ನು ಗ್ರಾಮ ಪಂಚಾಯಿತಿ ಸದಸ್ಯರು ತಿಂಗಳಿಗೆ ಒಬ್ಬರಂತೆ ಪಾವತಿಸುತ್ತಾರೆ. ಪುಸ್ತಕ ಪ್ರೇಮಿಗಳಿಂದ ಪುಸ್ತಕಗಳನ್ನು ಸಂಗ್ರಹಿಸಲಾಗುತ್ತದೆ.  ಗ್ರಂಥಾಲಯದಿಂದ ಆಯೋಜಿಸುವ ಎಲ್ಲ ಕಾರ್ಯಕ್ರಮಗಳ ಖರ್ಚು ವೆಚ್ಚಗಳನ್ನು ಗ್ರಾಮದ ಯುವಕರು ಮುಖಂಡರು ಭರಿಸುತ್ತಾರೆ. ಇದು ಗ್ರಾಮಸ್ಥರ ಒಗ್ಗಟ್ಟಿನ ಕೇಂದ್ರವಾಗಿರುವುದು ವಿಶೇಷ. ಇಂತಹ ಗ್ರಂಥಾಲಯಗಳಿಗೆ ಸರ್ಕಾರ ಸಹಾಯಧನ ನೀಡಬೇಕು ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.