ಹರಿಹರ: ವಿವಿಧ ಕಾಯಿಲೆಗಳ ನಿವಾರಣೆಗೆಂದು ಸೇವಿಸುವ ಔಷಧಿಗಳನ್ನು ಉಪಯೋಗಿಸುವ ಅವಧಿ ಮುಗಿದಿದ್ದರೆ (ಡೇಟ್ ಎಕ್ಸ್ಪೈರಿ), ಅಂತಹ ಔಷಧಿಗಳನ್ನು ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಣೆ ಮಾಡಬೇಕೆಂಬ ನಿಯಮವಿದೆ. ಆದರೆ ಅನುಪಯುಕ್ತ ಔಷಧಿಗಳನ್ನು ನಗರದ ವಿವಿಧೆಡೆ ಎಸೆಯುತ್ತಿರುವ ಅತ್ಯಂತ ನಿರ್ಲಕ್ಷ್ಯದ ಘಟನೆಗಳು ನಡೆಯುತ್ತಿವೆ.
ಸರ್ಕಾರಿ, ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂ, ಕ್ಲಿನಿಕ್, ಔಷಧಿ ಅಂಗಡಿ ಸೇರಿದಂತೆ ಯಾವುದೆ ಔಷಧೋಪಚಾರ ಮಾಡುವ ಕೇಂದ್ರಗಳ ಅನಪಯುಕ್ತ ಔಷಧಿಗಳನ್ನು ಎಲ್ಲೆಂದರಲ್ಲಿ ಎಸೆಯುವಂತಿಲ್ಲ. ಸ್ಥಳೀಯ ಸಂಸ್ಥೆಗಳ ಕಸ ವಿಲೇವಾರಿ ಗಾಡಿಗಳಿಗೆ ಹಾಕದೇ, ಅವುಗಳನ್ನು ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕದ ಸಂಗ್ರಹಗಾರರಿಗೆ ಮಾತ್ರ ನೀಡಬೇಕು. ಆದರೆ ಈ ನಿಯಮ ನಗರದಲ್ಲಿ ಪಾಲನೆಯಾಗುತ್ತಿಲ್ಲ. ನದಿ ದಡ, ಹೆದ್ದಾರಿಗಳ ಅಕ್ಕಪಕ್ಕ ಅವುಗಳನ್ನು ಎಸೆದು ಕೈತೊಳೆದುಕೊಳ್ಳಲಾಗುತ್ತಿದೆ.
ಅನುಪಯುಕ್ತ ಅಥವಾ ಅವಧಿ ಮುಗಿದಿರುವ ಔಷಧಿಗಳನ್ನು (ಮೆಡಿಸಿನ್ ರಿಟರ್ನ್ ಪ್ರೋಗ್ರಾಮ್-ಎಂಆರ್‌ಪಿ) ಔಷಧಿ ತಯಾರಿಸಿದ ಕಂಪನಿಗಳಿಗೆ ವಾಪಸ್ ನೀಡಬೇಕು ಇಲ್ಲವೇ ಆಯಾ ಭಾಗದ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕದ ಸಿಬ್ಬಂದಿಗೆ ನೀಡಬೇಕು. ಆದರೆ ಇವೆರಡನ್ನೂ ಮಾಡದೇ, ಸಾರ್ವಜನಿಕ ಸ್ಥಳಗಳಲ್ಲಿ ಔಷಧಿಗಳನ್ನು ಎಸೆದು ಹೋಗುತ್ತಿರುವ ಅಪಾಯಕಾರಿಯಾಗಿ ಬೆಳವಣಿಗೆ ಕಂಡುಬರುತ್ತಿದೆ. ಇಂತಹ ವರ್ತನೆಯು ಅಪರಾಧವಷ್ಟೇ ಅಲ್ಲ, ಪರಿಸರಕ್ಕೆ ಹಾನಿಕರ ಎಂದು ಪರಿಗಣಿಸಲಾಗುತ್ತದೆ.
ಹರಿಹರದಿಂದ ದಾವಣಗೆರೆಗೆ ಹೋಗುವ ಮಾರ್ಗದಲ್ಲಿ ರೈಲ್ವೆ ಸಮಾನಾಂತರ ರಸ್ತೆಯ ಬದಿ, ತುಂಗಭದ್ರಾ ನದಿಯ ಬಳಿ ಹಲವೆಡೆ ಅನುಪಯುಕ್ತ ಔಷಧಿಗಳನ್ನು ಎಸೆದಿರುವುದು ಕಂಡುಬಂದಿದೆ. ಇಂತಹ ಔಷಧಿಗಳನ್ನು ಆಕಸ್ಮಿಕವಾಗಿ ದನಕರುಗಳು, ಪ್ರಾಣಿ-ಪಕ್ಷಿಗಳು ಆಹಾರವೆಂದು ತಿಳಿದು ಸೇವಿಸಿ ಅನಾರೋಗ್ಯಕ್ಕೀಡಾಗುವ ಅಪಾಯವಿರುತ್ತದೆ ಎನ್ನುತ್ತಾರೆ ತಜ್ಞರು.
ಅನುಪಯುಕ್ತ ಔಷಧಿಗಳನ್ನು ನಿಯಮಾವಳಿ ಪ್ರಕಾರ ವಿಲೇವಾರಿ ಮಾಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ನಗರದ ಹಾಗೂ ಸುತ್ತಲಿನ ಆಸ್ಪತ್ರೆ, ನರ್ಸಿಂಗ್ ಹೋಂ, ಕ್ಲಿನಿಕ್ ಹಾಗೂ ಔಷಧಿ ಅಂಗಡಿಯವರಲ್ಲಿ ಜಾಗೃತಿ ಮೂಡಿಸಬೇಕಿದೆ. ಆದಾಗ್ಯೂ ಇದು ಮುಂದುವರಿಸಿದರೆ ಅಂತಹವರನ್ನು ಪತ್ತೆಹಚ್ಚಿ ಶಿಕ್ಷೆಗೆ ಗುರಿ ಮಾಡಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಔಷಧಿ ಎಸೆದಿರುವ ಸ್ಥಳಗಳನ್ನು ಪರಿಶೀಲಿಸುತ್ತೇವೆ. ಹೀಗೆ ಔಷಧಿಗಳನ್ನು ಎಸೆಯಬಾರದು ಎಂದು ಸಂಬಂಧಪಟ್ಟವರಲ್ಲಿ ಜಾಗೃತಿ ಮೂಡಿಸುತ್ತೇವೆ ಡಾ.ಅಬ್ದುಲ್ ಖಾದರ್ ತಾಲ್ಲೂಕು ಆರೋಗ್ಯಾಧಿಕಾರಿ
ಅನುಪಯುಕ್ತ ಔಷಧಿಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಬೇಕು. ಕಂಡಕಂಡಲ್ಲಿ ಎಸೆಯುವುದು ಜನ–ಜಾನುವಾರು ಹಾಗೂ ಪರಿಸರಕ್ಕೂ ಅಪಾಯಕಾರಿ. ಇಂತಹ ಸಮಸ್ಯೆಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ತಡೆಯಬೇಕುಶಶಿನಾಯ್ಕ ಕರ್ನಾಟಕ ರಕ್ಷಣಾ ವೇದಿಕೆ ನಗರ ಘಟಕ ಅಧ್ಯಕ್ಷ
ಔಷಧಿ ಎಸೆದಿರುವ ಸ್ಥಳಗಳನ್ನು ಪರಿಶೀಲಿಸುತ್ತೇವೆ. ಹೀಗೆ ಔಷಧಿಗಳನ್ನು ಎಸೆಯಬಾರದು ಎಂದು ಸಂಬಂಧಪಟ್ಟವರಲ್ಲಿ ಜಾಗೃತಿ ಮೂಡಿಸುತ್ತೇವೆಡಾ.ಅಬ್ದುಲ್ ಖಾದರ್ ತಾಲ್ಲೂಕು ಆರೋಗ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.