ADVERTISEMENT

ದಾವಣಗೆರೆ | ಹೊಸ ವರ್ಷಕ್ಕೆ ಸಂಭ್ರಮದ ಸ್ವಾಗತ

​ಪ್ರಜಾವಾಣಿ ವಾರ್ತೆ
Published 1 ಜನವರಿ 2024, 5:06 IST
Last Updated 1 ಜನವರಿ 2024, 5:06 IST
ದಾವಣಗೆರೆಯ ನಿಜಲಿಂಗಪ್ಪ ಬಡಾವಣೆಯ ಮಾತೃಛಾಯಾ ಉದ್ಯಾನದಲ್ಲಿ ಭಾನುವಾರ ರಾತ್ರಿ ಸಮಾನ ಮನಸ್ಕರು ಹೊಸ ವರ್ಷಾಚರಣೆ ಅಂಗವಾಗಿ ನೃತ್ಯ ಪ್ರದರ್ಶಿಸಿದರು.
ದಾವಣಗೆರೆಯ ನಿಜಲಿಂಗಪ್ಪ ಬಡಾವಣೆಯ ಮಾತೃಛಾಯಾ ಉದ್ಯಾನದಲ್ಲಿ ಭಾನುವಾರ ರಾತ್ರಿ ಸಮಾನ ಮನಸ್ಕರು ಹೊಸ ವರ್ಷಾಚರಣೆ ಅಂಗವಾಗಿ ನೃತ್ಯ ಪ್ರದರ್ಶಿಸಿದರು.   

ದಾವಣಗೆರೆ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಜನರು ಹೊಸ ವರ್ಷ 2024 ಅನ್ನು ಸಂಭ್ರಮ–ಸಡಗರದಿಂದ ಬರಮಾಡಿಕೊಂಡರು.

ಎಲ್ಲ ಕಡೆಗಳಲ್ಲಿ ಬೆಳಕಿನ ಚಿತ್ತಾರಗಳು ಕಂಗೊಳಿಸಿದವು. ರಾತ್ರಿ 12 ಆಗುತ್ತಿದ್ದಂತೆ ಪಟಾಕಿಗಳ ಸದ್ದು ಆವರಿಸಿತು. ಬಾನಂಗಳದಲ್ಲಿ ಬಿರುಸು ಬಾಣಗಳು ಸಿಡಿದವು.

ಬಡಾವಣೆಗಳಲ್ಲಿ ಸ್ಥಳೀಯರು ಸೇರಿ ಸಂಭ್ರಮಿಸಿದರು. ಹೋಟೆಲ್‌, ಕ್ಲಬ್‌ಗಳಲ್ಲಿ ರಾತ್ರಿಯಾಗುತ್ತಿದ್ದಂತೆ ಹಾಡು ಮೊಳಗಿದವು. ಸೇರಿದ್ದ ನೂರಾರು ಜನ ಒತ್ತಡ ಮರೆತು ಕುಣಿದರು. ಯುವಕ–ಯುವತಿಯರು ಸಿನಿಮಾ ಹಾಡುಗಳಿಗೆ ನೃತ್ಯ ಪ್ರದರ್ಶನ ನೀಡಿದರು.

ADVERTISEMENT

ನಗರದ ಕ್ಲಬ್, ಹೋಟೆಲ್‌, ಬಾರ್ ಆ್ಯಂಡ್ ರೆಸ್ಟೊರಂಟ್, ಡಾಬಾಗಳಲ್ಲದೇ ಗ್ರಾಮೀಣ ಭಾಗಗಳಲ್ಲಿ ತೋಟದ ಮನೆಗಳಲ್ಲೂ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದರು. ನಗರದ ರಸ್ತೆಗಳಲ್ಲಿ ಯುವಕರು ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಾ, ಎದುರುಗೊಂಡವರಿಗೆ ‘ಹ್ಯಾಪಿ ನ್ಯೂ ಇಯರ್’ ಎಂದು ಶುಭಾಶಯ ಕೋರಿದರು.

ನಗರದ ಐಎಂಎ, ಆಫೀಸರ್ಸ್ ಕ್ಲಬ್, ಪ್ರಮುಖ ಹೋಟೆಲ್‌ಗಳಾದ ಅಪೂರ್ವ, ಚೇತನಾ, ರಾಜಧಾನಿ, ಪೂಜಾ, ಸಾಯಿ ಇಂಟರ್‌ ನ್ಯಾಷನಲ್, ರಾಸ್ತಾ, ಜಿನಿಸಸ್, ದಾವಣಗೆರೆ ರೆಸಾರ್ಟ್, ಹೆದ್ದಾರಿ ಬದಿಯ ಡಾಬಾಗಳು ಸೇರಿದಂತೆ ವಿವಿಧೆಡೆ ಜನರು ಹೊಸ ವರ್ಷವನ್ನು ಸ್ವಾಗತಿಸಿದರು.

ಮಧ್ಯರಾತ್ರಿವರೆಗೆ ಯುವಜನರು ಬೈಕ್‌, ಕಾರ್‌ ಮತ್ತಿತರ ವಾಹನಗಳಲ್ಲಿ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸುತ್ತಾ ಸಂಭ್ರಮಿಸಿದರು. ಹೋಟೆಲ್‌, ಲಾಡ್ಜ್‌, ರೆಸಾರ್ಟ್‌, ಹಾಸ್ಟೆಲ್‌, ಮನೆಗಳಲ್ಲಿ ಹಲವರು ಕೇಕ್‌ ಕತ್ತರಿಸಿದರೆ, ಕೆಲವರು ರಸ್ತೆಯಲ್ಲೇ ಕೇಕ್‌ ಕತ್ತರಿಸಿ ಖುಷಿಪಟ್ಟರು.

ಹೊಸ ವರ್ಷವನ್ನು ಬರಮಾಡಿಕೊಳ್ಳಲು ಎಲ್ಲರಿಗಿಂತ ಮೊದಲು ಬೇಕರಿಗಳು ಸಿದ್ಧವಾದವು. ವಿವಿಧ ಆಕಾರದ, ವಿವಿಧ ವಿನ್ಯಾಸದ, ವಿವಿಧ ರುಚಿಯ ಕೇಕ್‌ಗಳು ಗ್ರಾಹಕರನ್ನು ಸೆಳೆದವು.

ನಗರದ ಆಹಾರ್ 2000 ಬೇಕರಿಯಲ್ಲಿ ಹೊಸವರ್ಷವನ್ನು ಬರಮಾಡಿಕೊಳ್ಳಲು ಮಿಕ್ಕಿಮೌಸ್, ಬಾರ್ಬಿ ಡಾಲ್, ವೀಣೆ, 2024 ವಿನ್ಯಾಸದ ಕೇಕ್‌ಗಳನ್ನು ತಯಾರಿಸಲಾಗಿತ್ತು. ಒಂದು ಕೆ.ಜಿ.ಯಿಂದ 3 ಕೆ.ಜಿಯವರೆಗೂ ತಯಾರಾಗಿದ್ದವು. ಮೊದಲೇ ಆರ್ಡರ್ ಕೊಟ್ಟವರಿಗೆ ವಿವಿಧ ವಿನ್ಯಾಸಗಳಲ್ಲಿ ತಯಾರಿಸಿಕೊಡಲಾಗಿತ್ತು.

‘ಈ ಬಾರಿ ಹೊಸ ಸಂಸತ್ ಭವನ ಉದ್ಘಾಟಿಸಿದ್ದರಿಂದ ಹೊಸ ಸಂಸತ್ ಭವನ ಮಾದರಿಯನ್ನು 200 ಕೆ.ಜಿ. ಸಕ್ಕರೆ ಹಾಗೂ ಜಿಡ್ಡು ಬಳಸಿ ತಯಾರಿಸಲಾಗಿತ್ತು. 23 ವರ್ಷಗಳಿಂದಲೂ ಪ್ರತಿ ಹೊಸವರ್ಷಕ್ಕೆ ಹೊಸ ಮಾದರಿಯ ವಿಶೇಷ ಕೇಕ್‌ಗಳನ್ನು ತಯಾರಿಸಲಾಗುತ್ತಿದೆ. ಚಾಕೊಲೇಟ್ ಫ್ಲೇವರ್‌ಗೆ ಹೆಚ್ಚಿನ ಬೇಡಿಕೆ ಇತ್ತು’ ಎಂದು ಬೇಕರಿಯ ಮ್ಯಾನೇಜಿಂಗ್ ಡೈರೆಕ್ಟರ್ ಜಿ.ವಿ. ರಮೇಶ್ ತಿಳಿಸಿದರು.

ಪೊಲೀಸರಿಂದ ಕಟ್ಟೆಚ್ಚರ

ಹೊಸ ವರ್ಷಾಚರಣೆ ಪ್ರಯುಕ್ತ ಕುಡಿದು ವಾಹನ ಚಾಲನೆ ಮಾಡುವುದು ವಾಹನಗಳಲ್ಲಿ ಹೆಚ್ಚಿನ ಜನರು ಸವಾರಿ ಮಾಡುವುದನ್ನು ನಿಷೇಧಿಸಲಾಗಿತ್ತು. ನಗರದ ಆಯಕಟ್ಟಿನ ಸ್ಥಳಗಳಲ್ಲಿ ಮಹಿಳೆಯರ ಪಿ.ಜಿ. ಮತ್ತು ಹಾಸ್ಟೆಲ್‌ಗಳು ಸೇರಿದಂತೆ ಆಯಕಟ್ಟಿನ ಜಾಗದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಮದ್ಯದ ವ್ಯಾಪಾರ ದುಪ್ಪಟ್ಟು?

‘ಹೊಸ ವರ್ಷದ ಹಿನ್ನೆಲೆಯಲ್ಲಿ ಮದ್ಯದ ವ್ಯಾಪಾರ ದುಪ್ಪಟ್ಟು ಆಗುವ ನಿರೀಕ್ಷೆ ಇದೆ. ಮಾಮೂಲಿ ದಿನಗಳಲ್ಲಿ ನಗರದಲ್ಲಿ ₹ 1.50 ಕೋಟಿ ವಹಿವಾಟು ನಡೆಯುತ್ತದೆ. ಭಾನುವಾರ ಒಂದೇ ದಿನ ದುಪ್ಪಟ್ಟಾಗುವ ನಿರೀಕ್ಷೆ ಇದೆ’ ಎಂದು ಮದ್ಯ ಮಾರಾಟಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಶ್ವರ್‌ಸಿಂಗ್ ಕವಿತಾಳ ತಿಳಿಸಿದರು.

ಹೊಸ ವರ್ಷದ ಅಂಗವಾಗಿ ದಾವಣಗೆರೆಯ ಆಹಾರ–2000 ಬೇಕರಿಯಲ್ಲಿ ಕೇಕ್‌ಗಳನ್ನು ಆಸಕ್ತಿಯಿಂದ ವೀಕ್ಷಿಸಿದ ಮಹಿಳೆಯರು.
ದಾವಣಗೆರೆಯ ಆಹಾರ್–2000 ಬೇಕರಿಯಲ್ಲಿ ಸಂಸತ್ ಭವನದ ಮಾದರಿಯ ಕೇಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.