ADVERTISEMENT

ದಾವಣಗೆರೆ: ಹಂದಿ ಹಾವಳಿ ತಡೆಗೆ ಸಿದ್ಧವಾಗುತ್ತಿದೆ ‘ವರಾಹ ಶಾಲೆ’

ಹೊಸಳ್ಳಿ ಬಳಿ ನಿರ್ಮಾಣವಾಗುತ್ತಿದೆ ಶಾಶ್ವತ ಯೋಜನೆ lಶೇ 90ರಷ್ಟು ಕಾಮಗಾರಿ ಪೂರ್ಣ l3 ಎಕರೆ ಜಾಗದಲ್ಲಿ ಕಾಮಗಾರಿ

ಚಂದ್ರಶೇಖರ ಆರ್‌.
Published 24 ಫೆಬ್ರುವರಿ 2023, 5:24 IST
Last Updated 24 ಫೆಬ್ರುವರಿ 2023, 5:24 IST
ದಾವಣಗೆರೆ ತಾಲ್ಲೂಕಿನ ಹೆಬ್ಬಾಳು ಬಳಿಯ ಹೊಸಳ್ಳಿಯಲ್ಲಿ ನಡೆಯುತ್ತಿರುವ ‘ವರಾಹ ಶಾಲೆ’ ಕಾಮಗಾರಿಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆ ತಾಲ್ಲೂಕಿನ ಹೆಬ್ಬಾಳು ಬಳಿಯ ಹೊಸಳ್ಳಿಯಲ್ಲಿ ನಡೆಯುತ್ತಿರುವ ‘ವರಾಹ ಶಾಲೆ’ ಕಾಮಗಾರಿಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ನಗರದಲ್ಲಿನ ಹಂದಿಗಳ ಹಾವಳಿ ತಡೆಗೆ ಶಾಶ್ವತ ಯೋಜನೆಯೊಂದು ರೂಪುಗೊಳ್ಳುತ್ತಿದೆ. ಹಂದಿಗಳ ಉಪಟಳ‌ಕ್ಕೆ ಕಡಿವಾಣ ಹಾಕಲು ತಾಲ್ಲೂಕಿನ ಹೆಬ್ಬಾಳು ಬಳಿಯ ಹೊಸಳ್ಳಿಯಲ್ಲಿ ‘ವರಾಹ ಶಾಲೆ’ ನಿರ್ಮಾಣವಾಗುತ್ತಿದ್ದು, ಕಾಮಗಾರಿ ಬಹುತೇಕವಾಗಿ ಮುಗಿದಿದೆ.

ನಗರದಲ್ಲಿ ಹಲವು ವರ್ಷಗಳಿಂದ ಹಂದಿಗಳ ಹಾವಳಿ ಹೆಚ್ಚಿತ್ತು. ಹಲವು ಮಕ್ಕಳು, ವೃದ್ಧರಿಗೆ ಹಂದಿಗಳು ಕಚ್ಚಿ ಗಾಯಗೊಳಿಸಿದ್ದವು. ಹಂದಿಗಳ ಹಾವಳಿಯಿಂದ ನಗರದ ಸೌಂದರ್ಯಕ್ಕೂ ಧಕ್ಕೆಯಾಗಿತ್ತು. ನಗರದ ನಿವಾಸಿಗಳು ದುರ್ವಾಸನೆ ಸಹಿಸಲು ಆಗದೆ ಪರದಾಡುವಂತಾಗಿತ್ತು. ಇತರೆ ಜಿಲ್ಲೆಗಳ ನಗರಗಳಲ್ಲಿ ಇರುವ ಹಂದಿಗಳಿಗಿಂತ ದಾವಣಗೆರೆಯಲ್ಲೇ ಹೆಚ್ಚು ಹಂದಿ ಇವೆ ಎಂಬ ಅಪಖ್ಯಾತಿಯೂ ಇತ್ತು.

ಸ್ವಚ್ಛತೆ ಕಾಪಾಡುವುದೂ ಮಹಾನಗರ ಪಾಲಿಕೆಗೆ ಸವಾಲಾಗಿ ಪರಿಣಮಿಸಿತ್ತು. ಹಂದಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂಬ ಕೂಗು ಎದ್ದಿತ್ತು.

ADVERTISEMENT

ಇದುವರೆಗೂ ಮಹಾನಗರ ಪಾಲಿಕೆ ಹಂದಿಗಳನ್ನು ಹಿಡಿದು ಬೇರೆಡೆ ಸಾಗಿಸುವ ಪ್ರಕ್ರಿಯೆ ನಡೆಸಿತ್ತು. ಆದರೆ, ಇದಕ್ಕೆ ಹಂದಿ ಮಾಲೀಕರಿಂದ ವಿರೋಧ ವ್ಯಕ್ತವಾಗಿತ್ತು. ಇದರ ಜೊತೆಗೆ ಹಾವಳಿ ಹೆಚ್ಚಿ ಹಲವು ಮಕ್ಕಳು ಗಂಭೀರವಾಗಿ ಗಾಯಗೊಂಡ ಪ್ರಕರಣಗಳಿಂದಲೂ ಪಾಲಿಕೆ ಇಕ್ಕಟ್ಟಿಗೆ ಸಿಲುಕಿತ್ತು.

ಹಂದಿ ಹಿಡಿಯುವ ವಿಷಯ ಹೈಕೋರ್ಟ್‌ ಮೆಟ್ಟಿಲೇರಿತ್ತು. ಹೈಕೋರ್ಟ್‌ ಹಂದಿ ಹಿಡಿಯಲು ತಡೆಯಾಜ್ಞೆಯನ್ನೂ ನೀಡಿತ್ತು. ಈ ಎಲ್ಲ ಘಟನೆ ಹಂದಿ ಮಾಲೀಕರು ಹಾಗೂ ಪಾಲಿಕೆ ನಡುವೆ ಜಗಳಕ್ಕೂ ಕಾರಣವಾಗಿತ್ತು.

ಬಳಿಕ ಹಂದಿ ಮಾಲೀಕರೊಂದಿಗೆ ಮಹಾನಗರ ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಹಲವು ಸುತ್ತಿನ ಮಾತುಕತೆ ನಡೆಸಿದ್ದರು. ಆದರೂ ಹಂದಿಗಳ ಹಾವಳಿ ತಡೆಗೆ ಪರ್ಯಾಯ ಮಾರ್ಗ ಕಂಡುಹಿಡಿಯಲು ಆಗಿರಲಿಲ್ಲ.

ಹಂದಿಗಳ ಉಪಟಳ ತಡೆಗೆ ಶಾಶ್ವತ ಪರಿಹಾರ ರೂಪಿಸಬೇಕೆಂಬ ಒತ್ತಾಯ ಕೇಳಿಬಂದ ಕಾರಣ ಮಹಾನಗರ ಪಾಲಿಕೆಯಿಂದ
ಎಸ್‌.ಟಿ. ವೀರೇಶ್ ಮೇಯರ್‌ ಆಗಿದ್ದ ಅವಧಿಯಲ್ಲಿ ಹಂದಿಗಳ ಹಾವಳಿ ತಡೆಗೆ ‘ವರಾಹ ಶಾಲೆ’ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು.

ಪಾಲಿಕೆಯಿಂದ ಈ ಯೋಜನೆಯಡಿ ಹಂದಿಗಳಿಗಾಗಿ ತಾಲ್ಲೂಕಿನ ಹೆಬ್ಬಾಳು ಬಳಿಯ ಹೊಸಳ್ಳಿ ಬಳಿ ‘ವರಾಹ ಶಾಲೆ’ ನಿರ್ಮಾಣವಾಗುತ್ತಿದ್ದು, ಶೇ 90ರಷ್ಟು ಕಾಮಗಾರಿ ಮುಗಿದಿದೆ.

ಹಂದಿ ಗಳ ಸ್ಥಳಾಂತರಕ್ಕೆ ತಾಲ್ಲೂಕಿನ ಹೆಬ್ಬಾಳಿನ ಹೊಸಳ್ಳಿ ಹೊರವಲಯ ದಲ್ಲಿ 7 ಎಕರೆ ಜಾಗ ಗುರುತಿಸಲಾಗಿದೆ. ಅಲ್ಲಿ 3 ಎಕರೆ ಜಾಗದಲ್ಲಿ ‘ವರಾಹ ಶಾಲೆ’ ಕಾಮಗಾರಿ ನಡೆಯುತ್ತಿದೆ.

ಹಂದಿಗಳನ್ನು ಸ್ಥಳಾಂತರ ಮಾಡಿ ಶೆಡ್, ಕಾಂಪೌಂಡ್ ನಿರ್ಮಿಸುವ ಕಾಮಗಾರಿ ನಡೆಯುತ್ತಿದೆ. ಪೂರ್ಣಗೊಳ್ಳುವ ಹಂತದಲ್ಲಿದೆ.

‘ಕಾಮಗಾರಿ ಶೇ 90ರಷ್ಟು ಮುಗಿದಿದೆ. ಉಳಿದ ಕಾಮಗಾರಿ ಶೀಘ್ರ ಪೂರ್ಣ ಗೊಳಿಸಲಾಗುವುದು. ಕೆಲ ಕಾಮಗಾರಿ ಬಾಕಿ ಇದೆ. ಕಾಮಗಾರಿ ಮುಗಿದ ಕೂಡಲೇ ಹಂದಿ ಮಾಲೀಕರ ಸಭೆ ಕರೆದು, ಚರ್ಚಿಸಿ ಹಂದಿಗಳನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು’ ಎಂದು ಮಾಜಿ ಮೇಯರ್ ಎಸ್‌.ಟಿ. ವೀರೇಶ್ ‘ಪ್ರಜಾವಾಣಿ’ಗೆ
ತಿಳಿಸಿದರು.

ಹೀಗಿರಲಿದೆ ‘ವರಾಹ ಶಾಲೆ’

ಮಹಾನಗರ ಪಾಲಿಕೆಯ ಅನುದಾನದಲ್ಲೇ ₹ 80 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. 3 ಎಕರೆ ಜಾಗದಲ್ಲಿ ಸುಮಾರು 13 ಅಡಿ ಎತ್ತರದ ಕಾಂಪೌಂಡ್‌ ಹಾಕಿ ಅಲ್ಲಿ ಹಂದಿಗಳನ್ನು ಬಿಡಲಾಗುವುದು.

ಕುಡಿಯುವ ನೀರಿನ ವ್ಯವಸ್ಥೆ, ಹಂದಿ ಮಾಲೀಕರು ಅಲ್ಲಿಗೆ ಹೋಗಲು ರಸ್ತೆ ಸೇರಿ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು. ಕುಡಿಯುವ ನೀರಿನ ವ್ಯವಸ್ಥೆ ಇರಲಿದೆ. ಹಂದಿಗಳಿಗೆ ಆಹಾರ ವ್ಯವಸ್ಥೆಗಾಗಿ ಪಾಲಿಕೆಯಿಂದ ಪ್ರತಿದಿನ ಮನೆ ಮನೆಗಳಿಂದ, ಹೋಟೆಲ್‌ಗಳಿಂದ ಸಂಗ್ರಹಿಸುವ ಹಸಿ ತ್ಯಾಜ್ಯವನ್ನು ಅಲ್ಲಿ ಹಾಕಲಾಗುವುದು. ಹಂದಿಗಳನ್ನು ನೋಡಿಕೊಳ್ಳುವ ವ್ಯವಸ್ಥೆ ಮಾಡಿ. ಅಲ್ಲಿ ಉಳಿದುಕೊಳ್ಳುವವರಿಗೆ ಶೆಡ್ ನಿರ್ಮಾಣವಾಗುತ್ತಿದೆ. ಅಲ್ಲದೇ ಸುತ್ತ ಹಸಿರಿನ ವಾತಾವರಣ ಕಲ್ಪಿಸಲು ಗಿಡಗಳನ್ನೂ ನೆಡಲಾಗುತ್ತಿದೆ.

ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವ

‘ಕಾಂಪೌಂಡ್‌ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ₹ 80 ಲಕ್ಷ ಅನುದಾನ ಖರ್ಚಾಗಿದೆ. ಇನ್ನೂ ಒಳ ಆವರಣದಲ್ಲಿ ಕೆಲ ಕಾಮಗಾರಿ ಬಾಕಿ ಇರುವ ಕಾರಣ ಹೆಚ್ಚಿನ ಅನುದಾನ ಬೇಕಿದೆ. ಅದಕ್ಕೆ ಹೆಚ್ಚುವರಿ ₹ 50 ಲಕ್ಷದಿಂದ ₹ 60 ಲಕ್ಷ ಅನುದಾನಕ್ಕೆ ಪ್ರಸ್ತಾವ ಕಳುಹಿಸಿದ್ದೇವೆ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಬಳಿಕ ಪಾಲಿಕೆಗೆ ಹಸ್ತಾಂತರಿಸಲಾಗುವುದು’ ಎಂದು‌ ಮಹಾನಗರ ಪಾಲಿಕೆ ಎಇಇ ಮನೋಹರ್‌ ಬಿ. ಮಾಹಿತಿ ನೀಡಿದರು.

ಆಹಾರದ ಸಮಸ್ಯೆಯಾಗಲಿದೆ

‘ವರಾಹ ಶಾಲೆ ಹಂದಿ ಮಾಲೀಕರಿಗೆ ದೂರವಾಗಲಿದೆ. ನಮ್ಮ ಮಕ್ಕಳು ನಗರದ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಅಲ್ಲಿ ಹೋದರೆ ಇಲ್ಲಿಗೆ ಬರಲು ತೊಂದರೆಯಾಗಲಿದೆ. ಅಲ್ಲಿ ಹಂದಿಗಳನ್ನು ಸ್ಥಳಾಂತರ ಮಾಡಿದರೆ ಅವುಗಳಿಗೆ ಆಹಾರದ ಸಮಸ್ಯೆಯಾಗಲಿದೆ. ಹೋಟೆಲ್‌, ಮನೆಗಳಿಂದ ಸಂಗ್ರಹಿಸುವ ಆಹಾರದ ತ್ಯಾಜ್ಯ ಅವುಗಳಿಗೆ ಸಾಲುವುದಿಲ್ಲ. ಈಗಾಗಲೇ ನಾವೇ ಹೋಟೆಲ್‌, ಹಾಸ್ಟೆಲ್‌ಗಳಿಂದ ಉಳಿದ ಆಹಾರ ಹಾಗೂ ತರಕಾರಿ ತಾಜ್ಯವನ್ನು ಸಂಗ್ರಹಿಸಿ ಕೊಡುತ್ತಿದ್ದೇವೆ. ಅದೇ ಸಾಲುತ್ತಿಲ್ಲ. ಇನ್ನು ಇಡೀ ನಗರದ ಹಂದಿಗಳನ್ನು ಒಂದೆಡೆ ಸೇರಿಸಿದಾಗ ಅವುಗಳಿಗೆ ಆಹಾರ ಪೂರೈಸುವುದು ಕಷ್ಟಸಾಧ್ಯ. ಹೀಗಾಗಿ ಈ ಯೋಜನೆ ಕಾರ್ಯಸಾಧುವಲ್ಲ’ ಎಂದು ಅಖಿಲ ಕರ್ನಾಟಕ ಕುಳುವ ಸಂಘದ ಉಪಾಧ್ಯಕ್ಷ ಆನಂದಪ್ಪ ಸಮಸ್ಯೆ ತೆರೆದಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.